ಮಾಹಿತಿ ಇರುವಲ್ಲಿ ಹೋಗಲು

ವಿಕಾಸವೇ? ವಿನ್ಯಾಸವೇ?

ಕಾರ್ಪೆಂಟರ್‌ ಇರುವೆ

ಕಾರ್ಪೆಂಟರ್‌ ಇರುವೆ

 ಒಂದು ಕೀಟ ಆರಾಮಾಗಿ ಹಾರಾಡಬೇಕೆಂದರೆ, ಹತ್ತಬೇಕೆಂದರೆ ಅಥವಾ ಸುತ್ತಲೂ ಏನಿದೆ ಎಂದು ಗ್ರಹಿಸಬೇಕೆಂದರೆ ಅದು ಶುಚಿಯಾಗಿರುವುದು ತುಂಬ ಮುಖ್ಯ. ಉದಾಹರಣೆಗೆ, ಇರುವೆಯ ಅರಿಗೊಂಬುಗಳು (ಆ್ಯಂಟೆನಗಳು) ಗಲೀಜಾಗಿದ್ದರೆ ಅದಕ್ಕೆ, ತಾನೆಲ್ಲಿದ್ದೇನೆ ಎಲ್ಲಿಗೆ ಹೋಗಬೇಕು ಎಂದು ಗ್ರಹಿಸಲು, ಇತರ ಇರುವೆಗಳೊಂದಿಗೆ ಸಂವಾದಿಸಲು ಮತ್ತು ವಾಸನೆಯನ್ನು ಕಂಡುಹಿಡಿಯಲು ಕಷ್ಟವಾಗುತ್ತದೆ. ಆದ್ದರಿಂದ “ಕೀಟಗಳು ಯಾವತ್ತೂ ಗಲೀಜಾಗಿರುವುದಿಲ್ಲ. ನೆಲದಲ್ಲಿರುವ ಗಲೀಜು ಮೈಗಂಟಿಕೊಳ್ಳದಂತೆ ಹೇಗೆ ಜಾಗ್ರತೆವಹಿಸಬೇಕು ಎಂದು ಅವುಗಳಿಗೆ ಗೊತ್ತಿದೆ” ಎನ್ನುತ್ತಾರೆ ಪ್ರಾಣಿಶಾಸ್ತ್ರಜ್ಞರಾದ ಅಲೆಕ್ಸಾಂಡರ್‌ ಹ್ಯಾಕ್‌ಮನ್‌.

