ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರ ನಂಬಿಕೆಯನ್ನು ಅನುಕರಿಸಿ | ದಾವೀದ

“ಯುದ್ಧಫಲವು ಯೆಹೋವನ ಕೈಯಲ್ಲಿದೆ”

“ಯುದ್ಧಫಲವು ಯೆಹೋವನ ಕೈಯಲ್ಲಿದೆ”

ದಾವೀದನು ಯುದ್ಧಭೂಮಿಯ ಕಡೆಗೆ ಕಣ್ಣೆತ್ತಿ ನೋಡಿದಾಗ ಅವನಿಗೆ ಕಂಡ ದೃಶ್ಯಗಳಿವು. ಇಸ್ರಾಯೇಲ್ಯ ಸೈನಿಕರು ಎದ್ದು ಬಿದ್ದು ಗುಂಪು ಗುಂಪಾಗಿ ಅವನ ಕಡೆ ಓಡಿ ಬರುತ್ತಿದ್ದಾರೆ. ಅವರು ಭಯದಿಂದ ದಿಕ್ಕಾಪಾಲಾಗಿದ್ದಾರೆ. ಯುದ್ಧ ಮಾಡದೆ ಓಡಿ ಬಂದಿದ್ದಾರೆ. ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವುದು ಒಂದೇ ಹೆಸರು. ಅದು ಯಾರು ಎಂದು ಕಣ್ಣೆತ್ತಿ ನೋಡಿದಾಗ ಆಚೆ ಕಡೆಯ ಕಣಿವೆಯಲ್ಲಿ ಒಬ್ಬ ದೈತ್ಯ ನಿಂತಿರುವುದನ್ನು ನೋಡುತ್ತಾನೆ. ಇಂಥಾ ದೈತ್ಯನನ್ನು ದಾವೀದ ತನ್ನ ಜೀವನದಲ್ಲಿ ಹಿಂದೆಂದೂ ನೋಡಿರಲಿಲ್ಲ.

ಆ ದೈತ್ಯನೇ ಗೊಲ್ಯಾತ! ಇಸ್ರಾಯೇಲ್ಯರು ಭಯಪಟ್ಟು ಓಡಿಹೋಗಿದ್ದು ಯಾಕೆಂದು ದಾವೀದನಿಗೆ ಈಗ ಅರ್ಥ ಆಯಿತು. ಆ ಗೊಲ್ಯಾತ ಪರ್ವತದ ಹಾಗೆ ಕಾಣೋ ದೈತ್ಯಪುರುಷ. ಇಬ್ಬರು ಪುರುಷರಷ್ಟು ಗಾತ್ರ ಇದ್ದಾನೆ. ಯುದ್ಧ ಮಾಡೋದಕ್ಕೆ ಶಸ್ತ್ರಸಜ್ಜಿತನಾಗಿ ನಿಂತಿರೋ ಅವನು ಬಲಶಾಲಿ, ಯುದ್ಧಶೂರ. ಅವನು ಘರ್ಜಿಸುತ್ತಾ ಸವಾಲು ಹಾಕೋದನ್ನ ಸ್ವಲ್ಪ ಊಹಿಸಿಕೊಳ್ಳಿ. ಅವನ ಗಡಸು ಧ್ವನಿ ಪರ್ವತಗಳ ನಡುವೆ ಪ್ರತಿಧ್ವನಿಸುತ್ತಿರುತ್ತದೆ. ಅವನು ಇಸ್ರಾಯೇಲ್ಯ ಸೈನ್ಯವನ್ನು ಮತ್ತು ರಾಜ ಸೌಲನನ್ನು ಹೀಯ್ಯಾಳಿಸುತ್ತಾ ‘ನನ್ನ ಜೊತೆ ಯುದ್ಧ ಮಾಡೋದಕ್ಕೆ ಧೈರ್ಯ ಇರೋ ಒಬ್ಬನನ್ನ ಕಳುಹಿಸಿ, ಈ ಯುದ್ಧಕ್ಕೆ ಒಂದೇ ಸಾರಿ ಅಂತ್ಯ ಹಾಡ್ತೀನಿ’ ಅಂತ ಕೂಗಿ ಹೇಳುತ್ತಿದ್ದ.—1 ಸಮುವೇಲ 17:4-10.

ಈ ಮಾತನ್ನು ಕೇಳಿದಾಗ ರಾಜ ಸೌಲ ಮತ್ತು ಇಸ್ರಾಯೇಲ್ಯರ ಹೃದಯ ನಡುಗಿ ಹೋಯಿತು! ಕಳೆದ ಒಂದು ತಿಂಗಳಿಂದ ಗೊಲ್ಯಾತ ಹೀಗೇ ಹೀಯ್ಯಾಳಿಸುತ್ತಿದ್ದಾನೆ ಅಂತ ದಾವೀದನಿಗೆ ಗೊತ್ತಾಯಿತು. ಫಿಲಿಷ್ಟಿಯರು ಮತ್ತು ಇಸ್ರಾಯೇಲ್ಯರು ಮೂಕ ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರು. ಇದನ್ನೆಲ್ಲಾ ಕಂಡು ದಾವೀದನಿಗೆ ಸಹಿಸಲಾಗಲಿಲ್ಲ. ಸೌಲ ಮತ್ತವನ ಸೈನಿಕರು ಹಾಗೂ ದಾವೀದನ ಅಣ್ಣಂದಿರು ಭಯದಿಂದ ಕುಗ್ಗಿಹೋಗಿರುವುದು ನಾಚಿಕೆಯ ವಿಷಯವಾಗಿತ್ತು. ಅನ್ಯದೇವರುಗಳ ಆರಾಧಕನಾದ ಇವನು ಇಸ್ರಾಯೇಲ್ಯರನ್ನು ಗೇಲಿ ಮಾಡುತ್ತಿದ್ದಾಗ, ಇಸ್ರಾಯೇಲ್ಯರ ದೇವರಾದ ಯೆಹೋವನನ್ನೇ ಗೇಲಿ ಮಾಡಿದಂತೆ ದಾವೀದನಿಗೆ ಅನಿಸಿತು. ರಾಜನೇ ಭಯಪಟ್ಟು ಓಡಿ ಬಂದಿರುವಾಗ ಇನ್ನೂ ಯುವಕನಾಗಿದ್ದ ದಾವೀದ ಏನು ತಾನೇ ಮಾಡಲು ಸಾಧ್ಯ? ಇಂಥ ಸಂದರ್ಭದಲ್ಲಿ ದಾವೀದ ತೋರಿಸಿದ ನಂಬಿಕೆಯಿಂದ ನಾವು ಯಾವ ಪಾಠ ಕಲಿಯಬಹುದು?—1 ಸಮುವೇಲ 17:11-14.

