ಮಾಹಿತಿ ಇರುವಲ್ಲಿ ಹೋಗಲು

ಮಹಾ ಬಾಬೆಲ್‌ ಯಾವುದನ್ನ ಸೂಚಿಸುತ್ತೆ?

ಮಹಾ ಬಾಬೆಲ್‌ ಯಾವುದನ್ನ ಸೂಚಿಸುತ್ತೆ?

ಬೈಬಲ್‌ ಕೊಡೋ ಉತ್ತರ

 ಪ್ರಕಟನೆ ಪುಸ್ತಕದಲ್ಲಿ ಹೇಳಿರೋ ಮಹಾ ಬಾಬೆಲ್‌ ಅಂದ್ರೆ ಈ ಲೋಕದಲ್ಲಿರೋ ಎಲ್ಲಾ ಸುಳ್ಳುಧರ್ಮಗಳು. ಈ ಸುಳ್ಳು ಧರ್ಮಗಳನ್ನ ದೇವರು ಒಪ್ಪಲ್ಲ. a (ಪ್ರಕಟನೆ 14:8; 17:5; 18:21) ಈ ಎಲ್ಲಾ ಧರ್ಮಗಳು ಒಂದೇ ತರ ಇಲ್ಲ. ಆದ್ರೂ ಒಂದಲ್ಲಾ ಒಂದು ವಿಧದಲ್ಲಿ ಇವು ಜನರನ್ನ ನಿಜವಾದ ದೇವರಾಗಿರೋ ಯೆಹೋವನಿಂದ ದೂರ ಮಾಡಿಬಿಟ್ಟಿವೆ.—ಧರ್ಮೋಪದೇಶಕಾಂಡ 4:35.

ಮಹಾ ಬಾಬೆಲ್‌ನ ಪತ್ತೆಹಚ್ಚೋದು ಹೇಗೆ?

  1.   ಮಹಾ ಬಾಬೆಲ್‌ ಯಾರು? ಬೈಬಲ್‌, ಇವಳನ್ನ ‘ಒಬ್ಬ ಸ್ತ್ರೀ’ ಮತ್ತು ‘ಪ್ರಸಿದ್ಧ ವೇಶ್ಯೆ’ ಅಂತ ಕರೆಯುತ್ತೆ. ‘ಮಹಾ ಬಾಬೆಲ್‌ ಅನ್ನೋದು ಇವಳಿಗಿರೋ ರಹಸ್ಯವಾದ ಹೆಸರು.’ (ಪ್ರಕಟನೆ 17:1, 3, 5) ಪ್ರಕಟನೆ ಪುಸ್ತಕದಲ್ಲಿ ತಿಳಿಸಿರೋ ವಿಷಯಗಳು ‘ಕನಸಿನ ರೂಪದಲ್ಲಿದೆ [ಸೂಚನೆ]’ ಅಂದ್ರೆ ಸಾಂಕೇತಿಕ ರೂಪದಲ್ಲಿದೆ. ಹಾಗಾಗಿ ಈ ಮಹಾ ಬಾಬೆಲ್‌ ನಿಜವಾಗಲೂ ಒಬ್ಬ ಸ್ತ್ರೀಯಲ್ಲ, ಅದು ಬೇರೆ ಏನನ್ನೋ ಸೂಚಿಸುತ್ತಿದೆ. (ಪ್ರಕಟನೆ 1:1) ಅಷ್ಟೇ ಅಲ್ಲ, ಇವಳು ‘ನೀರಿನ ಮೇಲೆ ಕೂತಿದ್ದಾಳೆ.’ ಆ ನೀರು “ಜನ್ರನ್ನ, ದೇಶಗಳನ್ನ ಮತ್ತು ಭಾಷೆಗಳನ್ನ” ಸೂಚಿಸುತ್ತೆ. (ಪ್ರಕಟನೆ 17:1, 15) ಮಹಾ ಬಾಬೆಲ್‌ ಒಬ್ಬ ನಿಜವಾದ ಸ್ತ್ರೀಯಾಗಿದ್ದರೆ ಹೀಗೆ ಮಾಡೋಕೆ ಆಗಲ್ಲ. ಹಾಗಾಗಿ ಇವಳು ಒಬ್ಬ ನಿಜವಾದ ಸ್ತ್ರೀಯಲ್ಲ.

