ಮಾಹಿತಿ ಇರುವಲ್ಲಿ ಹೋಗಲು

ಪಾಪ ಅಂದರೆ ಏನು?

ಪಾಪ ಅಂದರೆ ಏನು?

ಬೈಬಲ್‌ ಕೊಡುವ ಉತ್ತರ

 ದೇವರ ಮಟ್ಟಗಳಿಗೆ ವಿರುದ್ಧವಾಗಿ ನಾವು ಏನೇ ಮಾಡಿದರೂ ಏನೇ ಅಂದುಕೊಂಡರೂ ಯೋಚಿಸಿದರೂ ಅದು ಪಾಪ. ದೇವರ ದೃಷ್ಟಿಯಲ್ಲಿ ತಪ್ಪಾದ ಕೆಟ್ಟದಾದ ಕೆಲಸಗಳನ್ನು ಮಾಡುವುದು ಕೂಡ ಪಾಪ. (1 ಯೋಹಾನ 3:4; 5:17) ಸರಿಯಾಗಿ ಇರುವುದನ್ನು ಮಾಡದೇ ಇರುವುದು ಕೂಡ ಪಾಪ ಎಂದು ಬೈಬಲ್‌ ಹೇಳುತ್ತದೆ.—ಯಾಕೋಬ 4:17.

 ಮೊದಮೊದಲು ಬೈಬಲನ್ನು ಬರೆದ ಭಾಷೆಗಳಲ್ಲಿ ಪಾಪಕ್ಕೆ ಇರುವ ಪದದ ಅರ್ಥ “ಗುರಿ ತಪ್ಪುವುದು.” ಹಿಂದಿನ ಕಾಲದ ಇಸ್ರಾಯೇಲಿನ ಸೈನಿಕರು ಕವಣೆ ಕಲ್ಲುಗಳಿಂದ ‘ಗುರಿ ತಪ್ಪದೆ’ ಹೊಡೆಯೋದರಲ್ಲಿ ತುಂಬ ನಿಪುಣರು. ‘ಗುರಿ ತಪ್ಪದೆ’ ಅನ್ನೋದರ ಅಕ್ಷರಾರ್ಥ ಭಾಷಾಂತರ “ಪಾಪ ಮಾಡದೆ” ಎಂದಾಗಿದೆ. (ನ್ಯಾಯಸ್ಥಾಪಕರು 20:16) ಹಾಗಾಗಿ ದೇವರ ಪರಿಪೂರ್ಣ ಮಟ್ಟಗಳನ್ನು ಪಾಲಿಸಲು ತಪ್ಪಿ ಹೋಗುವುದೇ ಪಾಪ.

 ದೇವರು ಸೃಷ್ಟಿಕರ್ತ. ಹಾಗಾಗಿ ನಾವು ಏನು ಮಾಡಬೇಕು ಏನು ಮಾಡಬಾರದು ಅಂತ ಹೇಳುವ ಹಕ್ಕು ಆತನಿಗಿದೆ. (ಪ್ರಕಟನೆ 4:11) ನಾವೇನೇ ಮಾಡಿದರೂ ಆತನಿಗೆ ಲೆಕ್ಕ ಕೊಡಬೇಕು.—ರೋಮನ್ನರಿಗೆ 14:12.

ಒಂದು ಪಾಪನೂ ಮಾಡದೇ ಇರಲಿಕ್ಕೆ ಆಗುತ್ತದಾ?

 ಇಲ್ಲ. “ಎಲ್ರೂ ಪಾಪ ಮಾಡಿದ್ದಾರೆ. ಹಾಗಾಗಿ ದೇವರ ಮಹಾ ಗುಣಗಳನ್ನ ತೋರಿಸೋಕೆ ಯಾರಿಗೂ ಆಗ್ತಿಲ್ಲ” ಅನ್ನುತ್ತದೆ ಬೈಬಲ್‌. (ರೋಮನ್ನರಿಗೆ 3:23; 1 ಅರಸು 8:46; ಪ್ರಸಂಗಿ 7:20; 1 ಯೋಹಾನ 1:8) ಯಾಕೆ ಹಾಗೆ?