“ಇವನನ್ನು ಅಭಿಷೇಕಿಸು, ನಾನು ಆರಿಸಿಕೊಂಡವನು ಇವನೇ”

ಈ ಘಟನೆ ನಡೆಯೋದಕ್ಕಿಂತ ಕೆಲವು ತಿಂಗಳುಗಳ ಹಿಂದಕ್ಕೆ ಹೋಗೋಣ ಬನ್ನಿ. ಕೆಂಪು ಮೈ ಬಣ್ಣ, ಹೊಳೆಯುವ ಕಣ್ಣುಗಳಿದ್ದ ಹದಿವಯಸ್ಸಿನ ದಾವೀದನು ನೋಡಲು ತುಂಬಾ ಸುಂದರನಾಗಿದ್ದ. ಬಿಡುವಿನ ಸಮಯದಲ್ಲಿ ಕಿನ್ನರಿ ಬಾರಿಸುವುದು ಇವನ ರೂಢಿಯಾಗಿತ್ತು. ಆದ್ದರಿಂದ ಇವನು ಕಿನ್ನರಿ ಬಾರಿಸುವುದರಲ್ಲಿ ನಿಪುಣನಾದ. ಭವ್ಯವಾಗಿ ಕಂಗೊಳಿಸುತ್ತಿದ್ದ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ದೇವರನ್ನು ಸ್ತುತಿಸುತ್ತಿದ್ದ. ಒಂದು ಸಂಜೆ ಬೇತ್ಲೆಹೇಮಿನ ಗುಡ್ಡಗಾಡು ಪ್ರದೇಶದಲ್ಲಿ ದಾವೀದನು ಕುರಿಗಳನ್ನು ಮೇಯಿಸುತ್ತಿದ್ದ. ಆಗ ದಾವೀದನ ತಂದೆ ಅವನಿಗೆ ತಕ್ಷಣ ಮನೆಗೆ ಬರುವಂತೆ ಹೇಳಿ ಕಳುಹಿಸಿದ್ದನು.—1 ಸಮುವೇಲ 16:12.

ಮನೆಗೆ ಬಂದಾಗ ದಾವೀದನ ತಂದೆ ಇಷಯ ಒಬ್ಬ ವಯಸ್ಸಾದ ವ್ಯಕ್ತಿಯೊಟ್ಟಿಗೆ ಮಾತಾಡುತ್ತಿದ್ದನು. ಅವನೇ ನಂಬಿಗಸ್ತ ಪ್ರವಾದಿ ಸಮುವೇಲ. ಇಷಯನ ಮಕ್ಕಳಲ್ಲಿ ಒಬ್ಬನನ್ನು ಇಸ್ರಾಯೇಲ್ಯರ ಮುಂದಿನ ರಾಜನಾಗಿ ನೇಮಿಸಲು ಯೆಹೋವ ದೇವರು ಇವನನ್ನು ಕಳುಹಿಸಿದ್ದನು! ದಾವೀದನ ಅಣ್ಣಂದಿರಲ್ಲಿ ಅವನು ಯಾರನ್ನೂ ಆರಿಸಿರಲಿಲ್ಲ. ದಾವೀದನು ಮನೆಗೆ ಬಂದಾಗ ಯೆಹೋವನು ಸಮುವೇಲನಿಗೆ “ಇವನನ್ನು ಅಭಿಷೇಕಿಸು, ನಾನು ಆರಿಸಿಕೊಂಡವನು ಇವನೇ” ಎಂದು ಹೇಳಿದನು. ಅಲ್ಲಿದ್ದವರ ಮುಂದೆ ಸಮುವೇಲನು ವಿಶೇಷ ತೈಲವಿದ್ದ ಕೊಂಬನ್ನು ತೆಗೆದುಕೊಂಡು ದಾವೀದನ ತಲೆಯ ಮೇಲೆ ಸುರಿದು ಅಭಿಷೇಕಿಸಿದನು. ಇದಾದ ನಂತರ ದಾವೀದನ ಜೀವನವೇ ಬದಲಾಯಿತು. ಬೈಬಲ್‌ ಹೇಳುವುದು: “ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು.”—1 ಸಮುವೇಲ 16:1, 5-11, 13.

