ಯಾಕೋಬನ ಪತ್ರ 1:1-27

  • ವಂದನೆಗಳು (1)

  • ಸಹಿಸ್ಕೊಂಡ್ರೆ ಖುಷಿ ಸಿಗುತ್ತೆ (2-15)

    • ನಿಜ ನಂಬಿಕೆ ಗೊತ್ತಾಗುತ್ತೆ (3)

    • ನಂಬಿಕೆಯಿಂದ ಕೇಳ್ತಾ ಇರಿ (5-8)

    • ಬಯಕೆ ಪಾಪಕ್ಕೆ ನಡಿಸುತ್ತೆ (14, 15)

  • ಎಲ್ಲ ಒಳ್ಳೇ ಬಹುಮಾನ ಮೇಲಿಂದಾನೇ (16-18)

  • ದೇವರ ಮಾತು ಕೇಳೋದು ಮತ್ತು ನಡಿಯೋದು (19-25)

    • ಕನ್ನಡಿಯಲ್ಲಿ ನೋಡ್ಕೊಳ್ಳೋ ವ್ಯಕ್ತಿ (23, 24)

  • ಶುದ್ಧ ಮತ್ತು ಕಳಂಕ ಇಲ್ಲದ ಆರಾಧನೆ (26, 27)

1  ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ದಾಸನಾಗಿರೋ ಯಾಕೋಬ+ ಅನ್ನೋ ನಾನು ಚೆಲ್ಲಾಪಿಲ್ಲಿ ಆಗಿರೋ 12 ಕುಲಗಳಿಗೆ ಬರೆಯೋ ಪತ್ರ ಇದು. ನಮಸ್ಕಾರ!  ನನ್ನ ಸಹೋದರರೇ, ನಿಮಗೆ ಬೇರೆ ಬೇರೆ ಕಷ್ಟಗಳು ಬಂದಾಗ ಖುಷಿಪಡಿ.+  ಯಾಕಂದ್ರೆ ನಿಮಗೆ ಗೊತ್ತಿರೋ ಹಾಗೆ, ಕಷ್ಟ ಬಂದಾಗ್ಲೇ ನಿಮ್ಮಲ್ಲಿ ನಿಜವಾದ ನಂಬಿಕೆ ಇದೆ ಅಂತ ಗೊತ್ತಾಗುತ್ತೆ. ಆ ನಂಬಿಕೆ ಸಹಿಸ್ಕೊಳ್ಳೋಕೆ ಶಕ್ತಿ ಕೊಡುತ್ತೆ.+  ಹೀಗೆ ಸಹಿಸ್ಕೊಳ್ತಾ ಇದ್ರೆ ನಿಮ್ಮನ್ನ ನೀವೇ ತರಬೇತಿ ಮಾಡ್ಕೊಳ್ತೀರ. ಆಗ ನೀವು ಎಲ್ಲಾ ವಿಷ್ಯಗಳನ್ನ ಚೆನ್ನಾಗಿ ಮಾಡಕ್ಕಾಗುತ್ತೆ. ನಿಮಗೆ ಯಾವ ಕೊರತೆನೂ ಇರಲ್ಲ.+  ಹಾಗಾಗಿ ನಿಮ್ಮಲ್ಲಿ ಯಾರಿಗಾದ್ರೂ ವಿವೇಕ ಕಮ್ಮಿ ಇದೆ ಅಂತ ಅನಿಸಿದ್ರೆ ಅವನು ದೇವರ ಹತ್ರ ಕೇಳ್ತಾ ಇರಲಿ,+ ಅವನಿಗೆ ಸಿಗುತ್ತೆ. ಯಾಕಂದ್ರೆ ದೇವರು ಬೇಜಾರು ಮಾಡ್ಕೊಳ್ಳದೆ*+ ಎಲ್ರಿಗೂ ಉದಾರವಾಗಿ ವಿವೇಕ ಕೊಡ್ತಾನೆ.+  ಆದ್ರೆ ಕೇಳುವಾಗ ಒಂಚೂರೂ ಸಂಶಯಪಡದೆ+ ನಂಬಿಕೆಯಿಂದ+ ಕೇಳಬೇಕು. ಯಾಕಂದ್ರೆ ಸಂಶಯ ಪಡುವವನು ಗಾಳಿಗೆ ಆಕಡೆ ಈಕಡೆ ಹೋಗೋ ಸಮುದ್ರದ ಅಲೆಗಳ ತರ.  ನಿಜ ಹೇಳಬೇಕಂದ್ರೆ, ಅಂಥವನು ಯೆಹೋವನಿಂದ* ಏನಾದ್ರೂ ಸಿಗುತ್ತೆ ಅಂತ ಆಸೆ ಪಡ್ಲೇಬಾರದು.  ಯಾವುದ್ರ ಬಗ್ಗೆನೂ ಅವನಿಗೆ ಸರಿಯಾಗಿ ತೀರ್ಮಾನ ಮಾಡಕ್ಕಾಗಲ್ಲ.