  2.   ಮಹಾ ಬಾಬೆಲ್‌ ಒಂದು ಅಂತರಾಷ್ಟ್ರೀಯ ಸಂಘಟನೆಯನ್ನ ಪ್ರತಿನಿಧಿಸುತ್ತೆ. ಈ ಮಹಾ ಬಾಬೆಲ್‌ “ಮಹಾ ಪಟ್ಟಣವನ್ನ ಸೂಚಿಸ್ತಾಳೆ. ಆ ಮಹಾ ಪಟ್ಟಣ ಭೂಮಿಯ ರಾಜರನ್ನ ಆಳುತ್ತೆ” ಅಂತ ಬೈಬಲ್‌ ಹೇಳುತ್ತೆ. (ಪ್ರಕಟನೆ 17:18) ಹಾಗಾಗಿ ಇವಳು ಬರೀ ಒಂದು ಕಡೆಯಲ್ಲ, ಭೂಮಿಯ ಎಲ್ಲಾ ಕಡೆ ವ್ಯಾಪಕವಾಗಿದ್ದಾಳೆ.

  3.   ಮಹಾ ಬಾಬೆಲ್‌ ರಾಜಕೀಯ ಅಥವಾ ವಾಣಿಜ್ಯ ವ್ಯವಸ್ಥೆಯನ್ನ ಸೂಚಿಸಲ್ಲ. ಇದು ಒಂದು ಧಾರ್ಮಿಕ ಸಂಘಟನೆಯಾಗಿದೆ. ಹಿಂದಿನ ಕಾಲದಲ್ಲಿ ಬಾಬೆಲ್‌ನಲ್ಲಿದ್ದ ಜನರು “ಮಂತ್ರಗಳನ್ನ” ಮತ್ತು “ಮಾಟಮಂತ್ರಗಳನ್ನ” ಮಾಡ್ತಿದ್ರು. ಆ ಪಟ್ಟಣ ಇಂಥ ವಿಷಯಗಳಿಗೆ ಹೆಸರುವಾಸಿಯಾಗಿತ್ತು. (ಯೆಶಾಯ 47:1, 12, 13; ಯೆರೆಮೀಯ 50:1, 2, 38) ನಿಜವಾದ ದೇವರಾಗಿರೋ ಯೆಹೋವನಿಗೆ ವಿರುದ್ಧವಾಗಿ ಸುಳ್ಳು ದೇವರುಗಳನ್ನ ಅಲ್ಲಿ ಆರಾಧಿಸುತ್ತಿದ್ದರು. (ಆದಿಕಾಂಡ 10:8, 9; 11:2-4, 8) ಬಾಬೆಲ್‌ನಲ್ಲಿದ್ದ ಅಧಿಕಾರಿಗಳು ಅಹಂಕಾರದಿಂದ ಯೆಹೋವನಿಗಿಂತ ತಮ್ಮನ್ನು ತಾವೇ ಹೆಚ್ಚಿಸಿಕೊಳ್ತಿದ್ರು. (ಯೆಶಾಯ 14:4, 13, 14; ದಾನಿಯೇಲ 5:2-4, 23) ಅದೇ ತರ ಈ ಮಹಾ ಬಾಬೆಲ್‌ ಕೂಡ ತನ್ನ ‘ಮಂತ್ರತಂತ್ರಗಳಿಗೆ’ ಪ್ರಸಿದ್ಧವಾಗಿದ್ದಾಳೆ. ಹಾಗಾಗಿ ಅವಳು ಒಂದು ಧಾರ್ಮಿಕ ಸಂಘಟನೆಯಾಗಿದ್ದಾಳೆ.—ಪ್ರಕಟನೆ 18:23.