ಕ್ರೂರ ಪ್ರಾಣಿಗಳನ್ನು ಜಯಿಸಲು ಸಾಧ್ಯವಾಗಿದ್ದು ಯೆಹೋನಿಂದಲೇ ಎಂದು ದಾವೀದನು ದೀನತೆಯಿಂದ ಒಪ್ಪಿಕೊಂಡನು

ರಾಜನಾಗುವ ಈ ನೇಮಕದ ಬಗ್ಗೆ ದಾವೀದನು ಕನಸಿನ ಗೋಪುರವನ್ನು ಕಟ್ಟಿಕೊಂಡನಾ? ಇಲ್ಲ. ಯೆಹೋವನು ಆ ನೇಮಕವನ್ನು ಕೊಡುವ ತನಕ ಅವನು ತಾಳ್ಮೆಯಿಂದ ಕಾಯುತ್ತಿದ್ದನು. ದೀನತೆಯಿಂದ ಕುರಿ ಮೇಯಿಸುವ ಕೆಲಸವನ್ನು ಮಾಡುತ್ತಾ ಮುಂದುವರಿದನು. ಈ ಕೆಲಸಕ್ಕೆ ತುಂಬಾ ಪರಿಶ್ರಮ ಮತ್ತು ಧೈರ್ಯ ಬೇಕಾಗಿತ್ತು. ಅವನ ಕುರಿಗಳ ಮೇಲೆ ಒಮ್ಮೆ ಸಿಂಹ, ಮತ್ತೊಮ್ಮೆ ಕರಡಿ ದಾಳಿ ಮಾಡಿತ್ತು! ಆಗ ದಾವೀದನು ಆ ಕ್ರೂರ ಪ್ರಾಣಿಗಳನ್ನು ದೂರದಿಂದಲೇ ಓಡಿಸಲು ಪ್ರಯತ್ನಿಸದೆ ತನ್ನ ಪ್ರಾಣವನ್ನು ಪಣಕ್ಕೊಡ್ಡಿ ಅವುಗಳೊಂದಿಗೆ ಹೋರಾಡಿದನು. ಈ ಎರಡೂ ಸಂದರ್ಭಗಳಲ್ಲೂ ಒಬ್ಬನೇ ಅವುಗಳನ್ನು ಕೊಂದು ಹಾಕಿದನು.—1 ಸಮುವೇಲ 17:34-36; ಯೆಶಾಯ 31:4.

ಅವನ ಈ ಶೌರ್ಯ ರಾಜ ಸೌಲನ ಕಿವಿಗೂ ಬಿತ್ತು. ಸೌಲನು ಪರಾಕ್ರಮಶಾಲಿ, ಯುದ್ಧವೀರನಾಗಿದ್ದರೂ ದೇವರ ಮಾರ್ಗದರ್ಶನೆಯ ವಿರುದ್ಧ ದಂಗೆ ಎದ್ದ ಕಾರಣ ಯೆಹೋವನ ಅನುಗ್ರಹವನ್ನು ಕಳೆದುಕೊಂಡಿದ್ದನು. ಯೆಹೋವ ದೇವರು ತನ್ನ ಪವಿತ್ರಾತ್ಮವನ್ನು ಸೌಲನಿಂದ ತೆಗೆದುಬಿಟ್ಟಿದ್ದರಿಂದ ಕೋಪ, ಸಂದೇಹ ಮತ್ತು ಹಿಂಸೆಯಂಥ ಕೆಟ್ಟ ಮನೋಭಾವ ಅವನಲ್ಲಿ ಮನೆಮಾಡಿತ್ತು. ಇಂಪಾದ ಸಂಗೀತ ಕೇಳಿದಾಗ ಅವನ ಮನಸ್ಸಿಗೆ ಸ್ವಲ್ಪ ಸಮಾಧಾನವಾಗುತ್ತಿತ್ತು. ಆದ್ದರಿಂದ, ದಾವೀದನು ತುಂಬಾ ಚೆನ್ನಾಗಿ ಕಿನ್ನರಿ ಬಾರಿಸುತ್ತಾನೆ ಮತ್ತು ಧೈರ್ಯವಂತ ಎಂದು ಸೇವಕರು ಸೌಲನಿಗೆ ತಿಳಿಸಿದರು. ಹಾಗಾಗಿ ಸೌಲನು ದಾವೀದನಿಗೆ ಕರೆ ಕಳುಹಿಸಿದನು. ಹೀಗೆ ಸೌಲನ ಆಸ್ಥಾನದಲ್ಲಿ ಸಂಗೀತ ನುಡಿಸುವ ಮತ್ತು ಆಯುಧಗಳನ್ನು ಹೊರುವ ಕೆಲಸಕ್ಕಾಗಿ ದಾವೀದನು ನೇಮಕಗೊಂಡನು.—1 ಸಮುವೇಲ 15:26-29; 16:14-23.

ದಾವೀದನ ನಂಬಿಕೆಯಿಂದ ವಿಶೇಷವಾಗಿ ಯುವಜನರು ತುಂಬಾ ವಿಷಯಗಳನ್ನು ಕಲಿಯಬಹುದು. ಅವನು ತನ್ನ ಬಿಡುವಿನ ಸಮಯವನ್ನು ಯೆಹೋವ ದೇವರಿಗೆ ಆಪ್ತನಾಗಲು ಉಪಯೋಗಿಸಿದನು ಎಂಬುದನ್ನು ಗಮನಿಸಿ. ಅಲ್ಲದೆ, ಜೀವನಕ್ಕೆ ಅಗತ್ಯವಾದ ಮತ್ತು ಸುಲಭವಾಗಿ ಕೆಲಸ ಸಿಗುವಂಥ ಕೌಶಲಗಳನ್ನು ಬೆಳೆಸಿಕೊಂಡನು. ಎಲ್ಲಕ್ಕಿಂತ ಮುಖ್ಯವಾಗಿ, ಅವನು ಯೆಹೋವ ದೇವರ ಪವಿತ್ರಾತ್ಮದ ಮಾರ್ಗದರ್ಶನೆಗೆ ತಕ್ಕಂತೆ ಪ್ರತಿಕ್ರಿಯಿಸುತ್ತಿದ್ದನು. ಕಲಿಯಲು ಎಂಥಾ ಉತ್ತಮ ಮಾದರಿ!—ಪ್ರಸಂಗಿ 12:1.

