ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಸಾರ್ಥಕ ಎನ್ನಲು ಕಾರಣಗಳು

ಜೀವನ ಸಾರ್ಥಕ ಎನ್ನಲು ಕಾರಣಗಳು

ಫೈಸಲ್‌ ಎಂಬಾತನ ಹೆಂಡತಿ ತೀರಿ ಹೋಗಿ ಒಂದೇ ವರ್ಷದಲ್ಲಿ ಅವನ ಹೃದಯಕ್ಕೆ ದೊಡ್ಡ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂತು. ಅವನು ಹೇಳುತ್ತಾನೆ: “ಯೋಬ ಪುಸ್ತಕವನ್ನು ಓದಿದಾಗ, ಯೆಹೋವನು ಇದನ್ನು ಒಂದು ಕಾರಣದಿಂದಲೇ ಬೈಬಲಿನಲ್ಲಿಟ್ಟಿದ್ದಾನೆ ಎಂದು ಗೊತ್ತಾಯಿತು. ನಮ್ಮ ಜೀವನಕ್ಕೆ ಸಮಾನವಾಗಿರುವ ಒಂದು ಘಟನೆಯನ್ನು ಬೈಬಲಿನಲ್ಲಿ ನೋಡುವಾಗ ನಮ್ಮ ಹೃದಯದ ನೋವು ಹಗುರವಾಗುತ್ತದೆ, ಸಾಂತ್ವನ ಸಿಗುತ್ತದೆ. ಜೀವನ ಈಗಲೂ ಸಾರ್ಥಕಾನೇ.”

ತಾರ್ಷ ಚಿಕ್ಕವಳಿದ್ದಾಗಲೇ ತಾಯಿಯನ್ನು ಕಳಕೊಂಡಿದ್ದಳು. ಅವಳು ಹೀಗನ್ನುತ್ತಾಳೆ: “ನನಗೆ ತುಂಬ ಸಮಸ್ಯೆಗಳಿದ್ದರೂ ಸೃಷ್ಟಿಕರ್ತನನ್ನು ತಿಳಿದಿರುವುದರಿಂದ ಜೀವನಕ್ಕೆ ಉದ್ದೇಶ, ಗುರಿ ಮತ್ತು ಸಂತೋಷ ಸಿಕ್ಕಿದೆ. ಪ್ರತಿದಿನ ನಮಗೆ ಬೇಕಾಗಿರುವ ಶಕ್ತಿ ಸಹಾಯಗಳನ್ನು ಒದಗಿಸಲು ಯೆಹೋವನಿಂದ ಆಗುತ್ತದೆ ಅಂತ ನಾವು ಭರವಸೆಯಿಂದಿರಬಹುದು.”

ದುರ್ಘಟನೆಗಳು ಹೇಗೆ ಜೀವನವನ್ನು ಕಷ್ಟಕರವನ್ನಾಗಿ ಮಾಡಿಬಿಡುತ್ತವೆ ಎಂದು ಹಿಂದಿನ ಲೇಖನಗಳಲ್ಲಿ ನೋಡಿದ್ದೆವು. ವೈಯಕ್ತಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಾ ಇರುವಾಗ ನೀವು, ಜೀವನ ನಿಜವಾಗಲೂ ಸಾರ್ಥಕನಾ? ನಮ್ಮ ಬಗ್ಗೆ ಯಾರಾದರೂ ಚಿಂತಿಸುತ್ತಾರಾ? ಅಂತ ಯೋಚಿಸಬಹುದು. ಹಾಗಾಗಿ, ದೇವರಿಗೆ ನಿಮ್ಮ ಬಗ್ಗೆ ಕಾಳಜಿ ಇದೆ ಎಂಬ ಖಾತರಿಯಿಂದಿರಿ. ನೀವು ಆತನಿಗೆ ಅಮೂಲ್ಯರು.

86ನೆಯ ಕೀರ್ತನೆಯ ಬರಹಗಾರನು ದೇವರಲ್ಲಿರುವ ತನ್ನ ಭರವಸೆಯನ್ನು ಹೀಗೆ ವ್ಯಕ್ತಪಡಿಸಿದನು: “ನೀನು ಸದುತ್ತರವನ್ನು ದಯಪಾಲಿಸುವಿಯೆಂದು ನಂಬಿ ನನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನನ್ನೇ ಕರೆಯುವೆನು.” (ಕೀರ್ತನೆ 86: 7) ‘“ಇಕ್ಕಟ್ಟಿನ ದಿನದಲ್ಲಿ” ದೇವರು ನನಗೆ ಹೇಗೆ ಸಹಾಯಮಾಡುತ್ತಾನೆ?’ ಎಂದು ನೀವು ಯೋಚಿಸಬಹುದು.

