ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರ ನಂಬಿಕೆಯನ್ನು ಅನುಕರಿಸಿ | ಹನೋಕ

‘ದೇವರನ್ನು ಮೆಚ್ಚಿಸಿದವನು’

‘ದೇವರನ್ನು ಮೆಚ್ಚಿಸಿದವನು’

ಹನೋಕನು 365 ವರ್ಷ ಬದುಕಿದ್ದನು! ಅಷ್ಟು ವರ್ಷ ಒಬ್ಬ ಮನುಷ್ಯ ಬದುಕುವುದನ್ನು ನಮಗೆ ಊಹಿಸಲೂ ಕಷ್ಟ ಆಗಬಹುದು. ಇವತ್ತಿನ ಕಾಲಕ್ಕೆ ಹೋಲಿಸಿದರೆ ನಾಲ್ಕು ಜನರ ಆಯಸ್ಸಿನಷ್ಟು! ಇಷ್ಟು ವರ್ಷವಾದಾಗಲೂ ಅವನು ಮುದುಕನಾಗಿರಲಿಲ್ಲ. ಅವನು ಬದುಕಿದ್ದು ಸುಮಾರು 5000 ವರ್ಷಗಳ ಹಿಂದೆ. ಆ ಕಾಲದಲ್ಲಿ ಜನರು ತುಂಬ ಹೆಚ್ಚು ವರ್ಷ ಬದುಕುತ್ತಿದ್ದರು. ಹನೋಕನು ಹುಟ್ಟಿದಾಗ ಮೊದಲನೇ ಮನುಷ್ಯನಾದ ಆದಾಮನಿಗೆ ಆರು ನೂರು ವರ್ಷ ವಯಸ್ಸಾಗಿತ್ತು. ಹನೋಕನು ಹುಟ್ಟಿದ ನಂತರ ಅವನು ಇನ್ನೂ ಮುನ್ನೂರು ವರ್ಷ ಬದುಕಿದನು. ಆದಾಮನ ಸಂತತಿಯವರಲ್ಲಿ ಬೇರೆ ಕೆಲವರು ಅದಕ್ಕಿಂತಲೂ ಹೆಚ್ಚು ವರ್ಷ ಬದುಕಿದರು. ಆದ್ದರಿಂದ ಹನೋಕನಿಗೆ 365 ವರ್ಷವಾದಾಗ ಇನ್ನೂ ಬಾಳಿ ಬದುಕಬೇಕಾಗಿದ್ದ ಯುವಕನಂತೆ ಕಾಣಿಸುತ್ತಿದ್ದಿರಬಹುದು. ಆದರೆ ಅವನು ಅಷ್ಟರಲ್ಲೇ ಕೊನೆ ಉಸಿರೆಳೆದನು.

ಇದನ್ನು ಊಹಿಸಿಕೊಳ್ಳಿ: ಹನೋಕನ ಪ್ರಾಣಕ್ಕೆ ಕುತ್ತು ಬಂದಿದೆ. ಅವನು ಜನರ ಕೈಯಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾನೆ. ದೇವರ ಸಂದೇಶವನ್ನು ಜನರಿಗೆ ತಿಳಿಸಿದಾಗ ಅವರು ಪ್ರತಿಕ್ರಿಯಿಸಿದ ರೀತಿಯೇ ಅವನ ತಲೆಯಲ್ಲಿ ಓಡುತ್ತಿದೆ. ಆ ಸಂದೇಶ ಕೇಳಿದ ಕೂಡಲೇ ಜನರು ಮುಖ ಕೋಪದಿಂದ ಕೆಂಪಾದವು. ಅವರು ಅವನ ಮೇಲೆ ಕೆಂಡ ಕಾರಿದರು. ಅವನು ಸಾರಿದ ವಿಷಯ ಅವರಿಗೆ ಸ್ವಲ್ಪವೂ ಹಿಡಿಸಲಿಲ್ಲ. ಅದಕ್ಕೇ, ಅವನನ್ನು ಕಳುಹಿಸಿದ ದೇವರನ್ನು ಸಹ ಅವರು ದ್ವೇಷಿಸಿದರು. ಆ ದೇವರಾದ ಯೆಹೋವನನ್ನು ಅವರಿಂದ ಏನು ಮಾಡಲೂ ಸಾಧ್ಯವಿರಲಿಲ್ಲ, ಆದರೆ ಬಡಪಾಯಿ ಹನೋಕನನ್ನು ಏನು ಬೇಕಾದರೂ ಮಾಡಬಹುದಿತ್ತು. ಆ ಸಂದರ್ಭದಲ್ಲಿ ಹನೋಕನು, ‘ನನ್ನ ಕುಟುಂಬಾನ ಮತ್ತೆ ನೋಡುತ್ತೇನಾ’ ಅಂತ ಯೋಚಿಸುತ್ತಿದ್ದಿರಬೇಕು. ಅವನು ತನ್ನ ಹೆಂಡತಿ, ಹೆಣ್ಣು ಮಕ್ಕಳು, ಮಗ ಮೆತೂಷೆಲಹ ಮತ್ತು ತನ್ನ ಮೊಮ್ಮಗ ಲೆಮೆಕನ ಬಗ್ಗೆ ಏನೆಲ್ಲಾ ಯೋಚಿಸಿರಬಹುದು? (ಆದಿಕಾಂಡ 5:21-23, 25) ಇಷ್ಟಕ್ಕೂ ಜನರು ಅವನನ್ನು ಕೊಂದುಬಿಟ್ಟರಾ?

ಬೈಬಲಿನಲ್ಲಿ ಹನೋಕನ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ನಿಜ. ಬೈಬಲಿನ ಮೂರು ಕಡೆಗಳಲ್ಲಿ ಮಾತ್ರ ಅವನ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಇದೆ. (ಆದಿಕಾಂಡ 5:21-24; ಇಬ್ರಿಯ 11:5; ಯೂದ 14, 15) ಈ ಮಾಹಿತಿಯಿಂದ ನಾವು ನಂಬಿಗಸ್ತ ಹನೋಕನ ಬಗ್ಗೆ ಸಾಕಷ್ಟನ್ನು ತಿಳಿಯಬಹುದು. ಕುಟುಂಬವನ್ನು ಪೋಷಿಸುವ ಜವಾಬ್ದಾರಿ ನಿಮಗಿದೆಯಾ? ಸರಿಯಾದದ್ದನ್ನು ಮಾಡಲು ಅಥವಾ ಬೆಂಬಲಿಸಲು ನಿಮಗೆ ಯಾವಾಗಲಾದರೂ ಕಷ್ಟವಾಗಿದೆಯಾ? ಹಾಗಾದರೆ ಹನೋಕನ ನಂಬಿಕೆಯಿಂದ ನೀವು ಅನೇಕ ವಿಷಯಗಳನ್ನು ಕಲಿಯಬಹುದು.