 ಆದಾಮ ಮತ್ತು ಹವ್ವಳಲ್ಲಿ ಮೊದಲು ಪಾಪ ಇರಲಿಲ್ಲ. ಯಾಕೆಂದರೆ ದೇವರು ಅವರನ್ನು ಯಾವುದೇ ಕುಂದುಕೊರತೆ ಇಲ್ಲದೆ ಆತನಿಗೆ ಹೋಲುವ ಹಾಗೆ ಸೃಷ್ಟಿ ಮಾಡಿದನು. (ಆದಿಕಾಂಡ 1:27) ಆದರೆ ಅವರು ದೇವರ ಮಾತು ಕೇಳದೆ ಪಾಪ ಮಾಡಿದಾಗ ಅವರಲ್ಲಿ ಕುಂದುಕೊರತೆ ಬಂತು. (ಆದಿಕಾಂಡ 3:5, 6, 17-19) ಅವರಿಗೆ ಹುಟ್ಟಿದ ಮಕ್ಕಳಿಗೆಲ್ಲ ಆ ಪಾಪ ಮತ್ತು ಕುಂದುಕೊರತೆಯನ್ನು ದಾಟಿಸಿದರು. (ರೋಮನ್ನರಿಗೆ 5:12) ರಾಜ ದಾವೀದ “ಹುಟ್ಟಿದಾಗಿಂದಾನೇ ನಾನು ಪಾಪಿ” ಅಂದನು.—ಕೀರ್ತನೆ 51:5.

ಘೋರ ಪಾಪ ಅಂತ ಇದೆಯಾ?

 ಇದೆ. ಉದಾಹರಣೆಗೆ, ‘ಸೊದೋಮಿನ ಜನ್ರು ತುಂಬ ಕೆಟ್ಟವರಾಗಿದ್ರು, ದೊಡ್ಡ ಪಾಪಗಳನ್ನ ಮಾಡ್ತಿದ್ರು’ ಅಂತ ಬೈಬಲ್‌ ಹೇಳುತ್ತದೆ. (ಆದಿಕಾಂಡ 13:13; 18:20) ಯಾವುದು ಘೋರ ಪಾಪ ಅಂತ ಅರ್ಥಮಾಡಿಕೊಳ್ಳಲು ಈ ಮೂರು ವಿಷಯಗಳನ್ನು ನೋಡಿ.

  1.   ಎಷ್ಟರ ಮಟ್ಟಿಗೆ ಘೋರ. ಲೈಂಗಿಕ ಅನೈತಿಕತೆ, ಮೂರ್ತಿಗಳ ಆರಾಧನೆ, ಕಳ್ಳತನ, ಕುಡಿಕತನ, ಸುಲಿಗೆ, ಕೊಲೆ, ಮಾಟಮಂತ್ರ ಇಂಥ ಘೋರ ಪಾಪಗಳನ್ನು ಮಾಡಬಾರದೆಂದು ಬೈಬಲ್‌ ಎಚ್ಚರಿಕೆ ಕೊಡುತ್ತದೆ. (1 ಕೊರಿಂಥ 6:9-11; ಪ್ರಕಟನೆ 21:8) ಯೋಚಿಸದೆ, ನಮಗೆ ಗೊತ್ತಿಲ್ಲದೆ ಮಾಡುವ ಪಾಪಗಳು ಸಹ ಇವೆ. ಉದಾಹರಣೆಗೆ ಬೇರೆಯವರಿಗೆ ನೋವಾಗುವ ತರ ಮಾತಾಡುವುದು ಅಥವಾ ನಡೆದುಕೊಳ್ಳುವುದು. (ಜ್ಞಾನೋಕ್ತಿ 12:18; ಎಫೆಸ 4:31, 32) ಯಾವುದೇ ಪಾಪವನ್ನು ನಾವು ಸಾಧಾರಣವಾಗಿ ನೆನಸಬಾರದು ಅಂತ ಬೈಬಲ್‌ ಹೇಳುತ್ತದೆ. ಯಾಕೆಂದರೆ ಅದು, ಇನ್ನೂ ದೊಡ್ಡ ಪಾಪವನ್ನು ಮಾಡಿ ದೇವರ ಆಜ್ಞೆಯನ್ನು ಮುರಿಯುವಂತೆ ಮಾಡುತ್ತದೆ.—ಮತ್ತಾಯ 5:27, 28.

