ಮಾಹಿತಿ ಇರುವಲ್ಲಿ ಹೋಗಲು

ದೇವರಿಂದ ನಿಮಗೊಂದು ಗಿಫ್ಟ್‌!

ಪವಿತ್ರ ಬೈಬಲ್‌–ಹೊಸ ಲೋಕ ಭಾಷಾಂತರ ದ ಬಿಡುಗಡೆ

ದೇವರಿಂದ ನಿಮಗೊಂದು ಗಿಫ್ಟ್‌!

ಅಕ್ಟೋಬರ್‌ 25, 2020 ರಂದು, ಪವಿತ್ರ ಬೈಬಲ್‌–ಹೊಸ ಲೋಕ ಭಾಷಾಂತರ ಕನ್ನಡದಲ್ಲಿ ಬಿಡುಗಡೆ ಆಯ್ತು. ನಿಜಕ್ಕೂ ಅದೊಂದು ದೇವರ ಗಿಫ್ಟ್‌.

ಹೊಸ ಲೋಕ ಭಾಷಾಂತರ ನಿಖರವಾಗಿದೆ. ದೇವರ ಸಂದೇಶವನ್ನ ಬದಲಾಯಿಸದೆ ಹೇಗಿದೆಯೋ ಹಾಗೇ ಭಾಷಾಂತರ ಮಾಡಿದೆ. (2 ತಿಮೊತಿ 3:16) ಬೈಬಲ್‌ ಭಾಷಾಂತರಗಳಲ್ಲಿ ಸಾಮಾನ್ಯವಾಗಿ ಆಗ್ತಿರೋ ಯಾವ ತಪ್ಪುಗಳು ಈ ಬೈಬಲಲ್ಲಿ ಇಲ್ಲ? ಈ ಭಾಷಾಂತರವನ್ನ ಯಾರು ಮಾಡಿದ್ದಾರೆ? ಹೊಸ ಲೋಕ ಭಾಷಾಂತರ ವನ್ನ ಯಾಕೆ ನಂಬಬಹುದು?

ಈ ಬೈಬಲ್‌ ನಿಖರವಾಗಿದ್ಯಾ?

“ಪ್ರತಿ ವರ್ಷ ಹೆಚ್ಚು ಮಾರಾಟ ಆಗೋ ಪುಸ್ತಕ ಬೈಬಲ್‌” ಅಂತ ಅಂತರರಾಷ್ಟ್ರೀಯ ವ್ಯವಹಾರದ ಪ್ರೊಫೆಸರ್‌ ಡೆಕ್ಲಾನ್‌ ಹೇಯ್ಸ್‌ ಬರೆದಿದ್ದಾರೆ. ಆದ್ರೆ, ಹೆಚ್ಚು ಮಾರಾಟ ಆಗೋ ಪುಸ್ತಕವನ್ನ ಹೊರಗೆ ತರೋ ಗಡಿಬಿಡಿಯಲ್ಲಿ ನಿಖರತೆ ಮರೆಯಾಗಿದೆ. ಉದಾಹರಣೆಗೆ, ಒಂದು ಬೈಬಲಿನ ಭಾಷಾಂತರಗಾರರು ಓದೋರಿಗೆ ಕೆಲವೊಂದು ಭಾಗಗಳು ಬೋರಿಂಗ್‌ ಅನಿಸಬಹುದು ಅಂತ ನೆನಸಿ ಅದನ್ನ ತೆಗೆದುಹಾಕಿದ್ದಾರೆ. ಮತ್ತೊಂದು ಬೈಬಲಿನಲ್ಲಿ, ಈಗಿನ ಕಾಲದ ಓದುಗರಿಗೆ ಕೆಲವೊಂದು ಪದಗಳು ಅಥವಾ ವಾಕ್ಯಗಳು ಇಷ್ಟ ಆಗದೆ ಇರಬಹುದು ಅಂತ ನೆನಸಿ ಅವನ್ನ ಬದಲಾಯಿಸಿದ್ದಾರೆ. ಉದಾಹರಣೆಗೆ, ಜನ್ರನ್ನ ಮೆಚ್ಚಿಸೋಕೆ “ದೇವರು” ಅನ್ನೋ ಪದಕ್ಕೆ ಬದಲಾಗಿ “ತಂದೆ-ತಾಯಿ” ಅಂತ ಅನುವಾದ ಮಾಡಿದ್ದಾರೆ.

ಇನ್ನೂ ಬೇಜಾರಿನ ವಿಷ್ಯ ಏನಂದ್ರೆ, ಬೈಬಲ್‌ ಭಾಷಾಂತರಗಳಲ್ಲಿ “ಯೆಹೋವ” ದೇವರ ಹೆಸ್ರನ್ನೇ ತೆಗಿದುಬಿಟ್ಟಿದ್ದಾರೆ. (ಕೆಲವು ಪಂಡಿತರು ದೇವರ ಹೆಸ್ರನ್ನ “ಯಾಹ್ವೆ” ಅಂತ ಬರಿತಾರೆ) ಬೈಬಲಿನ ಹಳೇ ಪ್ರತಿಗಳಲ್ಲಿ ದೇವರ ಹೆಸ್ರನ್ನ ನಾಲ್ಕು ಹೀಬ್ರು ವ್ಯಂಜನಗಳಲ್ಲಿ ಬರೆಯಲಾಗಿದೆ. ಅದನ್ನ ಇಂಗ್ಲಿಷಲ್ಲಿ ಬರೆದ್ರೆ YHWH ಅಥವಾ JHVH ಅಂತಾಗುತ್ತೆ. ಈ ಅಪರೂಪದ ಹೆಸರು ಪವಿತ್ರ ಗ್ರಂಥದ ಬರೀ ಹೀಬ್ರು ಭಾಗದಲ್ಲೇ * ಹತ್ರತ್ರ 7,000 ಸಲ ಇದೆ. (ವಿಮೋಚನಕಾಂಡ 3:15; ಕೀರ್ತನೆ 83:18) ನಮ್ಮ ಸೃಷ್ಟಿಕರ್ತ ತನ್ನ ಹೆಸ್ರನ್ನ ಎಲ್ರೂ ಬಳಸಬೇಕು ಅಂತ ಇಷ್ಟಪಡ್ತಾನೆ ಅಂತ ಇದ್ರಿಂದಾನೇ ಗೊತ್ತಾಗುತ್ತೆ!