“ಆ ಫಿಲಿಷ್ಟಿಯನ ನಿಮಿತ್ತವಾಗಿ ಯಾವನೂ ಎದೆಗೆಡಬಾರದು”

ಸೌಲನ ಹತ್ತಿರ ಕೆಲಸ ಮಾಡುತ್ತಿದ್ದಾಗ ಆಗಾಗ್ಗೆ ಸ್ವಲ್ಪ ದಿನ ಕುರಿಗಳನ್ನು ಮೇಯಿಸಲು ದಾವೀದ ತನ್ನ ಮನೆಗೆ ಹೋಗುತ್ತಿದ್ದ. ಹೀಗೆ ಮನೆಗೆ ಹೋದ ಸಮಯದಲ್ಲೇ ಇಷಯನು ದಾವೀದನನ್ನು ಸೌಲನ ಸೈನ್ಯದಲ್ಲಿದ್ದ ಅವನ ಮೂವರು ಅಣ್ಣಂದಿರನ್ನು ನೋಡಿ ಬರುವಂತೆ ಕಳುಹಿಸುತ್ತಾನೆ. ತಂದೆಯ ಮಾತಿನಂತೆ ಅಣ್ಣಂದಿರಿಗೆ ಬೇಕಾದ ಆಹಾರ ತೆಗೆದುಕೊಂಡು ದಾವೀದನು ಏಲಾ ತಗ್ಗಿಗೆ ಹೋಗುತ್ತಾನೆ. ಅಲ್ಲಿ ಹೋದಾಗ ಅವನು ಈ ಲೇಖನದ ಆರಂಭದಲ್ಲಿ ತಿಳಿಸಿದ ದೃಶ್ಯಗಳನ್ನು ಕಂಡನು. ಈ ಕಣಿವೆಯ ಇಳಿಜಾರು ಪ್ರದೇಶದಲ್ಲಿ ಎರಡೂ ಗುಂಪಿನವರು ಎದುರುಬದುರಾಗಿ ನಿಂತಿದ್ದರು.—1 ಸಮುವೇಲ 17:1-3, 15-19.

ಇಸ್ರಾಯೇಲ್ಯರ ನಿಸ್ಸಹಾಯಕ ಪರಿಸ್ಥಿತಿಯನ್ನು ನೋಡಿದ ದಾವೀದನಿಗೆ ಸಹಿಸಲು ಆಗಲಿಲ್ಲ. ಸತ್ಯದೇವರಾದ ಯೆಹೋವನ ಸೈನಿಕರು ಕೇವಲ ಒಬ್ಬ ಮನುಷ್ಯನಿಗೆ, ಅದರಲ್ಲೂ ಸುಳ್ಳು ದೇವರ ಆರಾಧಕನಿಗೆ ಹೆದರಿ ಯುದ್ಧ ಮಾಡದೆ ಹಿಂದೆ ಓಡಿ ಬಂದಿದ್ದಾರೆ. ಗೊಲ್ಯಾತನು ಗೇಲಿ ಮಾಡುತ್ತಿರುವುದು ಯೆಹೋವ ದೇವರನ್ನೇ ಎಂದು ದಾವೀದನಿಗೆ ಅನಿಸಿತು. ಗೊಲ್ಯಾತನನ್ನು ಸೋಲಿಸುವುದರ ಬಗ್ಗೆ ತುಂಬಾ ಉತ್ಸಾಹದಿಂದ ದಾವೀದ ಇತರ ಸೈನಿಕರೊಂದಿಗೆ ಮಾತಾಡಲು ಆರಂಭಿಸಿದನು. ಈ ಮಾತುಗಳು ದಾವೀದನ ಅಣ್ಣನಾದ ಎಲೀಯಾಬನ ಕಿವಿಗೆ ಬಿದ್ದವು. ಅವನು ದಾವೀದನನ್ನು, ‘ನೀನು ಯುದ್ಧವನ್ನು ನೋಡುವುದಕ್ಕಷ್ಟೇ ಬಂದಿದ್ದೀ’ ಎಂದು ಗದರಿಸಿದನು. ಆಗ ದಾವೀದನು “ನಾನೇನು ತಪ್ಪು ಮಾಡಿದೆನು? ಬರೀ ಮಾತಾಡಿದೆನಷ್ಟೆ” ಎಂದು ಉತ್ತರ ಕೊಟ್ಟನು. ಇಷ್ಟಾದರೂ ಗೊಲ್ಯಾತನನ್ನು ಸೋಲಿಸುತ್ತೇನೆ ಎಂದು ದೃಢವಾಗಿ ಹೇಳುವುದನ್ನು ಮಾತ್ರ ದಾವೀದ ನಿಲ್ಲಿಸಲಿಲ್ಲ. ಇದು ಸೌಲನಿಗೂ ತಿಳಿದು ದಾವೀದನನ್ನು ಕರೆದನು.—1 ಸಮುವೇಲ 17:23-31.

