ಮಾಹಿತಿ ಇರುವಲ್ಲಿ ಹೋಗಲು

ಅವರ ನಂಬಿಕೆಯನ್ನು ಅನುಕರಿಸಿ | ಯೋಬ

‘ನನ್ನ ಯಥಾರ್ಥತೆಯನ್ನು ಕಳಕೊಳ್ಳೆನು!’

‘ನನ್ನ ಯಥಾರ್ಥತೆಯನ್ನು ಕಳಕೊಳ್ಳೆನು!’

ಅವನು ನೆಲದಲ್ಲಿ ಕೂತಿದ್ದಾನೆ. ಅವನ ತಲೆಯಿಂದ ಹಿಡಿದು ಕಾಲಿನ ತನಕ ಕೀವು ತುಂಬಿದ, ತುಂಬಾ ನೋವು ಕೊಡುವ ಹುಣ್ಣುಗಳೇ ಇವೆ. ನಿಮ್ಮ ಮನಸ್ಸಲ್ಲಿ ಈ ವಿಷ್ಯಗಳನ್ನೆಲ್ಲಾ ಚಿತ್ರಿಸಿಕೊಳ್ಳಿ. ಅವನ ತಲೆ ಬಾಗಿದೆ, ಕೈಗೆ ಶಕ್ತಿನೇ ಇಲ್ಲ, ಅವನ ಜೊತೆ ಯಾರೂ ಇಲ್ಲ, ಅವನ ಸುತ್ತ ನೊಣಗಳೆಲ್ಲ ಗುಯಿಂಗುಟ್ಟುತ್ತಾ ಹಾರ್ತಿವೆ, ಅದನ್ನ ಓಡಿಸಕ್ಕೂ ಅವನಿಗೆ ಶಕ್ತಿ ಇಲ್ಲ. ಬೂದಿಯಲ್ಲಿ ಕೂತು ದುಃಖ ಪಡ್ತಾ ಇದ್ದಾನೆ, ತನ್ನ ಮೈಮೇಲಿದ್ದ ಹುಣ್ಣುಗಳನ್ನ ಮಡಿಕೆ ಚೂರಿಂದ ಕೆರ್ಕೊಳ್ತಿದ್ದಾನೆ. ಅವನಿಗೆ ದೊಡ್ಡ ನಷ್ಟ ಆಗಿದೆ, ಅವನ ಮಾನ ಮರ್ಯಾದೆಯೆಲ್ಲ ಮಣ್‌ ಪಾಲಾಗಿದೆ. ಅವನ ಸ್ನೇಹಿತರು, ಅಕ್ಕಪಕ್ಕದವ್ರು, ಬಂಧು ಬಳಗ ಎಲ್ಲಾ ಅವನನ್ನ ಬಿಟ್ಟು ಹೋಗಿದ್ದಾರೆ. ಜನ ಅವನನ್ನ ನೋಡಿ ನಗ್ತಾ ಇದ್ದಾರೆ, ಮಕ್ಕಳು ಸಹಿತ ತಮಾಷೆ ಮಾಡ್ತಿದ್ದಾರೆ. ಈ ಸ್ಥಿತಿಗೆ ತನ್ನ ದೇವರಾದ ಯೆಹೋವನೇ ಕಾರಣ ಅಂತ ಅವನು ಅಂದ್ಕೊಂಡಿದ್ದ, ಆದ್ರೆ ಅದು ನಿಜನಾ? ವಿಷ್ಯ ಬೇರೆನೇ ಇತ್ತು!—ಯೋಬ 2:8; 19:18, 22.

ಇದು ಯೋಬನ ಕಥೆ. ದೇವರು ಅವನ ಬಗ್ಗೆ ‘ಅವನಿಗೆ ಸಮಾನನು ಭೂಮಿಯಲ್ಲಿ ಎಲ್ಲೂ ಸಿಗಲ್ಲ’ ಅಂತ ಹೇಳಿದ್ದನು. (ಯೋಬ 1:8) ಇದಾಗಿ ಶತಮಾನಗಳು ಕಳೆದರೂ ಯೆಹೋವ ದೇವ್ರು ಅವನನ್ನು ಇನ್ನೂ ಮರೆತಿರಲಿಲ್ಲ. ತನ್ನ ಮಾತಿನ ಪ್ರಕಾರ ನಡಕೊಳ್ತಿದ್ದ ನೀತಿವಂತರಲ್ಲಿ ಇವನೂ ಒಬ್ಬ ಅಂತ ಸ್ವತಃ ಯೆಹೋವನೇ ಹೇಳಿದನು.—ಯೆಹೆಜ್ಕೇಲ 14:14, 20.

ನಿಮಗೆ ಯಾವತ್ತಾದ್ರೂ ಇಷ್ಟು ದೊಡ್ಡ ಕಷ್ಟ, ದುರಂತ ಬಂದಿದ್ಯಾ? ಹಾಗಿದ್ರೆ ಈ ಯೋಬನ ಕಥೆ ಕೇಳಿ, ತುಂಬಾ ಸಮಾಧಾನ ಸಿಗುತ್ತೆ. ಅಷ್ಟೇ ಅಲ್ಲ, ‘ನಾವು ಹೇಗೆ ಯೆಹೋವನಿಗೆ ನಿಯತ್ತಾಗಿರಬಹುದು? ನಾವು ತಪ್ಪು ಮಾಡದೆ ಒಳ್ಳೇ ರೀತಿಯಲ್ಲಿ ನಡಕೊಳ್ತಾ ಇದ್ರೆ ಅದನ್ನ ಹಾಗೇ ಮುಂದುವರಿಸಿಕೊಂಡು ಹೋಗೋದು ಹೇಗೆ?’ ಅಂತ ಸಹ ತಿಳ್ಕೊತೇವೆ. ಯೆಹೋವನನ್ನ ಆರಾಧಿಸೋ ಎಲ್ಲರಲ್ಲೂ ಈ ಗುಣಗಳು ಇರಲೇಬೇಕು. ಯೆಹೋವನಿಗೆ ನಿಯತ್ತಾಗಿರೋದು ಅಂದ್ರೆ ನಮಗೆ ಏನೇ ಕಷ್ಟ ಬಂದ್ರೂ ಯೆಹೋವನ ಮಾತು ಕೇಳೋದಾಗಿದೆ. ಈ ರೀತಿ ನಡಕೊಳ್ಳೋದು ಹೇಗಂತ ಯೋಬನಿಂದ ಕಲಿಯೋಣ, ಬನ್ನಿ.

ಯೋಬನಿಗೆ ಏನು ಗೊತ್ತಿರಲಿಲ್ಲ?

ಯೋಬನ ಮರಣದ ನಂತರ ಅವನ ಜೀವನದ ಬಗ್ಗೆ ನಂಬಿಗಸ್ತ ಮೋಶೆ ಬರೆದ. ಮೋಶೆ ದೇವ ಪ್ರೇರಿತನಾಗಿ ಯೋಬನಿಗೆ ಏನೆಲ್ಲಾ ಆಯ್ತು ಅನ್ನೋದನ್ನು ಮಾತ್ರ ಬರಿಲಿಲ್ಲ. ಬದ್ಲಿಗೆ ಅವನ ಬಗ್ಗೆ ಸ್ವರ್ಗದಲ್ಲಿ ಯಾವ ಚರ್ಚೆ ನಡಿತು ಅಂತನೂ ಬರೆದ.