ನೂರಾರು ವರ್ಷಗಳ ಹಿಂದೆ ಯೆಹೂದ್ಯರು ಮೂಢನಂಬಿಕೆಯಿಂದ ದೇವರ ಹೆಸರನ್ನ ಹೇಳೋದನ್ನೇ ನಿಲ್ಲಿಸಿಬಿಟ್ಟರು. ಆಮೇಲೆ ಇಂಥ ಕುರುಡು ನಂಬಿಕೆಯ ಸೋಂಕು ಕ್ರಿಶ್ಚಿಯನ್‌ ಧರ್ಮಕ್ಕೂ ಅಂಟಿಕೊಳ್ತು. (ಅಪೊಸ್ತಲರ ಕಾರ್ಯ 20:29, 30; 1 ತಿಮೊತಿ 4:1) ಇಂದು ಸಾಮಾನ್ಯವಾಗಿ, ಬೈಬಲ್‌ ಭಾಷಾಂತರಕಾರರು ಬೈಬಲಿನಿಂದ ದೇವರ ಹೆಸ್ರನ್ನು ತೆಗೆದು “ಕರ್ತನು” ಅಥವಾ “ಸರ್ವೇಶ್ವರ” ಅನ್ನೋ ಬಿರುದುಗಳನ್ನ ಬಳಸಿದ್ದಾರೆ. ಕೆಲವು ಆಧುನಿಕ ಇಂಗ್ಲಿಷ್‌ ಬೈಬಲ್‌ಗಳು ಯೋಹಾನ 17: 6 ರಲ್ಲಿರೋ “ಹೆಸರು” ಅನ್ನೋ ಪದವನ್ನೂ ತೆಗಿದುಹಾಕಿದ್ದಾರೆ. ಅಲ್ಲಿ ಯೇಸು ಹೀಗೆ ಹೇಳಿದನು: “ನಿನ್ನ ಹೆಸ್ರನ್ನ ಚೆನ್ನಾಗಿ ಹೇಳಿಕೊಟ್ಟಿದ್ದೀನಿ.” ಉದಾಹರಣೆಗೆ, ದ ಗುಡ್‌ ನ್ಯೂಸ್‌ ಬೈಬಲ್‌ ಭಾಷಾಂತರ ಈ ವಚನವನ್ನ ಹೀಗೆ ಹೇಳಿದೆ: “ನಾನು ನಿನ್ನ ಬಗ್ಗೆ ಹೇಳಿಕೊಟ್ಟಿದ್ದೀನಿ.”

ಕೆಲವು ವಿದ್ವಾಂಸರು ದೇವರ ಹೆಸ್ರಿನ ಬದಲು “ಕರ್ತನು” ಅನ್ನೋ ಬಿರುದು ಹಾಕಿ ನಾವು ನಮ್ಮ ಸಂಪ್ರದಾಯ ಪಾಲಿಸ್ತಿದ್ದೀವಿ ಅಂತ ಹೇಳಿಕೊಳ್ತಾರೆ. ಇನ್ನೂ ಕೆಲವರು, ಹೀಗೆ ಮಾಡಿದ್ರೆ ಹೆಚ್ಚು ಬೈಬಲ್‌ಗಳು ಮಾರಾಟ ಆಗ್ತವೆ ಅಂತ ನೆನಸಿ ಹೀಗೆ ಮಾಡಿದ್ವಿ ಅಂತ ಸಮರ್ಥಿಸಿಕೊಳ್ತಾರೆ. * ಆದ್ರೆ ದೇವರ ಹೆಸ್ರಿಗೆ ಕಳಂಕ ತರುವ ಇಂಥ ಸಂಪ್ರದಾಯಗಳನ್ನ ಯೇಸು ಖಂಡಿಸಿದನು. (ಮತ್ತಾಯ 15: 6) ಅಷ್ಟೇ ಅಲ್ಲ, ಬೈಬಲಲ್ಲಿ ಈ ರೀತಿ ಹೆಸ್ರನ್ನ ಬಿರುದಾಗಿ ಬದಲಾಯಿಸಿರೋ ಯಾವ ಉದಾಹರಣೆನೂ ಇಲ್ಲ. ಯೇಸು ಕ್ರಿಸ್ತನಿಗೂ ಸಹ “ದೇವರ ವಾಕ್ಯ” ಮತ್ತು “ರಾಜರ ರಾಜ” ಅನ್ನೋ ಬಹಳಷ್ಟು ಬಿರುದುಗಳಿವೆ. (ಪ್ರಕಟನೆ 19:11-16) ಹಾಗಂತ, ಯೇಸು ಹೆಸ್ರು ಇರುವಲ್ಲೆಲ್ಲ ಇಂತಹ ಒಂದು ಬಿರುದನ್ನ ಹಾಕಬೇಕಾ?

