ಮಾಹಿತಿ ಇರುವಲ್ಲಿ ಹೋಗಲು

ಪುನರುತ್ಥಾನ ಆದಾಗ ಯೇಸುವಿಗೆ ಯಾವ ತರದ ದೇಹ ಇತ್ತು?

ಪುನರುತ್ಥಾನ ಆದಾಗ ಯೇಸುವಿಗೆ ಯಾವ ತರದ ದೇಹ ಇತ್ತು?

ಬೈಬಲ್‌ ಕೊಡುವ ಉತ್ತರ

 ಯೇಸು “ಮನುಷ್ಯನಾಗಿ ಸತ್ತ, ಆದ್ರೆ ದೇವರು ಆತನಿಗೆ ಕಣ್ಣಿಗೆ ಕಾಣದ ದೇಹ ಕೊಟ್ಟು ಮತ್ತೆ ಜೀವಿಸೋ ತರ ಮಾಡಿದನು” ಎಂದು ಬೈಬಲ್‌ ಹೇಳುತ್ತದೆ.—1 ಪೇತ್ರ 3:18; ಅಪೊಸ್ತಲರ ಕಾರ್ಯ 13:34; 1 ಕೊರಿಂಥ 15:45; 2 ಕೊರಿಂಥ 5:16.

 ಯೇಸುವಿಗೆ ಪುನರುತ್ಥಾನ ಆದಾಗ ರಕ್ತಮಾಂಸದ ದೇಹ ಇರಲಿಲ್ಲ ಎಂದು ಆತನು ಹೇಳಿದ ಮಾತಿನಿಂದಲೇ ಗೊತ್ತಾಗುತ್ತದೆ. ಆತನು ಹೇಳಿದ್ದು, “ನಾನು ಕೊಡೋ ರೊಟ್ಟಿ ನನ್ನ ದೇಹಾನೇ. ಅದ್ರಿಂದ ಜನ್ರಿಗೆ ಶಾಶ್ವತ ಜೀವ ಸಿಗುತ್ತೆ.” ಹೀಗೆ ತನ್ನ ದೇಹವನ್ನು ಮಾನವರಿಗೆ ಬಿಡುಗಡೆ ಬೆಲೆಯಾಗಿ ಕೊಡುತ್ತೇನೆಂದು ಯೇಸು ಹೇಳಿದನು. (ಯೋಹಾನ 6:51; ಮತ್ತಾಯ 20:28) ಪುನರುತ್ಥಾನ ಆದಾಗ ಯೇಸು ಮೊದಲು ತನಗಿದ್ದ ರಕ್ತಮಾಂಸದ ದೇಹವನ್ನೇ ಮತ್ತೆ ತಗೊಂಡಿದ್ದರೆ ಅವನು ಕೊಟ್ಟ ಯಜ್ಞವನ್ನು ರದ್ದುಮಾಡುತ್ತಿದ್ದನು. ಆದರೆ ಖಂಡಿತ ಹೀಗಾಗಲು ಸಾಧ್ಯವಿಲ್ಲ. ಏಕೆಂದರೆ ಆತನು “ಎಲ್ಲ ಕಾಲಕ್ಕೂ ಸೇರಿಸಿ ಒಂದೇ ಸಲ” ತನ್ನ ದೇಹ ಮತ್ತು ರಕ್ತವನ್ನು ಯಜ್ಞವಾಗಿ ಅರ್ಪಿಸಿದನು ಎಂದು ಬೈಬಲ್‌ ಹೇಳುತ್ತದೆ.—ಇಬ್ರಿಯ 9:11, 12.

ಯೇಸು ಕಣ್ಣಿಗೆ ಕಾಣದ ದೇಹವನ್ನು ಪಡೆದುಕೊಂಡಿದ್ದರೆ ಶಿಷ್ಯರು ಅವನನ್ನು ಹೇಗೆ ನೋಡಿದರು?

  •  ದೇವದೂತರಿಗೆ ಮಾನವ ರೂಪವನ್ನು ತಕ್ಕೊಳ್ಳಲು ಆಗುತ್ತದೆ. ಉದಾಹರಣೆಗೆ ಹಿಂದಿನ ಕಾಲದಲ್ಲಿ ದೇವದೂತರು ಮಾನವ ರೂಪದಲ್ಲಿ ಬಂದು ಮನುಷ್ಯರ ಜೊತೆ ತಿಂದು ಕುಡಿದರು. (ಆದಿಕಾಂಡ 18:1-8; 19:1-3) ಅವರು ಇನ್ನೂ ದೇವದೂತರೇ ಆಗಿದ್ದರು. ಅಲ್ಲದೆ ಈ ಭೂಮಿಯಿಂದ ಪುನಃ ಸ್ವರ್ಗಕ್ಕೆ ಹೋಗುವ ಸಾಮರ್ಥ್ಯ ಅವರಿಗಿತ್ತು.—ನ್ಯಾಯಸ್ಥಾಪಕರು 13:15-21.

  •  ಪುನರುತ್ಥಾನ ಆದ ಮೇಲೆ ಯೇಸು ಸ್ವಲ್ಪ ಸಮಯಕ್ಕೆ ಮಾನವ ರೂಪವನ್ನು ತಕ್ಕೊಂಡನು. ದೇವದೂತರು ಮಾಡಿದ ಹಾಗೆ ಅವನೂ ಮಾಡಿದನು. ಯೇಸು ಕಣ್ಣಿಗೆ ಕಾಣದ ದೇಹವನ್ನು ಪಡೆದುಕೊಂಡಿದ್ದರೂ ಬೇರೆಯವರಿಗೆ ಕಾಣಿಸಿಕೊಳ್ಳಲು ಮತ್ತು ಕಣ್ಮರೆಯಾಗಲು ಆತನಿಗೆ ಆಗುತ್ತಿತ್ತು. (ಲೂಕ 24:31; ಯೋಹಾನ 20:19, 26) ಪ್ರತಿ ಸಲ ಶಿಷ್ಯರಿಗೆ ಕಾಣಿಸಿಕೊಳ್ಳಲು ಯೇಸು ತಕ್ಕೊಂಡ ಮಾನವ ದೇಹ ಒಂದೇ ತರ ಇರಲಿಲ್ಲ. ಹಾಗಾಗಿಯೇ ಯೇಸುವಿನ ಆಪ್ತ ಸ್ನೇಹಿತರು ಸಹ ಆತನನ್ನು ನೋಡಿ ಗುರುತು ಹಿಡಿಯಲಿಲ್ಲ, ಆತನು ಹೇಳಿದ ಮತ್ತು ಮಾಡಿದ ವಿಷಯಗಳಿಂದಲೇ ಗುರುತು ಹಿಡಿದರು.—ಲೂಕ 24:30, 31, 35; ಯೋಹಾನ 20:14-16; 21:6, 7.

  •  ಯೇಸು ಅಪೊಸ್ತಲ ತೋಮನಿಗೆ ಕಾಣಿಸಿಕೊಂಡಾಗ ಗಾಯದ ಗುರುತುಗಳಿರುವ ದೇಹವನ್ನು ತಕ್ಕೊಂಡನು. ಏಕೆಂದರೆ ಯೇಸು ನಿಜವಾಗಲೂ ಜೀವಂತವಾಗಿ ಎದ್ದು ಬಂದಿದ್ದಾನಾ ಅನ್ನೋ ಸಂಶಯ ತೋಮನಿಗಿತ್ತು. ಅವನ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಯೇಸು ಹೀಗೆ ಮಾಡಿದನು.—ಯೋಹಾನ 20:24-29.