ದೇವರು ನಿಮ್ಮ ಸಮಸ್ಯೆಗಳನ್ನು ತಕ್ಷಣ ತೆಗೆದುಹಾಕಲಿಕ್ಕಿಲ್ಲ. ಆದರೆ ಸಮಸ್ಯೆಗಳನ್ನು ತಾಳಲು ಬೇಕಾದ ಶಾಂತಭಾವನೆಯನ್ನು ಆತನು ಖಂಡಿತ ಕೊಡಬಲ್ಲನು ಎಂದು ಆತನ ವಾಕ್ಯವಾದ ಬೈಬಲ್‌ ಆಶ್ವಾಸನೆ ನೀಡುತ್ತದೆ. “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ” ಎಂದು ಬೈಬಲ್‌ ಹೇಳುತ್ತದೆ. (ಫಿಲಿಪ್ಪಿ 4:6, 7) ನಮ್ಮ ಮೇಲೆ ದೇವರಿಗೆ ಅಪಾರ ಕಾಳಜಿ ಇದೆ ಎಂದು ಆಶ್ವಾಸನೆ ನೀಡುವ ಕೆಲವು ಬೈಬಲ್‌ ವಚನಗಳನ್ನು ನೋಡಿರಿ.

ದೇವರಿಗೆ ನಿಮ್ಮ ಬಗ್ಗೆ ಕಾಳಜಿ ಇದೆ

“ಅವುಗಳಲ್ಲಿ [ಗುಬ್ಬಿಗಳಲ್ಲಿ] ಒಂದನ್ನೂ ದೇವರು ಮರೆಯುವುದಿಲ್ಲ. . . . ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.”ಲೂಕ 12:6, 7.

ಯೋಚಿಸಿ: ನಾವು ಯಾವುದೇ ಬೆಲೆ ಕೊಡದಿರುವ ಗುಬ್ಬಿಗಳಿಗೂ ದೇವರು ಕಾಳಜಿವಹಿಸುತ್ತಾನೆ. ಪ್ರತಿಯೊಂದು ಗುಬ್ಬಿಯನ್ನು ಕೂಡ ದೇವರು ಗಮನಿಸುತ್ತಾನೆ. ಅವುಗಳಲ್ಲಿ ಪ್ರತಿಯೊಂದನ್ನೂ ಅಮೂಲ್ಯ ಜೀವಿಗಳಾಗಿ ಆತನು ನೋಡುತ್ತಾನೆ. ಮಾನವರನ್ನಾದರೋ ಭೂಮಿಯಲ್ಲಿರುವ ಬೇರೆ ಎಲ್ಲಾ ಸೃಷ್ಟಿಗಳಿಗಿಂತ ತುಂಬ ಅಮೂಲ್ಯರಾಗಿ ನೋಡುತ್ತಾನೆ. ಯಾಕೆಂದರೆ ಮಾನವರನ್ನು ದೇವರು ತನ್ನ “ಸ್ವರೂಪದಲ್ಲಿ” ಅಂದರೆ ತನ್ನ ಶ್ರೇಷ್ಠ ಗುಣಗಳನ್ನು ಬೆಳೆಸಿಕೊಳ್ಳುವ ಮತ್ತು ತೋರಿಸುವಂಥ ರೀತಿಯಲ್ಲಿ ಸೃಷ್ಟಿಮಾಡಿದ್ದಾನೆ.—ಆದಿಕಾಂಡ 1:26, 27.

“ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; . . . ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ . . . ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು.”ಕೀರ್ತನೆ 139:1, 2, 23.

ಯೋಚಿಸಿ: ದೇವರಿಗೆ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತಿದೆ. ನೀವು ಬೇರೆ ಯಾರಿಗೂ ಹೇಳದೆ ನಿಮ್ಮ ಮನಸ್ಸಿನಲ್ಲಿ ಮುಚ್ಚಿಟ್ಟಿರುವ ಯೋಚನೆಗಳು ಚಿಂತೆಗಳು ಸಹ ಆತನಿಗೆ ಗೊತ್ತು. ನಿಮ್ಮ ಸಮಸ್ಯೆಗಳು ಮತ್ತು ಚಿಂತೆಗಳನ್ನು ಬೇರೆ ಯಾರೂ ಅರ್ಥಮಾಡಿಕೊಳ್ಳದಿದ್ದರೂ ದೇವರು ಅರ್ಥಮಾಡಿಕೊಳ್ಳುತ್ತಾನೆ. ನಿಮಗೆ ಸಹಾಯಮಾಡೋಕೆ ತುದಿಗಾಲಲ್ಲಿದ್ದಾನೆ. ನಮ್ಮ ಜೀವನ ಸಾರ್ಥಕ ಅನ್ನಲು ಇದೊಂದು ಕಾರಣ ಸಾಕಲ್ಲವೇ?