  2.   ಪಾಪ ಮಾಡಲು ಕಾರಣ. ದೇವರ ಆಜ್ಞೆಗಳ ಬಗ್ಗೆ ಗೊತ್ತಿಲ್ಲದೆ ಕೆಲವರು ಪಾಪ ಮಾಡುತ್ತಾರೆ. (ಅಪೊಸ್ತಲರ ಕಾರ್ಯ 17:30; 1 ತಿಮೊತಿ 1:13) ಈ ರೀತಿಯ ಪಾಪಗಳನ್ನು ಸುಮ್ಮನೆ ಬಿಟ್ಟುಬಿಡಲು ಆಗಲ್ಲ. ಹಾಗಿದ್ದರೂ ಅವು ಬೇಕುಬೇಕಂತ ದೇವರ ಆಜ್ಞೆಗಳನ್ನು ಮುರಿಯುವ ಪಾಪಗಳ ತರ ಅಲ್ಲ ಅಂತ ಬೈಬಲ್‌ ಹೇಳುತ್ತದೆ. (ಅರಣ್ಯಕಾಂಡ 15:30, 31) ”ಕೆಟ್ಟಹೃದಯ” ಇರುವವರು ಬೇಕುಬೇಕಂತ ಪಾಪ ಮಾಡುತ್ತಾರೆ.—ಯೆರೆಮೀಯ 16:12.

  3.   ಎಷ್ಟು ಸಲ? ಒಂದು ಸಲ ಮಾಡುವ ಪಾಪಕ್ಕೂ ತುಂಬ ಸಮಯದಿಂದ ಮಾಡುತ್ತಿರುವ ಪಾಪಕ್ಕೂ ವ್ಯತ್ಯಾಸ ಇದೆ ಅಂತ ಬೈಬಲ್‌ ಹೇಳುತ್ತದೆ. (1 ಯೋಹಾನ 3:4-8) ಸರಿ ಯಾವುದು ಅಂತ ಕಲಿತ ಮೇಲೂ “ಬೇಕುಬೇಕಂತ ಪಾಪ ಮಾಡ್ತಾ ಇದ್ರೆ” ದೇವರು ಅವರಿಗೆ ನ್ಯಾಯತೀರಿಸುತ್ತಾನೆ.—ಇಬ್ರಿಯ 10:26, 27.

 ಗಂಭೀರ ಪಾಪ ಮಾಡಿದ ಕೆಲವರು ತಾವು ಮಾಡಿದ್ದನ್ನು ನೆನಸಿ ಕೊರಗಿ ಕೊರಗಿ ಕುಗ್ಗಿಹೋಗುತ್ತಾರೆ. ರಾಜ ದಾವೀದ ಹೀಗೆ ಬರೆದನು: “ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿದೆ, ಅದು ಭಾರವಾದ ಹೊರೆ ತರ ಇದೆ, ನನ್ನಿಂದ ಹೊರಕ್ಕಾಗ್ತಿಲ್ಲ.” (ಕೀರ್ತನೆ 38:4) ಆದರೆ ಬೈಬಲ್‌ ಯಾವ ಸಾಂತ್ವನ ಕೊಡುತ್ತದೆ ನೋಡಿ, “ಕೆಟ್ಟವನು ತನ್ನ ಮಾರ್ಗವನ್ನ, ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ, ಅವನು ಯೆಹೋವನ ಹತ್ರ ವಾಪಸ್‌ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ, ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ ಕ್ಷಮಿಸ್ತಾನೆ.”—ಯೆಶಾಯ 55:7.