ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ದೇವರು ನಿಮ್ಮ ಸ್ನೇಹಿತನಾ?

ದೇವರೊಂದಿಗೆ ನೀವು ಮಾತಾಡುತ್ತೀರೊ?

ದೇವರೊಂದಿಗೆ ನೀವು ಮಾತಾಡುತ್ತೀರೊ?

ಆಪ್ತ ಸ್ನೇಹಿತರು ಅವಕಾಶ ಸಿಕ್ಕಾಗೆಲ್ಲಾ ನೇರವಾಗಿ ಇಲ್ಲವೇ ಫೋನ್‌, ಇ-ಮೇಲ್, ವಿಡಿಯೋ ಅಥವಾ ಪತ್ರದ ಮೂಲಕ ಮಾತಾಡುತ್ತಿರುತ್ತಾರೆ. ಅದೇ ರೀತಿ, ದೇವರಿಗೆ ಆಪ್ತರಾಗಲು ನಾವು ಪ್ರತಿನಿತ್ಯ ಆತನೊಂದಿಗೆ ಮಾತಾಡುತ್ತಿರಬೇಕು. ಇದನ್ನು ಹೇಗೆ ಮಾಡೋದು?

ನಾವು ಯೆಹೋವನೊಂದಿಗೆ ಪ್ರಾರ್ಥನೆಯ ಮೂಲಕ ಮಾತಾಡಬಹುದು. ಆದರೆ ಅದು ನಾವು ನಮ್ಮ ಸ್ನೇಹಿತನೊಂದಿಗೆ ಮಾಮೂಲಿಯಾಗಿ ಮಾತಾಡುವ ರೀತಿಯಲ್ಲಿ ಇರಬಾರದು. ನಾವು ದೇವರಿಗೆ ಪ್ರಾರ್ಥಿಸುವಾಗ ಸರ್ವ ಸೃಷ್ಟಿಕರ್ತನೊಂದಿಗೆ, ಇಡೀ ವಿಶ್ವದಲ್ಲೇ ಅತ್ಯುನ್ನತ ವ್ಯಕ್ತಿಯೊಂದಿಗೆ ಮಾತಾಡುತ್ತಿದ್ದೇವೆ ಎಂಬ ಅರಿವು ನಮಗಿರಬೇಕು. ಈ ಅರಿವು ಇದ್ದರೆ, ದೇವರಿಗೆ ಗೌರವ ತೋರಿಸುತ್ತಾ ಭಯಭಕ್ತಿಯಿಂದ ನಾವು ಪ್ರಾರ್ಥನೆ ಮಾಡುತ್ತೇವೆ. ನಮ್ಮ ಪ್ರಾರ್ಥನೆಗಳನ್ನು ದೇವರು ಕೇಳಬೇಕೆಂದರೆ ನಾವು ಇನ್ನೂ ಕೆಲವು ವಿಷಯಗಳನ್ನು ಮಾಡಬೇಕು. ಅವುಗಳಲ್ಲಿ ಮೂರನ್ನು ಈಗ ನೋಡೋಣ.

ಮೊದಲ ವಿಷಯ, ನಾವು ಯೆಹೋವನಿಗೆ ಮಾತ್ರ ಪ್ರಾರ್ಥಿಸಬೇಕೇ ಹೊರತು ಯೇಸುವಿಗೋ, ಸಂತರಿಗೋ ಅಥವಾ ಬೇರೆ ಯಾವುದೇ ವಸ್ತುಗಳಿಗೋ ಅಲ್ಲ. (ವಿಮೋಚನಕಾಂಡ 20: 4, 5) ಏಕೆಂದರೆ, “ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ” ಎಂದು ಬೈಬಲ್ ಹೇಳುತ್ತದೆ. (ಫಿಲಿಪ್ಪಿ 4:6) ಎರಡನೆಯ ವಿಷಯ, ಪ್ರಾರ್ಥನೆಗಳನ್ನು ದೇವರ ಮಗನಾದ ಯೇಸುವಿನ ಹೆಸರಿನಲ್ಲೇ ಮಾಡಬೇಕು. ಸ್ವತಃ ಯೇಸು, “ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” ಎಂದು ಹೇಳಿದನು. (ಯೋಹಾನ 14:6) ಮೂರನೆಯ ವಿಷಯ, ನಮ್ಮ ಪ್ರಾರ್ಥನೆಗಳು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿರಬೇಕು. ಬೈಬಲ್ ಹೀಗೆ ಹೇಳುತ್ತದೆ: “ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆ.” *1 ಯೋಹಾನ 5:14.

