ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿದ್ಯಾರ್ಥಿ ಎದುರಿಸೋ ಪ್ರಶ್ನೆ

ವಿದ್ಯಾರ್ಥಿ ಎದುರಿಸೋ ಪ್ರಶ್ನೆ

ಒಂದಿನ ಪೀಟರ್‌ನ ಅಚ್ಚುಮೆಚ್ಚಿನ ಟೀಚರ್‌ ಚಾರ್ಲ್ಸ್‌ ಡಾರ್ವಿನ್‌ನ ವಿಕಾಸವಾದದ ಬಗ್ಗೆ ಕಲಿಸ್ತಾ ಇದ್ದರು. ಡಾರ್ವಿನ್‌ನ ಈ ಸಿದ್ಧಾಂತದಿಂದ ವೈಜ್ಞಾನಿಕವಾಗಿ ತುಂಬಾ ಬೆಳವಣಿಗೆ ಆಯಿತು, ಮನುಷ್ಯರು ಮೂಢ ನಂಬಿಕೆಯಿಂದ ಹೊರಗೆ ಬರೋಕೆ ಸಾಧ್ಯ ಆಯಿತು ಅಂತ ವಿವರಿಸುತ್ತಾ ಇದ್ದರು. ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ಹೇಳಬಹುದು ಅಂತ ಟೀಚರ್‌ ಹೇಳಿದರು. ಇದನ್ನ ಕೇಳಿದಾಗ ಪೀಟರ್‌ ಭಯದಿಂದ ಬೆವರೋಕೆ ಶುರುಮಾಡಿದ.

ಪೀಟರ್‌ಗೆ ಗೊಂದಲ ಶುರು ಆಯಿತು. ಯಾಕಂದ್ರೆ ಅವನ ಅಪ್ಪಅಮ್ಮ ಇಡೀ ಭೂಮಿಯನ್ನ, ಮನುಷ್ಯರನ್ನ ಸೃಷ್ಟಿ ಮಾಡಿದ್ದು ದೇವರು ಅಂತ ಹೇಳಿಕೊಟ್ಟಿದ್ದರು. ಬೈಬಲಿನಲ್ಲಿ ಸೃಷ್ಟಿ ಬಗ್ಗೆ ಹೇಳಿರೋ ಮಾತನ್ನ ನಂಬಬಹುದು, ಆದರೆ ವಿಕಾಸವಾದಕ್ಕೆ ಯಾವುದೇ ಆಧಾರ ಇಲ್ಲ ಅಂತ ಹೇಳಿದರು. ಪೀಟರ್‌ನ ಟೀಚರ್‌ ಮತ್ತು ಅಪ್ಪಅಮ್ಮ ಅವನ ಒಳ್ಳೇದಕ್ಕೆ ಹೇಳೋದು. ಆದರೆ ಇವರಿಬ್ಬರಲ್ಲಿ ಪೀಟರ್‌ ಯಾರನ್ನ ನಂಬೋದು?

ಲೋಕದಲ್ಲಿ ಇಂಥದ್ದೇ ಪರಿಸ್ಥಿತಿನ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎದುರಿಸ್ತಿದ್ದಾರೆ. ಪೀಟರ್‌ ಮತ್ತು ಅವನಂಥ ವಿದ್ಯಾರ್ಥಿಗಳಿಗೆ ಇಂಥಾ ಪ್ರಶ್ನೆ ಬಂದರೆ ಏನು ಮಾಡಬೇಕು? ನಿಮಗೇನು ಅನಿಸುತ್ತೆ? ಬೇರೆಯವರು ಹೇಳಿದ್ದನ್ನೆಲ್ಲಾ ಕಣ್ಮುಚ್ಚಿ ನಂಬಬೇಕಾ? ಅಥವಾ ನಿಜ ಏನು ಅಂತ ಚೆನ್ನಾಗಿ ತಿಳಿದುಕೊಂಡು ಆಮೇಲೆ ನಿರ್ಧಾರ ಮಾಡಬೇಕಾ? ಅವರು ವಿಕಾಸವಾದ ಮತ್ತು ಸೃಷ್ಟಿ ಎರಡರ ಬಗ್ಗೆನೂ ತಿಳಿದುಕೊಳ್ಳಬೇಕು. ಆಮೇಲೆ ಯಾವುದನ್ನ ನಂಬಬೇಕು, ಯಾವುದನ್ನ ನಂಬಬಾರದು ಅಂತ ಅವರೇ ನಿರ್ಧಾರ ಮಾಡಬೇಕು.