ದಾವೀದನು ರಾಜ ಸೌಲನಿಗೆ “ಆ ಫಿಲಿಷ್ಟಿಯನ ನಿಮಿತ್ತವಾಗಿ ಯಾವನೂ ಎದೆಗೆಡಬಾರದು” ಎಂದು ಪ್ರೋತ್ಸಾಹಿಸಿದನು. ಗೊಲ್ಯಾತನನ್ನು ಕಂಡು ಸೌಲ ಮತ್ತು ಅವನ ಇಡೀ ಸೈನ್ಯ ಭಯಭೀತವಾಗಿತ್ತು. ಅವರು ಗೊಲ್ಯಾತನ ಹೊರತೋರಿಕೆ, ಅವನ ದೈತ್ಯ ದೇಹವನ್ನು ನೋಡಿ ‘ಅವನಿಗೆ ನಮ್ಮನ್ನು ಸೋಲಿಸುವುದು ನೀರು ಕುಡಿದಷ್ಟೇ ಸುಲಭ’ ಎಂದು ನೆನೆಸಿದರು. ಆದರೆ ದಾವೀದನು ಅವರಂತೆ ಯೋಚಿಸಲಿಲ್ಲ. ವಿಷಯಗಳನ್ನು ಭಿನ್ನ ರೀತಿಯಲ್ಲಿ ನೋಡಿ ‘ಗೊಲ್ಯಾತನೊಂದಿಗೆ ನಾನೇ ಹೋರಾಡುತ್ತೇನೆ’ ಎಂದು ಹೇಳಿದನು.—1 ಸಮುವೇಲ 17:32.

ಆಗ ಸೌಲನು ದಾವೀದನಿಗೆ “ನೀನು ಅವನೊಡನೆ ಕಾದಾಡಲಾರಿ. ನೀನು ಇನ್ನೂ ಹುಡುಗನು. ಅವನಾದರೋ ಚಿಕ್ಕಂದಿನಿಂದಲೇ ಯುದ್ಧವೀರನು” ಎಂದು ಹೇಳಿದನು. ನಿಜವಾಗಲೂ ದಾವೀದನು ಚಿಕ್ಕ ಹುಡುಗನಾಗಿದ್ದನಾ? ಇಲ್ಲ, ಆದರೆ ಸೈನ್ಯಕ್ಕೆ ಸೇರುವಷ್ಟು ವಯಸ್ಸು ದಾವೀದನಿಗೆ ಆಗಿರಲಿಲ್ಲ ಅಷ್ಟೇ. ಬಹುಶಃ ದಾವೀದನು ನೋಡಲು ಚಿಕ್ಕವನಂತೆ ಇದ್ದಿರಬಹುದು. ಆದರೆ ಧೈರ್ಯವಂತನೆಂದು ಈಗಾಗಲೇ ಹೆಸರುವಾಸಿಯಾಗಿದ್ದ. ಆಗ ಅವನಿಗೆ ಸುಮಾರು 18-19 ವರ್ಷ ಆಗಿದ್ದಿರಬಹುದು.—1 ಸಮುವೇಲ 16:18; 17:33.

ಸಿಂಹ ಮತ್ತು ಕರಡಿಗೆ ಏನಾಯಿತೆಂಬುದನ್ನು ಹೇಳುವ ಮೂಲಕ ದಾವೀದ ಸೌಲನಿಗೆ ಧೈರ್ಯ ತುಂಬಿದನು. ಇಲ್ಲಿ ದಾವೀದನು ಜಂಬ ಕೊಚ್ಚಿಕೊಳ್ಳುತ್ತಿದ್ದನಾ? ಇಲ್ಲ. ಆ ಕ್ರೂರ ಪ್ರಾಣಿಗಳನ್ನು ಹೇಗೆ ಸೋಲಿಸಿದನೆಂದು ದಾವೀದನಿಗೆ ತಿಳಿದಿತ್ತು. ಅವನು ಹೇಳಿದ್ದು: ‘ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಂದ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವನು.’ ಇದನ್ನು ಕೇಳಿದ ಸೌಲನು ದಾವೀದನಿಗೆ, “ಹೋಗು, ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿದನು.—1 ಸಮುವೇಲ 17:37.

ದಾವೀದನಿಗಿದ್ದಂಥ ನಂಬಿಕೆ ನಿಮಗೂ ಇರಬೇಕು ಅಂತ ಇಷ್ಟ ಇದೆಯಾ? ದಾವೀದನಿಗೆ ದೇವರ ಮೇಲೆ ಇದ್ದದ್ದು ಕುರುಡು ನಂಬಿಕೆ ಅಲ್ಲ, ನಿಜವಾದ ನಂಬಿಕೆ. ಅದಕ್ಕೆ ಕಾರಣ ಜ್ಞಾನ ಮತ್ತು ಅನುಭವ. ಯೆಹೋವನು ಪ್ರೀತಿಯ ಸಂರಕ್ಷಕ ಮತ್ತು ಮಾತು ತಪ್ಪದವನು ಎಂದು ದಾವೀದನು ಅನುಭವದಿಂದ ತಿಳಿದಿದ್ದನು. ದಾವೀದನಿಗೆ ಇದ್ದಂಥ ನಂಬಿಕೆಯನ್ನು ನಾವು ಬೆಳೆಸಿಕೊಳ್ಳಬೇಕಾದರೆ ಬೈಬಲಿನಿಂದ ಯೆಹೋವ ದೇವರ ಬಗ್ಗೆ ನಾವು ಕಲಿಯುತ್ತಿರಬೇಕು. ಕಲಿತಂತೆ ನಾವು ನಡೆದುಕೊಳ್ಳುವಾಗ ದಾವೀದನಂತೆ ಒಳ್ಳೇ ಅನುಭವಗಳನ್ನು ಪಡೆಯುತ್ತೇವೆ ಮತ್ತು ಅವು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತವೆ.—ಇಬ್ರಿಯ 11:1.

