ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 15

ಸಭೆಯಲ್ಲಿ ಹಿರಿಯರ ಜವಾಬ್ದಾರಿ ಏನು?

ಸಭೆಯಲ್ಲಿ ಹಿರಿಯರ ಜವಾಬ್ದಾರಿ ಏನು?

ಫಿನ್‌ಲೆಂಡ್‌

ಬೈಬಲ್‌ ಉಪದೇಶ

ಪರಿಪಾಲನಾ ಭೇಟಿ

ಸುವಾರ್ತೆ ಸಾರುವಿಕೆ

ಸಂಬಳಕ್ಕೆ ದುಡಿಯುವ ಪಾದ್ರಿಯನ್ನು ನೀವು ನಮ್ಮ ಸಭೆಯಲ್ಲಿ ಕಾಣಲಾರಿರಿ. ಏಕೆಂದರೆ, ಕ್ರೈಸ್ತ ಸಭೆ ಆರಂಭವಾದಾಗ ಇದ್ದ ನಮೂನೆಯನ್ನು ನಾವು ಅನುಕರಿಸುತ್ತೇವೆ. ನಮ್ಮಲ್ಲಿ ನಿಸ್ವಾರ್ಥದಿಂದ ದುಡಿಯುವ ಅರ್ಹ ಮೇಲ್ವಿಚಾರಕರಿದ್ದಾರೆ. ಅವರು ಪ್ರೀತಿಯಿಂದ ಸಭೆಯ ಪರಿಪಾಲನೆ ಮಾಡುತ್ತಾರೆ. (ಅಪೊಸ್ತಲರ ಕಾರ್ಯಗಳು 20:28) ‘ಹಿರಿಯರು’ ಎಂದು ಕರೆಯಲಾಗುವ ಅವರು ದೇವರೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿರುವ ಪುರುಷರಾಗಿದ್ದಾರೆ. ಅವರು “ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ” ಇಚ್ಛಾಪೂರ್ವಕವಾಗಿ ಸಭೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. (1 ಪೇತ್ರ 5:1-3) ಸಭೆಯಲ್ಲಿ ಅವರು ಯಾವ ರೀತಿಯ ಜವಾಬ್ದಾರಿ ನಿರ್ವಹಿಸುತ್ತಾರೆ?

ನಮ್ಮನ್ನು ಕಾಪಾಡಿ ಸಲಹುತ್ತಾರೆ. ದೇವರೊಂದಿಗಿನ ಆಪ್ತ ಬಾಂಧವ್ಯ ಕಾಪಾಡಿಕೊಳ್ಳುವಂತೆ ಸಭೆಯಲ್ಲಿರುವವರನ್ನು ಹಿರಿಯರು ಮಾರ್ಗದರ್ಶಿಸುತ್ತಾರೆ. ಈ ಭಾರಿ ಜವಾಬ್ದಾರಿ ನೀಡಿದ್ದು ದೇವರು ಎನ್ನುವುದನ್ನು ಸದಾ ಮನಸ್ಸಲ್ಲಿ ಇಟ್ಟುಕೊಳ್ಳುವ ಅವರು ಸಭೆಯವರ ಮೇಲೆ ಅಧಿಕಾರ ಚಲಾಯಿಸದೆ ಹಿತಾಸಕ್ತಿ ತೋರಿಸಿ ಸಂತೋಷ ಹೆಚ್ಚಿಸುತ್ತಾರೆ. (2 ಕೊರಿಂಥ 1:24) ಅಪಾರ ಪ್ರೀತಿ ಮಮತೆಯುಳ್ಳ ಕುರುಬನು ಪ್ರತಿಯೊಂದು ಕುರಿಯ ಯೋಗಕ್ಷೇಮ ನೋಡಿಕೊಳ್ಳುವಂತೆ ಹಿರಿಯರು ಸಭೆಯ ಪ್ರತಿಯೊಬ್ಬ ಸದಸ್ಯರನ್ನು ಚೆನ್ನಾಗಿ ಪರಿಚಯ ಮಾಡಿಕೊಂಡು ಕಾಳಜಿ ತೋರಿಸುತ್ತಾರೆ.—ಜ್ಞಾನೋಕ್ತಿ 27:23.

ದೇವರ ಇಷ್ಟವನ್ನು ಮಾಡಲು ಕಲಿಸುತ್ತಾರೆ. ದೇವರ ಮೇಲಿನ ನಮ್ಮ ನಂಬಿಕೆ ಗಾಢವಾಗುವಂತೆ ಹಿರಿಯರು ಪ್ರತಿವಾರ ಸಭಾ ಕೂಟಗಳಲ್ಲಿ ಬೈಬಲ್‌ ಉಪದೇಶ ನೀಡುತ್ತಾರೆ. (ಅಪೊಸ್ತಲರ ಕಾರ್ಯಗಳು 15:32) ಅರ್ಪಣಾ ಭಾವದ ಈ ಸಹೋದರರು ಸುವಾರ್ತೆ ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಾರೆ. ನಮ್ಮೊಂದಿಗೆ ಸೇವೆಗೆ ಬರುತ್ತಾರೆ. ಸುವಾರ್ತೆ ಸಾರುವ ಬೇರೆ ಬೇರೆ ವಿಧಾನಗಳನ್ನು ಕಲಿಸುತ್ತಾರೆ.

ವ್ಯಕ್ತಿಗತವಾಗಿ ಕಾಳಜಿ ವಹಿಸಿ ಪ್ರೋತ್ಸಾಹಿಸುತ್ತಾರೆ. ಯೆಹೋವ ದೇವರೊಂದಿಗೆ ಸದಾ ಆಪ್ತವಾಗಿರುವಂತೆ ಹಿರಿಯರು ಒಬ್ಬೊಬ್ಬರಿಗೂ ವೈಯಕ್ತಿಕ ನೆರವು ನೀಡುತ್ತಾರೆ. ರಾಜ್ಯ ಸಭಾಗೃಹದಲ್ಲಿ ಅಥವಾ ಮನೆಯಲ್ಲಿ ನಮ್ಮೊಂದಿಗೆ ಸಮಯ ವ್ಯಯಿಸಿ ಬೈಬಲಿನಿಂದ ಸಲಹೆ ಸಾಂತ್ವನ ಕೊಟ್ಟು ಪ್ರೋತ್ಸಾಹಿಸುತ್ತಾರೆ.—ಯಾಕೋಬ 5:14, 15.

ಸಭಾ ಜವಾಬ್ದಾರಿಗಳು ಮಾತ್ರವಲ್ಲದೆ ಅವರು ತಮ್ಮ ಸಮಯ ಗಮನವನ್ನು ಉದ್ಯೋಗಕ್ಕೂ ಕುಟುಂಬಕ್ಕೂ ನೀಡಬೇಕಾಗುತ್ತದೆ. ಇವೆಲ್ಲದರ ಮಧ್ಯೆ ನಮ್ಮ ಹಿತಾಸಕ್ತಿಗಾಗಿ ದುಡಿಯುವ ಈ ಸಹೋದರರು ಅಭಿನಂದನಾರ್ಹರು.—1 ಥೆಸಲೊನೀಕ 5:12, 13.

  • ಸಭೆಯಲ್ಲಿ ಹಿರಿಯರ ಜವಾಬ್ದಾರಿಗಳೇನು?

  • ಯಾವೆಲ್ಲ ವಿಧಗಳಲ್ಲಿ ಹಿರಿಯರು ನಮಗೆ ವ್ಯಕ್ತಿಗತ ಕಾಳಜಿ ತೋರಿಸುತ್ತಾರೆ?