ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುರುಷರ ಚಿಂತೆಗೆ ಬೈಬಲಿನ ಮದ್ದು

ಪುರುಷರ ಚಿಂತೆಗೆ ಬೈಬಲಿನ ಮದ್ದು

 ಚಿಂತೆ a ಇರೋರು ಅಂದಾಗ ನಿಮಗೆ ಯಾವ ರೀತಿಯ ವ್ಯಕ್ತಿ ನೆನಪಾಗ್ತಾರೆ? ಭಯದಿಂದ ಏನು ಮಾಡಬೇಕು ಅಂತ ಗೊತ್ತಾಗದೇ ಚಡಪಡಿಸ್ತಿರೋ ವ್ಯಕ್ತಿನಾ? ಅಥವಾ ಬೆಳಗ್ಗೆ ಏನೇನೋ ಯೋಚನೆ ಮಾಡ್ತಾ ಹಾಸಿಗೆಯಿಂದ ಎದ್ದೇಳೋಕೆನೇ ಕಷ್ಟಪಡ್ತಿರೋ ವ್ಯಕ್ತಿನಾ? ಇಲ್ಲಾಂದ್ರೆ, ಅವ್ರ ಚಿಂತೆಗಳ ಬಗ್ಗೆ ಯಾವಾಗ್ಲೂ ಹೇಳಿಕೊಳ್ಳೋ ವ್ಯಕ್ತಿ ನೆನಪಾಗ್ತಾರಾ?

 ಚಿಂತೆ ಇರೋ ಕೆಲವ್ರು ಈ ರೀತಿಯಲ್ಲೆಲ್ಲಾ ಪ್ರತಿಕ್ರಿಯಿಸ್ತಾರೆ ನಿಜ. ಆದ್ರೆ ಸಂಶೋಧಕರು ಹೇಳೋ ಪ್ರಕಾರ ಕೆಲವರು ಅದ್ರಲ್ಲೂ ವಿಶೇಷವಾಗಿ ಪುರುಷರು ಚಿಂತೆ ಇದ್ರೆ ಇನ್ನೂ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸ್ತಾರೆ. ಒಂದು ವರದಿ ಪ್ರಕಾರ, “ಚಿಂತೆಯಲ್ಲಿ ಮುಳುಗಿರೋ ಪುರುಷರು ಕೆಲವೊಮ್ಮೆ ಅದ್ರಿಂದ ಹೊರಬರೋಕಾಗಿ ಮದ್ಯ ಅಥವಾ ಡ್ರಗ್ಸ್‌ ಸೇವಿಸ್ತಾರೆ. ಹಾಗಾಗಿ ಕುಡಿಕತನಕ್ಕೆ ಕಾರಣ ಕೆಲವೊಮ್ಮೆ ಚಿಂತೆನೂ ಆಗಿರಬಹುದು. ಅಷ್ಟೇ ಅಲ್ಲ, ಚಿಂತೆ ಇರೋ ಕೆಲವು ಪುರುಷರು ಬೇಗ ಕಿರಿಕಿರಿ ಮತ್ತು ಕೋಪ ಮಾಡ್ಕೊಳ್ತಾರೆ.”

 ಚಿಂತೆ ಇರೋ ಎಲ್ಲಾ ಪುರುಷರು ಈ ರೀತಿ ಇರಲ್ಲ. ಆದ್ರೆ ಇವತ್ತು ತುಂಬ ಜನರಿಗೆ ಚಿಂತೆ ಜಾಸ್ತಿಯಾಗಿದೆ. ಬೈಬಲ್‌ ಸಹ “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟಪಡಬೇಕಾಗುತ್ತೆ” ಅಂತ ಹೇಳುತ್ತೆ. (2 ತಿಮೊತಿ 3:1) ನಿಮಗೆ ಚಿಂತೆ ಇರೋದಾದ್ರೆ ಅದ್ರಿಂದ ಹೊರಬರೋಕೆ ಬೈಬಲ್‌ ಸಹಾಯ ಮಾಡುತ್ತಾ?

ಚಿಂತೆಯಿಂದ ಹೊರಬರೋಕೆ ಬೈಬಲ್‌ ಕೊಡೋ ಸಹಾಯ

 ಚಿಂತೆಯಿಂದ ಹೊರಬರೋಕೆ ಬೈಬಲ್‌ ಖಂಡಿತ ಸಹಾಯ ಮಾಡುತ್ತೆ. ಇದಕ್ಕೆ ಮೂರು ಉದಾಹರಣೆಗಳನ್ನ ನಾವೀಗ ನೋಡೋಣ.

