ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಜ್ಞಾನ ಇಲ್ಲದ ಕಾಲದಲ್ಲೇ ದೇವರಿಂದ ಶುಚಿತ್ವದ ಬಗ್ಗೆ ಮಾಹಿತಿ

ವಿಜ್ಞಾನ ಇಲ್ಲದ ಕಾಲದಲ್ಲೇ ದೇವರಿಂದ ಶುಚಿತ್ವದ ಬಗ್ಗೆ ಮಾಹಿತಿ

 ಸುಮಾರು 3500 ವರ್ಷಗಳ ಹಿಂದೆ ಇಸ್ರಾಯೇಲ್‌ ಜನಾಂಗದವ್ರು ಇನ್ನೇನು ಕಾನಾನ್‌ ದೇಶವನ್ನ ಪ್ರವೇಶಿಸಲಿದ್ದಾಗ ಈಜಿಪ್ಟಿನಲ್ಲಿ ಸಾಮಾನ್ಯವಾಗಿದ್ದ ‘ವ್ಯಾಧಿಗಳು’ ಬರದಂತೆ ಅವ್ರನ್ನ ಕಾಪಾಡುತ್ತೇನೆ ಅಂತ ದೇವರು ಹೇಳಿದನು. (ಧರ್ಮೋಪದೇಶಕಾಂಡ 7:15) ಕಾಪಾಡಕ್ಕೋಸ್ಕರ ದೇವರು ಶುಚಿತ್ವದ ಬಗ್ಗೆ ಮತ್ತು ಕಾಯಿಲೆಗಳು ಬರದಂತೆ ಹೇಗೆ ತಡೆಯಬಹುದು ಅನ್ನೋದ್ರ ಬಗ್ಗೆ ನಿಯಮಗಳನ್ನು ಕೊಟ್ಟನು. ಉದಾಹರಣೆಗೆ:

  •   ಕೆಲವೊಂದು ರೀತಿಯ ಕಾಯಿಲೆ ಇದ್ದವರು ತಪ್ಪದೇ ಸ್ನಾನ ಮಾಡಿ, ಬಟ್ಟೆಗಳನ್ನ ಒಗೆಯಬೇಕಿತ್ತು.—ಯಾಜಕಕಾಂಡ 15:4-27.

  •   ಜನರು ಬಹಿರ್ಭೂಮಿಗೆ ಅಂದರೆ ಶೌಚಾಲಯಕ್ಕೆ ಹೋಗುವಾಗ ಏನು ಮಾಡಬೇಕೆಂದು ದೇವರು ಹೇಳಿದ್ದನು. “ಪಾಳೆಯದ ಹೊರಗೆ ಪಾಯಖಾನೆಗಾಗಿ ಒಂದು ಸ್ಥಳವನ್ನು ಗೊತ್ತುಮಾಡಬೇಕು. ಯುದ್ಧದ ಸಾಮಾನುಗಳಲ್ಲದೆ ಸಲಿಕೆ ನಿಮ್ಮ ಬಳಿಯಲ್ಲಿ ಇರಬೇಕು; ನೀವು ಬಹಿರ್ಭೂಮಿಗೆ ಹೋದಾಗ ಆ ಸಲಿಕೆಯಿಂದ ಅಗಿದು ಕಲ್ಮಷವನ್ನು ಮುಚ್ಚಿಬಿಡಬೇಕು.”—ಧರ್ಮೋಪದೇಶಕಾಂಡ 23:12, 13.

  •   ಅಂಟುರೋಗ ಬಂದವರನ್ನು ಗುಣವಾಗುವವರೆಗೆ ಎಲ್ಲಾ ಜನರಿಂದ ದೂರ ಇಡ್ಬೇಕಿತ್ತು. ಗುಣವಾದವ್ರು ವಾಪಾಸು ಬರೋ ಮುಂಚೆ ತಮ್ಮ ಬಟ್ಟೆಗಳನ್ನ ಒಗೆಯಬೇಕಿತ್ತು ಮತ್ತು ಸ್ನಾನ ಮಾಡ್ಕೊಬೇಕಿತ್ತು. ಆಗ ಮಾತ್ರ ಅವ್ರನ್ನ ‘ಶುದ್ಧರು’ ಅಂದ್ರೆ ಅವರ ಜೊತೆ ಸಹವಾಸ ಮಾಡಬಹುದು ಅಂತ ದೇವರು ಹೇಳಿದ್ರು.—ಯಾಜಕಕಾಂಡ 14:8, 9.

