ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 71

ಯೆಹೋವನು ಯೇಸುವನ್ನು ಕಾಪಾಡಿದನು

ಯೆಹೋವನು ಯೇಸುವನ್ನು ಕಾಪಾಡಿದನು

ಇಸ್ರಾಯೇಲಿನ ಪೂರ್ವದಲ್ಲಿದ್ದ ಜನರು ನಕ್ಷತ್ರಗಳು ತಮಗೆ ದಾರಿ ತೋರಿಸುತ್ತವೆ ಎಂದು ನಂಬುತ್ತಿದ್ದರು. ಒಂದು ರಾತ್ರಿ ನಕ್ಷತ್ರದಂತೆ ಹೊಳೆಯುತ್ತಿದ್ದ ಒಂದು ವಸ್ತು ಆಕಾಶದಲ್ಲಿ ಚಲಿಸುತ್ತಿರುವುದನ್ನು ಕೆಲವು ಪುರುಷರು ನೋಡಿ ಅದನ್ನು ಹಿಂಬಾಲಿಸಿದರು. ಆ “ನಕ್ಷತ್ರ” ಅವರನ್ನು ಯೆರೂಸಲೇಮಿಗೆ ನಡೆಸಿತು. ಅಲ್ಲಿಗೆ ಹೋದ ಮೇಲೆ ಅವರು ಜನರ ಹತ್ತಿರ ‘ಯೆಹೂದ್ಯರ ರಾಜನು ಹುಟ್ಟಿದ್ದಾನಂತೆ. ಆ ಮಗು ಎಲ್ಲಿದೆ? ನಾವು ಅವನಿಗೆ ನಮಸ್ಕರಿಸಬೇಕು’ ಎಂದು ಹೇಳಿದರು.

ಹೊಸ ರಾಜನ ಬಗ್ಗೆ ಯೆರೂಸಲೇಮಿನ ರಾಜ ಹೆರೋದನಿಗೆ ಗೊತ್ತಾದಾಗ ಅವನಿಗೆ ತುಂಬಾ ಚಿಂತೆ ಆಯಿತು. ಅವನು ಮುಖ್ಯ ಯಾಜಕರ ಹತ್ತಿರ ‘ಈ ರಾಜನು ಎಲ್ಲಿ ಹುಟ್ಟುವನೆಂದು ತಿಳಿಸಲಾಗಿದೆ?’ ಎಂದು ಕೇಳಿದನು. ಅದಕ್ಕೆ ಅವರು ‘ಬೇತ್ಲೆಹೇಮಿನಲ್ಲಿ ಹುಟ್ಟುವನು ಎಂದು ಪ್ರವಾದಿಗಳು ತಿಳಿಸಿದ್ದಾರೆ’ ಅಂದರು. ಆಗ ಹೆರೋದನು ಪೂರ್ವದಿಂದ ಬಂದ ಆ ಪುರುಷರನ್ನು ಕರೆದು ‘ನೀವು ಬೇತ್ಲೆಹೇಮಿಗೆ ಹೋಗಿ ಆ ಮಗುವನ್ನು ಹುಡುಕಿ. ಅದು ಎಲ್ಲಿದೆ ಎಂದು ಬಂದು ನನಗೆ ತಿಳಿಸಿ. ನಾನೂ ಅದಕ್ಕೆ ನಮಸ್ಕರಿಸಬೇಕು’ ಅಂದನು. ಆದರೆ ಅದು ಶುದ್ಧ ಸುಳ್ಳಾಗಿತ್ತು.