ಒಂದು ಕಾಲದಲ್ಲಿ ಯೋಬ ಸಂತೋಷ-ಸಂತೃಪ್ತಿಯಿಂದ ಇದ್ದ. ಅವನು ದೊಡ್ಡ ಶ್ರೀಮಂತನಾಗಿದ್ದ. ಉತ್ತರ ಅರೇಬಿಯದ ಊಚ್‌ ದೇಶದಲ್ಲಿ ವಾಸಿಸ್ತಿದ್ದ. ಊರಲ್ಲಿ ಎಲ್ರಿಗೂ ಅವನ ಪರಿಚಯ ಇತ್ತು ಮತ್ತು ಎಲ್ರೂ ಅವನಿಗೆ ಗೌರವ ಕೊಡ್ತಿದ್ರು. ಅವನೇ ಮುಂದೆ ಬಂದು ಕಷ್ಟದಲ್ಲಿದ್ದವ್ರಿಗೆ ಕೈ ತೆರೆದು ಕೊಡ್ತಿದ್ದ. ಯೋಬನ ಕುಟುಂಬದಲ್ಲಿ ಅವನು, ಅವನ ಹೆಂಡತಿ ಮತ್ತು ಹತ್ತು ಮಕ್ಕಳಿದ್ರು. ಯೋಬ ದೇವ್ರ ಮೇಲೆ ಭಯ-ಭಕ್ತಿ ಇದ್ದ ವ್ಯಕ್ತಿಯಾಗಿದ್ದ. ಅವನು ತನ್ನ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬ ಮತ್ತು ಯೋಸೇಫನಂತೆ ಯೆಹೋವನನ್ನ ಖುಷಿಪಡಿಸೋಕೆ ಹಾತೊರೆಯುತ್ತಿದ್ದ. ಅವರಂತೆ ಅವನು ಸಹ ಕುಟುಂಬದ ಯಾಜಕನಾಗಿ ಕೆಲ್ಸ ಮಾಡ್ತಿದ್ದ. ಮಕ್ಕಳ ಪರವಾಗಿ ಯಾವಾಗಲೂ ಬಲಿ ಅರ್ಪಿಸ್ತಿದ್ದ.—ಯೋಬ 1:1-5; 31:16-22.

ಆದ್ರೆ ಇದ್ದಕ್ಕಿದ್ದಂತೆ ಯೋಬನ ಜೀವನ ತಲೆಕೆಳಗಾಯ್ತು. ಯೋಬನಿಗೆ ಗೊತ್ತಿಲ್ದೆ ತೆರೆ ಮರೆಯಲ್ಲಿ ಅಂದ್ರೆ ಸ್ವರ್ಗದಲ್ಲಿ ಒಂದು ವಿಷ್ಯ ನಡೀತು. ಸ್ವರ್ಗದಲ್ಲಿ ಯೆಹೋವನ ಮುಂದೆ ನಂಬಿಗಸ್ತ ದೇವದೂತರೆಲ್ಲ ಕೂಡಿ ಬಂದಿದ್ರು. ಆಗ ಕೆಟ್ಟ ದೇವದೂತ ಸೈತಾನನೂ ಬಂದ. ಯೋಬನನ್ನ ಕಂಡ್ರೆ ಸೈತಾನನಿಗೆ ಇಷ್ಟ ಇಲ್ಲ ಅಂತ ದೇವರಿಗೆ ಗೊತ್ತಿತ್ತು. ಅದಕ್ಕೇ ಯೆಹೋವ ದೇವ್ರು ಯೋಬನ ಬಗ್ಗೆ, ಅವನು ತನಗೆಷ್ಟು ನಿಯತ್ತಿನಿಂದ ಇದ್ದಾನೆ ಅನ್ನೋದ್ರ ಬಗ್ಗೆ ಸೈತಾನನ ಹತ್ರ ಮಾತಾಡಿದನು. ಆಗ ಸೈತಾನ ‘ಯೋಬ ಲಾಭವಿಲ್ಲದೆ ದೇವರಿಗೆ ಭಯಭಕ್ತಿ ತೋರಿಸ್ತಿದ್ದಾನಾ? ನೀನು ಅವನನ್ನು ಅವನ ಮನೆ ಮತ್ತು ಆಸ್ತಿಯನ್ನೆಲ್ಲ ಬೇಲಿ ಹಾಕಿ ಕಾಪಾಡುತ್ತಿದ್ದೀಯಲ್ಲಾ?’ ಅಂದ. ನಿಯತ್ತಿನಿಂದ ಇರೋರನ್ನ ಕಂಡ್ರೆ ಸೈತಾನನಿಗೆ ಆಗಲ್ಲ. ಯಾಕಂದ್ರೆ ಅವ್ರು ಯೆಹೋವ ದೇವ್ರಿಗೆ ಪೂರ್ಣಹೃದಯದ ಭಕ್ತಿ ತೋರಿಸುವಾಗ ಸೈತಾನನು ಸ್ವಲ್ಪನೂ ಪ್ರೀತಿ ಇಲ್ಲದ ಮೋಸಗಾರ ಅನ್ನೋದನ್ನ ಸಾಬೀತುಪಡಿಸ್ತಾರೆ. ಹಾಗಾಗಿ ಯೋಬ ಲಾಭ ಇಲ್ಲದೆ ದೇವರನ್ನ ಆರಾಧಿಸ್ತಿಲ್ಲ ಅಂತ ಆ ಸೈತಾನ ಮತ್ತೆ ಮತ್ತೆ ಹೇಳಿದ. ಒಂದುವೇಳೆ ಯೋಬ ಎಲ್ಲವನ್ನ ಕಳ್ಕೊಂಡ್ರೆ ಅವನು ಯೆಹೋವನನ್ನು ದೂಷಿಸ್ತಾನೆ ಅಂತ ಸೈತಾನ ಪಟ್ಟು ಹಿಡಿದ.—ಯೋಬ 1:6-11.

ಯೋಬನಿಗೆ ಸೈತಾನ ಒಬ್ಬ ಸುಳ್ಳುಗಾರ ಅಂತ ತೋರಿಸಿಕೊಡೋ ಅವಕಾಶ ಇತ್ತು. ಆದ್ರೆ ಯೆಹೋವನು ಈ ಅವಕಾಶವನ್ನ ಕೊಟ್ಟಿದ್ದಾನೆ ಅನ್ನೋದು ಯೋಬನಿಗೆ ಗೊತ್ತಿರಲಿಲ್ಲ. ಯೆಹೋವನು ಸೈತಾನನಿಗೆ ಯೋಬನ ಹತ್ರ ಇರೋ ಎಲ್ಲವನ್ನ ನಾಶ ಮಾಡೋಕೆ ಅನುಮತಿ ಕೊಟ್ಟನು. ಆದ್ರೆ ಯೋಬನ ಮೈಮೇಲೆ ಮಾತ್ರ ಕೈಹಾಕಬಾರದು ಅಂತ ಹೇಳಿದನು. ಈ ಅವಕಾಶ ಸಿಕ್ಕ ಕೂಡಲೇ ಸೈತಾನ ಯೋಬನ ಹತ್ರ ಇರೋ ಎಲ್ಲವನ್ನ ನಾಶ ಮಾಡಿದನು. ಒಂದೇ ದಿನದಲ್ಲಿ ಯೋಬನು ಎಲ್ಲವನ್ನ ಕಳಕೊಳ್ಳೋ ತರ ಮಾಡಿದನು. ಮೊದಲು ಎತ್ತುಗಳು ಮತ್ತು ಕತ್ತೆಗಳು, ನಂತ್ರ ಕುರಿಗಳು, ಆಮೇಲೆ ಒಂಟೆಗಳು ಹೀಗೆ ಎಲ್ಲಾ ಜಾನುವಾರುಗಳು ಒಂದರ ನಂತ್ರ ಒಂದರಂತೆ ಆಕಸ್ಮಿಕವಾಗಿ ನಾಶವಾದವು. ಆ ಜಾನುವಾರುಗಳನ್ನ ನೋಡಿಕೊಳ್ತಿದ್ದ ಸೇವಕರು ಸಹ ಸತ್ತು ಹೋದ್ರು. ಇವುಗಳಲ್ಲಿ ಕೆಲವು ಸೇವಕರು ಮತ್ತು ಜಾನುವಾರುಗಳ ಮೇಲೆ “ದೇವರ ಬೆಂಕಿ ಆಕಾಶದಿಂದ ಬಿದ್ದು” ಸತ್ತು ಹೋದವು ಅಂತ ಯೋಬನಿಗೆ ತಿಳಿಸಲಾಯ್ತು. ಬಹುಶಃ ಅವರ ಮೇಲೆ ಸಿಡಿಲು ಬಡಿದಿರಬೇಕು. ಹೀಗೆ ಒಂದೇ ಸಲಕ್ಕೆ ಅವನು ತನ್ನ ಸೇವಕರನ್ನು ಮತ್ತು ಎಲ್ಲಾ ಆಸ್ತಿಪಾಸ್ತಿಯನ್ನು ಕಳಕೊಂಡನು. ಏನಾಗ್ತಾ ಇದೆ ಅಂತ ಅವನು ಅರ್ಥಮಾಡ್ಕೊಳ್ಳೋದಕ್ಕೂ ಮುಂಚೆನೇ ಇನ್ನೊಂದು ದುರಂತನೂ ನಡಿತು. ಅವನ ಎಲ್ಲಾ ಮಕ್ಕಳು ಅವನ ದೊಡ್ಡ ಮಗನ ಮನೆಗೆ ಹೋಗಿದ್ರು, ಅಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿ ಮನೆ ಕುಸಿದು ಬಿದ್ದು ಅವ್ರೆಲ್ರೂ ಒಂದೇ ಸಲಕ್ಕೆ ಸತ್ತು ಹೋದ್ರು.—ಯೋಬ 1:12-19.