  •   ಹೆಣನ ಮುಟ್ಟಿದವ್ರು ಜನರಿಂದ ದೂರ ಇರಬೇಕಿತ್ತು.—ಯಾಜಕಕಾಂಡ 5:2, 3; ಅರಣ್ಯಕಾಂಡ 19:16.

 ಆರೋಗ್ಯದ ಬಗ್ಗೆ, ಶುಚಿತ್ವದ ಬಗ್ಗೆ ಈಗೀಗ ಡಾಕ್ಟರ್‌ಗಳು ತುಂಬ ಎಚ್ಚರಿಕೆಗಳನ್ನ ಕೊಡ್ತಾರೆ. ಅವರು ಹೇಳೋ ಎಷ್ಟೋ ವಿಷಯಗಳು 3500 ವರ್ಷಗಳ ಹಿಂದೆ ಗೊತ್ತಿರಲಿಲ್ಲ. ಆದ್ರೂ ಆಗಿನ ಕಾಲದಲ್ಲೇ ದೇವರು ಇಸ್ರಾಯೇಲ್ಯರಿಗೆ ಅವುಗಳನ್ನ ಕಲಿಸಿದ್ದನು.

 ಆದರೆ ಬೇರೆ ಜನಾಂಗದವರು ಶುಚಿತ್ವಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಉದಾಹರಣೆಗೆ,

  •   ಕೊಳಚೆ ನೀರು, ಕೊಳೆತ ಆಹಾರ ಮತ್ತು ಬೇರೆಲ್ಲಾ ಗಲೀಜು ಎಲ್ಲಿ ಬೇಕಂದ್ರಲ್ಲಿ ಇರುತ್ತಿತ್ತು. ಇದ್ರಿಂದಾಗಿ ಅನೇಕ ಜನ್ರಿಗೆ ಕಾಯಿಲೆ ಬರುತ್ತಿತ್ತು ಮತ್ತು ಚಿಕ್ಕ ಮಕ್ಕಳೂ ಸಾಯುತ್ತಿದ್ದರು.

  •   ಆಗಿನ ಕಾಲದ ವೈದ್ಯರಿಗೆ ಕೀಟಾಣುಗಳ ಬಗ್ಗೆಯಾಗಲಿ ವೈರಸ್‌ಗಳ ಬಗ್ಗೆಯಾಗಲಿ ಗೊತ್ತಿರ್ಲಿಲ್ಲ. ಈಜಿಪ್ಟಿನವರು ಹಲ್ಲಿಯ ರಕ್ತ, ಕೊಕ್ಕರೆಯ ಮಲ, ಸತ್ತ ಇಲಿ, ಮೂತ್ರ, ಬೂಸ್ಟ್‌ ಹಿಡಿದ ಬ್ರೆಡ್‌ ಇದನ್ನೆಲ್ಲಾ “ಔಷಧಿ” ಥರ ಉಪಯೋಗಿಸ್ತಿದ್ದರು. ಮನುಷ್ಯರ ಮತ್ತು ಪ್ರಾಣಿಗಳ ಮಲ-ಮೂತ್ರಗಳನ್ನು ಹೆಚ್ಚಾಗಿ ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುತ್ತಿದ್ದರು.

  •   ನೈಲ್‌ ನದಿ ಮತ್ತದರ ಕಾಲುವೆಗಳ ನೀರು ಕೀಟಾಣುಗಳಿಂದ ಕಲುಷಿತವಾಗಿ ಇರುತ್ತಿತ್ತು. ಇದನ್ನು ಈಜಿಪ್ಟಿನವರು ಕುಡಿಯುತ್ತಿದ್ದ ಕಾರಣ ಅವರಿಗೆ ಬೇಗ ಕಾಯಿಲೆ ಬರುತ್ತಿತ್ತು. ರೋಗಾಣುಗಳಿರುವ ಆಹಾರ ತಿಂದು ಮಕ್ಕಳು ಬೇಧಿ ಮುಂತಾದ ಇನ್ನಿತರ ಕಾಯಿಲೆಗಳಿಂದ ಸಾಯುತ್ತಿದ್ದರು.

 ಆದರೆ ಇಸ್ರಾಯೇಲ್ಯರು, ಆರೋಗ್ಯದ ಬಗ್ಗೆ ದೇವರು ಕೊಟ್ಟ ನಿಯಮಗಳನ್ನು ಪಾಲಿಸುತ್ತಿದ್ದದರಿಂದ ಬೇರೆ ಜನರ ತರ ಅವರಿಗೆ ಬೇಗ ಕಾಯಿಲೆ ಬರುತ್ತಿರಲಿಲ್ಲ, ಆರೋಗ್ಯವಾಗಿರುತ್ತಿದ್ದರು.