ಜನ ಹೇಳಿದ್ದನ್ನೆಲ್ಲಾ ಕಣ್ಮುಚ್ಚಿಕೊಂಡು ನಂಬಬಾರದು ಅಂತ ಬೈಬಲ್‌ ಎಚ್ಚರಿಕೆ ಕೊಡುತ್ತೆ. ಅದು ಹೇಳೋದು, “ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ, ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.” (ಜ್ಞಾನೋಕ್ತಿ 14:15) ಕ್ರೈಸ್ತರು ತಾವು ಕಲಿತಾ ಇರೋದು ಸರಿನಾ ಅಂತ ತಮ್ಮ “ಯೋಚನಾ ಸಾಮರ್ಥ್ಯ” ಬಳಸಿ ತಿಳಿದುಕೊಳ್ಳಬೇಕು ಅಂತ ಬೈಬಲ್‌ ಉತ್ತೇಜಿಸುತ್ತೆ.—ರೋಮನ್ನರಿಗೆ 12:1, 2.

ಕೆಲವು ಧಾರ್ಮಿಕ ಸಂಘಟನೆಗಳು, ಇಡೀ ಭೂಮಿಯನ್ನ ದೇವರು ಸೃಷ್ಟಿ ಮಾಡಿದ್ದು ಅಂತ ಸ್ಕೂಲಲ್ಲಿ ಮಕ್ಕಳಿಗೆ ಕಲಿಸಬೇಕು ಅಂತ ಇಷ್ಟಪಡುತ್ತಾರೆ. ಆ ಸಂಘಟನೆಗಳನ್ನ ಬೆಂಬಲಿಸೋಕೆ ಈ ಬ್ರೋಷರನ್ನ ತಯಾರಿ ಮಾಡಿಲ್ಲ. ಕೆಲವರು ಜೀವ ಇದ್ದಕ್ಕಿದ್ದಂತೆ ಬಂತು, ಬೈಬಲಿನಲ್ಲಿ ಸೃಷ್ಟಿ ಬಗ್ಗೆ ಹೇಳಿರೋದೆಲ್ಲಾ ಕಟ್ಟುಕಥೆ ಅಂತ ಹೇಳುತ್ತಾರೆ. ಆದರೆ ಈ ಬ್ರೋಷರ್‌ ಯಾವುದು ಸತ್ಯ ಅಂತ ತಿಳಿದುಕೊಳ್ಳೋಕೆ ಸಹಾಯ ಮಾಡುತ್ತೆ.

ಈ ಬ್ರೋಷರಿನಲ್ಲಿ ಜೀವದ ಮುಖ್ಯ ಅಂಶವಾಗಿರೋ ಜೀವಕೋಶದ ಬಗ್ಗೆ, ಅದರ ರಚನೆ ಬಗ್ಗೆ ತುಂಬಾ ಆಸಕ್ತಿಕರ ವಿಷ್ಯಗಳನ್ನ ಮತ್ತು ವಿಜ್ಞಾನಿಗಳು ಕಲಿಸುವ ವಿಕಾಸವಾದದ ಸಿದ್ಧಾಂತ ಸರಿನಾ ಅಂತ ನೀವು ಕಲಿತೀರ.

ಜೀವ ಸೃಷ್ಟಿ ಆಯಿತಾ ಅಥವಾ ವಿಕಾಸ ಆಯಿತಾ ಅನ್ನೋ ಪ್ರಶ್ನೆ ನಮ್ಮ ಜೀವನದಲ್ಲಿ ಒಂದಲ್ಲ ಒಂದು ಸಲ ಬಂದೇ ಬರುತ್ತೆ. ಈಗಾಗಲೇ ನೀವು ಈ ಪ್ರಶ್ನೆ ಬಗ್ಗೆ ತುಂಬಾ ಯೋಚನೆ ಮಾಡಿರಬಹುದು. ಜೀವ ಸೃಷ್ಟಿ ಆಯಿತು ಅಂತ ಅನೇಕ ಜನ ನಂಬೋಕೆ ತುಂಬಾ ಆಧಾರಗಳಿವೆ. ಆ ಆಧಾರಗಳ ಬಗ್ಗೆ ಈ ಬ್ರೋಷರಿನಲ್ಲಿದೆ.