‘ಯೆಹೋವನು ನಿನ್ನನ್ನು ನನ್ನ ಕೈಗೆ ಒಪ್ಪಿಸುವನು’

ತನ್ನ ಯುದ್ಧವಸ್ತ್ರಗಳನ್ನು ಸೌಲನು ದಾವೀದನಿಗೆ ತೊಡಿಸಿದನು. ಅದು ಗೊಲ್ಯಾತನ ಯುದ್ಧವಸ್ತ್ರದಂತೆಯೇ ಇತ್ತು. ಅದನ್ನು ತಾಮ್ರದಿಂದ ಮಾಡಲಾಗಿದ್ದು, ಅದರಲ್ಲಿ ಒಂದು ದೊಡ್ಡ ಶಿರಸ್ತ್ರಾಣ ಹಾಗೂ ಲೋಹದ ಬಿಲ್ಲೆಗಳಿಂದ ಮಾಡಿದ ಕವಚ ಇದ್ದಿರಬೇಕು. ಆದರೆ ತುಂಬಾ ಭಾರವುಳ್ಳ ಈ ಯುದ್ಧವಸ್ತ್ರಗಳನ್ನು ಹಾಕಿ ದಾವೀದನಿಗೆ ನಡೆಯಲಾಗಲಿಲ್ಲ. ಅವನಿಗೆ ಸೈನಿಕನ ತರಬೇತಿ ಸಿಕ್ಕಿರದ ಕಾರಣ ಯುದ್ಧವಸ್ತ್ರವನ್ನು ಯಾವತ್ತೂ ಧರಿಸಿರಲಿಲ್ಲ. ಅಲ್ಲದೇ ಸೌಲನು ಇಸ್ರಾಯೇಲ್ಯರಲ್ಲೇ ಅತೀ ಎತ್ತರನಾಗಿದ್ದರಿಂದ ಅವನ ಯುದ್ಧವಸ್ತ್ರ ದಾವೀದನಿಗೆ ಆಗಲಿಲ್ಲ. (1 ಸಮುವೇಲ 9:2) ಆದ್ದರಿಂದ ಅವನು ಆ ಎಲ್ಲಾ ಯುದ್ಧವಸ್ತ್ರಗಳನ್ನು ಕಳಚಿ ಕುರಿ ಮೇಯಿಸುವಾಗ ಧರಿಸುತ್ತಿದ್ದ ಉಡುಪನ್ನು ಹಾಕಿಕೊಂಡನು.—1 ಸಮುವೇಲ 17:38-40.

ದಾವೀದನು ಕುರುಬರ ಕೋಲು, ಕವಣೆ ತೆಗೆದುಕೊಂಡು ಒಂದು ಚೀಲವನ್ನು ಹೆಗಲಿಗೇರಿಸಿಕೊಂಡು ರಣರಂಗಕ್ಕೆ ಹೋದನು. ಕವಣೆಯು ತುಂಬಾ ಚಿಕ್ಕದಾಗಿದ್ದರೂ ಬಹಳ ಶಕ್ತಿಯುತ ಆಯುಧವಾಗಿತ್ತು. ಸಾಮಾನ್ಯವಾಗಿ ಇದನ್ನು ಕುರುಬರು ಬಳಸುತ್ತಿದ್ದರು. ಅದು ಉದ್ದನೆಯ ಚರ್ಮದ ಪಟ್ಟಿಯಂತಿದ್ದು ಅದರ ಮಧ್ಯದಲ್ಲಿ ಒಂದು ಚಿಕ್ಕ ಚೀಲವಿರುತ್ತಿತ್ತು. ಪಟ್ಟಿಯ ಎರಡು ತುದಿಗಳನ್ನು ಕೈಯಲ್ಲಿ ಹಿಡಿದು ಅದರ ಚೀಲದಲ್ಲಿ ಕಲ್ಲನ್ನು ಇಟ್ಟು ತಮ್ಮ ತಲೆಗಿಂತ ಮೇಲೆ ಎತ್ತಿ ಜೋರಾಗಿ ತಿರುಗಿಸುತ್ತಾ ಪಟ್ಟಿಯ ಒಂದು ತುದಿಯನ್ನು ಬಿಟ್ಟಾಗ ಕಲ್ಲು ರಭಸವಾಗಿ ಎದುರಾಳಿಗೆ ತಗಲುತ್ತಿತ್ತು. ಇದು ಎಷ್ಟು ಪ್ರಬಲವಾದ ಆಯುಧವಾಗಿತ್ತೆಂದರೆ ಹಿಂದಿನ ಕಾಲದ ಸೈನ್ಯದಲ್ಲಿ ಕವಣೆಗಳನ್ನು ಉಪಯೋಗಿಸುವವರ ಒಂದು ಪಡೆಯೇ ಇರುತ್ತಿತ್ತು.

ಈ ಆಯುಧವನ್ನು ಕೈಯಲ್ಲಿ ಹಿಡಿದು ದಾವೀದನು ಗೊಲ್ಯಾತನ ಕಡೆಗೆ ಹೋಗುತ್ತಾನೆ. ಅವನು ಕಣಿವೆಯ ಒಣಗಿದ ಪ್ರದೇಶದಲ್ಲಿ ಐದು ನುಣುಪಾದ ಕಲ್ಲುಗಳನ್ನು ಆರಿಸಿಕೊಳ್ಳುತ್ತಿದ್ದಾಗ ಮನಸ್ಸಿನಲ್ಲೇ ಯೆಹೋವನಿಗೆ ಪ್ರಾರ್ಥಿಸಿದ್ದಿರಬಹುದು. ಹೀಗೆ ಸಿದ್ಧನಾದ ದಾವೀದ ಓಡುತ್ತಾ ಯುದ್ಧ ಭೂಮಿಗೆ ಹೋಗುತ್ತಾನೆ.