ಇದೊಂದು ಗಂಭೀರ ಸಮಸ್ಯೆ. ಬೈಬಲಿಂದ ದೇವರ ಹೆಸ್ರನ್ನ ತೆಗೆದುಹಾಕೋದ್ರ ಬಗ್ಗೆ ಭಾರತದಲ್ಲಿರೋ ಬೈಬಲ್‌ ಭಾಷಾಂತರದ ಒಬ್ಬ ಸಲಹೆಗಾರ ಏನು ಹೇಳ್ತಾರೆ ನೋಡಿ: “ಸಾಮಾನ್ಯವಾಗಿ ಹಿಂದೂಗಳಿಗೆ ದೇವರಿಗಿರೋ ಬಿರುದುಗಳ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ. ಬದಲಿಗೆ ಅವರು ದೇವರ ನಿಜ ಹೆಸ್ರನ್ನ ತಿಳ್ಕೊಳ್ಳೋಕೆ ಬಯಸ್ತಾರೆ. ಒಂದುವೇಳೆ ಆ ಹೆಸ್ರು ಗೊತ್ತಾಗಿಲ್ಲ ಅಂದ್ರೆ ಅವರಿಗೆ ಈ ದೇವರು ಯಾರು ಅಂತಾನೇ ಗೊತ್ತಾಗಲ್ಲ.” ನಿಜ ಹೇಳಬೇಕಂದ್ರೆ, ಈ ವಿಷ್ಯ ದೇವರನ್ನ ಹುಡುಕುವ ಎಲ್ಲರಿಗೂ ಅನ್ವಯಿಸುತ್ತೆ. ದೇವರನ್ನ ಅರ್ಥ ಮಾಡ್ಕೊಬೇಕಂದ್ರೆ ದೇವರ ಹೆಸ್ರನ್ನ ತಿಳಿಯೋದು ತುಂಬಾನೇ ಮುಖ್ಯ. ಆಗಲೇ ನಮಗೆ, ದೇವರು ಬರೀ ಒಂದು ಶಕ್ತಿ ಅಲ್ಲ, ಆತನನ್ನ ನಾವು ವ್ಯಕ್ತಿಯಾಗಿ ಪರಿಚಯ ಮಾಡ್ಕೊಳ್ಳಬಹುದು ಅಂತ ಅರ್ಥ ಆಗುತ್ತೆ. (ವಿಮೋಚನಕಾಂಡ 34:6, 7) ಅದಕ್ಕೇ ಬೈಬಲ್‌ ಹೀಗೆ ಹೇಳುತ್ತೆ: “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.” (ರೋಮನ್ನರಿಗೆ 10:13) ದೇವರನ್ನ ಆರಾಧಿಸೋರು ಆತನ ಹೆಸ್ರನ್ನ ಬಳಸಲೇಬೇಕು!

ದೇವರಿಗೆ ಗೌರವ ಕೊಡೋ ಭಾಷಾಂತರ

ಹೊಸ ಲೋಕ ಭಾಷಾಂತರದಲ್ಲಿ “ಯೆಹೋವ” ದೇವರ ಹೆಸ್ರಿದೆ

1950 ರಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಇಂಗ್ಲಿಷ್‌ ಆವೃತ್ತಿಯ ಬಿಡುಗಡೆ ಒಂದು ಮೈಲಿಗಲ್ಲಾಗಿತ್ತು. ಅದ್ರ ಮುಂದಿನ ದಶಕದಲ್ಲಿ, ಹೀಬ್ರೂ ಶಾಸ್ತ್ರಗ್ರಂಥ ಹಂತಹಂತವಾಗಿ ಬಿಡುಗಡೆ ಮಾಡಲಾಯ್ತು. 1961 ರಲ್ಲಿ ಇಂಗ್ಲಿಷ್‌ ಭಾಷೆಯ ಸಂಪೂರ್ಣ ಬೈಬಲ್‌ ಒಂದೇ ಸಂಪುಟದಲ್ಲಿ ಬಿಡುಗಡೆ ಆಯ್ತು. ವಿಶೇಷ ಏನಂದ್ರೆ, ಹೊಸ ಲೋಕ ಭಾಷಾಂತರ ಹಳೇ ಒಡಂಬಡಿಕೆಯಲ್ಲಿ ಹತ್ರತ್ರ 7,000 ಸಲ ಯೆಹೋವ ದೇವರ ಹೆಸ್ರನ್ನ ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಹಾಕಿದೆ. ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲೂ * ದೇವರ ಹೆಸ್ರನ್ನ 237 ಸಲ ಹಾಕಿರೋದು ತುಂಬ ವಿಶೇಷವಾಗಿದೆ.

ದೇವರ ಹೆಸ್ರು ಬೈಬಲಿನಲ್ಲಿ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ಹಾಕೋದು ದೇವರಿಗೆ ಗೌರವ ಕೊಡುತ್ತೆ. ಅಷ್ಟೇ ಅಲ್ಲ ನಮ್ಮ ತಿಳುವಳಿಕೆಯನ್ನ ಜಾಸ್ತಿ ಮಾಡುತ್ತೆ. ಇದನ್ನ ಅರ್ಥಮಾಡ್ಕೊಳ್ಳೋಕೆ ಈ ಉದಾಹರಣೆ ನೋಡಿ. ತುಂಬ ಭಾಷಾಂತರಗಳು ಮತ್ತಾಯ 22:44 ನ್ನ “ಕರ್ತನು ನನ್ನ ಒಡೆಯನಿಗೆ ನುಡಿದನು” ಅಂತ ಭಾಷಾಂತರಿಸಿವೆ. ಆದ್ರೆ ಇಲ್ಲಿ ಯಾರು ಯಾರಿಗೆ ಹೇಳಿದ್ರು ಅಂತ ಗೊತ್ತಾಗಲ್ಲ. ಹೊಸ ಲೋಕ ಭಾಷಾಂತರ ಕೀರ್ತನೆ 110:1 ರಲ್ಲಿ ಇರೋ ತರ ಮತ್ತಾಯ 22:44 ನ್ನ ‘ಯೆಹೋವ ನನ್ನ ಒಡೆಯನಿಗೆ ಹೇಳಿದನು’ ಅಂತ ಭಾಷಾಂತರಿಸಿದೆ. ಇದ್ರಿಂದ ಓದುವವರು ಯೆಹೋವ ದೇವರು ಮತ್ತು ಆತನ ಮಗನ ನಡುವೆ ಇರೋ ವ್ಯತ್ಯಾಸವನ್ನ ಸುಲಭವಾಗಿ ಕಂಡುಹಿಡಿಬಹುದು.

ಈ ಹೊಸ ಭಾಷಾಂತರವನ್ನ ಯಾರು ಮಾಡಿದ್ದಾರೆ?

ಯೆಹೋವನ ಸಾಕ್ಷಿಗಳನ್ನ ಪ್ರತಿನಿಧಿಸೋ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದಹೊಸ ಲೋಕ ಭಾಷಾಂತರ ಬೈಬಲ್‌ ಪ್ರಕಟಿಸಲಾಗಿದೆ. ನೂರಕ್ಕೂ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಗಳು ಪ್ರಪಂಚದಾದ್ಯಂತ ಬೈಬಲ್‌ಗಳನ್ನ ಮುದ್ರಿಸಿ ವಿತರಿಸುತ್ತಿದ್ದಾರೆ. ಹೊಸ ಲೋಕ ಭಾಷಾಂತರ ಬೈಬಲನ್ನ ಯೆಹೋವನ ಸಾಕ್ಷಿಗಳ ಒಂದು ಚಿಕ್ಕ ಗುಂಪು ತಯಾರಿಸಿದೆ. ಅದಕ್ಕೆ ಹೊಸ ಲೋಕ ಭಾಷಾಂತರ ಸಮಿತಿ ಅಂತ ಹೆಸರು. ಆ ಸಮಿತಿಯಲ್ಲಿ ಇದ್ದವರು ಈ ಕೆಲಸದ ಕೀರ್ತಿಯನ್ನ ಬಯಸದೆ ಅವರು ಸತ್ತ ಮೇಲೂ ಕೂಡ ತಮ್ಮ ಹೆಸ್ರನ್ನ ಯಾರಿಗೂ ತಿಳಿಸಿಬಾರದೆಂದು ಕೇಳಿಕೊಂಡಿದ್ದಾರೆ.—1 ಕೊರಿಂಥ 10:31.

ಹೊಸ ಲೋಕ ಭಾಷಾಂತರ ಅನ್ನೋ ಹೆಸ್ರು ಯಾಕೆ ಬಂತು? 1950 ರಲ್ಲಿ ಬಿಡುಗಡೆಯಾದ ಮೊದಲ ಆವೃತ್ತಿಯ ಮುನ್ನುಡಿಯಲ್ಲಿ ಈ ಹೆಸ್ರಿನ ಬಗ್ಗೆ ವಿವರಿಸುತ್ತಾ ಹೀಗೆ ಹೇಳಿದ್ರು: 2 ಪೇತ್ರ 3:13 ರಲ್ಲಿ ಹೊಸ ಲೋಕವನ್ನ ನಾವು “ಎದುರುನೋಡುತ್ತಾ ಇದ್ದೇವೆ” ಅಂತ ಇದೆ. ಈ ಮಾತಿನ ಮೇಲೆ ನಮಗೆ ಎಷ್ಟು ದೃಢ ಭರವಸೆ ಇದೆ ಅಂತ ಈ ಹೆಸ್ರು ತೋರಿಸಿಕೊಡುತ್ತೆ. “ಈ ಹಳೇ ಲೋಕದಿಂದ ನೀತಿ ತುಂಬಿರೋ ಹೊಸ ಲೋಕಕ್ಕೆ ಹೋಗಲಿಕ್ಕಿದ್ದೇವೆ.” ಈ ಸಮಯದಲ್ಲಿ ಬೈಬಲ್‌ ಭಾಷಾಂತರದ ಮೂಲಕ “ದೇವರ ವಾಕ್ಯದ ಪವಿತ್ರ ಸತ್ಯದ ಬೆಳಕು” ಎಲ್ಲರ ಮೇಲೆ ಪ್ರಕಾಶಿಸಲು ಬಿಡುವುದು ತುಂಬಾನೇ ಪ್ರಾಮುಖ್ಯ ಅಂತ ಆ ಸಮಿತಿ ಹೇಳಿತು.

ನಿಖರ ಭಾಷಾಂತರ

ಈ ಭಾಷಾಂತರದಲ್ಲಿ ನಿಖರತೆಗೆ ಆದ್ಯತೆ ಕೊಡಲಾಗಿದೆ. ಇದ್ರ ಇಂಗ್ಲಿಷ್‌ ಆವೃತ್ತಿಯನ್ನ ಭಾಷಾಂತರ ಮಾಡಿದವರು ಬೈಬಲಿನ ಮೂಲ ಭಾಷೆಗಳಾದ ಹೀಬ್ರು, ಗ್ರೀಕ್‌ ಮತ್ತು ಅರಾಮಿಕ್‌ ಭಾಷೆಯಲ್ಲಿ ಲಭ್ಯವಿದ್ದ ಅತ್ಯುತ್ತಮ ಮೂಲಪ್ರತಿಗಳನ್ನ ಬಳಸಿ ಅನುವಾದಿಸಿದ್ದಾರೆ. ಹಳೇ ಮೂಲಪ್ರತಿಗಳಲ್ಲಿರೋ ವಿಷ್ಯಗಳನ್ನ ಅದೇ ತರ ಭಾಷಾಂತರ ಮಾಡೋಕೆ ತುಂಬ ಜಾಗ್ರತೆ ವಹಿಸಿದ್ದಾರೆ. ಅದೇ ಸಮಯದಲ್ಲಿ ಈಗಿನ ಜನರಿಗೆ ಸುಲಭವಾಗಿ ಅರ್ಥ ಆಗೋ ಭಾಷೆಯನ್ನ ಬಳಸಿದ್ದಾರೆ.

ಕೆಲವು ವಿದ್ವಾಂಸರು ಹೊಸ ಲೋಕ ಭಾಷಾಂತರದ ನಿಯತ್ತು ಮತ್ತು ನಿಖರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇನು ಆಶ್ಚರ್ಯಪಡೋ ವಿಷ್ಯ ಅಲ್ಲ. ಇಸ್ರೇಲ್‌ನ ಹೀಬ್ರೂ ವಿದ್ವಾಂಸ ಪ್ರೊಫೆಸರ್‌ ಬೆಂಜಮಿನ್‌ ಕೇದಾರ್‌-ಕೊಫ್‌ಸ್ಟೈನ್‌ 1989 ರಲ್ಲಿ ಹೀಗೆ ಹೇಳಿದ್ರು: “ನಾನು ಹೀಬ್ರು ಬೈಬಲ್‌ ಮತ್ತು ಅದರ ಭಾಷಾಂತರಗಳಿಗೆ ಸಂಬಂಧಿಸಿದ ಭಾಷಾ ಸಂಶೋಧನೆ ಮಾಡ್ತಾ ಇರುವಾಗ ಹೊಸ ಲೋಕ ಭಾಷಾಂತರದ ಇಂಗ್ಲಿಷ್‌ ಆವೃತ್ತಿಯನ್ನ ನೋಡ್ತೇನೆ. ಹೀಗೆ ಮಾಡುವಾಗ, ಈ ಆವೃತ್ತಿಯಲ್ಲಿ ಸಾಧ್ಯವಾದಷ್ಟು ನಿಖರತೆಯನ್ನ ಕಾಪಾಡಲು ತಮ್ಮಿಂದಾದಷ್ಟು ಪ್ರಾಮಾಣಿಕ ಪ್ರಯತ್ನ ಹಾಕಿರೋದು ನನಗೆ ಯಾವಾಗ್ಲೂ ಎದ್ದು ಕಾಣಿಸುತ್ತೆ.”

ಅನೇಕ ಭಾಷೆಗಳಲ್ಲಿ ಬೈಬಲ್‌

ಹೊಸ ಲೋಕ ಭಾಷಾಂತರವನ್ನ ಯೆಹೋವನ ಸಾಕ್ಷಿಗಳು ಇಂಗ್ಲಿಷ್‌ ಮಾತನಾಡದ ಬೇರೆ ದೇಶಗಳಿಗೂ ಸಿಗೋ ತರ ಮಾಡಿದ್ದಾರೆ. ಕೆಲವು ಭಾಷೆಗಳಲ್ಲಿ ಬೈಬಲನ್ನ ಪೂರ್ತಿ ಅಥವಾ ಬೇರೆ-ಬೇರೆ ಭಾಗಗಳಾಗಿ ಬಿಡುಗಡೆ ಮಾಡಲಾಗಿದೆ. ಈ ಬೈಬಲ್‌ ಭಾಷಾಂತರವನ್ನ ಸುಲಭ ಮಾಡೋಕೆ ಭಾಷಾಂತರದ ವಿಧಾನವನ್ನ ಅಭಿವೃದ್ಧಿ ಮಾಡಲಾಯ್ತು. ಅದಕ್ಕಾಗಿ ಬೈಬಲ್‌ ಪದಗಳನ್ನ ಕಂಪ್ಯೂಟರ್‌ ತಂತ್ರಜ್ಞಾನದ ಜೊತೆ ಸೇರಿಸಲಾಯ್ತು. ಭಾಷಾಂತರಗಾರರಿಗೆ ಸಹಾಯ ಮಾಡೋಕೆ ಟ್ರಾನ್ಸ್‌ಲೇಷನ್‌ ಸರ್ವಿಸಸ್‌ ಅನ್ನೋ ಡಿಪಾರ್ಟ್‌ಮೆಂಟನ್ನ ಶುರುಮಾಡಲಾಯ್ತು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಬೈಬಲ್‌ ಭಾಷಾಂತರದ ಕೆಲಸ ಹೇಗೆ ನಡಿತಿದೆ ಅಂತ ತನ್ನ ಲೇಖಕರ ಸಮಿತಿ ಮೂಲಕ ತಿಳಿದುಕೊಳ್ತಾ ಇರುತ್ತೆ. ಆದ್ರೆ ಇದೆಲ್ಲ ಹೇಗೆ ನಡೆಯುತ್ತೆ?

ಮೊದಲನೇದಾಗಿ, ಭಾಷಾಂತರ ತಂಡವಾಗಿ ಕೆಲಸ ಮಾಡೋಕೆ ಸಮರ್ಪಿತ ಕ್ರೈಸ್ತರ ಗುಂಪನ್ನು ನೇಮಿಸಲಾಗುತ್ತೆ. ಈ ಭಾಷಾಂತರ ಮಾಡೋರು ಒಬ್ಬೊಬ್ಬರೇ ಕೆಲಸ ಮಾಡಲ್ಲ, ಅವರು ತಂಡವಾಗಿ ಒಟ್ಟಿಗೆ ಕೆಲಸ ಮಾಡ್ತಾರೆ. ಹೀಗೆ ಮಾಡೋದ್ರಿಂದ ತುಂಬ ಸಮತೋಲನದಿಂದ ಚೆನ್ನಾಗಿ ಭಾಷಾಂತರ ಮಾಡಕ್ಕಾಗುತ್ತೆ. (ಜ್ಞಾನೋಕ್ತಿ 11:14) ಸಾಮಾನ್ಯವಾಗಿ, ತಂಡದಲ್ಲಿರೋ ಪ್ರತಿಯೊಬ್ಬನು ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನ ಭಾಷಾಂತರಿಸಿ ಅನುಭವ ಪಡ್ಕೊಂಡಿರ್ತಾನೆ. ಆಮೇಲೆ ತಂಡದವರಿಗೆ ಬೈಬಲ್‌ ಭಾಷಾಂತರಕ್ಕೆ ಬೇಕಾದ ಸಾಮಾನ್ಯ ತತ್ವಗಳನ್ನ ಕಲಿಸಲಾಗುತ್ತೆ ಮತ್ತು ಅದಕ್ಕೆ ಸಂಬಂಧಪಟ್ಟ ಕಂಪ್ಯೂಟರ್‌ ಪ್ರೋಗ್ರಾಂಗಳನ್ನ ಬಳಸೋಕೆ ಚೆನ್ನಾಗಿ ತರಬೇತಿ ಕೊಡಲಾಗುತ್ತೆ.

ಭಾಷಾಂತರ ತಂಡಕ್ಕೆ ನಿಖರವಾಗಿ ಅದೇ ಸಮಯದಲ್ಲಿ ಸಾಮಾನ್ಯ ಜನ್ರಿಗೆ ಸುಲಭವಾಗಿ ಅರ್ಥವಾಗೋ ರೀತಿಯಲ್ಲಿ ಭಾಷಾಂತರಿಸುವಂತೆ ಸೂಚನೆ ಕೊಡಲಾಗುತ್ತೆ. ಸಾಧ್ಯವಾದಾಗೆಲ್ಲ ಅಕ್ಷರಾರ್ಥವಾಗಿ ಇರಬೇಕು ಆದರೆ, ಅದೇ ಸಮಯದಲ್ಲಿ, ಮೂಲ ಪ್ರತಿಯಲ್ಲಿರೋ ಅರ್ಥಾನೇ ಬರೋ ತರ ನೋಡ್ಕೊಬೇಕು. ಅರ್ಥ ಬದಲಾಗಬಾರದು. ಇದನ್ನ ಹೇಗೆ ಮಾಡಲಾಗುತ್ತೆ? ಹೊಸದಾಗಿ ಬಿಡುಗಡೆಯಾದ ಬೈಬಲನ್ನ ಪರಿಗಣಿಸಿ. ಇಂಗ್ಲಿಷ್‌ ಭಾಷೆಯಲ್ಲಿ ಬಳಸಲಾಗೋ ಎಲ್ಲಾ ಪ್ರಮುಖ ಬೈಬಲ್‌ ಪದಗಳಿಗೆ ಕನ್ನಡ ಪದಗಳನ್ನ ಆಯ್ಕೆ ಮಾಡೋ ಮೂಲಕ ಭಾಷಾಂತರ ತಂಡ ಕೆಲಸವನ್ನ ಶುರುಮಾಡುತ್ತೆ. ಬೈಬಲಿಗೆ ಸಂಬಂಧಿಸಿದ ಮತ್ತು ಸಮಾನಾರ್ಥಕ ಪದಗಳನ್ನ ಕಂಪ್ಯೂಟರ್‌ನಲ್ಲಿರೋ ವಾಚ್‌ಟವರ್‌ ಟ್ರಾನ್ಸ್‌ಲೇಷನ್‌ ಸಿಸ್ಟಮ್‌ ತೋರಿಸುತ್ತೆ. ಅದರಲ್ಲಿ ತೋರಿಸೋ ಇಂಗ್ಲಿಷ್‌ ಪದಗಳನ್ನ ಯಾವ ಗ್ರೀಕ್‌ ಮತ್ತು ಹೀಬ್ರು ಭಾಷೆಯಿಂದ ತೆಗೆದುಕೊಳ್ಳಲಾಗಿದೆ ಅಂತಾನೂ ತೋರಿಸುತ್ತೆ. ಇದ್ರಿಂದ ಭಾಷಾಂತರಗಾರರು ಆ ಗ್ರೀಕ್‌ ಅಥವಾ ಹೀಬ್ರೂ ಪದಗಳು ಬೇರೆ ಕಡೆ ಹೇಗೆ ಭಾಷಾಂತರಿಸಲಾಗಿದೆ ಅಂತಾನೂ ಕಂಡುಹಿಡಿಬಹುದು. ಆ ಪದಗಳನ್ನೆಲ್ಲ ತಂಡ ಒಪ್ಕೊಂಡ ಮೇಲೆ ಬೈಬಲ್‌ ಭಾಷಾಂತರವನ್ನ ಶುರುಮಾಡ್ತಾರೆ. ಪ್ರತಿ ವಚನವನ್ನ ಭಾಷಾಂತರ ಮಾಡುವಾಗ ಕಂಪ್ಯೂಟರಿನ ಸಹಾಯದಿಂದ ಕನ್ನಡ ಪದಗಳನ್ನ ನೋಡ್ತಾರೆ.

ಹಾಗಿದ್ರೂ ಭಾಷಾಂತರ ಅಂದ್ರೆ ಇಂಗ್ಲಿಷ್‌ ಪದಗಳಿಗೆ ಬದಲಿ ಪದಗಳನ್ನ ಹಾಕೋದಷ್ಟೇ ಅಲ್ಲ. ಅನುವಾದದಲ್ಲಿ ಬಳಸೋ ಕನ್ನಡ ಪದಗಳು ಎಲ್ಲ ಸಂದರ್ಭದಲ್ಲೂ ಸರಿಯಾದ ಅರ್ಥ ಕೊಡುತ್ತೆ ಅನ್ನೋದನ್ನ ಖಚಿತಪಡಿಸ್ಕೊಬೇಕು. ಬಳಸಿರೋ ವ್ಯಾಕರಣ ಮತ್ತು ವಾಕ್ಯರಚನೆನೂ ಚೆನ್ನಾಗಿರಬೇಕು ಮತ್ತು ಸ್ವಾಭಾವಿಕವಾಗಿ ಇರಬೇಕು. ಈ ಬೈಬಲನ್ನ ಓದುವಾಗ ಈ ಯೋಜನೆಯಲ್ಲಿ ಭಾಷಾಂತರಕಾರರು ಪಟ್ಟಿರುವ ಕಠಿಣ ಪರಿಶ್ರಮ ನಿಮಗೆ ಗೊತ್ತಾಗುತ್ತೆ. ಈ ಕನ್ನಡ ಬೈಬಲ್‌ ಭಾಷಾಂತರದಲ್ಲಿ ದೇವರ ಸಂದೇಶವನ್ನ ಸುಲಭವಾಗಿ, ಸ್ಪಷ್ಟವಾಗಿ ಮತ್ತು ಅರ್ಥವಾಗೋ ಭಾಷೆಯಲ್ಲಿ ಅನುವಾದಿಸಲಾಗಿದೆ. ಅಷ್ಟೇ ಅಲ್ಲ, ಬೈಬಲನ್ನ ಬರೆದ ಸಮಯದಲ್ಲಿ ಇದ್ದ ಅದೇ ಯೋಚನೆಗಳಿಗೆ ತಕ್ಕಂತೆ ಇದೆ. *

ಕನ್ನಡ ಪವಿತ್ರ ಬೈಬಲ್‌ ಹೊಸ ಲೋಕ ಭಾಷಾಂತರವನ್ನ ನೀವಾಗಿ ಓದಿ ಪರೀಕ್ಷಿಸುವಂತೆ ನಾವು ಕೇಳಿಕೊಳ್ತೇವೆ. ನೀವು ಈ ಬೈಬಲನ್ನ ಆನ್‌ಲೈನ್‌ನಲ್ಲಿ ಅಥವಾ JW ಲೈಬ್ರರಿ ಆ್ಯಪ್‌ನಲ್ಲಿ ಓದಬಹುದು ಅಥವಾ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಮುದ್ರಣ ಆಗಿರೋ ಬೈಬಲನ್ನ ಕೇಳಿ ಪಡೀಬಹುದು. ದೇವರ ಮಾತುಗಳನ್ನ ನಿಮ್ಮ ಸ್ವಂತ ಭಾಷೆಯಲ್ಲಿ ಸರಿಯಾಗೇ ದಾಟಿಸಲಾಗಿದೆ ಅನ್ನೋ ದೃಢಭರವಸೆಯಿಂದ ನೀವು ಈ ಬೈಬಲನ್ನ ಓದಬಹುದು. ಇತ್ತೀಚಿಗೆ ಬಿಡುಗಡೆಯಾದ ಈ ಬೈಬಲ್‌ ಖಂಡಿತ ದೇವರಿಂದ ಬಂದಂತ ಗಿಫ್ಟ್‌ ಅನ್ನೋದ್ರಲ್ಲಿ ಎರಡು ಮಾತಿಲ್ಲ!

 

ಹೊಸ ಲೋಕ ಭಾಷಾಂತರ ದ ವಿಶೇಷತೆಗಳು

 

ಬೈಬಲಿನ ಪರಿಚಯ: ಬೈಬಲಿನ ಮುಖ್ಯ ಬೋಧನೆಗಳ ವಿಷ್ಯದಲ್ಲಿ ಬರೋ 20 ಪ್ರಶ್ನೆಗಳಿಗೆ ಬೈಬಲ್‌ ವಚನಗಳನ್ನ ಬಳಸಿ ಉತ್ರ ಕೊಡಲಾಗಿದೆ

ನಿಖರ ಭಾಷಾಂತರ: ಹೀಬ್ರು, ಅರಾಮಿಕ್‌ ಮತ್ತು ಗ್ರೀಕ್‌ ಭಾಷೆಗಳಿಂದ ಇಂಗ್ಲಿಷಿಗೆ ನಂತರ ಕನ್ನಡಕ್ಕೆ ಅನುವಾದಿಸೋಕೆ ಸಾಕಷ್ಟು ಪ್ರಯಾಸ ಹಾಕಿ ಸರಿಯಾಗಿ ಮತ್ತು ನಂಬಿಗಸ್ತಿಕೆಯಿಂದ ಮಾಡಲಾಗಿದೆ.

ಮಾರ್ಜಿನಲ್‌ ರೆಫರೆನ್ಸಗಳು: ಒಂದೇ ತರದ ಬೈಬಲ್‌ ವಚನಗಳನ್ನ ಅರ್ಥಮಾಡ್ಕೊಳ್ಳೋಕೆ ಸಹಾಯ ಮಾಡುವ ರೆಫರೆನ್ಸಗಳು.

ಪರಿಶಿಷ್ಟ ಎ: ಹೊಸ ಲೋಕ ಭಾಷಾಂತರದ ವಿಶೇಷತೆಗಳನ್ನ ಹೇಳುತ್ತೆ, ಅದರ ಶೈಲಿ, ಪದಗಳ ಆಯ್ಕೆ ಮತ್ತು ದೇವರ ಹೆಸ್ರನ್ನ ಬಳಕೆ ಬಗ್ಗೆ ನೋಡಬಹುದು.

ಪರಿಶಿಷ್ಟ ಬಿ: ಇದ್ರಲ್ಲಿ 15 ವಿಭಾಗಗಳಿವೆ, ಚಿತ್ರಗಳನ್ನ, ನಕ್ಷೆಗಳನ್ನ ನೋಡಬಹುದು

^ ಪ್ಯಾರ. 7 ಸಾಮಾನ್ಯವಾಗಿ ಜನ್ರು ಇದನ್ನ ಹಳೇ ಒಡಂಬಡಿಕೆ ಅಂತ ಕರೀತಾರೆ.

^ ಪ್ಯಾರ. 9 ಉದಾಹರಣೆಗೆ, ನ್ಯೂ ಇಂಟರ್‌ನ್ಯಾಶನಲ್‌ ವರ್ಷನ್‌ ಭಾಷಾಂತರದ ಮೇಲ್ವಿಚಾರಕ ಹೀಗೆ ಬರೆದ್ರು: “ದೇವರಿಗೆ ಯೆಹೋವ ಅನ್ನೋ ವಿಶೇಷ ಹೆಸ್ರಿದೆ. ನಿಜ ಹೇಳಬೇಕಂದ್ರೆ, ನಾವು ನಮ್ಮ ಅನುವಾದದಲ್ಲಿ ಆ ಹೆಸ್ರನ್ನ ಬಳಸಬೇಕಿತ್ತು. ಆದ್ರೆ ಆ ಹೆಸ್ರನ್ನ ಹಾಕಿ ಅನುವಾದಿಸಿದ್ರೆ ನಾವು ಭಾಷಾಂತರ ಮಾಡೋಕೆ ಬಳಸಿದ 2 1/4 ಮಿಲಿಯನ್‌ ಡಾಲರ್‌ಗಳನ್ನ (ಹತ್ರತ್ರ 17 ಕೋಟಿ) ಚರಂಡಿಗೆ ಎಸೆದಂತೆ ಆಗ್ತಿತ್ತು. ಉದಾಹರಣೆಗೆ, 23 ನೇ ಕೀರ್ತನೆಯಲ್ಲಿ, ನಾವು ’ಯಾಹ್ವೆ ನನ್ನ ಕುರುಬ’ ಅಂತ ಹಾಕಿದ್ದಿದ್ರೆ ನಮಗೆ ನಯಾಪೈಸೆ ಲಾಭ ಆಗ್ತಿರಲಿಲ್ಲ.”

^ ಪ್ಯಾರ. 12 ಸಾಮಾನ್ಯವಾಗಿ ಜನ್ರು ಇದನ್ನ ಹೊಸ ಒಡಂಬಡಿಕೆ ಅಂತ ಕರೀತಾರೆ.

^ ಪ್ಯಾರ. 24 ಕನ್ನಡ ಹೊಸ ಲೋಕ ಭಾಷಾಂತರದ ಹಿಂದಿರೋ ತತ್ವಗಳ ಬಗ್ಗೆ, ಈ ಆವೃತ್ತಿಯ ವಿಶೇಷತೆಗಳ ಬಗ್ಗೆ ಇರೋ ಹೆಚ್ಚಿನ ಮಾಹಿತಿಗಾಗಿ ಪರಿಶಿಷ್ಟ ಎ1 ಮತ್ತು ಎ2 ನೋಡಿ.