‘ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು’

ಹನೋಕನ ಸಮಯದಲ್ಲಿ ಮನುಷ್ಯರೆಲ್ಲಾ ಕೆಟ್ಟುಹೋಗಿದ್ದರು. ಅವರು ಮೊದಲ ಮಾನವ ಆದಾಮನ 7⁠ನೇ ಸಂತತಿಯವರಾಗಿದ್ದರು. ಅಂದರೆ, ಆದಾಮ ಮತ್ತು ಹವ್ವ ಶಾರೀರಿಕ ಪರಿಪೂರ್ಣತೆ ಕಳೆದುಕೊಂಡು ಅಷ್ಟೇನೂ ಸಮಯವಾಗಿರಲಿಲ್ಲ. ಆದ್ದರಿಂದಲೇ, ಜನರು ನೂರಾರು ವರುಷ ಬದುಕುತ್ತಿದ್ದರು. ಆದರೆ ಅವರು ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಕೆಟ್ಟ ಪರಿಸ್ಥಿತಿಯಲ್ಲಿದ್ದರು. ಎಲ್ಲಿ ನೋಡಿದರೂ ಹಿಂಸೆ ರಾರಾಜಿಸುತ್ತಿತ್ತು. ಇದು ಆದಾಮನ ಮೊದಲನೇ ಸಂತತಿಯಲ್ಲೇ ಕಂಡುಬಂದಿತ್ತು. ಆದಾಮನ ಮಗ ಕಾಯಿನನು ತನ್ನ ತಮ್ಮನಾದ ಹೇಬೆಲನನ್ನು ಕೊಲ್ಲುವ ಮೂಲಕ ಇದನ್ನು ಶುರುಮಾಡಿದನು. ಕಾಯಿನನ ಸಂತತಿಯಲ್ಲಿ ಬಂದ ಒಬ್ಬನು ತಾನು ಹಿಂಸಾತ್ಮಕವಾಗಿ ನಡಕೊಂಡಿದ್ದರ ಮತ್ತು ಸೇಡು ತೀರಿಸಿಕೊಂಡಿದ್ದರ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದನ್ನು ಬೈಬಲ್‌ ತಿಳಿಸುತ್ತದೆ. ಆದಾಮನ ಎರಡನೇ ಸಂತತಿಯಷ್ಟಕ್ಕೆ ಇನ್ನೊಂದು ಕೆಟ್ಟ ವಿಷಯ ಆರಂಭವಾಯಿತು. ಜನರು ಯೆಹೋವ ದೇವರ ಹೆಸರನ್ನು ಉಪಯೋಗಿಸುತ್ತಿದ್ದರೂ, ಪೂಜ್ಯ ಭಾವನೆಯಿಂದ ಆರಾಧಿಸುತ್ತಿರಲಿಲ್ಲ. ಅವರು ದೇವರ ಪವಿತ್ರ ಹೆಸರಿಗೆ ಮಸಿ ಬಳಿಯುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು.—ಆದಿಕಾಂಡ 4:8, 23-26.

ಹನೋಕನ ದಿನಗಳಲ್ಲಿ ಧರ್ಮ ಭ್ರಷ್ಟತೆ ಸಾಮಾನ್ಯವಾಗಿತ್ತು. ಹನೋಕನು ದೊಡ್ಡವನಾಗುತ್ತಿದ್ದಂತೆ ಅವನೊಂದು ಆಯ್ಕೆ ಮಾಡಬೇಕಿತ್ತು. ಎಲ್ಲಾ ಜನರಂತೆಯೇ ಇರುವುದಾ? ಅಥವಾ ಸ್ವರ್ಗ ಮತ್ತು ಭೂಮಿಯನ್ನು ಸೃಷ್ಟಿಸಿದ ಸತ್ಯ ದೇವರಾದ ಯೆಹೋವನನ್ನು ಹುಡುಕುವುದಾ? ಯೆಹೋವನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಆತನನ್ನು ಆರಾಧಿಸಿದ್ದ ಕಾರಣಕ್ಕೆ ಪ್ರಾಣ ಕಳೆದುಕೊಂಡು ಹುತಾತ್ಮನಾದ ಹೇಬೆಲನ ಬಗ್ಗೆ ತಿಳಿದಾಗ, ಅದು ಹನೋಕನನ್ನು ತುಂಬ ಪ್ರಭಾವಿಸಿದ್ದಿರಬೇಕು. ತಾನೂ ಅದೇ ರೀತಿ ಆರಾಧಿಸುವ ಆಯ್ಕೆ ಮಾಡಬೇಕೆಂದು ನಿರ್ಧರಿಸಿದನು. ‘ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ಬದುಕಿದನು’ ಎಂದು ಬೈಬಲಿನ ಆದಿಕಾಂಡ 5:22⁠ರಲ್ಲಿ ಹೇಳಲಾಗಿದೆ. ದೇವರ ಬಗ್ಗೆ ಭಯ-ಭಕ್ತಿಯೇ ಇಲ್ಲದ ಆ ಕಾಲದಲ್ಲಿ ಹನೋಕನು ಮಾತ್ರ ದೇವಭಕ್ತ ವ್ಯಕ್ತಿಯಾಗಿದ್ದನು ಎಂದು ಈ ಮಾತುಗಳು ತೋರಿಸಿಕೊಡುತ್ತವೆ. ಬೈಬಲಿನಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಆ ರೀತಿ ಹೇಳಲಾಗಿರುವುದು ಇದೇ ಮೊದಲ ಬಾರಿ.

ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ದೇವರ ಅನ್ಯೋನ್ಯತೆಯಲ್ಲಿ ಬದುಕಿದನೆಂದು ಅದೇ ವಚನದಲ್ಲಿ ತಿಳಿಸಲಾಗಿದೆ. ಇದರರ್ಥ ಹನೋಕನಿಗೆ 65 ವರ್ಷವಾದಾಗ ಮದುವೆಯಾಗಿ ಮಕ್ಕಳಿದ್ದರು. ಬೈಬಲಿನಲ್ಲಿ ಅವನ ಹೆಂಡತಿಯ ಹೆಸರು ಕೊಡಲಾಗಿಲ್ಲ, ಅವನಿಗೆ ಎಷ್ಟು ಮಕ್ಕಳಿದ್ದರು ಅಂತನೂ ಹೇಳಿಲ್ಲ. ಒಬ್ಬ ತಂದೆ ಮಕ್ಕಳನ್ನು ಬೆಳೆಸುತ್ತಾ ಕುಟುಂಬವನ್ನು ಪೋಷಿಸುತ್ತಾ ದೇವರೊಂದಿಗೆ ಅನ್ಯೋನ್ಯವಾಗಿ ನಡೆಯಬೇಕೆಂದರೆ ಅವನು ದೇವರಿಗೆ ಮೆಚ್ಚಿಗೆಯಾಗುವ ರೀತಿಯಲ್ಲೇ ಕುಟುಂಬವನ್ನು ನೋಡಿಕೊಳ್ಳಬೇಕು ಎಂದು ಹನೋಕನಿಗೆ ಗೊತ್ತಿತ್ತು. ಜೊತೆಗೆ, ಹೆಂಡತಿಗೆ ನಂಬಿಗಸ್ತನಾಗಿರಬೇಕು ಎಂದು ಯೆಹೋವನು ಬಯಸುತ್ತಾನೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದನು. (ಆದಿಕಾಂಡ 2:24) ಆದ್ದರಿಂದ, ತನ್ನ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಲು ಖಂಡಿತವಾಗಿಯೂ ತನ್ನಿಂದ ಆದದ್ದೆಲ್ಲಾ ಮಾಡಿದ್ದನು. ಇದಕ್ಕೆ ಯಾವ ಪ್ರತಿಫಲ ಸಿಕ್ಕಿತು?

ಈ ವಿಷಯದ ಬಗ್ಗೆ ಬೈಬಲ್‌ ಸ್ವಲ್ಪವೇ ಮಾಹಿತಿ ಕೊಡುತ್ತದೆ. ಹನೋಕನ ಮಗನಾದ ಮೆತೂಷೆಲಹನ ನಂಬಿಕೆಯ ಬಗ್ಗೆ ಅದು ಏನೂ ಹೇಳುವುದಿಲ್ಲ. ಇವನು ಬೈಬಲ್‌ ದಾಖಲೆಯಲ್ಲೇ ಅತಿ ಹೆಚ್ಚು ವರ್ಷ ಬದುಕಿದವನಾಗಿದ್ದು, ಜಲಪ್ರಳಯ ಬಂದ ವರ್ಷದಲ್ಲಿ ತೀರಿಕೊಂಡನು. ಮೆತೂಷೆಲಹನಿಗೆ ಲೆಮೆಕನೆಂಬ ಒಬ್ಬ ಮಗನಿದ್ದನು. ಲೆಮೆಕ ಹುಟ್ಟುವಾಗ ಹನೋಕನಿನ್ನೂ ಬದುಕಿದ್ದನು. ನಂತರ, ಇನ್ನೂ ನೂರು ವರುಷ ಬದುಕಿದನು. ಲೆಮೆಕನು ದೊಡ್ಡವನಾದ ಮೇಲೆ ತುಂಬ ನಂಬಿಕೆ ತೋರಿಸಿದನು. ತನ್ನ ಮಗನಾದ ನೋಹನ ಬಗ್ಗೆ ಪ್ರವಾದನೆಯನ್ನು ಹೇಳುವಂತೆ ಲೆಮೆಕನನ್ನು ದೇವರು ಪ್ರೇರೇಪಿಸಿದನು. ಆ ಪ್ರವಾದನೆ ಜಲಪ್ರಳಯದ ನಂತರ ನೆರವೇರಿತು. ಮುತ್ತಾತನಾದ ಹನೋಕನಂತೆ ನೋಹನು ಸಹ ದೇವರೊಂದಿಗೆ ಅನ್ಯೋನ್ಯತೆಯಲ್ಲಿ ನಡೆದನೆಂದು ಬೈಬಲ್‌ ತಿಳಿಸುತ್ತದೆ. ನೋಹನು ಹನೋಕನನ್ನು ನೋಡಿರಲಿಲ್ಲ. ಆದರೂ ಹನೋಕನು ತುಂಬ ಮುಖ್ಯವಾದ ಆಸ್ತಿಯನ್ನು ಬಿಟ್ಟುಹೋಗಿದ್ದನು. ಈ ಆಧ್ಯಾತ್ಮಿಕ ಆಸ್ತಿಯ ಬಗ್ಗೆ ನೋಹನು ತನ್ನ ತಂದೆಯಾದ ಲೆಮೆಕನಿಂದಲೋ, ತಾತನಾದ ಮೆತೂಷೆಲಹನಿಂದಲೋ, ಹನೋಕನ ತಂದೆಯಾದ ಯೆರೆದನಿಂದಲೋ ತಿಳಿದುಕೊಂಡಿರಬೇಕು. ಕಾರಣ, ನೋಹನಿಗೆ 366 ವರ್ಷ ಆಗುವವರೆಗೂ ಯೆರೆದನು ಬದುಕಿದ್ದನು.—ಆದಿಕಾಂಡ 5:25-29; 6:9; 9:1.