“ಕೆಂಬಣ್ಣದವನೂ ಸುಂದರನೂ” ಆದ ದಾವೀದನನ್ನು ನೋಡಿ ಗೊಲ್ಯಾತನು ತಿರಸ್ಕಾರದಿಂದ, “ನೀನು ಕೋಲುಹಿಡಿದು ನನ್ನ ಬಳಿಗೆ ಬರುವದೇನು? ನಾನು ನಾಯಿಯೋ” ಎಂದು ಕಿರುಚಿದನು. ಗೊಲ್ಯಾತನು ದಾವೀದನ ಕೈಯಲ್ಲಿದ್ದ ಕೋಲನ್ನಷ್ಟೇ ನೋಡಿರಬೇಕು, ಕವಣೆಯನ್ನು ಗಮನಿಸಿರಲಿಕ್ಕಿಲ್ಲ. ಅವನು ಫಿಲಿಷ್ಟಿಯರ ದೇವರ ಹೆಸರಿನಲ್ಲಿ ದಾವೀದನನ್ನು ಶಪಿಸಿ, ದಾವೀದನ ಮಾಂಸವನ್ನು ಪ್ರಾಣಿಪಕ್ಷಿಗಳಿಗೆ ಹಾಕುತ್ತೇನೆಂದು ಶಪತ ಮಾಡಿದನು.—1 ಸಮುವೇಲ 17:41-44.

ಆಗ ದಾವೀದನು ಹೇಳಿದ ನಂಬಿಕೆಯ ಮಾತುಗಳು ಇಂದಿಗೂ ಪ್ರಸಿದ್ಧವಾಗಿವೆ. ಯುವ ದಾವೀದನು ಗೊಲ್ಯಾತನ ಮುಂದೆ ಜೋರಾಗಿ ಹೇಳಿದಂಥ ಆ ಮಾತುಗಳನ್ನು ಸ್ವಲ್ಪ ಊಹಿಸಿಕೊಳ್ಳಿ: “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ.” ಮಾನವರು ಮತ್ತು ಅವರ ಆಯುಧಗಳು ದೇವರ ಮುಂದೆ ಏನೂ ಅಲ್ಲ ಎಂದು ದಾವೀದನಿಗೆ ತಿಳಿದಿತ್ತು. ಗೊಲ್ಯಾತ ಯೆಹೋವ ದೇವರಿಗೆ ಅಗೌರವ ತೋರಿಸಿರುವುದರಿಂದ ಅದಕ್ಕೆ ತಕ್ಕ ಉತ್ತರವನ್ನು ಯೆಹೋವನೇ ನೀಡುವನೆಂದು ದಾವೀದನು ನಂಬಿದ್ದನು. ಅದಕ್ಕಾಗಿಯೇ “ಯುದ್ಧಫಲವು ಯೆಹೋವನ ಕೈಯಲ್ಲಿದೆ” ಎಂದವನು ಹೇಳಿದನು.—1 ಸಮುವೇಲ 17:45-47.

ಗೊಲ್ಯಾತನು ತುಂಬಾ ಬಲಾಢ್ಯ ಮತ್ತು ದೈತ್ಯ ಪುರುಷ ಅಂತ ದಾವೀದನಿಗೆ ಚೆನ್ನಾಗಿ ಗೊತ್ತಿತ್ತು. ಇದನ್ನು ನೋಡಿ ಭಯಪಡಲಿಲ್ಲ. ಸೌಲ ಮತ್ತವನ ಸೈನ್ಯದವರು ಮಾಡಿದ ತಪ್ಪನ್ನು ದಾವೀದ ಮಾಡಲಿಲ್ಲ. ತನ್ನನ್ನು ಗೊಲ್ಯಾತನೊಂದಿಗೆ ಹೋಲಿಸಿಕೊಳ್ಳಲಿಲ್ಲ. ಬದಲಿಗೆ ಗೊಲ್ಯಾತನನ್ನು ಯೆಹೋವ ದೇವರೊಂದಿಗೆ ಹೋಲಿಸಿದ. ಒಂಭತ್ತುವರೆ ಅಡಿ (2.9 ಮೀಟರ್‌) ಎತ್ತರ ಇದ್ದ ಗೊಲ್ಯಾತನು ಬೇರೆಯವರಿಗೆ ಹೋಲಿಸಿದರೆ ತುಂಬಾ ದೈತ್ಯನಾಗಿ ಕಾಣಬಹುದು, ಆದರೆ ವಿಶ್ವದ ಮಹೋನ್ನತ ದೇವರಿಗೆ ಹೋಲಿಸಿದರೆ ಅವನು ಲೆಕ್ಕಕ್ಕೇ ಇರಲಿಲ್ಲ.