ಆ “ನಕ್ಷತ್ರ” ಮತ್ತೆ ಚಲಿಸಲು ಆರಂಭಿಸಿತು. ಆ ಪುರುಷರು ಅದನ್ನು ಹಿಂಬಾಲಿಸುತ್ತಾ ಬೇತ್ಲೆಹೇಮಿಗೆ ಬಂದರು. ಆ “ನಕ್ಷತ್ರ” ಯೇಸುವಿದ್ದ ಮನೆಯ ಮೇಲೆ ನಿಂತಿತು. ಆ ಪುರುಷರು ಮನೆಯ ಒಳಗೆ ಹೋದಾಗ ಅಲ್ಲಿ ಮರಿಯಳ ಜೊತೆಯಿದ್ದ ಯೇಸುವನ್ನು ಕಂಡರು. ಅವರು ಆ ಮಗುವಿಗೆ ನಮಸ್ಕರಿಸಿ ತಾವು ತಂದಿದ್ದ ಚಿನ್ನ, ಧೂಪ, ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ಕೊಟ್ಟರು. ಯೇಸುವನ್ನು ಹುಡುಕಲು ಈ ಪುರುಷರನ್ನು ನಿಜವಾಗಲೂ ಯೆಹೋವನೇ ಕಳುಹಿಸಿದನಾ? ಖಂಡಿತ ಇಲ್ಲ.

ಅಂದು ರಾತ್ರಿ ಯೆಹೋವನು ಯೋಸೇಫನ ಕನಸಿನಲ್ಲಿ ‘ಹೆರೋದನು ಯೇಸುವನ್ನು ಕೊಲ್ಲಬೇಕೆಂದಿದ್ದಾನೆ. ನೀನು, ನಿನ್ನ ಹೆಂಡತಿ ಮಗುವನ್ನು ಕರೆದುಕೊಂಡು ಈಜಿಪ್ಟಿಗೆ ಹೋಗು. ನಾನು ನಿನಗೆ ಹೇಳುವವವರೆಗೂ ಅಲ್ಲೇ ಇರು’ ಎಂದು ಹೇಳಿದನು. ತಕ್ಷಣ ಯೋಸೇಫನು ತನ್ನ ಕುಟುಂಬವನ್ನು ಈಜಿಪ್ಟಿಗೆ ಕರೆದುಕೊಂಡು ಹೋದನು.

ಪೂರ್ವದಿಂದ ಬಂದ ಪುರುಷರಿಗೆ ಯೆಹೋವನು ‘ಹೆರೋದನ ಬಳಿಗೆ ಹಿಂದಿರುಗಿ ಹೋಗಬೇಡಿ’ ಎಂದು ಹೇಳಿದನು. ಆ ಪುರುಷರು ತನ್ನ ಬಳಿಗೆ ಬರಲಿಲ್ಲ ಎಂದು ಹೆರೋದನಿಗೆ ಗೊತ್ತಾದಾಗ ಅವನು ಕೋಪಗೊಂಡನು. ಯೇಸು ಎಲ್ಲಿದ್ದಾನೆಂದು ತಿಳಿದುಕೊಳ್ಳಲು ಅವನಿಗೆ ಆಗಲಿಲ್ಲ. ಅದಕ್ಕಾಗಿ ಯೇಸುವಿನ ವಯಸ್ಸಿನಲ್ಲಿದ್ದ ಬೇತ್ಲೆಹೇಮಿನ ಎಲ್ಲಾ ಗಂಡು ಮಕ್ಕಳನ್ನು ಕೊಲ್ಲಿಸುವ ಆಜ್ಞೆ ಹೊರಡಿಸಿದನು. ಆದರೆ ಯೇಸು ದೂರದ ಈಜಿಪ್ಟಿನಲ್ಲಿ ಸುರಕ್ಷಿತವಾಗಿ ಇದ್ದನು.

ಸ್ವಲ್ಪ ಸಮಯದ ನಂತರ ಹೆರೋದ ಸತ್ತು ಹೋದನು. ಆಗ ಯೆಹೋವನು ಯೋಸೇಫನಿಗೆ ‘ನೀನು ಈಗ ನಿನ್ನ ಊರಿಗೆ ವಾಪಸ್ಸು ಹೋಗಬಹುದು. ಅಲ್ಲಿ ನಿನಗೆ ಯಾವುದೇ ಅಪಾಯ ಇಲ್ಲ’ ಅಂದನು. ಯೋಸೇಫ, ಮರಿಯ ಮತ್ತು ಯೇಸು ಇಸ್ರಾಯೇಲಿಗೆ ಹಿಂದೆ ಹೋಗಿ ನಜರೇತಿನಲ್ಲಿ ಮನೆ ಮಾಡಿಕೊಂಡರು.

“ನನ್ನ ಬಾಯಿಂದ ಹೊರಟ ಮಾತು . . . ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11