ಹನೋಕನಿಗೂ ಆದಾಮನಿಗೂ ಎಷ್ಟೊಂದು ವ್ಯತ್ಯಾಸ! ಆದಾಮನು ಪರಿಪೂರ್ಣನಾಗಿದ್ದರೂ ಯೆಹೋವನ ವಿರುದ್ಧ ಪಾಪ ಮಾಡಿ, ದಂಗೆಕೋರತನ ಮತ್ತು ಕಷ್ಟಗಳೆಂಬ ಆಸ್ತಿಯನ್ನು ತನ್ನ ಸಂತತಿಗೆ ದಾಟಿಸಿದನು. ಹನೋಕನು ಅಪರಿಪೂರ್ಣನಾಗಿದ್ದರೂ ದೇವರ ಜೊತೆ ನಡೆದು ತನ್ನ ಸಂತತಿಯವರಿಗೆ ನಂಬಿಕೆ ಎಂಬ ದೊಡ್ಡ ಆಸ್ತಿಯನ್ನು ಬಿಟ್ಟು ಹೋದನು. ಹನೋಕನು 308 ವರ್ಷದವನಾಗಿದ್ದಾಗ ಆದಾಮನು ಸತ್ತನು. ತೀರ ಸ್ವಾರ್ಥಿಯಾಗಿದ್ದ ಆ ಪೂರ್ವಜನಿಗಾಗಿ ಅವನ ಕುಟುಂಬದವರು ಅತ್ತಿರಬಹುದಾ? ನಮಗದರ ಬಗ್ಗೆ ಗೊತ್ತಿಲ್ಲ. ಅದೇನೇ ಆದರೂ, ಹನೋಕನು ಮಾತ್ರ ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.’—ಆದಿಕಾಂಡ 5:24.

ಕುಟುಂಬನ ಪೋಷಿಸೋ ಜವಾಬ್ದಾರಿ ನಿಮಗಿರೋದಾದ್ರೆ ಹನೋಕನ ನಂಬಿಕೆಯಿಂದ ನೀವು ಏನನ್ನು ಕಲಿಯಬಹುದೆಂದು ಯೋಚಿಸಿ. ಕುಟುಂಬದ ಶಾರೀರಿಕ ಅಗತ್ಯಗಳನ್ನು ಪೂರೈಸುವುದು ಪ್ರಾಮುಖ್ಯವಾದರೂ, ಅದು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವುದಕ್ಕಿಂತ ಹೆಚ್ಚು ಪ್ರಾಮುಖ್ಯವಲ್ಲ. (1 ತಿಮೊಥೆಯ 5:8) ಆ ಅಗತ್ಯವನ್ನು ಪೂರೈಸಬೇಕೆಂದರೆ ನಿಮ್ಮ ಮಾತು ಮಾತ್ರವಲ್ಲ ನಿಮ್ಮ ಕ್ರಿಯೆ ಕೂಡ ಮುಖ್ಯ. ದೇವರ ಮಟ್ಟಗಳ ಪ್ರಕಾರ ಜೀವಿಸುತ್ತಾ ಹನೋಕನಂತೆ ದೇವರೊಂದಿಗೆ ಅನ್ಯೋನ್ಯವಾಗಿ ನಡೆಯುವುದಾದರೆ ನೀವೂ ನಿಮ್ಮ ಕುಟುಂಬಕ್ಕೆ ಬೆಲೆಬಾಳುವ ಆಸ್ತಿಯನ್ನು ಕೊಡಬಲ್ಲಿರಿ. ಅದೇ ನಿಮ್ಮ ಉತ್ತಮ ಮಾದರಿ.

‘ಹನೋಕನು ಇವರ ಬಗ್ಗೆ ಪ್ರವಾದಿಸಿದನು’

ಅಪನಂಬಿಗಸ್ತ ಲೋಕದಲ್ಲಿ ತಾನೊಬ್ಬನೇ ನಂಬಿಗಸ್ತನಾಗಿ ಇರಬೇಕೆಂದರೆ ಹನೋಕನಿಗೆ ತುಂಬ ಒಂಟಿ ಭಾವನೆ ಕಾಡಿರಬೇಕು. ಇಷ್ಟೆಲ್ಲಾ ಮಾಡಿದ ಅವನನ್ನು ಯೆಹೋವ ದೇವರು ಗಮನಿಸಿದನಾ? ಖಂಡಿತ ಗಮನಿಸಿದನು. ಅದನ್ನಾತನು ತನ್ನ ಈ ನಂಬಿಗಸ್ತ ಸೇವಕನ ಜೊತೆ, ಹನೋಕನ ಜೊತೆ ಮಾತಾಡುವ ಮೂಲಕ ತೋರಿಸಿಕೊಟ್ಟನು. ಆ ಸಮಯದಲ್ಲಿದ್ದ ಜನರನ್ನು ಎಚ್ಚರಿಸುವಂತೆ ದೇವರು ಹನೋಕನಿಗೆ ಒಂದು ಸಂದೇಶವನ್ನು ತಿಳಿಸಿದನು. ಹೀಗೆ ಆತನು ಹನೋಕನನ್ನು ಪ್ರವಾದಿಯನ್ನಾಗಿ ಮಾಡಿದನು. ಬೈಬಲಿನಲ್ಲಿ ದಾಖಲಾದ ಪ್ರವಾದಿಗಳ ಪ್ರವಾದನೆಗಳಲ್ಲಿ ಇದೇ ಮೊದಲನೆಯದ್ದು. ಹನೋಕನು ಹೇಳಿದ ಪ್ರವಾದನೆಗಳ ಬಗ್ಗೆ ಅನೇಕ ಶತಮಾನಗಳ ನಂತರ ದೇವಪ್ರೇರಣೆಯಿಂದ ಯೇಸುವಿನ ಮಲತಮ್ಮನಾದ ಯೂದನು ಬರೆದನು. * ಹಾಗಾಗಿ ನಮಗೆ ಇಂದು ಆ ಪ್ರವಾದನೆಯ ಬಗ್ಗೆ ತಿಳಿಯಲು ಸಾಧ್ಯವಾಗಿದೆ.