ಆಗ ಯೋಬನಿಗೆ ಹೇಗಾಗಿರುತ್ತೆ ಅಂತ ನಾವು ಯೋಚಿಸೋಕೂ ಆಗಲ್ಲ. ಅವನು ತನ್ನ ಬಟ್ಟೆ ಹರಕೊಂಡು ತಲೆ ಬೋಳಿಸಿಕೊಂಡು ನೆಲದಲ್ಲಿ ಕೂತುಬಿಟ್ಟ. ದೇವರೇ ಎಲ್ಲವನ್ನ ಕೊಟ್ಟಿದ್ದು, ದೇವರೇ ಎಲ್ಲವನ್ನ ವಾಪಸ್‌ ತಗೊಂಡನು ಅಂತ ಯೋಬ ನೆನಸಿದನು. ಸೈತಾನನು ಸಹ ಎಲ್ಲ ದುರಂತಗಳು ದೇವರಿಂದನೇ ಆಗಿದ್ದು ಅಂತ ಅನಿಸೋ ತರ ಮಾಡಿದ್ದನು. ಇಷ್ಟೆಲ್ಲಾ ಕಳ್ಕೊಂಡ್ರೂ ಯೋಬ ದೇವ್ರನ್ನ ದೂಷಿಸ್ಲಿಲ್ಲ. ಬದಲಿಗೆ “ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಅಂತ ಹೇಳಿದನು. (ಯೋಬ 1:20-22) ಹೀಗೆ ಸೈತಾನ ಅವನ ಮೇಲೆ ಹಾಕಿದ ಆರೋಪ ಸುಳ್ಳಾಯ್ತು.

ಸೈತಾನನು ತನ್ನ ಬಗ್ಗೆ ದೇವ್ರ ಹತ್ರ ದೂರುತ್ತಿದ್ದಾನೆ ಅಂತ ಯೋಬನಿಗೆ ಗೊತ್ತಿರಲಿಲ್ಲ

ಅವನು ನಿನ್ನನ್ನ ಖಂಡಿತ ದೂಷಿಸ್ತಾನೆ

ದೇವರಿಗೆ ಯೋಬ ನಿಯತ್ತಾಗಿ ಇರೋದನ್ನ ನೋಡಿ ಸೈತಾನನಿಗೆ ಸಹಿಸಕ್ಕಾಗಲಿಲ್ಲ. ಎಲ್ಲಾ ದೇವದೂತರು ಯೆಹೋವನ ಎದುರು ಕೂಡಿಬಂದಾಗ ಮತ್ತೆ ಸೈತಾನ ಅಲ್ಲಿ ಬಂದ. ಆಗ ಯೆಹೋವನು ಸೈತಾನನಿಗೆ, ಅವನು ಇಷ್ಟೆಲ್ಲಾ ಮಾಡಿದ್ರೂ ಯೋಬ ನಿಯತ್ತಾಗಿದ್ದಾನೆ ಅಂತ ಹೇಳಿ ಯೋಬನನ್ನ ಹೊಗಳಿದನು. ಆಗ ಸೈತಾನನು ಕೋಪದಿಂದ, “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು. ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸವನ್ನು ಹೊಡೆ. ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು” ಅಂದ. ಯೋಬನಿಗೆ ದೊಡ್ಡ ಕಾಯಿಲೆ ಬರೋದಾದ್ರೆ ಖಂಡಿತ ದೇವ್ರನ್ನ ದೂಷಿಸ್ತಾನೆ ಅಂತ ಸೈತಾನ ನೆನಸಿದ್ನು. ಆದ್ರೆ ಯೆಹೋವನಿಗೆ, ಏನೇ ಆದ್ರೂ ಯೋಬ ತನ್ನನ್ನ ಬಿಟ್ಟುಬಿಡಲ್ಲ ಅಂತ ಪೂರ್ತಿ ಭರವಸೆ ಇತ್ತು. ಅದಕ್ಕೇ ಯೆಹೋವನು ಯೋಬನಿಗೆ ಕಾಯಿಲೆ ಬರುವಂತೆ ಮಾಡಲು ಸೈತಾನನಿಗೆ ಅನುಮತಿ ಕೊಟ್ಟನು. ಆದ್ರೆ ಅವನ ಪ್ರಾಣಕ್ಕೇನೂ ಮಾಡಬಾರದು ಅಂತ ಹೇಳಿದನು.—ಯೋಬ 2:1-6.

ದೇವ್ರು ಅನುಮತಿ ಕೊಟ್ಟ ತಕ್ಷಣನೇ ಸೈತಾನ ಯೋಬನಿಗೆ ಒಂದು ಭಯಂಕರ ಕಾಯಿಲೆ ಬರೋ ತರ ಮಾಡ್ದ. ಆಗ ಯೋಬನ ಪರಿಸ್ಥಿತಿ ಹೇಗಿತ್ತು ಅಂತ ಈ ಲೇಖನದ ಆರಂಭದಲ್ಲಿ ಕೊಡಲಾಗಿದೆ. ಇದೆಲ್ಲಾ ನೋಡಿ ಅವನ ಹೆಂಡ್ತಿಗೆ ಹೇಗಾಗಿರಬಹುದು ಅಂತ ಸ್ವಲ್ಪ ಯೋಚಿಸಿ. ಮೊದಲೇ ಅವಳ ಹತ್ತು ಮಕ್ಳೂ ಸತ್ತು ಹೋಗಿದ್ರು. ಈಗ ಅವಳ ಗಂಡ ಇಷ್ಟೊಂದು ಭಯಂಕರ ಕಾಯಿಲೆಯಿಂದ ನರಳ್ತಾ ಇದ್ದ. ಇದನ್ನೆಲ್ಲಾ ನೋಡಿ ಸಹಿಸಿಕೊಳ್ಳೋಕಾಗದೆ ಅವಳು “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ” ಅಂದಳು. ಅವಳು ಯಾಕೆ ಈ ರೀತಿ ಮಾತಾಡ್ತಾ ಇದ್ದಾಳೆ ಅಂತ ಯೋಬನಿಗೆ ಗೊತ್ತಿತ್ತು. ಇಷ್ಟೆಲ್ಲಾ ನೋವು ಅನುಭವಿಸಿರೋದ್ರಿಂದ ಅವಳಿಗೆ ಸರಿಯಾಗಿ ಯೋಚನೆ ಮಾಡೋಕೆ ಆಗ್ತಾ ಇರ್ಲಿಲ್ಲ. ಆದ್ರೆ ಯೋಬನು ಇದೆಲ್ಲಾ ಅನುಭವಿಸಿದ್ರೂ ದೇವ್ರನ್ನ ದೂಷಿಸಲಿಲ್ಲ. ಅವನ ಬಾಯಿಂದ ಒಂದೇ ಒಂದು ಕೆಟ್ಟ ಮಾತೂ ಬರ್ಲಿಲ್ಲ.—ಯೋಬ 2:7-10.