  1.  1. “ಹಾಗಾಗಿ ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.”—ಮತ್ತಾಯ 6:34.

     ಇದರ ಅರ್ಥ: ಭವಿಷ್ಯದಲ್ಲಿ ಆಗುವ (ಆಗದಿರುವ) ವಿಷಯಗಳ ಬಗ್ಗೆ ಅತಿಯಾಗಿ ಚಿಂತೆ ಮಾಡದಿರೋದು ಒಳ್ಳೇದು. ಹೆಚ್ಚಿನ ಸಲ ಒಂದು ವಿಷಯ ಕೆಟ್ಟದಾಗುತ್ತೆ ಅಂತ ಭಯಪಡ್ತೀವಿ ಆದ್ರೆ ಅದಕ್ಕೆ ಉಲ್ಟಾನೇ ಆಗಿರುತ್ತೆ ಅಂದ್ರೆ ಒಳ್ಳೇದೇ ಆಗಿರುತ್ತೆ.

     ಇದನ್ನ ಟ್ರೈ ಮಾಡಿ: ಹಿಂದೆ ನೀವು ‘ಇದು ಖಂಡಿತ ಕೆಟ್ಟದೇ ಆಗುತ್ತೆ’ ಅಂತ ನೆನಸಿದ ವಿಷಯ ಒಳ್ಳೇದಾಗಿರೋ ಸನ್ನಿವೇಶವನ್ನ ನೆನಪಿಸಿಕೊಳ್ಳಿ. ಆಮೇಲೆ ಈಗ ನಿಮಗೆ ಯಾವ್ಯಾವ ಸಮಸ್ಯೆಗಳಿವೆ ಅಂತ ಯೋಚಿಸಿ. ಒಂದು ವಿಷಯದಿಂದ ಯಾವಾಗ್ಲೂ ಕೆಟ್ಟದಾಗುತ್ತೆ ಅಂತ ಯೋಚಿಸೋ ಬದ್ಲು ಹಿಂದಿನ ತರನೇ ‘ಮುಂದೆನೂ ಒಳ್ಳೇದಾಗುತ್ತೆ’ ಅಂತಾನೇ ಯೋಚಿಸಿ.

  2.  2. “ಕಬ್ಬಿಣ ಕಬ್ಬಿಣವನ್ನ ಹರಿತ ಮಾಡೋ ತರ, ಸ್ನೇಹಿತ ತನ್ನ ಸ್ನೇಹಿತನನ್ನ ಪ್ರಗತಿ ಮಾಡ್ತಾನೆ.”—ಜ್ಞಾನೋಕ್ತಿ 27:17.

     ಇದರ ಅರ್ಥ: ನಮ್ಮ ಸಮಸ್ಯೆಯಿಂದ ಹೊರಬರೋಕೆ ಸ್ನೇಹಿತರು ಅಥವಾ ಬೇರೆಯವರು ಸಹಾಯ ಮಾಡಬಹುದು. ಅವರ ಅನುಭವದಿಂದ ಕಲಿತ ಒಳ್ಳೇ ಸಲಹೆಗಳನ್ನ ನಮಗೆ ಹೇಳಬಹುದು. ಕಡಿಮೆಪಕ್ಷ ಒಳ್ಳೇ ರೀತಿಯಲ್ಲಿ ಯೋಚಿಸೋಕಾದ್ರು ಅವ್ರು ನಮಗೆ ಸಹಾಯ ಮಾಡಬಹುದು.

     ಇದನ್ನ ಟ್ರೈ ಮಾಡಿ: ನಿಮಗೆ ಸಲಹೆಯನ್ನ ಕೊಡಬಹುದಾದ ಕೆಲವರ ಬಗ್ಗೆ ಯೋಚ್ನೆ ಮಾಡಿ. ಅವರು ಕೂಡ ನಿಮಗಿರೋ ಸಮಸ್ಯೆಗಳನ್ನೇ ಎದುರಿಸಿರಬಹುದು. ಚಿಂತೆ ನಿಭಾಯಿಸೋಕೆ ಅವರಿಗೆ ಯಾವ ವಿಷಯ ಸಹಾಯ ಮಾಡ್ತು ಅಂತ ಕೇಳಿ.

  3.  3. “ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ. ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.”—1 ಪೇತ್ರ 5:7.