ಹನೋಕನು ಏನೆಂದು ಪ್ರವಾದಿಸಿದನು? “ಇಗೋ, ಯೆಹೋವನು ಅಸಂಖ್ಯಾತರಾದ ತನ್ನ ಪವಿತ್ರ ದೂತರೊಂದಿಗೆ ಎಲ್ಲರ ವಿರುದ್ಧ ನ್ಯಾಯತೀರ್ಪನ್ನು ವಿಧಿಸುವುದಕ್ಕೂ ಭಕ್ತಿಹೀನ ಜನರೆಲ್ಲರೂ ಭಕ್ತಿಹೀನವಾದ ರೀತಿಯಲ್ಲಿ ನಡಿಸಿದ ಭಕ್ತಿಹೀನ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಹೀನ ಪಾಪಿಗಳು ಆತನಿಗೆ ವಿರುದ್ಧವಾಗಿ ನುಡಿದ ಆಘಾತಕರ ಸಂಗತಿಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೂ ಬಂದನು” ಎಂದು ಅವನು ಪ್ರವಾದಿಸಿದನು. (ಯೂದ 14, 15) ಇಲ್ಲಿ ಹನೋಕನು, ಪ್ರವಾದನೆಯಲ್ಲಿ ತಿಳಿಸಲಾಗಿರುವ ವಿಷಯಗಳು ನಡೆದೇ ಹೋಗಿವೆಯೋ ಎಂಬಂತೆ ಭೂತ ಕಾಲದಲ್ಲಿ ಹೇಳಿರುವುದನ್ನು ನೀವು ಗಮನಿಸಬಹುದು. ತದನಂತರದ ಅನೇಕ ಪ್ರವಾದನೆಗಳನ್ನೂ ಅದೇ ರೀತಿಯಲ್ಲಿ ಹೇಳಲಾಗಿದೆ. ಆ ವಿಷಯಗಳು ಸಂಭವಿಸುವುದು ಎಷ್ಟು ಖಂಡಿತವಾಗಿತ್ತೆಂದರೆ ಪ್ರವಾದಿ ಅವುಗಳನ್ನು ಈಗಾಗಲೇ ನಡೆದು ಹೋಗಿವೆಯೋ ಎಂಬಂತೆ ಹೇಳಿದನು.—ಯೆಶಾಯ 46:10.

ದ್ವೇಷ ತುಂಬಿದ ಲೋಕಕ್ಕೆ ಹನೋಕನು ಧೈರ್ಯದಿಂದ ದೇವರ ಸಂದೇಶವನ್ನು ಪ್ರಕಟಿಸಿದನು

ಈ ಸಂದೇಶವನ್ನು ಪ್ರಕಟಿಸಬೇಕೆಂದರೆ ಹನೋಕನಿಗೆ ಹೇಗನಿಸಿರಬೇಕು? ಅವನು ಅಲ್ಲಿದ್ದ ಎಲ್ಲಾ ಜನರಿಗೂ ಅದನ್ನು ಹೇಳಬೇಕಿತ್ತು. ಅಷ್ಟೇ ಅಲ್ಲ, ಆ ಎಚ್ಚರಿಕೆ ಎಷ್ಟು ತೀಕ್ಷ್ಣವಾಗಿತ್ತೆಂದು ಗಮನಿಸಿ. ಜನರನ್ನು, ಅವರ ನಡತೆಯನ್ನು, ರೀತಿ-ನೀತಿಗಳನ್ನು ಖಂಡಿಸುತ್ತಾ ನಾಲ್ಕು ಬಾರಿ “ಭಕ್ತಿಹೀನ” ಎಂಬ ಪದವನ್ನು ಉಪಯೋಗಿಸಲಾಗಿತ್ತು. ಹೀಗೆ ಏದೆನಿನಿಂದ ಹೊರಹಾಕಿದಾಗಿನಿಂದ ಅವರು ಕಟ್ಟಿಕೊಂಡಿರುವ ಲೋಕ ಸಂಪೂರ್ಣವಾಗಿ ಭ್ರಷ್ಟವಾದದ್ದಾಗಿದೆ; ಯೆಹೋವನು ತನ್ನ “ಪವಿತ್ರ ದೂತರೊಂದಿಗೆ” ಬರುವಾಗ ಆ ಲೋಕ ದುರಂತಮಯ ರೀತಿಯಲ್ಲಿ ನಾಶವಾಗಲಿದೆ ಎಂಬ ಎಚ್ಚರಿಕೆಯು ಈ ಪ್ರವಾದನೆಯ ಮೂಲಕ ಜನರಿಗೆ ಸಿಕ್ಕಿತು. ಹನೋಕನೊಬ್ಬನೇ ಈ ಸಂದೇಶವನ್ನು ಕಿಂಚಿತ್ತೂ ಭಯಪಡದೆ ಧೈರ್ಯದಿಂದ ಜನರಿಗೆ ತಿಳಿಸಿದನು. ಆಗ ಬಾಲಕ ಲೆಮೆಕನು ತನ್ನ ತಾತನನ್ನು ಆಶ್ಚರ್ಯದಿಂದ ನೋಡುತ್ತಿದ್ದಿರಬಹುದು.

ದೇವರು ಈ ಲೋಕವನ್ನು ನೋಡುವ ರೀತಿಯಲ್ಲೇ ನಾವೂ ನೋಡುತ್ತಿದ್ದೇವಾ ಎಂದು ನಮ್ಮನ್ನೇ ಕೇಳಿಕೊಳ್ಳುವಂತೆ ಹನೋಕನ ನಂಬಿಕೆ ನಮ್ಮನ್ನು ಪ್ರೇರೇಪಿಸುತ್ತದೆ. ಹನೋಕನು ಪ್ರಕಟಿಸಿದ ನ್ಯಾಯತೀರ್ಪು ಇಂದು ಸಹ ತುಂಬ ಪ್ರಾಮುಖ್ಯ. ಈ ತೀರ್ಪು ಹನೋಕನ ಸಮಯದಲ್ಲಿದ್ದ ಲೋಕಕ್ಕೆ ಅನ್ವಯಸಿದಂತೆಯೇ ಈಗಿನ ಲೋಕಕ್ಕೂ ಅನ್ವಯಿಸುತ್ತದೆ. ಹನೋಕನ ಎಚ್ಚರಿಕೆಗೆ ಸರಿಯಾಗಿ, ನೋಹನ ದಿನಗಳಲ್ಲಿ ದೇವರು ಭಕ್ತಿಹೀನ ಲೋಕವನ್ನು ನಾಶಮಾಡಲು ದೊಡ್ಡ ಜಲಪ್ರಳಯವನ್ನು ತಂದನು. ಅದು ಮುಂದೆ ಬರಲಿರುವ ನಾಶನಕ್ಕೆ ಕೈತೋರಿಸುತ್ತಿತ್ತು. (ಮತ್ತಾಯ 24:38, 39; 2 ಪೇತ್ರ 2:4-6) ಇಂದು ಸಹ, ಈಗಿನ ಭಕ್ತಿಹೀನ ಲೋಕಕ್ಕೆ ನೀತಿಯ ತೀರ್ಪನ್ನು ತರಲು ದೇವರು ತನ್ನ ಪವಿತ್ರ ದೂತರೊಂದಿಗೆ ಸಿದ್ಧನಾಗಿ ನಿಂತಿದ್ದಾನೆ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ಹನೋಕನು ಪ್ರಕಟಿಸಿದ ಎಚ್ಚರಿಕೆಯನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು ಮತ್ತು ಇದನ್ನು ಇತರರಿಗೂ ಹೇಳಬೇಕು. ನಮ್ಮ ಕುಟುಂಬದವರು, ಸ್ನೇಹಿತರು ನಮಗೆ ವಿರುದ್ಧವಾದ ನಿರ್ಣಯ ಮಾಡಬಹುದು. ಹಾಗಾಗಿ, ಕೆಲವೊಮ್ಮೆ ನಮಗೂ ಒಂಟಿ ಭಾವನೆ ಕಾಡಬಹುದು. ಆದರೆ ನೆನಪಿಡಿ, ಯೆಹೋವನು ಹನೋಕನ ಕೈಬಿಡಲಿಲ್ಲ, ತನ್ನ ಈಗಿನ ನಂಬಿಗಸ್ತ ಸೇವಕರ ಕೈಯನ್ನೂ ಬಿಡುವುದಿಲ್ಲ.

“ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು”

ಹನೋಕನು ಹೇಗೆ ಮೃತಪಟ್ಟನು? ಅವನ ಜೀವನಕ್ಕಿಂತ ಮರಣ ಹೆಚ್ಚು ನಿಗೂಢ ಮತ್ತು ಕುತೂಹಲಕರ. ಬೈಬಲಿನ ಆದಿಕಾಂಡ ಪುಸ್ತಕದಲ್ಲಿ, “ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡದ್ದರಿಂದ ಕಾಣದೆಹೋದನು” ಎನ್ನಲಾಗಿದೆ. (ಆದಿಕಾಂಡ 5:24) ದೇವರು ಹನೋಕನನ್ನು ಕರೆದುಕೊಂಡದ್ದಾದರೂ ಹೇಗೆ? ಸಮಯಾನಂತರ, ಅಪೊಸ್ತಲ ಪೌಲನು ಹೀಗೆ ವಿವರಿಸಿದನು: “ನಂಬಿಕೆಯಿಂದಲೇ ಹನೋಕನು ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು; ದೇವರು ಅವನನ್ನು ಸ್ಥಳಾಂತರಿಸಿದ್ದರಿಂದ ಅವನು ಎಲ್ಲಿಯೂ ಸಿಗಲಿಲ್ಲ. ಏಕೆಂದರೆ ಅವನು ಸ್ಥಳಾಂತರಿಸಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸಿದ್ದಾನೆಂಬ ಸಾಕ್ಷಿಯನ್ನು ಹೊಂದಿದ್ದನು.” (ಇಬ್ರಿಯ 11:5) “ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟನು” ಎಂಬ ಪೌಲನ ಮಾತಿನ ಅರ್ಥವೇನು? ದೇವರು ಹನೋಕನನ್ನು ಸ್ವರ್ಗಕ್ಕೆ ಕರೆದುಕೊಂಡನು ಎಂದು ಕೆಲವು ಬೈಬಲ್‌ ಭಾಷಾಂತರಗಳು ತಿಳಿಸುತ್ತವೆ. ಹಾಗಾಗಲು ಸಾಧ್ಯವಿಲ್ಲ. ಯಾಕೆಂದರೆ, ಮೊಟ್ಟಮೊದಲ ಬಾರಿಗೆ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದವನು ಯೇಸುವೇ ಆಗಿದ್ದಾನೆ ಎಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ.—ಯೋಹಾನ 3:13.

ಹಾಗಾದರೆ, ಹನೋಕನು ‘ಮರಣವನ್ನು ನೋಡದಂತೆ ಸ್ಥಳಾಂತರಿಸಲ್ಪಟ್ಟದ್ದು’ ಹೇಗೆ? ಯೆಹೋವನು ನಿಧಾನವಾಗಿ ಹನೋಕನಿಗೆ ಸಾವಿನ ನೋವು ತಿಳಿಯದಂತೆ ಸಾವನ್ನಪ್ಪುವಂತೆ ಮಾಡಿರಬೇಕು. ಆದರೆ ಅದಕ್ಕೂ ಮುಂಚೆ ಅವನು “ದೇವರನ್ನು ಮೆಚ್ಚಿಸಿದ್ದಾನೆಂಬ ಸಾಕ್ಷಿಯನ್ನು ಹೊಂದಿದ್ದನು.” ಹೇಗೆ? ಅವನು ಸಾಯುವುದಕ್ಕೂ ಸ್ವಲ್ಪ ಮುಂಚೆ, ದೇವರು ಅವನಿಗೆ ದರ್ಶನವನ್ನು ತೋರಿಸಿರಬಹುದು. ಸುಂದರ ತೋಟದಂತಿರುವ ಭೂಮಿಯನ್ನು ನೋಡಿರಬಹುದು. ದೇವರು ತನ್ನನ್ನು ಮೆಚ್ಚಿದ್ದಾನೆಂಬ ಗುರುತಾಗಿರುವ ಅದನ್ನು ನೋಡುತ್ತಲೇ ಅವನು ಸಾವನ್ನಪ್ಪಿರಬಹುದು. ಅಪೊಸ್ತಲ ಪೌಲನು ಹನೋಕ ಮತ್ತಿತರ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಹೀಗೆ ಬರೆದನು: ಅವರು “ನಂಬಿಕೆಯುಳ್ಳವರಾಗಿ ಮೃತರಾದರು.” (ಇಬ್ರಿಯ 11:13) ನಂತರ, ಹನೋಕನ ವೈರಿಗಳು ಅವನ ಶವಕ್ಕಾಗಿ ಹುಡುಕಿರಬೇಕು, ಆದರೆ ಅದು ಅವರಿಗೆ “ಎಲ್ಲಿಯೂ ಸಿಗಲಿಲ್ಲ.” ಜನರು ಅದಕ್ಕೆ ಅಗೌರವ ತೋರಿಸದಂತೆ ಅಥವಾ ಅದರ ಮೂಲಕ ಸುಳ್ಳಾರಾಧನೆಯನ್ನು ಆರಂಭಿಸದಂತೆ ತಡೆಯುವ ಉದ್ದೇಶದಿಂದ ಯೆಹೋವನೇ ಅದನ್ನು ಸಮಾಧಿ ಮಾಡಿರಬಹುದು. *