ಯೋಬನ ಈ ನೋವಿನ ಕಥೆ ಬಗ್ಗೆ ನಾವೆಲ್ರೂ ತಿಳುಕೊಳ್ಳೋದು ತುಂಬ ಮುಖ್ಯ. ಸೈತಾನ ಬರೀ ಯೋಬ ಮೇಲಲ್ಲ, ನಮ್ಮೆಲ್ರ ಮೇಲೂ ಆರೋಪ ಹಾಕಿದ್ದಾನೆ. ನಾವು ಯೆಹೋವನ ಮಾತನ್ನ ಕೇಳೋದು ಸ್ವಾರ್ಥಕ್ಕಾಗಿ ಅಂತ ಹೇಳಿದ್ದಾನೆ. ಮನುಷ್ಯನು ಪ್ರಾಣವನ್ನ ಉಳಿಸಿಕೊಳ್ಳೋಕೆ ತನ್ನ ಸರ್ವಸ್ವವನ್ನೂ ಕೊಡುವನು ಅಂತ ಸೈತಾನ ಹೇಳಿದ್ದಾನೆ. ಇನ್ನೊಂದು ಮಾತಲ್ಲಿ ಹೇಳೋದಾದ್ರೆ ಯಾವುದೇ ಒಬ್ಬ ವ್ಯಕ್ತಿನೂ ನಿಯತ್ತಾಗಿರೋಕೆ ಸಾಧ್ಯನೇ ಇಲ್ಲ ಅಂತ ಅವನು ಹೇಳ್ತಿದ್ದಾನೆ. ಅಷ್ಟೇ ಅಲ್ಲ, ಯೆಹೋವನ ಮೇಲೆ ನಿಮಗಿರೋ ಪ್ರೀತಿ ನಿಜ ಅಲ್ಲ, ಪ್ರಾಣಕ್ಕೆ ಅಪಾಯ ಬರೋದಾದ್ರೆ ದೇವ್ರು ಹೇಳೋ ಮಾತನ್ನ ಮೀರಿ ನಡಿತೀರಿ ಅಂತ ಅವನು ಹೇಳ್ತಿದ್ದಾನೆ. ನೀವು ಸಹ ಅವನ ತರ ಸ್ವಾರ್ಥಿಗಳು ಅನ್ನೋದು ಅವನ ವಾದ. ಸೈತಾನನ ಈ ಮಾತು ಸುಳ್ಳು ಅಂತ ತೋರಿಸಿಕೊಡಬೇಕು ಅಂತ ನಿಮಗೆ ಅನ್ಸುತ್ತಾ? ಅವನು ಹೇಳೋದು ಸುಳ್ಳು ಅಂತ ಸಾಬೀತು ಮಾಡೋ ಅವಕಾಶ ನಮಗೆಲ್ರಿಗೂ ಇದೆ. (ಜ್ಞಾನೋ. 27:11) ಈಗ ನಾವು ಯೋಬ ಇನ್ನೂ ಏನೆಲ್ಲಾ ಸಹಿಸಿಕೊಳ್ಳಬೇಕಾಯ್ತು ಅಂತ ನೋಡೋಣ.

ಗಾಯದ ಮೇಲೆ ಬರೆ ಹಾಕಿದ ಸ್ನೇಹಿತರು

ಯೋಬನಿಗೆ ಪರಿಚಯವಿದ್ದ ಮೂವರು ಪುರುಷರು ಅವನಿಗೆ ಬಂದ ಕಷ್ಟದ ಬಗ್ಗೆ ಕೇಳಿಸಿಕೊಂಡಾಗ ಅವನನ್ನ ನೋಡೋಕೆ ಬಂದ್ರು. ಯೋಬನಿಗೆ ಸಾಂತ್ವನ ಕೊಡಲಿಕ್ಕಾಗಿ ಅವ್ರು ತುಂಬ ದೂರದಿಂದ ಬಂದಿದ್ರು. ಅವ್ರು ಯೋಬನ ಸ್ನೇಹಿತರು ಅಂತ ಬೈಬಲ್‌ ಹೇಳುತ್ತೆ. ಅವ್ರ ಹೆಸ್ರು ಎಲೀಫಜ, ಬಿಲ್ದದ ಮತ್ತು ಚೋಫರ. ದೂರದಿಂದ ಯೋಬನನ್ನ ನೋಡಿದಾಗ ಅವ್ರಿಗೆ ಗುರುತು ಹಿಡಿಯೋಕೇ ಆಗಲಿಲ್ಲ. ಯೋಬ ನೋವಿಂದ ನರಳ್ತಾ ಇದ್ದ. ಕಾಯಿಲೆ ಎಷ್ಟು ಹರಡಿಬಿಟ್ಟಿತ್ತಂದ್ರೆ ಮೈ ಚರ್ಮ ಎಲ್ಲಾ ಕಪ್ಪಗಾಗಿ ಹೋಗಿತ್ತು. ನೋಡಿದ ಯಾರಿಗೂ ಅದು ಯೋಬ ಅಂತ ನಂಬೋಕೇ ಆಗ್ತಿರ್ಲಿಲ್ಲ. ಯೋಬನನ್ನ ನೋಡಿ ಆ ಮೂರು ಜನ್ರೂ ತುಂಬ ನೋವಾಗಿರೋ ತರ ನಾಟಕ ಆಡಿದ್ರು. ಜೋರಾಗಿ ಅತ್ರು ಮತ್ತು ತಲೆ ಮೇಲೆ ಮಣ್ಣು ಹಾಕಿಕೊಂಡ್ರು. ನಂತ್ರ ಯೋಬನ ಹತ್ರ ಹೋಗಿ ಕೂತ್ಕೊಂಡ್ರು. ಈ ತರ ಒಂದು ವಾರ ಕೂತ್ಕೊಂಡ್ರು, ಆದ್ರೆ ಒಂದು ಮಾತೂ ಆಡ್ಲಿಲ್ಲ. ಕಾರಣ, ಯೋಬನಿಗಾಗಿರೋ ನೋವನ್ನ ನೋಡಿ ಅವ್ರಿಗೆ ಮಾತೇ ಹೊರಡ್ಲಿಲ್ಲ ಅಂತಲ್ಲ. ಯೋಬ ನೋವಿಂದ ನರಳ್ತಾ ಇರೋದನ್ನ ಅವ್ರು ನೋಡಿದ್ರು. ಆದ್ರೂ ಅವನಿಗೇನು ಅನಿಸ್ತಿದೆ ಅಂತ ತಿಳುಕೊಳ್ಳೋಕೂ ಅವ್ರು ಪ್ರಯತ್ನಿಸ್ಲಿಲ್ಲ.—ಯೋಬ 2:11-13; 30:30.