ಆಪ್ತ ಸ್ನೇಹಿತರು ಅವಕಾಶ ಸಿಕ್ಕಾಗೆಲ್ಲಾ ಮಾತಾಡುತ್ತಿರುತ್ತಾರೆ

ಸ್ನೇಹಿತರಲ್ಲಿ ಯಾವಾಗಲೂ ಒಬ್ಬ ವ್ಯಕ್ತಿ ಮಾತ್ರ ಮಾತಾಡುತ್ತಿದ್ದರೆ ಆ ಸ್ನೇಹ ಬಂಧ ಹೆಚ್ಚು ಕಾಲ ಬಾಳಲ್ಲ. ಆದ್ದರಿಂದ ಸ್ನೇಹಿತರಿಬ್ಬರೂ ಪರಸ್ಪರ ಮಾತಾಡುತ್ತಾರೆ. ಹಾಗೆಯೇ ನಾವು ಮಾತ್ರವಲ್ಲ, ಯೆಹೋವನೂ ನಮ್ಮೊಂದಿಗೆ ಮಾತಾಡುವಂತೆ ಬಿಡಬೇಕು. ಆತನು ಮಾತಾಡುವಾಗ ನಾವು ಕಿವಿಗೊಡಬೇಕು. ಇಷ್ಟಕ್ಕೂ ದೇವರು ಹೇಗೆ ಮಾತಾಡುತ್ತಾನೆ?

ಇಂದು ಯೆಹೋವ ದೇವರು ತನ್ನ ಪುಸ್ತಕವಾದ ಬೈಬಲಿನ ಮೂಲಕ ಮಾತಾಡುತ್ತಾನೆ. (2 ತಿಮೊಥೆಯ 3:16, 17) ಅದು ಹೇಗೆ? ಉದಾಹರಣೆಗೆ: ನಿಮ್ಮ ಆಪ್ತ ಸ್ನೇಹಿತನೊಬ್ಬ ನಿಮಗೊಂದು ಪತ್ರ ಬರೆದಿದ್ದಾನೆ ಅಂತ ಊಹಿಸಿ. ಅದನ್ನು ಓದಿದಾಗ ನೀವು ಖುಷಿಯಿಂದ “ನನ್ನ ಸ್ನೇಹಿತ ಈ ಪತ್ರದಲ್ಲಿ ಏನು ಹೇಳಿದ್ದಾನೆ ಗೊತ್ತಾ?” ಅಂತ ಹೇಳುತ್ತೀರಿ. ಇಲ್ಲಿ ವಿಷಯವನ್ನು ಪತ್ರದಲ್ಲಿ ಬರೆಯಲಾಗಿದೆ, ಆದರೂ ಅದನ್ನು ನಿಮ್ಮ ಸ್ನೇಹಿತನೇ ನೇರವಾಗಿ ಹೇಳಿದಂತೆ ನಿಮಗನಿಸುತ್ತದೆ. ಅದೇ ರೀತಿ, ಬೈಬಲನ್ನು ಓದುವ ಮೂಲಕ ದೇವರು ನಿಮ್ಮೊಂದಿಗೆ ಮಾತಾಡುವಂತೆ ನೀವು ಬಿಡುತ್ತೀರಿ. ಆರಂಭದ ಲೇಖನದಲ್ಲಿ ತಿಳಿಸಲಾದ ಜೀನ ಹೇಳುವುದು, “ದೇವರು ನಮ್ಮನ್ನು ತನ್ನ ಸ್ನೇಹಿತರೆಂದು ಭಾವಿಸಬೇಕಾದರೆ ಮೊದಲು ಆತನು ನಮಗಾಗಿ ಬರೆಸಿದ ಪತ್ರವನ್ನು ಅಂದರೆ ಬೈಬಲನ್ನು ಓದಬೇಕು. ನಾನು ಬೈಬಲನ್ನು ಪ್ರತಿದಿನ ಓದುವುದರಿಂದ ದೇವರಿಗೆ ಆಪ್ತಳಾಗಿದ್ದೇನೆ.” ನೀವೂ ಪ್ರತಿದಿನ ಬೈಬಲ್‌ ಓದುತ್ತಿದ್ದೀರಾ? ಓದುವುದಾದರೆ ನೀವೂ ಆತನಿಗೆ ಆಪ್ತರಾಗುತ್ತೀರಿ. (w14-E 12/01)

^ ಪ್ಯಾರ. 5 ಪ್ರಾರ್ಥನೆ ಮಾಡುವ ಮೂಲಕ ದೇವರಿಗೆ ಹೇಗೆ ಆಪ್ತರಾಗಬಹುದು ಎಂಬ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 17ನೇ ಅಧ್ಯಾಯವನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.