     ಮಹಾ ಬಾಬೆಲ್‌ ರಾಜಕೀಯ ಸಂಘಟನೆಯಲ್ಲ, ಯಾಕಂದ್ರೆ ಅವಳು ನಾಶ ಆದಾಗ “ಭೂಮಿಯ ರಾಜರು” ಗೋಳಾಡುತ್ತಾ ಎದೆ ಬಡಿದುಕೊಳ್ತಾರೆ. (ಪ್ರಕಟನೆ 17:1, 2; 18:9) ಇವಳು ವಾಣಿಜ್ಯ ವ್ಯವಸ್ಥೆಗೆ ಸಂಬಂಧಪಟ್ಟ ಸಂಘಟನೆಯೂ ಅಲ್ಲ. ಯಾಕಂದ್ರೆ ಇವಳು ’ಭೂಮಿಯ ಮೇಲಿರೋ ವ್ಯಾಪಾರಿಗಳನ್ನ’ ಸೂಚಿಸಲ್ಲ ಅಂತ ಬೈಬಲ್‌ ಹೇಳುತ್ತೆ.—ಪ್ರಕಟನೆ 18:11, 15.

  4. ಬಾಬೆಲಿನ ರಾಜ ನೆಬೊನೈಡಸ್‌ ಜೊತೆಗೆ ಸಿನ್‌, ಇಷ್ತಾರ್‌ ಮತ್ತು ಶೇಮಾಷ್‌ ಅನ್ನೋ ತ್ರಿಮೂರ್ತಿಗಳ ಚಿತ್ರ ಇರೋ ಗೋರಿಕಲ್ಲು.

      ಮಹಾ ಬಾಬೆಲ್‌ ಸುಳ್ಳು ಧರ್ಮವಾಗಿದ್ದಾಳೆ. ಈ ಸುಳ್ಳು ಧರ್ಮ ಜನರಿಗೆ, ನಿಜವಾದ ದೇವರಾಗಿರೋ ಯೆಹೋವನನ್ನು ಆರಾಧಿಸೋಕೆ ಕಲಿಸೋದನ್ನ ಬಿಟ್ಟು ಸುಳ್ಳು ದೇವರುಗಳನ್ನ ಆರಾಧಿಸೋಕೆ ಕಲಿಸ್ತಾ ಇದೆ. ಬೈಬಲ್‌ ಇದನ್ನ “ನಂಬಿಕೆ ದ್ರೋಹ” ಅಂತ ಕರೆಯುತ್ತೆ. (ಯಾಜಕಕಾಂಡ 20:6; ವಿಮೋಚನಕಾಂಡ 34:15, 16) ತ್ರಯೈಕ್ಯ ಬೋಧನೆ, ಆತ್ಮ ಸಾಯಲ್ಲ ಅನ್ನೋ ಬೋಧನೆ ಮತ್ತು ಇನ್ನೂ ಕೆಲವು ಸುಳ್ಳು ಬೋಧನೆಗಳು ಹಾಗೂ ಮೂರ್ತಿಪೂಜೆ ಇವೆಲ್ಲ ಹಿಂದಿನ ಕಾಲದ ಬಾಬೆಲ್‌ನಲ್ಲಿ ಹುಟ್ಟಿಕೊಳ್ತು. ಈಗ ಇರೋ ಸುಳ್ಳು ಧರ್ಮಗಳೂ ಇವನ್ನ ಜನರಿಗೆ ಕಲಿಸುತ್ತಿವೆ. ಈ ಧರ್ಮಗಳು ಲೋಕದ ಮೇಲೆ ತಮಗಿರೋ ಪ್ರೀತಿಯನ್ನ ತಮ್ಮ ಆರಾಧನೆಯಲ್ಲಿ ಸೇರಿಸುತ್ತಿದ್ದಾರೆ. ಈ ನಂಬಿಕೆ ದ್ರೋಹವನ್ನ ಬೈಬಲ್‌ ಆಧ್ಯಾತ್ಮಿಕ ವ್ಯಭಿಚಾರ ಅಂತ ಕರೆಯುತ್ತೆ.—ಯಾಕೋಬ 4:4.