ಯಾರೂ ಮಾತಾಡ್ದೇ ಇರೋದನ್ನ ನೋಡಿ ಕೊನೆಗೂ ಯೋಬನೇ ಮಾತಾಡೋಕೆ ಶುರು ಮಾಡ್ದ. ಅವನಿಗೆ ಎಷ್ಟು ನೋವಾಗಿತ್ತಂದ್ರೆ ತಾನು ಹುಟ್ಟಿದ ದಿನವನ್ನ ಶಪಿಸ್ದ. ನಂತ್ರ ದೇವ್ರಿಂದನೇ ಇಷ್ಟೆಲ್ಲಾ ಕಷ್ಟ ಬಂದಿದೆ ಅಂತ ಅವನು ಹೇಳ್ದ. (ಯೋಬ 3:1, 2, 23) ಅವನು ಆ ತರ ಯೋಚಿಸಿದ್ರೂ ದೇವ್ರ ಮೇಲಿದ್ದ ನಂಬಿಕೆಯನ್ನ ಕಳಕೊಳ್ಳಲಿಲ್ಲ. ಈ ಸಮ್ಯದಲ್ಲಿ ಅವನಿಗೆ ಸಾಂತ್ವನ ಬೇಕಿತ್ತು. ಕೊನೆಗೂ ಅವನ ಸ್ನೇಹಿತರು ಮಾತಾಡೋಕೆ ಶುರು ಮಾಡಿದ್ರು. ಆದ್ರೆ ಸಾಂತ್ವನ ಕೊಡೋ ಒಂದೇ ಒಂದು ಮಾತೂ ಆಡ್ಲಿಲ್ಲ. ಅವ್ರ ಮಾತು ಎಷ್ಟು ಚುಚ್ಚೋ ತರ ಇತ್ತಂದ್ರೆ ‘ಇವ್ರು ಸುಮ್ಮನಿದ್ರೆನೇ ಚೆನ್ನಾಗಿ ಇರ್ತಿತ್ತು’ ಅಂತ ಯೋಬನಿಗೆ ಅನಿಸ್ತು.—ಯೋಬ 13:5.

ಮೊದ್ಲು ಎಲೀಫಜ ಮಾತಾಡಿದ. ಅವನು ಇನ್ನಿಬ್ರು ಸ್ನೇಹಿತರಿಗಿಂತ ಮತ್ತು ಯೋಬನಿಗಿಂತ ದೊಡ್ಡವನಿರಬೇಕು. ಅವನ ನಂತ್ರ ಉಳಿದ ಇಬ್ರು ಸ್ನೇಹಿತರೂ ಮಾತಾಡಿದ್ರು. ಆದ್ರೆ ಅವ್ರು ಸಹ ಎಲೀಫಜನ ತರಾನೇ ಮಾತಾಡಿದ್ರು. ಜನ ಸಾಮಾನ್ಯವಾಗಿ ದೇವ್ರ ಬಗ್ಗೆ ಹೇಳೋ ಮಾತನ್ನೇ ಎಲೀಫಜ ಹೇಳಿದ್ನು. ದೇವ್ರು ತುಂಬ ದೊಡ್ಡವನು, ಕೆಟ್ಟವ್ರಿಗೆ ಶಿಕ್ಷೆ ಕೊಡ್ತಾನೆ, ಒಳ್ಳೆಯವ್ರಿಗೆ ಒಳ್ಳೇದನ್ನೇ ಮಾಡ್ತಾನೆ ಅಂತ ಅವನು ಹೇಳಿದ್ನು. ಇದನ್ನ ಕೇಳಿಸಿಕೊಳ್ಳುವಾಗ ‘ಇದ್ರಲ್ಲೇನೂ ತಪ್ಪಿಲ್ವಲ್ವಾ?’ ಅಂತ ಅನಿಸಬಹುದು. ಆದ್ರೆ ಅವನು ಹೇಳಿದ ಮಾತಿನಿಂದ ಯೋಬನಿಗಿದ್ದ ನೋವು ಇನ್ನೂ ಹೆಚ್ಚಾಯ್ತು. ಯಾಕಂದ್ರೆ ದೇವ್ರು ಒಳ್ಳೆಯವನು, ಒಳ್ಳೆಯವ್ರಿಗೆ ಒಳ್ಳೇದನ್ನೇ ಮಾಡ್ತಾನೆ, ಕೆಟ್ಟವ್ರಿಗೆ ಮಾತ್ರ ಶಿಕ್ಷೆ ಕೊಡ್ತಾನೆ ಅಂದ ಮೇಲೆ ಯೋಬನು ಏನೋ ತಪ್ಪು ಮಾಡಿರಬೇಕು, ಅದಕ್ಕೇ ಅವ್ನಿಗೆ ಶಿಕ್ಷೆ ಸಿಗ್ತಾ ಇದೆ ಅಂತ ಎಲೀಫಜ ಪರೋಕ್ಷವಾಗಿ ಹೇಳ್ತಾ ಇದ್ದ.—ಯೋಬ 4:1, 7, 8; 5:3-6.

ಯೋಬ ಎಲೀಫಜನ ಮಾತನ್ನ ಒಪ್ಪಿಕೊಳ್ಳಲಿಲ್ಲ. ಅವನು ಹೇಳಿದ್ದು ತಪ್ಪು ಅಂತ ಖಡಾಖಂಡಿತವಾಗಿ ಹೇಳಿದ್ನು. (ಯೋಬ 6:25) ಯೋಬನ ಮಾತು ಕೇಳಿದಾಗ ಆ ಮೂವರಿಗೂ ಅವನೇನೋ ತಪ್ಪು ಮಾಡಿ ಅದನ್ನ ಮುಚ್ಚಿಡೋಕೆ ಪ್ರಯತ್ನಿಸ್ತಿದ್ದಾನೆ ಅಂತ ಅನಿಸ್ತು. ಅವನ ಜೀವನದಲ್ಲಿ ಆಗಿರೋ ದುರಂತಗಳೆಲ್ಲಾ ಅವನ ತಪ್ಪಿಗೆ ಸಿಕ್ಕಿರೋ ತಕ್ಕ ಶಿಕ್ಷೆ ಅಂತ ಅವರಿಗನಿಸ್ತು. ಯೋಬ ದುರಹಂಕಾರದಿಂದ ನಡ್ಕೊಂಡಿದ್ದಾನೆ, ಕೆಟ್ಟ ಕೆಲ್ಸ ಮಾಡಿದ್ದಾನೆ ಮತ್ತು ಅವನಿಗೆ ದೇವ್ರ ಭಯ ಇಲ್ಲ ಅಂತ ಎಲೀಫಜ ಹೇಳಿದ. (ಯೋಬ 15:4, 7-9, 20-24; 22:6-11) ಯೋಬ ಕೆಟ್ಟದ್ದನ್ನ ಮಾಡಿ ಖುಷಿಪಡೋದನ್ನ ಬಿಟ್ಟುಬಿಡಬೇಕು ಅಂತ ಚೋಫರ ಹೇಳಿದ. (ಯೋಬ 11:2, 3, 14; 20:5, 12, 13) ಬಿಲ್ದದ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಯೋಬನ ಮನ್ಸಿಗೆ ಚುಚ್ಚೋ ತರ ಮಾತಾಡಿದ. ಯೋಬನ ಮಕ್ಳು ಏನೋ ತಪ್ಪು ಮಾಡಿರ್ಬೇಕು, ಅದಕ್ಕೇ ಅವ್ರು ಸತ್ತು ಹೋದ್ರು, ಅವ್ರಿಗೆ ತಕ್ಕ ಶಿಕ್ಷೆ ಆಯ್ತು ಅಂದ.—ಯೋಬ 8:4, 13.

ಯೋಬನ ಮೂವರು ಸ್ನೇಹಿತರು ಅವನಿಗೆ ಸಾಂತ್ವನ ಕೊಡೋ ಬದಲು ಅವನಿಗಿದ್ದ ನೋವನ್ನ ಇನ್ನೂ ಜಾಸ್ತಿ ಮಾಡಿದ್ರು

ನಿಯತ್ತಾಗಿಲ್ಲ ಅನ್ನೋ ಆರೋಪ

ಆ ಮೂವರು ಸ್ನೇಹಿತರು ಹೇಳಿದ್ದೆಲ್ಲಾ ತಪ್ಪಾಗಿತ್ತು. ಯೋಬ ದೇವ್ರಿಗೆ ನಿಯತ್ತಾಗಿಲ್ಲ ಅಂತ ಅವ್ರು ಹೇಳಿದ್ರು. ಅಷ್ಟೇ ಅಲ್ಲ, ಯಾವುದೇ ಒಬ್ಬ ವ್ಯಕ್ತಿ ದೇವ್ರಿಗೆ ನಿಯತ್ತಾಗಿರೋಕೆ ಸಾಧ್ಯನೇ ಇಲ್ಲ ಅಂತ ಅವ್ರು ಹೇಳಿದ್ರು. ಎಲೀಫಜ, ಕಣ್ಣಿಗೆ ಸರಿಯಾಗಿ ಕಾಣದ ಒಂದು ರೂಪವು ತನ್ನ ಕಣ್ಣ ಮುಂದೆ ಹಾದು ಹೋಯ್ತು ಅಂದ. ಅದು ಬಹುಶಃ ಒಬ್ಬ ಕೆಟ್ಟ ದೇವದೂತ ಆಗಿರಬಹುದು. ಈ ದೂತನ ಪ್ರಭಾವದಿಂದ ಎಲೀಫಜನು ದೇವ್ರ ಬಗ್ಗೆ ತಪ್ಪಾಗಿ ಮಾತಾಡಿದ್ನು. ಒಬ್ಬ ವ್ಯಕ್ತಿ ದೇವ್ರ ಮೇಲೆ ಇಟ್ಟಿರೋ ನಂಬಿಕೆನ ಕಳ್ಕೊಳ್ಳೋ ತರ ಎಲೀಫಜ ಮಾತಾಡಿದ್ನು. ದೇವ್ರು “ತನ್ನ ಪರಿಚಾರಕರಲ್ಲಿಯೂ ನಂಬಿಕೆಯನ್ನಿಡುವದಿಲ್ಲ. ತನ್ನ ದೂತರ ಮೇಲೆಯೂ ತಪ್ಪುಹೊರಿಸುತ್ತಾನೆ” ಅಂದ. ಅಂದ್ರೆ ಸ್ವರ್ಗದಲ್ಲಿರೋ ದೂತರೇ ದೇವ್ರನ್ನ ಖುಷಿ ಪಡ್ಸೋಕೆ ಆಗಲ್ಲ, ಹಾಗಿರುವಾಗ ಮನುಷ್ಯರು ಏನು ಮಾಡೋಕಾಗುತ್ತೆ ಅಂತ ಎಲೀಫಜ ಹೇಳ್ತಾ ಇದ್ದ. ಯೋಬ ದೇವ್ರಿಗೆ ನಿಯತ್ತಾಗಿರೋಕೆ ಎಷ್ಟೇ ಪ್ರಯತ್ನ ಮಾಡೋದಾದ್ರೂ ದೇವ್ರು ಅದ್ರ ಬಗ್ಗೆ ತಲೆಕೆಡಿಸಿಕೊಳ್ಳೋದೇ ಇಲ್ಲ ಅಂತ ಬಿಲ್ದದ ಹೇಳ್ದ. ದೇವ್ರ ಮುಂದೆ ಮನುಷ್ಯರು ಹುಳಕ್ಕೆ ಸಮಾನ ಅಂತನೂ ಹೇಳ್ದ.—ಯೋಬ 4:12-18; 15:15; 22:2, 3; 25:4-6.

ನೀವು ಯಾವತ್ತಾದ್ರೂ ನೋವಲ್ಲಿ ಇರುವವ್ರನ್ನ ಭೇಟಿ ಮಾಡಿದ್ದೀರಾ? ಅಂಥವ್ರಿಗೆ ಸಮಾಧಾನ ಮಾಡೋದು, ಸಾಂತ್ವನ ಹೇಳೋದು ಅಷ್ಟೊಂದು ಸುಲಭ ಅಲ್ಲ. ಈ ರೀತಿ ನೋವಲ್ಲಿ, ದುಃಖದಲ್ಲಿ ಇರುವವ್ರಿಗೆ ಏನು ಹೇಳ್ಬಾರ್ದು ಅಂತ ನಾವು ಯೋಬನ ಮೂವರು ಸ್ನೇಹಿತರಿಂದ ಕಲಿಬಹುದು. ಅವ್ರು, ಜನ ಸಾಮಾನ್ಯವಾಗಿ ಸರಿ ಅಂತ ನೆನಸೋ ಮಾತುಗಳನ್ನೇ ಹೇಳಿದ್ರು. ಆದ್ರೆ ಯೋಬನಿಗೆ ಸ್ವಲ್ಪನೂ ಕರುಣೆ ತೋರಿಸ್ಲಿಲ್ಲ. ಅವ್ರು ಅಷ್ಟೊತ್ತು ಮಾತಾಡಿದ್ರೂ ಯೋಬನನ್ನ ಹೆಸರೆತ್ತಿ ಕರೆಯಲೂ ಇಲ್ಲ. ಯೋಬನ ಮನಸ್ಸೊಳಗೆ ಎಷ್ಟು ನೋವಿರಬಹುದು ಅಂತ ಯೋಚಿಸೋಕೂ ಹೋಗ್ಲಿಲ್ಲ. ಯೋಬನ ಜೊತೆ ಮೃದುವಾಗಿ ನಡ್ಕೊಳ್ಳಲಿಲ್ಲ. * ನಾವು ದುಃಖದಲ್ಲಿ ಇರುವವ್ರನ್ನ ಭೇಟಿ ಮಾಡಿದಾಗ ಅವ್ರತ್ರ ಪ್ರೀತಿಯಿಂದ ಮಾತಾಡಬೇಕು, ಅವ್ರಿಗೆ ಹೇಗನ್ಸುತ್ತೆ ಅಂತ ಅರ್ಥಮಾಡ್ಕೊಬೇಕು ಅಂತ ಈ ಮೂರು ಜನ್ರಿಂದ ಕಲಿತೀವಿ. ನಾವು ದುಃಖದಲ್ಲಿ ಇರುವವ್ರಿಗೆ ಧೈರ್ಯ ತುಂಬಬೇಕು, ಇದ್ರಿಂದ ಅವ್ರಿಗೆ ದೇವ್ರ ಮೇಲಿರೋ ನಂಬಿಕೆ ಹೆಚ್ಚಾಗುತ್ತೆ. ದೇವ್ರು ಅವ್ರಿಗೆ ಅನ್ಯಾಯ ಮಾಡಲ್ಲ, ಒಳ್ಳೇದನ್ನೇ ಮಾಡ್ತಾನೆ, ಕನಿಕರ ತೋರಿಸ್ತಾನೆ ಅಂತ ಅವ್ರಿಗೆ ಅರ್ಥ ಮಾಡಿಸಬೇಕು. ಒಂದುವೇಳೆ, ಆ ಮೂವರು ಸ್ನೇಹಿತರ ಸ್ಥಾನದಲ್ಲಿ ಯೋಬ ಇದ್ದಿದ್ರೆ ಅವ್ನು ಇದನ್ನೇ ಮಾಡ್ತಿದ್ದ. (ಯೋಬ 16:4, 5) ಯೋಬ ದೇವ್ರಿಗೆ ನಿಯತ್ತಾಗಿಲ್ಲ ಅಂತ ಸ್ನೇಹಿತರು ಆರೋಪ ಹಾಕಿದಾಗ ಯೋಬ ಏನಂತ ಉತ್ರ ಕೊಟ್ಟ ಅಂತ ಈಗ ನೋಡೋಣ.

ಯೋಬ ಕೊನೆವರೆಗೂ ನಿಯತ್ತಾಗಿದ್ದ

ಯೋಬ ಮತ್ತು ಅವನ ಸ್ನೇಹಿತರು ಮಾತುಕತೆ ಶುರು ಮಾಡೋದಕ್ಕೂ ಮುಂಚಿನಿಂದನೇ ಯೋಬನಿಗೆ ತುಂಬ ನೋವಿತ್ತು. ಅವನು ಶುರುವಲ್ಲೇ, ನಾನು “ಆತುರದಿಂದ ಮಾತಾಡಿದ್ದೇನೆ” ಅಂತ ಒಪ್ಕೊಂಡಿದ್ದ. ಒಬ್ಬ ವ್ಯಕ್ತಿ ನೋವಲ್ಲಿದ್ರೆ ಹಿಂದೆ ಮುಂದೆ ಯೋಚಿಸದೇ ಮಾತಾಡ್ತಾನೆ ಅಂತನೂ ಹೇಳಿದ್ದ. (ಯೋಬ 6:3, 26) ಯೋಬ ಯಾಕೆ ಈ ರೀತಿ ಹೇಳಿದ ಅಂತ ನಮಗೆ ಅರ್ಥ ಆಗುತ್ತೆ. ಅವನು ಸಹಿಸೋಕಾಗದೇ ಇರುವಷ್ಟು ನೋವಲ್ಲಿದ್ದ. ಇದೆಲ್ಲಾ ಯಾಕೆ ಆಗ್ತಾ ಇದೆ ಅಂತನೂ ಅವ್ನಿಗೆ ಗೊತ್ತಿರಲಿಲ್ಲ. ಎಲ್ಲಾ ಕಷ್ಟಗಳು ಇದ್ದಕ್ಕಿದ್ದಂತೆ ಒಂದರ ಮೇಲೊಂದರಂತೆ ಬಂದಿದ್ವು. ಜೊತೆಗೆ, ಇದು ಯಾವುದೇ ಮನುಷ್ಯರ ಕೈಯಿಂದ ಆಗಿರೋ ತರ ಕಾಣಿಸ್ತಿರ್ಲಿಲ್ಲ. ಆದ್ರಿಂದ ಯೋಬ ಈ ಎಲ್ಲಾ ಕಷ್ಟಗಳನ್ನ ಯೆಹೋವನೇ ಕೊಟ್ಟಿದ್ದು ಅಂತ ನೆನಸಿದ. ಆದ್ರೆ ವಿಷ್ಯ ಹಾಗಿರ್ಲಿಲ್ಲ. ಸ್ವರ್ಗದಲ್ಲಿ ನಡೆದ ಘಟನೆಗಳ ಬಗ್ಗೆ ಯೋಬನಿಗೆ ಗೊತ್ತಿರಲಿಲ್ಲ. ಹಾಗಾಗಿ ಅವನು ತಪ್ಪಾಗಿ ಯೋಚಿಸಿದ.

ಆದ್ರೆ ಯೋಬನಿಗೆ ದೇವ್ರ ಮೇಲಿದ್ದ ನಂಬಿಕೆ ಕಡಿಮೆ ಆಗ್ಲಿಲ್ಲ. ಇದು ನಮಗೆ ಅವನ ಮಾತಿನಿಂದ ಚೆನ್ನಾಗಿ ಗೊತ್ತಾಗುತ್ತೆ. ಅವನು ಹೇಳಿದ ಮಾತು ಹೆಚ್ಚಾಗಿ ಸತ್ಯವಾಗಿತ್ತು, ಕೇಳೋಕೆ ಮನ್ಸಿಗೆ ಖುಷಿ ಆಗೋ ತರ ಇತ್ತು, ಧೈರ್ಯ ತುಂಬಿಸೋ ತರಾನೂ ಇತ್ತು. ಅವನು ಸೃಷ್ಟಿ ಬಗ್ಗೆ ಮಾತಾಡ್ತಾ ಯೆಹೋವನನ್ನು ಹೊಗಳಿದ್ನು. ಸೃಷ್ಟಿ ಬಗ್ಗೆ ಹೇಳಿದ ಕೆಲವು ಮಾತುಗಳನ್ನ ಖಂಡಿತ ಯೆಹೋವನೇ ಅವನಿಗೆ ತಿಳಿಸಿಕೊಟ್ಟಿರಬೇಕು. ಉದಾಹರಣೆಗೆ, ಯೆಹೋವನು “ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗ ಹಾಕಿದ್ದಾನೆ” ಅಂತ ಅವನು ಹೇಳಿದ್ನು. * (ಯೋಬ 26:7) ಯೋಬ ಇದನ್ನ ಹೇಳಿ ಅನೇಕ ಶತಮಾನಗಳು ಆದ ಮೇಲೆನೇ ವಿಜ್ಞಾನಿಗಳು ಇದು ನಿಜ ಅಂತ ಕಂಡುಹಿಡಿದ್ರು. ತಾನು ಒಂದುವೇಳೆ ಸತ್ತು ಹೋದ್ರೆ ದೇವ್ರು ತನ್ನನ್ನ ನೆನಪಿಸಿಕೊಳ್ತಾನೆ, ತನಗೋಸ್ಕರ ಹಂಬಲಿಸ್ತಾನೆ ಮತ್ತು ಸರಿಯಾದ ಸಮ್ಯದಲ್ಲಿ ಪುನಃ ಜೀವ ಕೊಡ್ತಾನೆ ಅಂತ ಯೋಬ ಹೇಳಿದ್ನು. ಈ ವಿಷ್ಯದಲ್ಲಿ ಬೇರೆ ನಂಬಿಗಸ್ತ ಸ್ತ್ರೀ-ಪುರುಷರಿಗೆ ಎಷ್ಟು ನಂಬಿಕೆ ಇತ್ತೋ ಅಷ್ಟೇ ನಂಬಿಕೆ ಯೋಬನಿಗೂ ಇತ್ತು.—ಯೋಬ 14:13-15; ಇಬ್ರಿಯ 11:17-19, 35.

ಮನುಷ್ಯನ ನಿಯತ್ತಿನ ಬಗ್ಗೆ ಮೂರು ಸ್ನೇಹಿತರು ತಪ್ಪುತಪ್ಪಾಗಿ ಹೇಳಿದ್ದನ್ನು ಯೋಬ ನಂಬಿದ್ನಾ? ಖಂಡಿತ ಇಲ್ಲ. ಮನುಷ್ಯ ನಿಯತ್ತಾಗಿದ್ರೂ ಇಲ್ಲದಿದ್ರೂ ಅದ್ರ ಬಗ್ಗೆ ದೇವ್ರು ತಲೆಕೆಡಿಸಿಕೊಳ್ಳೋದೇ ಇಲ್ಲ ಅಂತ ಅವ್ರು ಹೇಳಿದ್ರು. ಆದ್ರೆ ಯೋಬ, ಒಬ್ಬ ವ್ಯಕ್ತಿ ನಿಯತ್ತಾಗಿದ್ರೆ ಅದನ್ನ ದೇವ್ರು ಗಮನಿಸ್ತಾನೆ, ಅದಕ್ಕೆ ಪ್ರಾಮುಖ್ಯತೆ ಕೊಡ್ತಾನೆ ಅಂತ ಹೇಳಿದ್ನು. ಅದಕ್ಕೇ, ಅವನು ಭರವಸೆಯಿಂದ, ‘ದೇವ್ರು ನನ್ನ ಯಥಾರ್ಥತ್ವವನ್ನ ತಿಳುಕೊಳ್ತಾನೆ’ ಅಂತ ಹೇಳಿದನು. (ಯೋಬ 31:5) ಸುಳ್ಳಾದ ವಿಷ್ಯಗಳನ್ನ ತಿಳಿಸ್ತಾ ತನ್ನ ಸ್ನೇಹಿತರು ತಾನು ದೇವ್ರಿಗೆ ನಿಯತ್ತಾಗಿಲ್ಲ ಅಂತ ಸಾಬೀತು ಮಾಡೋಕೆ ಪ್ರಯತ್ನಿಸ್ತಿದ್ದಾರೆ ಅಂತ ಯೋಬ ಅರ್ಥಮಾಡ್ಕೊಂಡ. ಅದಕ್ಕೆ ಅವನು ಸುಮ್ಮನಿರ್ಲಿಲ್ಲ. ತುಂಬ ಹೊತ್ತಿನ ವರೆಗೆ ಮಾತಾಡ್ದ. ಹೀಗೆ ಅವ್ರ ಬಾಯಿ ಮುಚ್ಚಿಸಿದ.