ತನ್ನ ಚೀಲಕ್ಕೆ ಕೈ ಹಾಕಿ ಕಲ್ಲನ್ನು ತೆಗೆಯುತ್ತಾ ದಾವೀದನು ಎದುರಾಳಿಯ ಕಡೆಗೆ ಓಡಿದನು. ಕಲ್ಲನ್ನು ತೆಗೆದು ಕವಣೆಗೆ ಹಾಕಿ ತನ್ನ ತಲೆಗಿಂತ ಮೇಲೆ ಎತ್ತಿ ರಭಸವಾಗಿ ತಿರುಗಿಸಿದನು. ಗೊಲ್ಯಾತನು ತನ್ನ ಗುರಾಣಿ ಹಿಡಿದುಕೊಂಡವನ ಜೊತೆ ಸ್ವಲ್ಪ ಮುಂದೆ ಬಂದನು. ಗೊಲ್ಯಾತ ತುಂಬಾ ಎತ್ತರವಾಗಿದ್ದರಿಂದ ದಾವೀದನಿಗೆ ಸುಲಭವಾಯಿತು. ಯಾಕೆಂದರೆ ಗುರಾಣಿ ಹೊತ್ತವನು ಸಾಮಾನ್ಯ ಮನುಷ್ಯನಾಗಿದ್ದರಿಂದ ದೈತ್ಯ ಗೊಲ್ಯಾತನ ತಲೆಯವರೆಗೆ ಅದನ್ನು ಹಿಡಿಯಲು ಆಗಲಿಲ್ಲ. ಹಾಗಾಗಿ ದಾವೀದನು ಗೊಲ್ಯಾತನ ಹಣೆಗೆ ಗುರಿಯಿಟ್ಟನು.—1 ಸಮುವೇಲ 17:41.

ಯೆಹೋವ ದೇವರ ಮುಂದೆ ದೈತ್ಯನು ಲೆಕ್ಕಕ್ಕೇ ಇಲ್ಲ ಅಂತ ದಾವೀದ ಗ್ರಹಿಸಿದ

ದಾವೀದನು ಸುತ್ತುತ್ತಿದ್ದ ತನ್ನ ಕವಣೆಯ ಒಂದು ತುದಿಯನ್ನು ಬಿಟ್ಟುಬಿಟ್ಟನು. ಆ ಕಲ್ಲು ಗುರಿಯನ್ನು ಮುಟ್ಟುವಾಗ ಇದ್ದ ನಿಶ್ಶಬ್ದವನ್ನು ಸ್ವಲ್ಪ ಊಹಿಸಿಕೊಳ್ಳಿ. ದಾವೀದನು ಮತ್ತೊಂದು ಕಲ್ಲನ್ನು ತೆಗೆದುಕೊಳ್ಳುವ ಅಗತ್ಯವೇ ಇಲ್ಲದಂತೆ ಯೆಹೋವನು ನೋಡಿಕೊಂಡನು. ಆ ಕಲ್ಲು ಸರಿಯಾಗಿ ಗೊಲ್ಯಾತನ ಹಣೆಗೆ ಬಡಿಯಿತು. ಆಗ ಆ ದೈತ್ಯ ಪುರುಷ ನೆಲಕ್ಕುರುಳಿದನು! ಇದನ್ನು ಕಂಡ ಗೊಲ್ಯಾತನ ಗುರಾಣಿ ಹೊರುವವನು ಭಯದಿಂದ ಅಲ್ಲಿಂದ ಓಡಿ ಹೋದನು. ದಾವೀದನು ಗೊಲ್ಯಾತನ ಕತ್ತಿಯಿಂದಲೇ ಅವನ ತಲೆಯನ್ನು ಕತ್ತರಿಸಿದನು.—1 ಸಮುವೇಲ 17:48-51.

ಕೊನೆಗೆ ಸೌಲ ಮತ್ತು ಅವನ ಸೈನಿಕರಿಗೆ ಹೋದ ಜೀವ ಮತ್ತೆ ಬಂದಂತೆ ಆಯಿತು. ತಡಮಾಡದೆ ಯುದ್ಧ ಮಾಡಲು ಫಿಲಿಷ್ಟಿಯರ ಕಡೆಗೆ ಓಡಿದರು. “ಯೆಹೋವನು . . . ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು” ಎಂಬ ದಾವೀದನ ಮಾತು ಸತ್ಯವಾಯಿತು.—1 ಸಮುವೇಲ 17:47, 52, 53.

ಇಂದು ದೇವರ ಸೇವಕರು ಯುದ್ಧ ಮಾಡುವುದಿಲ್ಲ ನಿಜ. ಅದೆಲ್ಲಾ ಹಿಂದಿನ ಕಾಲಕ್ಕೇ ಮುಗಿದು ಹೋಯಿತು. (ಮತ್ತಾಯ 26:52) ಆದರೂ ದಾವೀದನ ನಂಬಿಕೆಯನ್ನು ನಾವು ಅನುಕರಿಸಬಹುದು. ದಾವೀದನಂತೆ ನಮಗೆ ಯೆಹೋವ ದೇವರು ನೈಜನಾಗಿರಬೇಕು. ನಮ್ಮ ಆರಾಧನೆಗೆ ಆತನೊಬ್ಬನೇ ಅರ್ಹನಾಗಿದ್ದಾನೆ. ಕೆಲವೊಮ್ಮೆ ನಮಗೆ ಬರುವ ಸಮಸ್ಯೆಗಳು ಬೆಟ್ಟದಂತಿವೆ ಅಂತ ಅನಿಸಬಹುದು, ಆದ್ರೆ ಅವು ಯೆಹೋವನಿಗೆ ಸಮಸ್ಯೆಗಳೇ ಅಲ್ಲ. ಯೆಹೋವನನ್ನು ದೇವರೆಂದು ಸ್ವೀಕರಿಸಿ ದಾವೀದನಂತೆ ಆತನಲ್ಲಿ ನಂಬಿಕೆ ಇಟ್ಟರೆ ಯಾವುದೇ ಸವಾಲುಗಳು, ಸಮಸ್ಯೆಗಳು ಬಂದರೂ ಜಯಿಸುತ್ತೇವೆ. ಕಾರಣ, ಯೆಹೋವನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ! ▪ (wp16-E No. 5)