 ಪರಿಗಣಿಸಿ: ಹ್ಯಾಕ್‌ಮನ್‌ ಮತ್ತವರ ಸಹೋದ್ಯೋಗಿಗಳು ಒಟ್ಟಾಗಿ ಕಾರ್ಪೆಂಟರ್‌ ಇರುವೆಯು (ಕ್ಯಾಂಪೊನೋಟಸ್‌ ರುಫೀಫೆಮರ್‌) ತನ್ನ ಆ್ಯಂಟೆನವನ್ನು ಶುಚಿ ಮಾಡಲು ಏನು ಮಾಡುತ್ತದೆ ಎಂದು ಅಧ್ಯಯನ ಮಾಡಿದರು. ಇರುವೆಯು ತನ್ನ ಆ್ಯಂಟೆನಕ್ಕೆ ಅಂಟಿಕೊಂಡಿರುವ ಬೇರೆ-ಬೇರೆ ಗಾತ್ರದ ಕಣಗಳನ್ನು ತೆಗೆದು ಹಾಕಲು ಮೊದಲು ತನ್ನ ಕಾಲುಗಳನ್ನು ಕೊಂಡಿಯಂತೆ ಮಡಚುತ್ತದೆ. ನಂತರ ತನ್ನ ಆ್ಯಂಟೆನವನ್ನು ಕಾಲಿನ ಆ ಕೊಂಡಿಯಲ್ಲಿ ಸಿಕ್ಕಿಸಿ ಎಳೆಯುತ್ತದೆ. ಕಾಲಿನ ಆ ಕೊಂಡಿಯಲ್ಲಿ ಮೂರು ರೀತಿಯ ರಚನೆ ಇದೆ. ಒಂದನೇದು, ಒರಟಾದ ಬ್ರಶ್‌ನಂಥ ರಚನೆ. ಇದರಿಂದಾಗಿ ಆ್ಯಂಟೆನದಲ್ಲಿರುವ ದೊಡ್ಡ ದೊಡ್ಡ ಕಣಗಳನ್ನು ಉದುರಿಸಲು ಸಹಾಯವಾಗುತ್ತದೆ. ಎರಡನೇದು, ಬಾಚಣಿಗೆಯಂಥ ರಚನೆ. ಇದರ ಹಲ್ಲುಗಳಲ್ಲಿ ಆ್ಯಂಟೆನದ ಕೂದಲುಗಳ ನಡುವಣ ಅಂತರದಷ್ಟೇ ಅಂತರವಿದೆ. ಇದರಿಂದಾಗಿ ಚಿಕ್ಕ ಕಣಗಳನ್ನು ತೆಗೆಯಲು ಆಗುತ್ತದೆ. ಮೂರನೇದು, ತುಂಬ ಸೂಕ್ಷ್ಮವಾದ ಕೂದಲುಗಳಿರುವ ಬ್ರಷ್‌. ಅದು ಅತಿ ಸೂಕ್ಷ್ಮವಾದ ಕಣಗಳನ್ನು ತೆಗೆಯಲು ಸಹಾಯಮಾಡುತ್ತದೆ. ಅಂದರೆ ಆ ಕಣ ಮನುಷ್ಯನ ಒಂದು ಕೂದಲಿನ ವ್ಯಾಸದ (ಡಯಮೀಟರ್‌) 80​ರಲ್ಲೊಂದು ಭಾಗದಷ್ಟು ಸೂಕ್ಷ್ಮವಾಗಿದ್ದರೂ ಅದನ್ನು ತೆಗೆದುಹಾಕುತ್ತದೆ.

 ಕಾರ್ಪೆಂಟರ್‌ ಇರುವೆ ತನ್ನ ಆ್ಯಂಟೆನವನ್ನು ಹೇಗೆ ಶುಚಿಮಾಡುತ್ತದೆಂದು ನೋಡಿ

 ಇರುವೆ ತನ್ನ ಆ್ಯಂಟೆನವನ್ನು ಶುಚಿಮಾಡಲು ಬಳಸುವ ವಿಧಾನವನ್ನೇ ಕಾರ್ಖಾನೆಗಳಲ್ಲೂ ಉಪಯೋಗಿಸಬಹುದು ಅನ್ನುವುದು ಹ್ಯಾಕ್‌ಮನ್‌ ಮತ್ತು ಅವರ ತಂಡದ ಅಭಿಪ್ರಾಯ. ಉದಾಹರಣೆಗೆ, ಸೂಕ್ಷ್ಮವಾದ ಎಲೆಕ್ಟ್ರಾನಿಕ್‌ ಭಾಗಗಳನ್ನು ಮತ್ತು ಅರೆವಾಹಕ (ಸೆಮಿಕಂಡಕ್ಟರ್‌) ವಸ್ತುಗಳನ್ನು ತಯಾರಿಸುವಾಗ ಶುಚಿತ್ವ ಕಾಪಾಡಲು ಈ ವಿಧಾನವನ್ನು ಬಳಸಿದರೆ ತುಂಬ ಒಳ್ಳೇದು. ಯಾಕೆಂದರೆ ಇಂಥ ವಸ್ತುಗಳನ್ನು ತಯಾರಿಸುವಾಗ ಅತಿ ಚಿಕ್ಕ ಕಸ ಉಳಿದರೂ ಆ ವಸ್ತುಗಳು ಸರಿಯಾಗಿ ಕೆಲಸ ಮಾಡುವುದಿಲ್ಲ.

 ನೀವೇನು ನೆನಸುತ್ತೀರಿ? ಆ್ಯಂಟೆನವನ್ನು ಅತ್ಯುತ್ತಮವಾಗಿ ಶುಚಿ ಮಾಡುವ ಸಾಮರ್ಥ್ಯ ಕಾರ್ಪೆಂಟರ್‌ ಇರುವೆಗೆ ಹೇಗೆ ಬಂತು? ವಿಕಾಸವಾಗಿ ಬಂತಾ ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನಾ?