ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ

ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ

“ನಿನ್ನ ದೇವರಿಗೆ ನಮ್ರವಾಗಿ ನಡೆದುಕೊ.”—ಮೀಕ 6:8.

ಗೀತೆಗಳು: 48, 95

1-3. (ಎ) ಯೆಹೂದದಿಂದ ಬಂದ ಪ್ರವಾದಿ ಏನು ಮಾಡಬೇಕಿತ್ತು? (ಬಿ) ಫಲಿತಾಂಶ ಏನಾಯಿತು? (ಲೇಖನದ ಆರಂಭದ ಚಿತ್ರ ನೋಡಿ.)

ಇಸ್ರಾಯೇಲಿನ ರಾಜ ಯಾರೊಬ್ಬಾಮನು ಬೇತೇಲಿನಲ್ಲಿ ಸುಳ್ಳಾರಾಧನೆ ಮಾಡಲು ಒಂದು ಯಜ್ಞವೇದಿ ಕಟ್ಟಿದನು. ಇದರಿಂದ ಯೆಹೋವನಿಗೆ ತುಂಬ ಸಿಟ್ಟು ಬಂತು. ಯೆಹೂದದಿಂದ ಒಬ್ಬ ಪ್ರವಾದಿಯನ್ನು ಕಳುಹಿಸಿ ಯಾರೊಬ್ಬಾಮನ ವಿರುದ್ಧ ದಂಡನೆಯ ತೀರ್ಪನ್ನು ಹೊರಡಿಸಿದನು. ಈ ದೀನ ಪ್ರವಾದಿ ಯೆಹೋವನು ಹೇಳಿದಂತೆಯೇ ಹೋಗಿ ರಾಜನಿಗೆ ದಂಡನೆಯ ತೀರ್ಪನ್ನು ತಿಳಿಸಿದನು. ಇದನ್ನು ಕೇಳಿದಾಗ ರಾಜ ಕೆಂಡಾಮಂಡಲವಾದನು, ಆದರೆ ಯೆಹೋವನು ಪ್ರವಾದಿಯನ್ನು ರಾಜನ ಕೈಯಿಂದ ತಪ್ಪಿಸಿದನು.—1 ಅರ. 13:1-10.

2 ಯೆಹೋವನು ಈ ಪ್ರವಾದಿಗೆ ‘ನೀನು ಬೇತೇಲಿನಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದು, ಬಂದ ದಾರಿಯಲ್ಲಿ ಹಿಂದೆ ಹೋಗಬಾರದು’ ಎಂದು ಹೇಳಿದ್ದನು. ಆದರೆ ದಾರಿಯಲ್ಲಿ ಸಿಕ್ಕಿದ ಒಬ್ಬ ಮುದುಕನು ಅವನಿಗೆ ‘ಯೆಹೋವನಿಂದ ಒಂದು ಸುದ್ದಿ ಬಂದಿದೆ’ ಎಂದು ಸುಳ್ಳು ಹೇಳಿ ‘ನೀನು ಬಂದು ನನ್ನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಹುದು’ ಎಂದನು. ಪ್ರವಾದಿ ಯೆಹೋವನು ಹೇಳಿದ್ದನ್ನು ಬಿಟ್ಟು ಈ ಮುದುಕನ ಹಿಂದೆ ಹೋದನು. ಇದು ಯೆಹೋವನಿಗೆ ಇಷ್ಟವಾಗಲಿಲ್ಲ. ಈ ಪ್ರವಾದಿ ಆ ಮುದುಕನ ಮನೆಯಿಂದ ತನ್ನ ದಾರಿಹಿಡಿದು ಹೋಗುತ್ತಿದ್ದಾಗ ಒಂದು ಸಿಂಹ ಬಂದು ಅವನನ್ನು ಸಾಯಿಸಿತು.—1 ಅರ. 13:11-24.

3 ಈ ಪ್ರವಾದಿ ಯೆಹೋವನು ಹೇಳಿದ್ದನ್ನು ಮರೆತು ಮುದುಕನ ಹಿಂದೆ ಯಾಕೆ ಹೋದನೋ ಗೊತ್ತಿಲ್ಲ. ಆದರೆ ಒಂದು ಮಾತ್ರ ಸತ್ಯ, ಅವನು ‘ದೇವರಿಗೆ ನಮ್ರವಾಗಿ ನಡೆದುಕೊಳ್ಳಲಿಲ್ಲ’ ಅಥವಾ ವಿನಯಶೀಲತೆ ತೋರಿಸಲಿಲ್ಲ. (ಮೀಕ 6:8 ಓದಿ.) ಯೆಹೋವನೊಂದಿಗೆ ನಡೆಯುವುದು ಅಂದರೆ ಆತನಲ್ಲಿ ಭರವಸೆ ಇಟ್ಟು ಆತನ ಮಾತಿನಂತೆ ನಡೆಯುವುದು ಎಂದರ್ಥ. ಅದು ಎಂಥದ್ದೇ ಸನ್ನಿವೇಶ ಬಂದರೂ ಅದರ ಬಗ್ಗೆ ಯೆಹೋವನ ಹತ್ತಿರ ಪ್ರಾರ್ಥಿಸಬೇಕೆಂದು ವಿನಯಶೀಲ ವ್ಯಕ್ತಿಗೆ ಗೊತ್ತು. ಈ ಪ್ರವಾದಿಯಲ್ಲಿ ದೀನತೆ ಇತ್ತಾದರೂ ವಿನಯಶೀಲತೆ ಇರಲಿಲ್ಲ. ಇದ್ದಿದ್ದರೆ ಹೊಸ ನಿರ್ದೇಶನಗಳು ಕೊಟ್ಟಿದ್ದೀಯಾ ಎಂದು ಯೆಹೋವನನ್ನೇ ಕೇಳಿ ತಿಳಿದುಕೊಳ್ಳುತ್ತಿದ್ದ. ನಮ್ಮ ಜೀವನದಲ್ಲೂ ಕೆಲವೊಮ್ಮೆ ಕಷ್ಟಕರ ಸನ್ನಿವೇಶಗಳು ಎದುರಾಗುತ್ತವೆ. ಆಗ ಏನು ಮಾಡಬೇಕಂತಾನೇ ಗೊತ್ತಾಗಲ್ಲ. ನಾವು ವಿನಯಶೀಲರಾಗಿದ್ದರೆ ಯೆಹೋವನ ಮಾರ್ಗದರ್ಶನೆ ಕೇಳಿ ಸರಿಯಾದ ತೀರ್ಮಾನಗಳನ್ನು ಮಾಡುತ್ತೇವೆ.

4. ನಾವು ಈ ಲೇಖನದಲ್ಲಿ ಏನನ್ನು ಪರಿಗಣಿಸಲಿದ್ದೇವೆ?

4 ವಿನಯಶೀಲತೆ ಅಂದರೆ ಏನು, ನಾವು ಅದನ್ನು ಇವತ್ತು ಸಹ ಯಾಕೆ ತೋರಿಸಬೇಕು ಎಂದು ಹಿಂದಿನ ಲೇಖನದಲ್ಲಿ ನೋಡಿದ್ವಿ. ಆದರೆ ಈ ಲೇಖನದಲ್ಲಿ, ನಾವು ಹೆಚ್ಚು ವಿನಯಶೀಲತೆಯನ್ನು ಬೆಳೆಸಿಕೊಳ್ಳುವುದು ಹೇಗೆ? ನಮ್ಮಲ್ಲಿ ನಿಜವಾಗಲೂ ವಿನಯಶೀಲತೆ ಇದೆ ಎಂದು ಎಂಥ ಸನ್ನಿವೇಶದಲ್ಲೂ ತೋರಿಸಬೇಕು? ಎಂದು ನೋಡಲಿದ್ದೇವೆ. ಇಂಥ ಮೂರು ಸನ್ನಿವೇಶಗಳನ್ನು ಪರಿಗಣಿಸೋಣ.—ಜ್ಞಾನೋ. 11:2.

ಸನ್ನಿವೇಶ ಬದಲಾದಾಗ

5, 6. ತನ್ನಲ್ಲಿ ವಿನಯಶೀಲತೆ ಇದೆ ಎಂದು ಬರ್ಜಿಲ್ಲೈ ಹೇಗೆ ತೋರಿಸಿಕೊಟ್ಟನು?

5 ನಮ್ಮ ಸನ್ನಿವೇಶ ಅಥವಾ ನೇಮಕ ಬದಲಾದಾಗ ನಾವು ಪ್ರತಿಕ್ರಿಯಿಸುವ ರೀತಿ ನಮ್ಮಲ್ಲಿ ನಿಜವಾಗಲೂ ವಿನಯಶೀಲತೆ ಇದೆಯಾ ಎಂದು ತೋರಿಸುತ್ತದೆ. ಇದಕ್ಕೆ ರಾಜ ದಾವೀದನ ನಿಷ್ಠಾವಂತ ಸ್ನೇಹಿತ ಬರ್ಜಿಲ್ಲೈ ಉತ್ತಮ ಮಾದರಿ. ಬರ್ಜಿಲ್ಲೈಗೆ 80 ವರ್ಷ ಆಗಿದ್ದಾಗ ತನ್ನ ಆಸ್ಥಾನಕ್ಕೆ ಬಂದು ಸೇರುವಂತೆ ದಾವೀದ ಕರೆದನು. ಇದು ದೊಡ್ಡ ಸನ್ಮಾನವಾಗಿತ್ತಾದರೂ ಬರ್ಜಿಲ್ಲೈ ಈ ನೇಮಕವನ್ನು ಸ್ವೀಕರಿಸಲಿಲ್ಲ. ಈ ನೇಮಕವನ್ನು ತನಗೆ ಕೊಡುವ ಬದಲು ಕಿಮ್ಹಾಮನಿಗೆ ಕೊಡುವಂತೆ ಕೇಳಿಕೊಂಡನು. ಕಿಮ್ಹಾಮ ಅವನ ಮಗನಾಗಿದ್ದಿರಬಹುದು.—2 ಸಮು. 19:31-37.

6 ಕೊಟ್ಟ ನೇಮಕವನ್ನು ಬರ್ಜಿಲ್ಲೈ ಯಾಕೆ ಬೇಡ ಎಂದನು? ಅವನಿಗೆ ಹೆಚ್ಚು ಜವಾಬ್ದಾರಿ ಬೇಡವಾಗಿತ್ತಾ ಅಥವಾ ಆರಾಮವಾಗಿ ಜೀವನ ನಡೆಸಲು ಬಯಸಿದನಾ? ಅವನಲ್ಲಿ ವಿನಯಶೀಲತೆ ಇದ್ದದರಿಂದ ಬೇಡ ಅಂದನು. ತನ್ನ ಸನ್ನಿವೇಶ ಬದಲಾಗಿದೆ, ವಯಸ್ಸಾಗಿರುವುದರಿಂದ ಹೆಚ್ಚು ಮಾಡಕ್ಕಾಗಲ್ಲ ಎಂದು ಗೊತ್ತಿತ್ತು. (ಗಲಾತ್ಯ 6:4, 5 ಓದಿ.) ನಾವೂ ಅವನ ಹಾಗೆ ವಿನಯಶೀಲತೆ ತೋರಿಸೋಣ. ನನಗೆ ಯಾವ ನೇಮಕ ಬೇಕು, ಬೇರೆಯವರಿಗೆ ಯಾವ ನೇಮಕ ಸಿಕ್ಕಿದೆ ಎಂದು ಯೋಚಿಸುವ ಬದಲು ನಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಒಳ್ಳೇದಾಗಿ ನಿರ್ವಹಿಸುವುದಕ್ಕೆ ಗಮನಕೊಡುತ್ತೇವೆ. ಒಂದು ವಿಶೇಷ ನೇಮಕ ಅಥವಾ ಪ್ರಖ್ಯಾತಿಗಿಂತ ಇದು ತುಂಬ ಮುಖ್ಯ. (ಗಲಾ. 5:26) ನಾವು ವಿನಯಶೀಲರಾಗಿದ್ದರೆ ನಮ್ಮ ಸಹೋದರರೊಂದಿಗೆ ಸೇರಿ ಐಕ್ಯದಿಂದ ಕೆಲಸಮಾಡುತ್ತೇವೆ. ಇದು ಯೆಹೋವನಿಗೆ ಮಹಿಮೆ ತರುತ್ತದೆ. ಬೇರೆಯವರಿಗೂ ಇದರಿಂದ ಪ್ರಯೋಜನವಾಗುತ್ತದೆ.—1 ಕೊರಿಂ. 10:31.

7, 8. ನಾವು ವಿನಯಶೀಲರಾಗಿದ್ದರೆ ಏನು ಮಾಡಲ್ಲ?

7 ನಮಗೆ ಹೆಚ್ಚು ಜವಾಬ್ದಾರಿ ಅಥವಾ ಅಧಿಕಾರ ಸಿಕ್ಕಿದಾಗ ವಿನಯಶೀಲತೆ ತೋರಿಸಲು ಕಷ್ಟ ಆಗಬಹುದು. ಆಗ ನೆಹೆಮೀಯನ ಮಾದರಿಯನ್ನು ನೆನಪಿಸಿಕೊಳ್ಳೋಣ. ಯೆರೂಸಲೇಮಿನಲ್ಲಿದ್ದ ಜನರು ತುಂಬ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಕೊಂಡಾಗ ನೆಹೆಮೀಯನಿಗೆ ದುಃಖ ಆಯಿತು. ಸಹಾಯಮಾಡುವಂತೆ ಯೆಹೋವನನ್ನು ಬೇಡಿಕೊಂಡ. (ನೆಹೆ. 1:4, 11) ಯೆಹೋವನು ನೆಹೆಮೀಯನ ಪ್ರಾರ್ಥನೆಯನ್ನು ಕೇಳಿದ. ರಾಜ ಅರ್ತಷಸ್ತನು ನೆಹೆಮೀಯನನ್ನು ಯೆರೂಸಲೇಮಿನ ರಾಜ್ಯಪಾಲನಾಗಿ ನೇಮಿಸಿದ. ನೆಹೆಮೀಯ ತುಂಬ ಶ್ರೀಮಂತನಾಗಿದ್ದನು, ಈಗ ದೊಡ್ಡ ಅಧಿಕಾರನೂ ಸಿಕ್ಕಿತ್ತು. ಆದರೂ ಅವನು ತನಗೆ ಸರಿ ತೋಚಿದಂತೆ ಯಾವುದನ್ನೂ ಮಾಡಲಿಲ್ಲ. ಯೆಹೋವನ ಮಾರ್ಗದರ್ಶನೆಗಾಗಿ ಕೇಳಿದ, ಕ್ರಮವಾಗಿ ಧರ್ಮಶಾಸ್ತ್ರವನ್ನು ಓದುತ್ತಿದ್ದ. (ನೆಹೆ. 8:1, 8, 9) ನೆಹೆಮೀಯ ರಾಜ್ಯಪಾಲನಾಗಿದ್ದರೂ ಜನರ ಮೇಲೆ ದಬ್ಬಾಳಿಕೆ ನಡೆಸಲಿಲ್ಲ. ತನ್ನ ಖರ್ಚುವೆಚ್ಚಗಳನ್ನು ತಾನೇ ನೋಡಿಕೊಂಡ.—ನೆಹೆ. 5:14-19.

8 ನೆಹೆಮೀಯನಂತೆ ನಮಗೆ ಹೆಚ್ಚಿನ ಜವಾಬ್ದಾರಿ ಸಿಕ್ಕಿದರೆ ಅಥವಾ ನಮ್ಮ ನೇಮಕ ಬದಲಾದರೆ ನಾವು ವಿನಯಶೀಲತೆ ತೋರಿಸಲು ಮರೆಯಬಾರದು. ನಮ್ಮ ಸ್ವಂತ ಸಾಮರ್ಥ್ಯ ಅಥವಾ ಅನುಭವದ ಮೇಲೆ ಹೊಂದಿಕೊಳ್ಳುವ ಬದಲು ಯೆಹೋವನ ಮೇಲೆ ಆತುಕೊಳ್ಳೋಣ. ಒಬ್ಬ ವ್ಯಕ್ತಿ ಹೇಗೆ ತನ್ನ ಮೇಲೆಯೇ ಆತುಕೊಳ್ಳಬಹುದು? ಒಬ್ಬ ಹಿರಿಯನು ಪ್ರಾರ್ಥನೆ ಮಾಡದೆ ಸಭೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಬಹುದು. ಒಬ್ಬ ಸಹೋದರ ಅಥವಾ ಸಹೋದರಿ ಒಂದು ತೀರ್ಮಾನವನ್ನು ತೆಗೆದುಕೊಂಡ ಬಳಿಕ ತನ್ನ ತೀರ್ಮಾನವನ್ನು ಆಶೀರ್ವದಿಸುವಂತೆ ಯೆಹೋವನನ್ನು ಕೇಳಬಹುದು. ಆದರೆ ವಿನಯಶೀಲ ವ್ಯಕ್ತಿ ಹೀಗೆ ಮಾಡಲ್ಲ. ಒಂದು ಸನ್ನಿವೇಶವನ್ನೋ ಸಮಸ್ಯೆಯನ್ನೋ ತುಂಬ ಸಲ ನಿರ್ವಹಿಸಿ ಅನುಭವ ಸಿಕ್ಕಿದ್ದರೂ ಯೆಹೋವನ ಸಹಾಯಕ್ಕಾಗಿ ಕೇಳುತ್ತಾನೆ. ತನ್ನ ಸ್ವಂತ ಸಾಮರ್ಥ್ಯದ ಮೇಲೆ ಹೊಂದಿಕೊಂಡು ಯಾವುದನ್ನೂ ಮಾಡಲ್ಲ. (ಜ್ಞಾನೋಕ್ತಿ 3:5, 6 ಓದಿ.) ಇಂದು ಲೋಕದಲ್ಲಿ ತುಂಬ ಜನ ಸ್ವಾರ್ಥಿಗಳೇ ಇದ್ದಾರೆ. ಒಂದು ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಆದರೆ ಯೆಹೋವನ ಸೇವಕರು ಹಾಗಲ್ಲ. ನಮಗೆ ಕೆಲವು ಜವಾಬ್ದಾರಿ ಸಿಕ್ಕಿದ ತಕ್ಷಣ ನಾವು ನಮ್ಮ ಕುಟುಂಬದವರಿಗಿಂತ ಅಥವಾ ಸಭೆಯವರಿಗಿಂತ ದೊಡ್ಡವರಾಗಿಬಿಡುವುದಿಲ್ಲ. ಯೆಹೋವನ ಏರ್ಪಾಡಿನಲ್ಲಿ ನಮ್ಮ ಪಾತ್ರ ಏನು ಎಂದು ಅರ್ಥಮಾಡಿಕೊಂಡು ಎಲ್ಲರೂ ಒಟ್ಟಿಗೆ ಸೇರಿ ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡುತ್ತೇವೆ.—1 ತಿಮೊ. 3:15.

ಬೇರೆಯವರು ಟೀಕಿಸುವಾಗ ಅಥವಾ ಹೊಗಳುವಾಗ

9, 10. ಯಾರಾದರೂ ನಮ್ಮನ್ನು ಸುಖಾಸುಮ್ಮನೆ ಟೀಕಿಸುವಾಗ ವಿನಯಶೀಲತೆ ನಮಗೆ ಹೇಗೆ ಸಹಾಯಮಾಡುತ್ತದೆ?

9 ಯಾರಾದರೂ ನಮ್ಮನ್ನು ಸುಮ್ಮಸುಮ್ಮನೆ ಟೀಕಿಸುವಾಗ ನಮಗೆ ತುಂಬ ಬೇಜಾರಾಗುತ್ತದೆ. ಇದು ಹನ್ನಳ ವಿಷಯದಲ್ಲಿ ನಡೆಯಿತು. ಗಂಡ ಅವಳನ್ನು ತುಂಬ ಪ್ರೀತಿಸುತ್ತಿದ್ದರೂ ಹನ್ನ ಸಂತೋಷವಾಗಿ ಇರಲಿಲ್ಲ. ಹನ್ನಳಿಗೆ ಮಕ್ಕಳಿಲ್ಲದ ಕಾರಣ ಅವಳ ಸವತಿಯಾದ ಪೆನಿನ್ನ ಚುಚ್ಚಿಚುಚ್ಚಿ ಮಾತಾಡುತ್ತಿದ್ದಳು. ತುಂಬ ದುಃಖದಲ್ಲಿದ್ದ ಹನ್ನ ದೇವದರ್ಶನ ಗುಡಾರಕ್ಕೆ ಹೋಗಿ ಪ್ರಾರ್ಥಿಸಿದಳು. ಮನಸ್ಸಿನ ಬೇಗುದಿಯನ್ನು ತೋಡಿಕೊಳ್ಳುತ್ತಿದ್ದ ಹನ್ನಳ ಬಾಯಿಂದ ಮಾತು ಹೊರಡದೆ ತುಟಿ ಮಾತ್ರ ಅಲ್ಲಾಡುತ್ತಿತ್ತು. ಇದನ್ನು ನೋಡಿ ಮಹಾ ಯಾಜಕನಾದ ಏಲಿ ಅವಳು ಕುಡಿದಿದ್ದಾಳೆ ಅಂದುಕೊಂಡನು. ಇದರಿಂದ ಹನ್ನಳಿಗೆ ಏಲಿಯ ಮೇಲೆ ತುಂಬ ಕೋಪ ಬಂದಿರಬಹುದು. ಆದರೆ ಅವಳಲ್ಲಿ ವಿನಯಶೀಲತೆ ಇದ್ದದರಿಂದ ಗೌರವದಿಂದ ಮಾತಾಡಿದಳು. ನಂತರ ಅವಳು ಸಲ್ಲಿಸಿದ ಪ್ರಾರ್ಥನೆಯಲ್ಲಿ ಅವಳಿಗೆ ಯೆಹೋವನ ಮೇಲೆ ಎಷ್ಟು ನಂಬಿಕೆ ಮತ್ತು ಪ್ರೀತಿ ಇತ್ತೆಂದು ಗೊತ್ತಾಗುತ್ತದೆ.—1 ಸಮು. 1:5-7, 12-16; 2:1-10.

10 “ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ” ಇರಲು ವಿನಯಶೀಲತೆ ಸಹಾಯ ಮಾಡುತ್ತದೆ. (ರೋಮ. 12:21) ಸೈತಾನನ ಲೋಕದಲ್ಲಿ ಬರೀ ಕೆಟ್ಟದ್ದೇ ತುಂಬಿಕೊಂಡಿದೆ. ಆದ್ದರಿಂದ ಏನಾದರೂ ಅನ್ಯಾಯ, ಮೋಸ ಆಗುತ್ತಾನೇ ಇರುತ್ತದೆ. ಇದರಿಂದ ನಮಗೆ ಸಿಟ್ಟು ಬಂದರೂ ನಿಯಂತ್ರಣ ಕಳಕೊಳ್ಳಬಾರದು. (ಕೀರ್ತ. 37:1) ಸಭೆಯಲ್ಲಿರುವ ಸಹೋದರ ಸಹೋದರಿಯರೇ ನಮಗೇನಾದರೂ ನೋವು ಮಾಡಿಬಿಟ್ಟರೆ ತುಂಬ ಕಷ್ಟ ಆಗುತ್ತದೆ. ಇಂಥ ಸಮಯದಲ್ಲಿ ನಾವು ಯೇಸುವಿನ ಮಾದರಿಯನ್ನು ಅನುಕರಿಸಬೇಕು. “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ.” ಬದಲಿಗೆ “ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು” ಎಂದು ಬೈಬಲ್‌ ಹೇಳುತ್ತದೆ. (1 ಪೇತ್ರ 2:23, ಸತ್ಯವೇದವು ಭಾಷಾಂತರ) ಯೇಸುವಿನಲ್ಲಿ ದೀನತೆ ಇದ್ದದರಿಂದ ಏನೇ ಅನ್ಯಾಯವಾದರೂ ಯೆಹೋವನು ನೋಡಿಕೊಳ್ಳುತ್ತಾನೆ ಎಂದು ಬಿಟ್ಟುಬಿಟ್ಟ. (ರೋಮ. 12:19) ನಾವು ಸಹ ಅದೇ ರೀತಿ ದೀನತೆ ತೋರಿಸುತ್ತಾ “ಹಾನಿಗೆ ಪ್ರತಿಯಾಗಿ ಹಾನಿಯನ್ನು ಮಾಡದೆ” ಇರೋಣ.—1 ಪೇತ್ರ 3:8, 9.

11, 12. (ಎ) ಜನ ನಮ್ಮನ್ನು ಹಾಡಿಹೊಗಳಿ ಅಟ್ಟಕ್ಕೇರಿಸಲು ಪ್ರಯತ್ನಿಸುವಾಗ ನಮ್ಮಲ್ಲಿ ವಿನಯಶೀಲತೆ ಇದ್ದರೆ ಏನು ಮಾಡುತ್ತೇವೆ? (ಬಿ) ನಾವು ವಿನಯಶೀಲರಾಗಿದ್ದರೆ ಯಾವ ರೀತಿಯ ಬಟ್ಟೆ ಹಾಕುತ್ತೇವೆ, ಹೇಗೆ ನಡಕೊಳ್ಳುತ್ತೇವೆ?

11 ಜನ ನಮ್ಮನ್ನು ಬಾಯಿ ತುಂಬ ಹೊಗಳುವಾಗ ಅಥವಾ ಅಟ್ಟಕ್ಕೇರಿಸುವಾಗ ನಮ್ಮಲ್ಲಿ ಅಹಂಕಾರ ಬರಬಹುದು. ಎಸ್ತೇರಳು ಅತಿರೂಪ ಸುಂದರಿಯಾಗಿದ್ದಳು. ಈ ಸುರಸುಂದರಿಯನ್ನು ನೋಡಿದವರೆಲ್ಲಾ ಅವಳನ್ನು ಹಾಡಿಹೊಗಳುತ್ತಿದ್ದರು. ಅವಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಒಂದು ವರ್ಷದ ವರೆಗೆ ಸೌಂದರ್ಯ ವರ್ಧಕಗಳನ್ನು ಬಳಸಲಾಯಿತು. ರಾಜನ ಮನಸ್ಸನ್ನು ಗೆಲ್ಲಲು ಬಂದಿದ್ದ ಬೇರೆ ಸುಂದರಾಂಗಿಯರ ಸಹವಾಸವೂ ಇತ್ತು. ಆದರೆ ಇದ್ಯಾವುದೂ ಎಸ್ತೇರಳ ವ್ಯಕ್ತಿತ್ವವನ್ನು ಬದಲಾಯಿಸಲಿಲ್ಲ. ಅವಳು ಸ್ವಾರ್ಥಿಯಾಗಲಿಲ್ಲ. ಎಂದಿನಂತೆ ವಿನಯಶೀಲತೆ, ದಯೆ, ಗೌರವ ತೋರಿಸಿದಳು.—ಎಸ್ತೇ. 2:9, 12, 15, 17.

ನಾವು ಹಾಕುವ ಬಟ್ಟೆ ಯೆಹೋವನಿಗೆ ಮತ್ತು ಇತರರಿಗೆ ಗೌರವ ತೋರಿಸುವ ರೀತಿಯಲ್ಲಿದೆಯಾ ಅಸಭ್ಯವಾಗಿದೆಯಾ? (ಪ್ಯಾರ 12 ನೋಡಿ)

12 ನಾವು ವಿನಯಶೀಲರಾಗಿದ್ದರೆ ಅದು ನಾವು ಹಾಕುವ ಬಟ್ಟೆ ಮತ್ತು ನಡಕೊಳ್ಳುವ ರೀತಿಯಲ್ಲಿ ಗೊತ್ತಾಗುತ್ತದೆ. ಇದು ಬೇರೆಯವರ ಮೇಲೆ ಗೌರವ ಇದೆಯಾ ಮತ್ತು ನಮ್ಮ ಮೇಲೆ ನಮಗೆ ಗೌರವ ಇದೆಯಾ ಎಂದು ಸಹ ತೋರಿಸುತ್ತದೆ. ನಾವು ನಮ್ಮ ಬಗ್ಗೆಯೇ ಕೊಚ್ಚಿಕೊಳ್ಳುವುದಿಲ್ಲ. ಜನರ ಗಮನವನ್ನು ನಮ್ಮ ಕಡೆ ಎಳಕೊಳ್ಳಲು ಪ್ರಯತ್ನಿಸದೆ “ಶಾಂತ ಮತ್ತು ಸೌಮ್ಯಭಾವವೆಂಬ” ಗುಣಗಳನ್ನು ತೋರಿಸುತ್ತೇವೆ. (1 ಪೇತ್ರ 3:3, 4 ಓದಿ; ಯೆರೆ. 9:23, 24) ಒಂದುವೇಳೆ ನಮಗೆ ನಮ್ಮ ಬಗ್ಗೆನೇ ತುಂಬ ಶ್ರೇಷ್ಠ ಭಾವನೆ ಇರಬಹುದು. ಇದು ಮೆಲ್ಲಮೆಲ್ಲನೆ ನಮ್ಮ ಮಾತು ಮತ್ತು ಕ್ರಿಯೆಯಲ್ಲಿ ಗೊತ್ತಾಗಿ ಬಿಡುತ್ತದೆ. ನಮಗಿರುವ ಸುಯೋಗಗಳ ನಿಮಿತ್ತ ನಾವು ಸ್ಪೆಷಲ್‌ ಅಂತ ತೋರಿಸಿಕೊಳ್ಳಲು ಪ್ರಯತ್ನಿಸಬಹುದು. ಬೇರೆ ಯಾರಿಗೂ ತಿಳಿದಿಲ್ಲದ ಮಾಹಿತಿ ನಮಗೆ ತಿಳಿದಿದೆ ಎಂದು ಹೇಳಿಕೊಳ್ಳಬಹುದು. ಅಥವಾ ದೊಡ್ಡ ವ್ಯಕ್ತಿಗಳ ಪರಿಚಯ ನನಗಿದೆ ಎಂದು ಕೊಚ್ಚಿಕೊಳ್ಳಬಹುದು. ಒಂದು ವಿಷಯವನ್ನು ಬೇರೆಯವರ ಸಹಾಯ ತೊಗೊಂಡು ಮಾಡಿರುವುದಾದರೂ ಎಲ್ಲಾ ನಾನೊಬ್ಬನೇ ಮಾಡಿಮುಗಿಸಿದೆ ಎಂದು ಹೇಳಿಕೊಳ್ಳಬಹುದು. ಆದರೆ ಯೇಸು ಏನು ಮಾಡಿದ ಯೋಚಿಸಿ. ತನ್ನ ಜ್ಞಾನಭಂಡಾರವನ್ನು ತೆರೆದಿದ್ದರೆ ಎಲ್ಲರೂ ಮೈಮರೆತುಹೋಗುತ್ತಿದ್ದರು. ಆದರೆ ಯೇಸು ಯಾವಾಗಲೂ ದೇವರ ವಾಕ್ಯದಿಂದ ಉಲ್ಲೇಖಿಸಿ ಮಾತಾಡುತ್ತಿದ್ದ. ಜನ ತನಗೆ ಜೈಕಾರ ಹಾಕಬೇಕೆಂದು ಬಯಸಲಿಲ್ಲ. ಎಲ್ಲಾ ಕೀರ್ತಿ ಯೆಹೋವನಿಗೇ ಸಲ್ಲಬೇಕೆಂದು ಬಯಸಿದ.—ಯೋಹಾ. 8:28.

ತೀರ್ಮಾನಗಳನ್ನು ಮಾಡುವಾಗ

13, 14. ವಿನಯಶೀಲತೆ ಹೇಗೆ ಒಳ್ಳೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ?

13 ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಸಹ ನಾವು ವಿನಯಶೀಲತೆ ತೋರಿಸಬೇಕು. ಅಪೊಸ್ತಲ ಪೌಲನು ಕೈಸರೈಯದಲ್ಲಿದ್ದಾಗ ಯೆರೂಸಲೇಮಿಗೆ ಹೋಗಿ ಯೆಹೋವನು ಕೊಟ್ಟಿದ್ದ ಕೆಲಸವನ್ನು ಮುಗಿಸಲು ಬಯಸಿದನು. ಆಗ ಅಗಬನೆಂಬ ಪ್ರವಾದಿ ಬಂದು ಪೌಲ ಯೆರೂಸಲೇಮಿಗೆ ಹೋದರೆ ಅವನನ್ನು ಬಂದಿಸಲಾಗುತ್ತದೆ ಎಂದು ಹೇಳಿದನು. ಅವನ ಜೀವಕ್ಕೇ ಅಪಾಯ ಬರುವ ಸಾಧ್ಯತೆ ಇದೆ ಎಂದನು. ಅದಕ್ಕೆ ಕೈಸರೈಯದಲ್ಲಿದ್ದ ಸಹೋದರರು ಪೌಲನು ಯೆರೂಸಲೇಮಿಗೆ ಹೋಗುವುದು ಬೇಡ ಎಂದು ತುಂಬ ಬೇಡಿಕೊಂಡರು. ಆದರೆ ಪೌಲ ಯೆರೂಸಲೇಮಿಗೆ ಹೋಗಲೇಬೇಕು ಎಂದು ತೀರ್ಮಾನ ಮಾಡಿದ. ಪೌಲನಲ್ಲಿ ಅತಿಯಾದ ಆತ್ಮವಿಶ್ವಾಸ ಇದ್ದದರಿಂದ ಹೀಗೆ ಮಾಡಿದನಾ? ಇಲ್ಲ. ಪೌಲ ವಿನಯಶೀಲನಾಗಿದ್ದ. ಯೆಹೋವನಲ್ಲಿ ಸಂಪೂರ್ಣ ನಂಬಿಕೆ ಇದ್ದದರಿಂದ ಹಾಗೆ ಮಾಡಿದ. ಸಹೋದರರಲ್ಲೂ ವಿನಯಶೀಲತೆ ಇದ್ದದರಿಂದ ಪೌಲನಿಗೆ ಹೋಗಲು ಬಿಟ್ಟರು.—ಅ. ಕಾ. 21:10-14.

14 ಕೆಲವು ಸಂದರ್ಭಗಳಲ್ಲಿ ನಮಗೆ ಏನು ಮಾಡಬೇಕಂತಾನೇ ಗೊತ್ತಾಗಲ್ಲ. ಒಂದು ಕೆಲಸಕ್ಕೆ ಕೈಹಾಕಿದರೆ ಅದರ ಫಲಿತಾಂಶ ಏನಾಗುತ್ತದೆ ಎಂದು ಸಹ ಗೊತ್ತಾಗಲಿಕ್ಕಿಲ್ಲ. ಆದರೆ ನಮ್ಮಲ್ಲಿ ವಿನಯಶೀಲತೆ ಇದ್ದರೆ ನಾವು ಒಳ್ಳೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ನಾವು ಪೂರ್ಣ ಸಮಯದ ಸೇವೆಯನ್ನು ಆರಂಭಿಸುವುದರ ಬಗ್ಗೆ ಯೋಚಿಸುತ್ತಿರಬಹುದು. ಆದರೆ ನಮಗೆ ಏನಾದರೂ ಕಾಯಿಲೆ ಬಂದುಬಿಟ್ಟರೆ ಏನು ಮಾಡುವುದು? ನನ್ನ ಹೆತ್ತವರಿಗೆ ಏನಾದರೂ ಕಾಯಿಲೆ ಬಂದು ನನ್ನ ಸಹಾಯ ಬೇಕಿದ್ದರೆ ಏನು ಮಾಡಲಿ? ನನಗೆ ವಯಸ್ಸಾದ ಮೇಲೆ ಜೀವನ ಹೇಗೆ? ಎಂಬ ಚಿಂತೆಗಳು ನಮ್ಮನ್ನು ಕಾಡಬಹುದು. ನಾವೆಷ್ಟೇ ಪ್ರಾರ್ಥನೆ ಮಾಡಿ ಹಗಲುರಾತ್ರಿ ಯೋಚನೆ ಮಾಡಿದರೂ ನಮಗೇನು ಹೊಳೆಯಲಿಕ್ಕಿಲ್ಲ. (ಪ್ರಸಂ. 8:16, 17) ಆದರೆ ನಮಗೆ ಯೆಹೋವನಲ್ಲಿ ಭರವಸೆ ಇದ್ದರೆ ನಮ್ಮ ಇತಿಮಿತಿಗಳು ಏನೆಂದು ಅರ್ಥಮಾಡಿಕೊಂಡು ಅದಕ್ಕನುಸಾರ ನಡೆಯುತ್ತೇವೆ. ಬೇಕಾದ ಸಂಶೋಧನೆ ಮಾಡಿ, ಬೇರೆಯವರ ಸಲಹೆ ಪಡೆದು, ಯೆಹೋವನ ಮಾರ್ಗದರ್ಶನೆಗಾಗಿ ಕೇಳುತ್ತೇವೆ. ಆಮೇಲೆ ಪವಿತ್ರಾತ್ಮ ನಮಗೆ ಕೊಡುವ ಮಾರ್ಗದರ್ಶನಕ್ಕನುಸಾರ ನಡೆಯುತ್ತೇವೆ. (ಪ್ರಸಂಗಿ 11:4-6 ಓದಿ.) ಹೀಗೆ ಮಾಡುವಾಗ ಯೆಹೋವನು ನಾವು ತೆಗೆದುಕೊಳ್ಳುವ ತೀರ್ಮಾನಗಳನ್ನು ಆಶೀರ್ವದಿಸುತ್ತಾನೆ ಅಥವಾ ಇದಕ್ಕೆ ಕೈಹಾಕುವುದು ಬೇಡ ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾನೆ.—ಜ್ಞಾನೋ. 16:3, 9.

ಹೆಚ್ಚು ವಿನಯಶೀಲತೆ ಬೆಳೆಸಿಕೊಳ್ಳುವುದು ಹೇಗೆ?

15. ಯೆಹೋವನ ಬಗ್ಗೆ ಧ್ಯಾನಿಸುವುದರಿಂದ ನಾವು ದೀನರಾಗಿ ಉಳಿಯಲು ಸಹಾಯವಾಗುತ್ತದೆ ಹೇಗೆ?

15 ಹೆಚ್ಚು ವಿನಯಶೀಲತೆ ಬೆಳೆಸಿಕೊಳ್ಳುವುದು ಹೇಗೆ? ನಾವು ನಾಲ್ಕು ವಿಷಯಗಳನ್ನು ಮಾಡಬೇಕು. ಮೊದಲಾಗಿ, ಯೆಹೋವನ ಬಗ್ಗೆ ಧ್ಯಾನಿಸಬೇಕು. ಯೆಹೋವನು ಎಂಥ ವ್ಯಕ್ತಿ, ಆತನಲ್ಲಿ ಏನೆಲ್ಲಾ ಗುಣಗಳಿವೆ ಎಂದು ಯೋಚಿಸಬೇಕು. ಯೆಹೋವನ ಮುಂದೆ ನಾವು ಏನೇನೂ ಅಲ್ಲ. ಯೆಹೋವನು ಸಾಗರ, ನಾವು ಒಂದು ಹನಿ ನೀರು. (ಯೆಶಾ. 8:13) ನಾವು ಒಬ್ಬ ದೇವದೂತ ಅಥವಾ ಸಾಮಾನ್ಯ ಮನುಷ್ಯನ ಜೊತೆ ಅಲ್ಲ, ಪ್ರವಾದಿ ಮೀಕ ಹೇಳುವಂತೆ ಸರ್ವಶಕ್ತ ದೇವರೊಂದಿಗೆ ‘ನಡೆಯುತ್ತಿದ್ದೇವೆ.’ ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ನಾವು ‘ದೇವರ ಪ್ರಬಲವಾದ ಹಸ್ತದ ಕೆಳಗೆ ನಮ್ಮನ್ನು ತಗ್ಗಿಸಿಕೊಳ್ಳುತ್ತೇವೆ.’—1 ಪೇತ್ರ 5:6.

16. ದೇವರಿಗೆ ನಮ್ಮ ಮೇಲಿರುವ ಪ್ರೀತಿಯ ಬಗ್ಗೆ ಧ್ಯಾನಿಸುವಾಗ ನಮ್ಮ ವಿನಯಶೀಲತೆ ಹೇಗೆ ಹೆಚ್ಚಾಗುತ್ತದೆ?

16 ವಿನಯಶೀಲತೆ ಬೆಳೆಸಿಕೊಳ್ಳಲು ಯೆಹೋವನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆ ಎಂಬುದರ ಬಗ್ಗೆ ಧ್ಯಾನಿಸಬೇಕು. ಇದು ನಾವು ಮಾಡಬೇಕಾದ ಎರಡನೇ ವಿಷಯ. ಪೌಲನು ಕ್ರೈಸ್ತ ಸಭೆಯನ್ನು ಮಾನವ ದೇಹಕ್ಕೆ ಹೋಲಿಸಿದನು. ಮಾನವ ದೇಹದಲ್ಲಿರುವ ಒಂದೊಂದು ಅಂಗವೂ ಪ್ರಾಮುಖ್ಯ. (1 ಕೊರಿಂ. 12:23, 24) ಅದೇ ರೀತಿ ಸಭೆಯಲ್ಲಿರುವ ಒಬ್ಬೊಬ್ಬ ಸದಸ್ಯನೂ ಯೆಹೋವನಿಗೆ ಪ್ರಾಮುಖ್ಯ. ಆತನು ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿ ನೋಡುವುದಿಲ್ಲ. ತಪ್ಪು ಮಾಡಿದಾಗ ನಮ್ಮ ಮೇಲೆ ಆತನಿಗಿರುವ ಪ್ರೀತಿ ಕಡಿಮೆ ಆಗಲ್ಲ. ಆದ್ದರಿಂದ ಯೆಹೋವನ ಸಂಘಟನೆಯಲ್ಲಿ ಅಥವಾ ಸಭೆಯಲ್ಲಿ ನಾವು ಯಾವುದೇ ಸ್ಥಾನದಲ್ಲಿ ಸೇವೆ ಮಾಡುತ್ತಿರಲಿ ಸಂತೋಷವಾಗಿ ಇರುತ್ತೇವೆ.

17. ನಾವು ಬೇರೆಯವರಲ್ಲಿರುವ ಒಳ್ಳೇ ವಿಷಯಗಳನ್ನು ನೋಡುವಾಗ ನಮಗೆ ಏನು ಪ್ರಯೋಜನ ಸಿಗುತ್ತದೆ?

17 ಮೂರನೇ ವಿಷಯ. ನಾವು ಯೆಹೋವನಂತೆ ಬೇರೆಯವರಲ್ಲಿರುವ ಒಳ್ಳೇ ವಿಷಯಗಳನ್ನು ನೋಡುವಾಗ ವಿನಯಶೀಲತೆ ಬೆಳೆಸಿಕೊಳ್ಳುತ್ತೇವೆ. ಎಲ್ಲರ ಕಣ್ಣೂ ನನ್ನ ಮೇಲೆ ಇರಬೇಕು, ಎಲ್ಲರೂ ನಾನು ಹೇಳಿದಂಗೆ ಮಾಡಬೇಕು ಅಂತ ಯೋಚಿಸುವ ಬದಲು ನಾವು ಬೇರೆಯವರಿಂದ ಸಲಹೆ ಪಡೆಯಲು ಮುಂದೆ ಬರುತ್ತೇವೆ. (ಜ್ಞಾನೋ. 13:10) ಬೇರೆಯವರಿಗೆ ವಿಶೇಷ ನೇಮಕಗಳು ಸಿಕ್ಕಿದಾಗ ನಾವು ಸಂತೋಷಪಡುತ್ತೇವೆ. ಯೆಹೋವನು ‘ಸಹೋದರರ ಇಡೀ ಬಳಗವನ್ನು’ ಆಶೀರ್ವದಿಸುತ್ತಿರುವುದನ್ನು ನೋಡಿ ಖುಷಿಪಡುತ್ತೇವೆ.—1 ಪೇತ್ರ 5:9.

18. ನಾವು ನಮ್ಮ ಮನಸ್ಸಾಕ್ಷಿಯನ್ನು ತರಬೇತಿಗೊಳಿಸುವಾಗ ಹೇಗೆ ಹೆಚ್ಚು ವಿನಯಶೀಲತೆ ಬೆಳೆಸಿಕೊಳ್ಳಲು ಆಗುತ್ತದೆ?

18 ಈಗ ನಾಲ್ಕನೇ ವಿಷಯಕ್ಕೆ ಹೋಗೋಣ. ನಾವು ಬೈಬಲ್‌ ತತ್ವಗಳನ್ನು ಬಳಸಿ ನಮ್ಮ ಮನಸ್ಸಾಕ್ಷಿಯನ್ನು ತರಬೇತಿಗೊಳಿಸಬೇಕು. ಯೆಹೋವನು ಒಂದು ವಿಷಯದ ಬಗ್ಗೆ ಹೇಗೆ ಯೋಚಿಸುತ್ತಾನೆ ಎಂದು ತಿಳಿಯಲು ಈ ತತ್ವಗಳು ಸಹಾಯ ಮಾಡುತ್ತವೆ. ನಾವು ಯಾವಾಗ ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಲು ಆರಂಭಿಸುತ್ತೇವೋ ಆಗ ಆತನಿಗೆ ಇಷ್ಟವಾಗುವ ತೀರ್ಮಾನಗಳನ್ನು ಮಾಡುತ್ತೇವೆ. ನಾವು ಬೈಬಲನ್ನು ಅಧ್ಯಯನ ಮಾಡುವಾಗ, ಪ್ರಾರ್ಥಿಸುವಾಗ, ಕಲಿತದ್ದನ್ನು ಅನ್ವಯಿಸಿಕೊಳ್ಳುವಾಗ ನಮ್ಮ ಮನಸ್ಸಾಕ್ಷಿಗೆ ಬೇಕಾದ ತರಬೇತಿ ಸಿಗುತ್ತದೆ. (1 ತಿಮೊ. 1:5) ಆಗ ಬೇರೆಯವರಿಗೆ ಆದ್ಯತೆ ಕೊಡಲು ಆರಂಭಿಸುತ್ತೇವೆ. ನಾವು ಇದನ್ನೆಲ್ಲಾ ಮಾಡುವಾಗ ಯೆಹೋವನು ‘ನಮ್ಮ ತರಬೇತಿಯನ್ನು ಪೂರ್ಣಗೊಳಿಸುತ್ತಾನೆ.’ ಹೆಚ್ಚು ವಿನಯಶೀಲತೆ ಬೆಳೆಸಿಕೊಳ್ಳಲೂ ಸಹಾಯ ಮಾಡುತ್ತಾನೆ.—1 ಪೇತ್ರ 5:10.

19. ನಾವು ಇಂದು ಮತ್ತು ಎಂದೆಂದಿಗೂ ಹೇಗೆ ವಿನಯಶೀಲರಾಗಿ ಇರಬಹುದು?

19 ನಾವು ಆರಂಭದಲ್ಲಿ ನೋಡಿದ ಪ್ರವಾದಿಗೆ ಏನಾಯಿತೆಂದು ಮರೆಯಬಾರದು. ಅವನು ವಿನಯಶೀಲನಾಗಿ ಉಳಿಯದ ಕಾರಣ ತನ್ನ ಜೀವವನ್ನು ಮತ್ತು ಯೆಹೋವನೊಂದಿಗೆ ಸ್ನೇಹವನ್ನು ಕಳಕೊಂಡ. ನಮಗೆ ಈ ರೀತಿ ಆಗಬಾರದೆಂದರೆ ಕಷ್ಟ ಅನಿಸಿದಾಗಲೂ ವಿನಯಶೀಲತೆ ತೋರಿಸೋಣ. ಯೆಹೋವನ ಅನೇಕ ನಂಬಿಗಸ್ತ ಸೇವಕರು ಸಹ ಇದನ್ನು ಮಾಡಿದ್ದಾರೆ. ನಾವು ಯೆಹೋವನ ಜೊತೆ ನಡೆಯುತ್ತಾ ನಡೆಯುತ್ತಾ ಹೆಚ್ಚು ವಿನಯಶೀಲತೆ ಬೆಳೆಸಿಕೊಳ್ಳೋಣ. (ಜ್ಞಾನೋ. 8:13) ನಮಗೆ ಇವತ್ತು ಯಾವುದೇ ಸುಯೋಗ ಇರಲಿ ಇಲ್ಲದಿರಲಿ, ಯೆಹೋವನ ಕೈಹಿಡಿದು ನಡೆಯುತ್ತಾ ಇರುವುದೇ ಎಲ್ಲದಕ್ಕಿಂತ ದೊಡ್ಡ ಸುಯೋಗ ಅಲ್ಲವೆ? ನಾವು ಇಂದು ಮತ್ತು ಎಂದೆಂದಿಗೂ ವಿನಯಶೀಲರಾಗಿದ್ದು ಯೆಹೋವನ ಜೊತೆ ಜೊತೆಯಲ್ಲಿ ದೂರ ದೂರದ ವರೆಗೆ ನಡೆಯುತ್ತಾ ಇರೋಣ.