+ ಅವನ ಮನಸ್ಸು ಚಂಚಲ ಆಗಿರುತ್ತೆ.  ಆದ್ರೆ ಬಡ ಸಹೋದರ ಖುಷಿಪಡ್ಲಿ. ಯಾಕಂದ್ರೆ ದೇವರ ದೃಷ್ಟಿಯಲ್ಲಿ ಅವನು ಶ್ರೀಮಂತ.+ 10  ಒಬ್ಬ ಶ್ರೀಮಂತ ಸಹೋದರ ಬಡವನಾದ್ರೆ ಖುಷಿಪಡ್ಲಿ.+ ಯಾಕಂದ್ರೆ ಶ್ರೀಮಂತ್ರು ಹೊಲದಲ್ಲಿರೋ ಹೂವಿನ ತರ ಇಲ್ದೆ ಹೋಗ್ತಾರೆ. 11  ಬಿಸಿಲಿಗೆ ಗಿಡ ಬಾಡಿ ಹೋಗಿ ಹೂ ಉದುರುತ್ತೆ. ಅದ್ರ ಅಂದ ಮಾಯವಾಗುತ್ತೆ. ಅದೇ ತರ ಶ್ರೀಮಂತ ತನ್ನ ಜೀವನದ ಜಂಜಾಟದಲ್ಲಿ ಮುಳುಗಿ ಸತ್ತುಹೋಗ್ತಾನೆ.+ 12  ಕಷ್ಟಗಳನ್ನ ಸಹಿಸ್ಕೊಳ್ಳೋ ವ್ಯಕ್ತಿ ಖುಷಿಯಾಗಿ ಇರ್ತಾನೆ.+ ಯಾಕಂದ್ರೆ ಅವನಿಗೆ ದೇವರ ಮೆಚ್ಚಿಗೆ ಮತ್ತು ಜೀವದ ಕಿರೀಟ ಸಿಗುತ್ತೆ.+ ಯೆಹೋವ* ತನ್ನನ್ನ ಯಾರು ಪ್ರೀತಿಸ್ತಾರೋ ಅಂಥವ್ರಿಗೆ ಜೀವದ ಕಿರೀಟ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ.+ 13  ಕಷ್ಟ ಬಂದಾಗ “ದೇವರು ನನ್ನನ್ನ ಪರೀಕ್ಷೆ ಮಾಡ್ತಾ ಇದ್ದಾನೆ” ಅಂತ ಯಾರೂ ಹೇಳಬಾರದು. ಯಾಕಂದ್ರೆ ಕೆಟ್ಟ ವಿಷ್ಯಗಳಿಂದ ದೇವರನ್ನ ಯಾರೂ ಪರೀಕ್ಷಿಸಕ್ಕಾಗಲ್ಲ. ದೇವರೂ ಯಾರಿಗೂ ಕಷ್ಟ ಕೊಟ್ಟು ಪರೀಕ್ಷೆ ಮಾಡಲ್ಲ. 14  ಆದ್ರೆ ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ. ಆಮೇಲೆ ಆ ಆಸೆ ಸ್ವಲ್ಪಸ್ವಲ್ಪ ಬೆಳೆದು ಪಾಪಕ್ಕೆ ಜನ್ಮ ಕೊಡುತ್ತೆ.+ 15  ಆ ಪಾಪ ಬೆಳೆದು ಸಾವನ್ನ ತರುತ್ತೆ.+ 16  ನನ್ನ ಪ್ರೀತಿಯ ಸಹೋದರರೇ ಮೋಸ ಹೋಗಬೇಡಿ. 17  ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ ಮೇಲಿಂದಾನೇ ಬರುತ್ತೆ.+ ಬೆಳಕಿನ ತಂದೆಯಿಂದಾನೇ ಬರುತ್ತೆ.+ ಆತನು ನೆರಳಿನ ತರ ಬದಲಾಗ್ತಾ ಇರಲ್ಲ.+ 18  ಮನುಷ್ಯರಲ್ಲಿ ನಮ್ಮನ್ನ ಮೊದ್ಲು ಆರಿಸ್ಕೊಬೇಕು ಅಂತ ಆತನ ಇಷ್ಟ ಆಗಿತ್ತು.+ ಅದಕ್ಕೆ ಸತ್ಯ ಸಂದೇಶದಿಂದಾನೇ ನಾವು ಬದುಕೋ ತರ ಆತನು ಮಾಡಿದನು.