     ಮಹಾ ಬಾಬೆಲ್‌, “ನೇರಳೆ ಮತ್ತು ಕೆಂಪು ಬಣ್ಣದ ಬಟ್ಟೆ ಹಾಕೊಂಡಿದ್ದಳು” ಮತ್ತು “ಚಿನ್ನ, ದುಬಾರಿ ರತ್ನ ಮತ್ತು ಮುತ್ತುಗಳಿಂದ ಮಾಡಿದ ಒಡವೆಗಳನ್ನ ಹಾಕೊಂಡಿದ್ದಳು” ಅಂತ ಬೈಬಲ್‌ ಹೇಳುತ್ತೆ. ಸುಳ್ಳುಧರ್ಮದ ಸಿರಿಸಂಪತ್ತನ್ನ ಮತ್ತು ಅದರ ವೈಭವವನ್ನ ತೋರಿಸೋಕೆ ಬೈಬಲ್‌ ಹೀಗೆ ಹೇಳಿದೆ. (ಪ್ರಕಟನೆ 17:4) ‘ಭೂಮಿಯಲ್ಲಿರೋ ಎಲ್ಲ ಅಸಹ್ಯ ವಸ್ತುಗಳು’ ಅಥವಾ ದೇವರ ಹೆಸರಿಗೆ ಕಳಂಕ ತರೋ ಬೋಧನೆಗಳು ಮತ್ತು ಕ್ರಿಯೆಗಳು ಈ ಮಹಾ ಬಾಬೆಲ್‌ನಿಂದಾನೇ ಶುರುವಾಯ್ತು. (ಪ್ರಕಟನೆ 17:5) ಮಹಾ ಬಾಬೆಲ್‌ನ ಬೆಂಬಲಿಸೋ ‘ಜನ್ರು, ದೇಶಗಳು ಮತ್ತು ಭಾಷೆಗಳೇ’ ಈ ಸುಳ್ಳು ಧರ್ಮದ ಸದಸ್ಯರಾಗಿದ್ದಾರೆ.—ಪ್ರಕಟನೆ 17:15.

 ಈ ಮಹಾ ಬಾಬೆಲ್‌ ‘ಭೂಮಿಯ ಮೇಲೆ ಜನ್ರನ್ನ ಕ್ರೂರವಾಗಿ ಕೊಂದಿದೆ.’ (ಪ್ರಕಟನೆ 18:24) ಹಿಂದಿನ ಕಾಲದಿಂದಲೂ ಈ ಸುಳ್ಳು ಧರ್ಮ, ಯುದ್ಧಗಳಿಗೆ ಮತ್ತು ಭಯೋತ್ಪಾದನೆಗಳಿಗೆ ಕುಮ್ಮಕ್ಕು ಕೊಟ್ಟಿದೆ. ಅಷ್ಟೇ ಅಲ್ಲ, ಜನರಿಗೆ ನಿಜವಾದ ದೇವರಾಗಿರೋ ಯೆಹೋವನ ಬಗ್ಗೆ ಮತ್ತು ಆತನ ಪ್ರೀತಿಯ ಬಗ್ಗೆ ಕಲಿಸಲಿಲ್ಲ. (1 ಯೋಹಾನ 4:8) ಇದ್ರಿಂದ ಈ ಭೂಮಿಯಲ್ಲಿ ರಕ್ತದ ಕೋಡಿನೇ ಹರಿದಿದೆ. ಹಾಗಾಗಿ ಯಾರಿಗೆಲ್ಲ ದೇವರಿಗೆ ಇಷ್ಟ ಆಗೋ ತರ ಇರೋಕೆ ಆಸೆ ಇದೆಯೋ ಅವರು ‘ಅವಳನ್ನ ಬಿಟ್ಟು ಹೊರಗೆ ಬರಬೇಕು’ ಅಂದ್ರೆ ಸುಳ್ಳು ಧರ್ಮವನ್ನ ಬಿಟ್ಟುಬಿಡಬೇಕು.—ಪ್ರಕಟನೆ 18:4; 2 ಕೊರಿಂಥ 6:14-17.