     ಇದರ ಅರ್ಥ: ಕಷ್ಟದಲ್ಲಿ ಇರೋರಿಗೆ ದೇವರು ತುಂಬ ಕಾಳಜಿ ತೋರಿಸ್ತಾನೆ. ನಮ್ಮ ಮನಸ್ಸಲ್ಲಿರೋ ಚಿಂತೆಗಳನ್ನೆಲ್ಲಾ ತನ್ನ ಹತ್ರ ಹೇಳಿಕೊಳ್ಳಬೇಕು ಅಂತ ದೇವರು ಬಯಸ್ತಾನೆ.

     ಇದನ್ನ ಟ್ರೈ ಮಾಡಿ: ಚಿಂತೆಯನ್ನ ಹೆಚ್ಚಿಸೋ ವಿಷಯಗಳನ್ನ ಪಟ್ಟಿಮಾಡಿ. ಆಮೇಲೆ ಅದರ ಬಗ್ಗೆ ಯೆಹೋವ ದೇವರ ಹತ್ರ ಹೇಳಿಕೊಳ್ಳಿ. ಅದನ್ನ ನಿಭಾಯಿಸೋಕೆ ಬೇಕಾದಂಥ ಸಹಾಯ ಕೊಡಪ್ಪಾ ಅಂತ ಪ್ರಾರ್ಥಿಸಿ.

ಚಿಂತೆನೇ ಇಲ್ಲದ ಲೋಕ!

 ಬೈಬಲ್‌ ಚಿಂತೆ ನಿಭಾಯಿಸೋಕೆ ಸಲಹೆಗಳನ್ನ ಕೊಡುತ್ತೆ. ಅಷ್ಟೇ ಅಲ್ಲ ಅದಕ್ಕಿಂತ ಹೆಚ್ಚಾಗಿ ಚಿಂತೆನೇ ಇಲ್ಲದಿರೋ ಲೋಕ ಬೇಗನೇ ಬರುತ್ತೆ ಅನ್ನೋ ಭರವಸೆ ಮೂಡಿಸುತ್ತೆ. ಇದೆಲ್ಲಾ ಹೇಗಾಗುತ್ತೆ?

 ದೇವರ ಸರ್ಕಾರ ಚಿಂತೆಗಿರೋ ಮೂಲ ಕಾರಣವನ್ನೇ ಬೇರು ಸಮೇತ ಕಿತ್ತೆಸೆಯುತ್ತೆ. (ಪ್ರಕಟನೆ 21:4) ಅಷ್ಟೇ ಅಲ್ಲ, ಹಿಂದೆ ನಮಗೆ ಚಿಂತೆ ಒತ್ತಡಗಳಿದ್ದವು ಅನ್ನೋ ಕಹಿ ನೆನಪು ಸಹ ದೇವರ ಸರ್ಕಾರದಲ್ಲಿ ಬರಲ್ಲ.—ಯೆಶಾಯ 65:17.

 “ಶಾಂತಿಯನ್ನ ಕೊಡೋ ದೇವರು” ನಮಗೆ ಈ ಸಾಂತ್ವನವನ್ನ ಕೊಟ್ಟಿದ್ದಾನೆ. (ರೋಮನ್ನರಿಗೆ 16:20) “ನಿಮಗೆ ಒಳ್ಳೇದು ಮಾಡಬೇಕಂತ ಯೋಚ್ನೆ ಮಾಡಿದ್ದೀನಿ. ನೀವು ಶಾಂತಿ ನೆಮ್ಮದಿಯಿಂದ ಬದುಕಬೇಕು, ನಿಮಗೆ ಕೆಟ್ಟದು ಆಗಬಾರದು, ನಿಮ್ಮ ಭವಿಷ್ಯ ಚೆನ್ನಾಗಿರಬೇಕು.”—ಯೆರೆಮೀಯ 29:11.

a ಈ ಲೇಖನದಲ್ಲಿ “ಚಿಂತೆ” ಅನ್ನೋ ಪದವನ್ನ ದಿನನಿತ್ಯ ಜೀವನದಲ್ಲಿ ಬರೋ ಚಿಂತೆಗೆ ಸೂಚಿಸಿ ಹೇಳ್ತಿದೆ ಹೊರತು ಯಾವುದೇ ಗಂಭೀರ ಖಿನ್ನತೆ ಕಾಯಿಲೆ ಬಗ್ಗೆ ಮಾತಾಡ್ತಾ ಇಲ್ಲ. ಈ ರೀತಿ ಖಿನ್ನತೆ ಇರೋರು ವೈದ್ಯರ ಸಹಾಯವನ್ನ ಪಡೆದುಕೊಳ್ಳೋದು ಉತ್ತಮ.—ಲೂಕ 5:31.