ಮೇಲೆ ಕೊಡಲಾದ ವಿವರಣೆಯನ್ನು ಮನಸ್ಸಿನಲ್ಲಿಟ್ಟು, ಈಗ ನಾವು ಹನೋಕ ಹೇಗೆ ಕೊನೆಯುಸಿರೆಳೆದಿರಬಹುದು ಎಂದು ನೋಡೋಣ. ಅದನ್ನು ನಿಮ್ಮ ಮನಃಪಟಲದಲ್ಲಿ ಚಿತ್ರಿಸಿಕೊಳ್ಳಲು ಪ್ರಯತ್ನಿಸಿ. ಆ ಕೊನೆಯ ಗಳಿಗೆಯಲ್ಲಿ ಹೀಗೆ ನಡೆದಿರಬಹುದು. ಹನೋಕನು ಓಡುತ್ತಾ ಓಡುತ್ತಾ ತುಂಬ ದಣಿದಿದ್ದನು. ತೀರ್ಪಿನ ಸಂದೇಶವನ್ನು ಕೇಳಿ ಕೋಪಗೊಂಡ ವಿರೋಧಿಗಳು ಅವನನ್ನು ಬೆನ್ನಟ್ಟುತ್ತಿದ್ದರು. ಹನೋಕನಿಗೆ ಬಚ್ಚಿಟ್ಟುಕೊಳ್ಳಲು ಒಂದು ಸ್ಥಳ ಸಿಗುತ್ತದೆ. ಅಲ್ಲಿ ಹೋಗಿ ಸ್ವಲ್ಪ ಸುಧಾರಿಸಿಕೊಳ್ಳುತ್ತಾನೆ. ಆದರೆ ಹೆಚ್ಚು ಸಮಯ ಜನರ ಕಣ್ಣು ತಪ್ಪಿಸಿ ಇರಲು ಸಾಧ್ಯವಿಲ್ಲ ಎಂದು ಅವನಿಗೆ ಗೊತ್ತಿತ್ತು. ಕ್ರೂರ ಸಾವು ಅವನನ್ನು ಯಾವಾಗ ನುಂಗಲಿ ಎಂದು ಹೊಂಚಿಕೊಂಡಿತ್ತು. ಹೀಗೆ ಏದುಸಿರು ಬಿಡುತ್ತಿದ್ದಾಗ ಅವನು ದೇವರಿಗೆ ಪ್ರಾರ್ಥಿಸಿದನು. ಆಗ ಮನಸ್ಸು ನಿರಾಳವಾಗಿ ಮನಶ್ಶಾಂತಿ ಸಿಕ್ಕಿತು. ತಾನು ಇನ್ನೆಲ್ಲೋ ಇದ್ದೇನೆ ಎಂಬಂತೆ ತೋರುವ ದರ್ಶನವು ಅವನಿಗೆ ಕಾಣಿಸಿತು. ಇದು ಪ್ರಸ್ತುತವನ್ನೇ ಮರೆಯುವಂತೆ ಮಾಡಿತು.

ಹಿಂಸಾತ್ಮಕ ಮರಣವನ್ನು ಅನುಭವಿಸುವ ಪರಿಸ್ಥಿತಿ ಎದುರಾದಾಗ ಯೆಹೋವನು ಅವನನ್ನು ಕರೆದುಕೊಂಡನು

ಅವನ ಕಣ್ಣೆದುರಿಗೆ ದೃಶ್ಯಗಳು ಮೂಡಿದವು. ಅವನಿದ್ದ ಲೋಕಕ್ಕೂ ಈ ಲೋಕಕ್ಕೂ ಅಜಗಜಾಂತರವಿತ್ತು. ಅದೆಷ್ಟು ಸುಂದರವಾಗಿತ್ತೆಂದರೆ ಅವನಿಗದು ಏದೆನ್‌ ತೋಟದಂತೆ ಅನಿಸಿತು. ಆದರೆ ಇಲ್ಲಿ ಮನುಷ್ಯರು ಒಳಬರದಂತೆ ತಡೆಯಲು ಕೆರೂಬಿಯರು ಕಾವಲಿರಲಿಲ್ಲ. ತುಂಬ ಜನರು ಅಲ್ಲಿದ್ದರು. ಎಲ್ಲರಿಗೂ ಒಳ್ಳೇ ಆರೋಗ್ಯ, ಯೌವನದ ಚೈತನ್ಯವಿತ್ತು. ಅಲ್ಲಿ ಶಾಂತಿ ನೆಲೆಸಿತ್ತು. ಹನೋಕನು ನೋಡಿದ್ದ ದ್ವೇಷ ಮತ್ತು ಧಾರ್ಮಿಕ ಹಿಂಸೆಯ ಸುಳಿವೇ ಇರಲಿಲ್ಲ. ಇದರಿಂದ ಹನೋಕನಿಗೆ ಯೆಹೋವನು ತನ್ನನ್ನು ಪ್ರೀತಿಸುತ್ತಾನೆ, ಮೆಚ್ಚಿದ್ದಾನೆ ಎಂಬ ಆಶ್ವಾಸನೆ ಸಿಕ್ಕಿತು. ಇದು ನಾನಿರಬೇಕಾದ ಸ್ಥಳ, ನಾನಲ್ಲೇ ವಾಸವಾಗಿರುತ್ತೇನೆ ಎಂದು ಅವನಿಗನಿಸಿತು. ಹೀಗೆ ಶಾಂತಿಯ ಸಾಗರದಲ್ಲಿ ತೇಲುತ್ತಾ ಆನಂದಿಸುತ್ತಾ ಕಣ್ಣು ಮುಚ್ಚಿದ ಹನೋಕನು ಮತ್ತೆ ಕಣ್ಣು ತೆರೆಯಲೇ ಇಲ್ಲ.