ಜೀವನದ ಪ್ರತಿ ದಿನನೂ ನಿರ್ದೋಷಿಯಾಗಿ ನಡ್ಕೊಂಡಿದ್ದೇನೆ ಅಂತ ಯೋಬನಿಗೆ ಗೊತ್ತಿತ್ತು. ಅದಕ್ಕೇ ಅವನು ತನ್ನನ್ನ ಸಮರ್ಥಿಸ್ತಾ ಜೀವನದ ಪ್ರತಿಯೊಂದು ವಿಷ್ಯದಲ್ಲೂ ಯೆಹೋವನಿಗೆ ನಿಯತ್ತಾಗಿದ್ದೇನೆ ಅಂತ ಹೇಳಿದ. ಉದಾಹರಣೆಗೆ, ಅವನು ಯಾವುದೇ ರೀತಿಯ ವಿಗ್ರಹಾರಾಧನೆ ಮಾಡ್ತಿರ್ಲಿಲ್ಲ. ಎಲ್ರನ್ನ ಗೌರವದಿಂದ ನೋಡ್ತಿದ್ದ. ಕಷ್ಟದಲ್ಲಿರುವವ್ರಿಗೆ ಸಹಾಯ ಮಾಡ್ತಿದ್ದ. ನೈತಿಕವಾಗಿ ಶುದ್ಧನಾಗಿದ್ದ ಮತ್ತು ಬೇರೆಯವ್ರನ್ನ ಕೆಟ್ಟ ದೃಷ್ಟಿಯಿಂದ ನೋಡ್ತಾ ಇರ್ಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬನೇ ಸತ್ಯ ದೇವರಾಗಿರೋ ಯೆಹೋವನನ್ನ ಮಾತ್ರ ಆರಾಧಿಸ್ತಿದ್ದ. ಅದಕ್ಕೇ ಅವನು, “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು” ಅಂದ.—ಯೋಬ 27:5; 31:1, 2, 9-11, 16-18, 26-28.

 

ಏನೇ ಆದ್ರೂ ಯೋಬ ನಿಯತ್ತಾಗಿದ್ದ

ಯೋಬನ ತರ ನಂಬಿಕೆ ತೋರಿಸಿ

ಯೋಬನ ತರ ನೀವು ಸಹ ಯಾವುದೇ ಪರಿಸ್ಥಿತಿಯಲ್ಲೂ ಯೆಹೋವನಿಗೆ ನಿಯತ್ತಾಗಿರೋಕೆ ಇಷ್ಟಪಡ್ತೀರಾ? ‘ನಾನು ನಿಯತ್ತಾಗಿದ್ದೇನೆ’ ಅಂತ ಹೇಳಿದ್ರೆ ಮಾತ್ರ ಸಾಕಾಗಲ್ಲ, ಆ ತರ ಜೀವನ ಮಾಡಿ ತೋರಿಸ್ಬೇಕು. ಇದು ಯೋಬನಿಗೆ ಚೆನ್ನಾಗಿ ಗೊತ್ತಿತ್ತು. ಜೀವನದ ಪ್ರತಿ ಸಮ್ಯದಲ್ಲೂ ಯೆಹೋವನು ಏನು ಇಷ್ಟ ಪಡ್ತಾನೋ ಅದನ್ನೇ ಮಾಡ್ಬೇಕು. ಕಷ್ಟ ಬಂದಾಗ್ಲೂ ಆತನ ಆಜ್ಞೆಗಳ ಪ್ರಕಾರನೇ ನಡಿಬೇಕು. ಹೀಗೆ ಮಾಡೋ ಮೂಲಕ ನಾವು ಸಹ ಯೋಬನ ತರ ಯೆಹೋವನ ಮನಸ್ಸನ್ನ ಖುಷಿ ಪಡಿಸ್ತೇವೆ ಮತ್ತು ಸೈತಾನನ ಪ್ರಯತ್ನವನ್ನೆಲ್ಲಾ ಮಣ್ಣುಪಾಲು ಮಾಡ್ತೇವೆ. ಹೀಗೆ ನಾವು ಯೋಬನ ತರ ನಂಬಿಕೆಯನ್ನ ತೋರಿಸಬಹುದು.

ಯೋಬನ ಕಥೆ ಇನ್ನೂ ಮುಗಿದಿಲ್ಲ. ಅವನು ತನ್ನನ್ನ ಸಮರ್ಥಿಸಿಕೊಳ್ಳೋಕೆ ಹೋಗಿ ಒಂದು ಮುಖ್ಯ ವಿಷ್ಯವನ್ನ ಮರೆತುಬಿಟ್ಟ. ಯೆಹೋವನ ಪರವಾಗಿ ಮಾತಾಡ್ಲಿಲ್ಲ, ಬರೀ ತಾನು ನಿರ್ದೋಷಿ ಅಂತ ಹೇಳ್ತಾ ಇದ್ದ. ಯೋಬ ಯೆಹೋವನ ತರ ಯೋಚಿಸ್ಬೇಕಂದ್ರೆ ಅವನನ್ನ ಯಾರಾದ್ರೂ ತಿದ್ದೋ ಅವಶ್ಯಕತೆ ಇತ್ತು. ಅವನು ತುಂಬ ನೋವಲ್ಲಿ ಇದ್ದಿದ್ರಿಂದ ಅವನಿಗೆ ಸಾಂತ್ವನನೂ ಬೇಕಿತ್ತು. ದೇವ್ರಿಗೆ ನಂಬಿಗಸ್ತನಾಗಿ ನಿಯತ್ತಾಗಿದ್ದ ಯೋಬನ ಜೊತೆ ಯೆಹೋವನು ಹೇಗೆ ನಡ್ಕೊಂಡ ಅನ್ನೋದನ್ನೂ ನಾವು ತಿಳ್ಕೊಬೇಕು. ಈ ಎಲ್ಲಾ ವಿಷ್ಯಗಳ ಬಗ್ಗೆ ಈ ಸರಣಿಯ ಮುಂದಿನ ಲೇಖನದಲ್ಲಿ ತಿಳುಕೊಳ್ತೇವೆ.

^ ಪ್ಯಾರ. 23 ತಾನು ಮತ್ತು ತನ್ನ ಇಬ್ರು ಸ್ನೇಹಿತರೂ ಯೋಬನ ಹತ್ರ ಮೃದುವಾಗಿ ಮಾತಾಡಿದ್ದೇವೆ ಅಂತ ಎಲೀಫಜ ನೆನಸಿದ. ಆದ್ರೆ ಅವನು ನೆನಸಿದ್ದು ತಪ್ಪಾಗಿತ್ತು. ಅವನ ಸ್ವರ ಮೃದುವಾಗಿ ಇದ್ದಿರಬಹುದು. ಆದ್ರೆ ಅವನ ಮಾತಿನಿಂದ ಯೋಬನಿಗೆ ತುಂಬ ನೋವಾಯ್ತು. (ಯೋಬ 15:11) ಒಬ್ಬ ವ್ಯಕ್ತಿಯ ಸ್ವರ ಮೃದುವಾಗಿದ್ರೂ ಅವನ ಮಾತು ಕತ್ತಿಯಿಂದ ತಿವಿದ ತರ ಇರೋಕೆ ಸಾಧ್ಯ ಇದೆ ಅಂತ ಇದ್ರಿಂದ ನಮಗೆ ಗೊತ್ತಾಗುತ್ತೆ.

^ ಪ್ಯಾರ. 26 ಯೋಬನ ಕಾಲದಿಂದ ಸುಮಾರು ಮೂರು ಸಾವಿರ ವರ್ಷಗಳು ಕಳೆದ ನಂತ್ರನೇ ವಿಜ್ಞಾನಿಗಳು ಭೂಮಿ ಯಾವುದೇ ವಸ್ತುವಿನ ಮೇಲಿಲ್ಲ, ಯಾವುದೇ ಆಧಾರ ಇಲ್ಲದೆ ಇದೆ ಅಂತ ಒಪ್ಕೊಂಡ್ರು. ಅಂತರಿಕ್ಷಕ್ಕೆ ಹೋಗಿ ಭೂಮಿಯ ಫೊಟೋ ತೆಗೆದು ತೋರಿಸಿದ ನಂತ್ರನೇ ಜನ ಇದನ್ನ ನಂಬಿದ್ರು.