ನಿಮ್ಮ ಜೀವನಕ್ಕೆ ಅರ್ಥವಿದೆ

‘ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ. ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲೇ ಬೇಗನೆ ಸದುತ್ತರವನ್ನು ದಯಪಾಲಿಸು. ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸುವನು.’ಕೀರ್ತನೆ 102:1, 2, 15.

ಯೋಚಿಸಿ: ಮಾನವ ಕುಲದ ಆರಂಭದಿಂದ ಮಾನವರೆಲ್ಲರೂ ಸುರಿಸಿರುವ ನೋವಿನ ಕಣ್ಣೀರಿನ ಬಗ್ಗೆ ಯೆಹೋವನಿಗೆ ಗೊತ್ತಿದೆ. (ಕೀರ್ತನೆ 56:8) ಇದರಲ್ಲಿ ನಿಮ್ಮ ಕಣ್ಣೀರು ಸಹ ಒಳಗೂಡಿದೆ. ನೀವು ದೇವರಿಗೆ ಅಮೂಲ್ಯರು. ಆದ್ದರಿಂದ ನೀವು ಅನುಭವಿಸಿರುವ ಎಲ್ಲಾ ಕಷ್ಟ, ಕಣ್ಣೀರನ್ನು ಆತನು ಮರೆತಿಲ್ಲ.

“ನೀನಂತು ಹೆದರಬೇಡ, . . . ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; . . . ನಿನಗೆ ಸಹಾಯಕೊಡುತ್ತೇನೆ; . . . ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.”ಯೆಶಾಯ 41:10, 13.

ಯೋಚಿಸಿ: ದೇವರು ಸಹಾಯಮಾಡಲು ಸಿದ್ಧನಿದ್ದಾನೆ. ನೀವು ಬಿದ್ದರೆ, ಮೇಲಕ್ಕೆ ಎತ್ತುವನು.

ಒಳ್ಳೆಯ ಭವಿಷ್ಯದ ನಿರೀಕ್ಷೆ ನಿಮಗಿದೆ

“ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.”ಯೋಹಾನ 3:16.

ಯೋಚಿಸಿ: ದೇವರು ನಿಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದರೆ ನಿಮಗಾಗಿ ಆತನು ಸ್ವಇಷ್ಟದಿಂದ ತನ್ನ ಮಗನನ್ನೇ ಯಜ್ಞವಾಗಿ ಕೊಟ್ಟನು. ಈ ಯಜ್ಞದ ಮೂಲಕ ನಿಮಗೆ, ನಿತ್ಯ ನಿರಂತರಕ್ಕೂ * ಸಂತೋಷವಾಗಿ ಉದ್ದೇಶಭರಿತ ಜೀವನ ನಡೆಸುವ ಅವಕಾಶದ ದಾರಿ ತೆರೆದಿದೆ.

ನೀವು ಕಷ್ಟದಲ್ಲಿರಬಹುದು, ಇನ್ನು ತಾಳಕ್ಕಾಗಲ್ಲ ಅಂತ ಅನಿಸಬಹುದು. ಆದರೂ ದೇವರ ವಾಕ್ಯವಾದ ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿ ಮತ್ತು ದೇವರು ವಾಗ್ದಾನಿಸಿರುವ ನಿರೀಕ್ಷೆಯಲ್ಲಿ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ. ಇದು ನಿಮ್ಮನ್ನು ಸಂತುಷ್ಟರನ್ನಾಗಿ ಮಾಡುತ್ತದೆ ಮತ್ತು ಜೀವನ ಸಾರ್ಥಕ ಎಂಬ ಭರವಸೆಯನ್ನು ಹೆಚ್ಚಿಸುತ್ತದೆ.

^ ಯೇಸು ಕ್ರಿಸ್ತನ ಯಜ್ಞದಿಂದ ಹೇಗೆ ಪ್ರಯೋಜನ ಪಡೆಯಬಹುದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.mt711.comನಲ್ಲಿ ಯೇಸುವಿನ ಮರಣವನ್ನು ಸ್ಮರಿಸಿ ಎಂಬ ವಿಡಿಯೊ ನೋಡಿ. ಈ ವಿಡಿಯೋಗಾಗಿ ನಮ್ಮ ಬಗ್ಗೆ > ಮರಣದ ಸ್ಮರಣೆ ಎಂಬಲ್ಲಿ ನೋಡಿ.