+ 19  ನನ್ನ ಪ್ರೀತಿಯ ಸಹೋದರರೇ ಈ ವಿಷ್ಯವನ್ನ ನೆನಪಿಡಿ. ಪ್ರತಿಯೊಬ್ರೂ ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ,+ ಬೇಗ ಕೋಪ ಮಾಡ್ಕೊಬೇಡಿ.+ 20  ಯಾಕಂದ್ರೆ ಮನುಷ್ಯ ಕೋಪ ಮಾಡ್ಕೊಂಡ್ರೆ ದೇವರ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಮಾಡಕ್ಕಾಗಲ್ಲ.+ 21  ಹಾಗಾಗಿ ನಿಮ್ಮಲ್ಲಿರೋ ಎಲ್ಲ ಹೊಲಸುತನ, ಕೆಟ್ಟತನ+ ಬಿಟ್ಟುಬಿಡಿ. ದೇವರ ಮಾತನ್ನ ಕೇಳಿಸ್ಕೊಂಡಾಗ ಅದನ್ನ ದೀನತೆಯಿಂದ ಒಪ್ಕೊಳ್ಳಿ. ಮನಸ್ಸಿಗೆ ತಗೊಳ್ಳಿ. ಅದು ನಿಮಗೆ ಜೀವ ಕೊಡುತ್ತೆ. 22  ದೇವರ ಮಾತಿನ ಪ್ರಕಾರ ನಡೀರಿ.+ ಬರೀ ಕೇಳಿ ಅದನ್ನ ಬಿಟ್ಟುಬಿಟ್ರೆ ತಪ್ಪಾದ ಯೋಚ್ನೆಗಳಿಂದ ನಿಮ್ಮನ್ನೇ ನೀವು ಮೋಸ ಮಾಡ್ಕೊಳ್ತಾ ಇದ್ದೀರ. 23  ಯಾಕಂದ್ರೆ ಒಬ್ಬ ವ್ಯಕ್ತಿ ದೇವರ ಮಾತನ್ನ ಕೇಳಿಸ್ಕೊಂಡು ಅದ್ರ ಪ್ರಕಾರ ನಡೀದೆ ಇದ್ರೆ+ ಅವನು ಕನ್ನಡಿಯಲ್ಲಿ ತನ್ನ ಮುಖ ನೋಡ್ಕೊಂಡ ವ್ಯಕ್ತಿ ತರ ಇದ್ದಾನೆ. 24  ಆ ವ್ಯಕ್ತಿ ಕನ್ನಡಿಯಲ್ಲಿ ಮುಖ ನೋಡ್ಕೊಂಡು ಹೊರಗೆ ಹೋಗಿ ತಕ್ಷಣ ತಾನು ಹೇಗಿದ್ದೆ ಅನ್ನೋದನ್ನೇ ಮರೆತುಹೋಗ್ತಾನೆ. 25  ಆದ್ರೆ ಸ್ವತಂತ್ರ ಕೊಡೋ ಪರಿಪೂರ್ಣ ನಿಯಮವನ್ನ+ ಚೆನ್ನಾಗಿ ನೋಡಿ ಅದ್ರ ಪ್ರಕಾರ ನಡಿಯುವವನು ಸುಮ್ನೆ ಕೇಳಿ ಮರೆತುಹೋಗಲ್ಲ, ಅದ್ರ ಪ್ರಕಾರ ನಡಿತಾನೆ. ಅದು ಅವನಿಗೆ ಖುಷಿ ತರುತ್ತೆ.+ 26  ದೇವರನ್ನ ಆರಾಧಿಸ್ತಾ ಇದ್ದೀನಿ ಅಂತ ಅಂದ್ಕೊಳ್ಳುವವನು ತನ್ನ ನಾಲಿಗೆಯನ್ನ ಹತೋಟಿಯಲ್ಲಿ ಇಟ್ಕೊಳ್ಳದೇ ಇದ್ರೆ+ ಅವನು ತನ್ನ ಮನಸ್ಸನ್ನೇ ಮೋಸ ಮಾಡ್ಕೊಳ್ತಾ ಇದ್ದಾನೆ. ಅವನ ಆರಾಧನೆ ವ್ಯರ್ಥ. 27  ನಮ್ಮ ತಂದೆ ಆಗಿರೋ ದೇವರ ದೃಷ್ಟಿಯಲ್ಲಿ ಶುದ್ಧವಾಗಿರೋ ಕಳಂಕ ಇಲ್ಲದ ಆರಾಧನಾ ಪದ್ಧತಿ ಯಾವುದಂದ್ರೆ ಕಷ್ಟದಲ್ಲಿರೋ+ ಅನಾಥ ಮಕ್ಕಳನ್ನ,+ ವಿಧವೆಯರನ್ನ+ ನೋಡ್ಕೊಳ್ಳೋದು ಮತ್ತು ಈ ಲೋಕದ ಕೆಟ್ಟತನದಿಂದ ದೂರ ಇರೋದೇ ಆಗಿದೆ.+

ಪಾದಟಿಪ್ಪಣಿ

ಅಥವಾ “ತಪ್ಪು ಹುಡುಕದೆ.”