ಹಾಗೆ ಶಾಶ್ವತ ನಿದ್ದೆಗೆ ಜಾರಿದ ಹನೋಕನು ಇಂದಿಗೂ ಹಾಗೇ ಇದ್ದಾನೆ. ಯೆಹೋವ ದೇವರ ಅಪರಿಮಿತವಾದ ಜ್ಞಾಪಕದಲ್ಲಿ ಸುರಕ್ಷಿತವಾಗಿದ್ದಾನೆ. ಸಮಯಾನಂತರ, ಯೇಸು ಮಾತು ಕೊಟ್ಟಂತೆ ದೇವರ ಸ್ಮರಣೆಯಲ್ಲಿರುವವರು ಯೇಸುವಿನ ಸ್ವರವನ್ನು ಕೇಳಿ ಸಮಾಧಿಗಳಿಂದ ಎದ್ದು ಬರುವ ದಿನ ಬೇಗನೆ ಬರಲಿದೆ. ಅವರು ಕಣ್ತೆರೆದಾಗ, ಸುಂದರ ತೋಟದಂತಿರುವ ಶಾಂತಿಯ ಸಾಗರದಂತಿರುವ ಹೊಸ ಲೋಕವನ್ನು ಕಾಣುವರು.—ಯೋಹಾನ 5:28, 29.

ನಿಮಗೂ ಅಲ್ಲಿರಬೇಕು ಅಂತ ಅನಿಸುತ್ತಿದೆಯಾ? ಅಲ್ಲಿ ಹನೋಕ ಸಿಕ್ಕಾಗ ಹೇಗಿರುತ್ತೆ ಅಂತ ಸ್ವಲ್ಪ ಯೋಚಿಸಿ! ಆಗ ನಾವು ಅವನ ಬಗ್ಗೆ ಎಷ್ಟೆಲ್ಲಾ ಆಸಕ್ತಿಕರ ವಿಷಯವನ್ನು ತಿಳಿದುಕೊಳ್ಳಬಹುದಲ್ಲಾ! ಅವನ ಜೀವನದ ಕೊನೆಯ ಕ್ಷಣಗಳ ಬಗ್ಗೆ ನಮಗಿರುವ ಕಲ್ಪನೆ ಸರಿಯಾಗಿದೆಯಾ ಇಲ್ಲವಾ ಎಂದು ಅವನು ಆಗ ಹೇಳಬಹುದು. ನಾವು ಆತನಿಂದ ಈಗಲೇ ಕಲಿಯಬೇಕಿರುವ ವಿಷಯವೊಂದಿದೆ. ಹನೋಕನ ಬಗ್ಗೆ ಹೇಳಿದ ನಂತರ ಪೌಲನು ಹೀಗಂದನು: ‘ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ.’ (ಇಬ್ರಿಯ 11:6) ಹಾಗಿರುವಾಗ ಹನೋಕನ ಬಲವಾದ ನಂಬಿಕೆಯನ್ನು ನಾವೆಲ್ಲರೂ ಅನುಕರಿಸಲೇ ಬೇಕಲ್ಲವೇ? ▪

^ ಪ್ಯಾರ. 14 ಯೂದನು ಹನೋಕನ ಪುಸ್ತಕ ಎಂದು ಹೆಸರು ಪಡೆದಿರುವ ಕಟ್ಟುಕಥೆಯ ಪುಸ್ತಕವನ್ನು ಆಧರಿಸಿ ಬರೆದನೆಂದು ಕೆಲವು ಬೈಬಲ್‌ ತತ್ವಜ್ಞಾನಿಗಳು ಹೇಳುತ್ತಾರೆ. ಊಹಾಪೋಹಗಳಿಂದ ಕೂಡಿದ, ಮೂಲ ಸರಿಯಾಗಿ ಗೊತ್ತಿಲ್ಲದ ಈ ಪುಸ್ತಕಕ್ಕೆ ಹನೋಕನ ಹೆಸರನ್ನು ತಪ್ಪಾಗಿ ಕೊಡಲಾಗಿದೆ. ಆದರೆ, ಇದರಲ್ಲಿ ಹನೋಕನ ಪ್ರವಾದನೆಯ ಬಗ್ಗೆ ಮಾತ್ರ ಸರಿಯಾಗಿ ತಿಳಿಸಲಾಗಿದೆ. ಅದನ್ನವರು ಪುರಾತನ ಕಾಲದಲ್ಲಿ ಇದ್ದ ಮತ್ತು ಈಗಿಲ್ಲದ ಯಾವುದಾದರೊಂದು ಮೂಲದಿಂದ ಪಡೆದಿದ್ದಿರಬಹುದು. ಆ ಮೂಲ, ಬರವಣಿಗೆಯಲ್ಲಿ ಇದ್ದಿರಬಹುದು ಅಥವಾ ಬರೀ ಬಾಯಿ ಮಾತಿನದ್ದೂ ಆಗಿರಬಹುದು. ಯೂದನು ಸಹ ಪುರಾತನ ಕಾಲದ ಅದೇ ಮೂಲವನ್ನು ಉಪಯೋಗಿಸಿದ್ದಿರಬಹುದು ಅಥವಾ ಸ್ವರ್ಗದಿಂದ ಹನೋಕನ ಜೀವನವನ್ನು ನೋಡಿದ ಯೇಸುವಿನಿಂದ ಅವನ ಬಗ್ಗೆ ತಿಳಿದುಕೊಂಡಿರಬಹುದು.

^ ಪ್ಯಾರ. 20 ಇದೇ ರೀತಿಯಲ್ಲಿ ದೇವರು, ಮೋಶೆ ಮತ್ತು ಯೇಸುವಿನ ದೇಹ ಸಹ ಜನರ ಕೈಗೆ ಸಿಕ್ಕಿ ದುರುಪಯೋಗವಾಗದಂತೆ ಮಾಡಿದನು.—ಧರ್ಮೋಪದೇಶಕಾಂಡ 34:5, 6; ಲೂಕ 24:3-6; ಯೂದ 9.