ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 3

ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ!

ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ!

“ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯುಳ್ಳವರಾಗಿರಿ; ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:8

ದಾಂಪತ್ಯ ಜೀವನಕ್ಕೆ ಕಾಲಿಡುತ್ತಲೇ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇದಕ್ಕೆ ನಿಮ್ಮಿಬ್ಬರ ಯೋಚನಾಧಾಟಿ, ಭಾವನೆ ಮತ್ತು ಜೀವನವನ್ನು ವೀಕ್ಷಿಸುವ ರೀತಿಯಲ್ಲಿನ ಭಿನ್ನತೆ ಕಾರಣವಾಗಿರಬಹುದು. ಇಲ್ಲವೇ, ಬೇರೆಯವರಿಂದ ಮತ್ತು ಅನಿರೀಕ್ಷಿತ ಘಟನೆಗಳಿಂದಲೂ ಈ ಸಮಸ್ಯೆಗಳು ಎದುರಾಗಬಹುದು.

‘ಇವೆಲ್ಲಾ ಇದ್ದಿದ್ದೇ’ ಎಂದು ಸಮಸ್ಯೆಗಳನ್ನು ಕಡೆಗಣಿಸದಿರಿ. ಏಕೆಂದರೆ, ನಾವು ನಮ್ಮ ಸಮಸ್ಯೆಗಳನ್ನು ಎದುರಿಸಬೇಕು ಅಂತ ಬೈಬಲ್‌ ಹೇಳುತ್ತದೆ. (ಮತ್ತಾಯ 5:23, 24) ಬೈಬಲ್‌ ತತ್ವಗಳನ್ನು ಅನ್ವಯಿಸಿಕೊಳ್ಳುವಾಗ ನಿಮ್ಮ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಸಿಗುತ್ತದೆ.

1 ಸಮಸ್ಯೆ ಕುರಿತು ಮಾತಾಡಿ

ಬೈಬಲಿನ ಹಿತವಚನ: ‘ಮಾತಾಡುವುದಕ್ಕೂ ತಕ್ಕ ಸಮಯವುಂಟು.’ (ಪ್ರಸಂಗಿ 3:1, 7) ಯಾವುದೇ ಸಮಸ್ಯೆ ಎದುರಾದಾಗ ಅದರ ಕುರಿತು ಮಾತಾಡಲು ಸಮಯಮಾಡಿಕೊಳ್ಳಿ. ನಿಮ್ಮ ಭಾವನೆಗಳ ಮತ್ತು ಅನಿಸಿಕೆಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತಾಡಿ. ಯಾವಾಗಲೂ ನಿಮ್ಮ ಸಂಗಾತಿಗೆ “ಸತ್ಯವನ್ನೇ” ಹೇಳಿ. (ಎಫೆಸ 4:25) ಕೋಪ ಬಂದಾಗಲೂ ಜಗಳವಾಡದಂತೆ ಜಾಗ್ರತೆವಹಿಸಿ. ನೀವು ಮೃದುವಾಗಿ ಮಾತಾಡುವುದಾದರೆ ನಿಮ್ಮ ಮಾತುಕತೆ ಜಗಳದಲ್ಲಿ ಕೊನೆಗೊಳ್ಳದಂತೆ ತಡೆಯುತ್ತೀರಿ.—ಜ್ಞಾನೋಕ್ತಿ 15:4; 26:20.

ನಿಮ್ಮ ಸಂಗಾತಿಯ ಮಾತು ನಿಮಗೆ ಒಪ್ಪಿಗೆಯಾಗದಿದ್ದಾಗಲೂ ಸಹನೆಯಿಂದಿರಿ. ಅವರಿಗೆ ಪ್ರೀತಿ, ಗೌರವ ತೋರಿಸಲು ಎಂದೂ ಮರೆಯದಿರಿ. (ಕೊಲೊಸ್ಸೆ 4:6) ಸಾಧ್ಯವಾದಷ್ಟು ಬೇಗನೆ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ, ಮಾತಾಡುವುದನ್ನೇ ನಿಲ್ಲಿಸಿಬಿಡಬೇಡಿ.—ಎಫೆಸ 4:26.

ಹೀಗೆ ಮಾಡಿ:

  • ಸಮಸ್ಯೆಯ ಕುರಿತು ಮಾತಾಡಲು ಸೂಕ್ತ ಸಮಯವನ್ನು ನಿಗದಿಪಡಿಸಿ

  • ನಿಮ್ಮ ಸಂಗಾತಿ ಮಾತಾಡುವಾಗ ಮಧ್ಯೆ ಬಾಯಿ ಹಾಕಬೇಡಿ. ನಿಮ್ಮ ಸರದಿ ಬಂದಾಗ ಮಾತಾಡಿ

2 ಕಿವಿಗೊಟ್ಟು ಕೇಳಿ, ಅರ್ಥಮಾಡಿಕೊಳ್ಳಿ

ಬೈಬಲಿನ ಹಿತವಚನ: “ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮನ್ನರಿಗೆ 12:10) ನೀವು ಕಿವಿಗೊಡುವ ವಿಧ ತುಂಬ ಪ್ರಾಮುಖ್ಯ. ‘ಅನುಕಂಪ ಮತ್ತು ದೀನಮನಸ್ಸಿನಿಂದ’ ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. (1 ಪೇತ್ರ 3:8; ಯಾಕೋಬ 1:19) ಕೇಳಿಸಿಕೊಳ್ಳುವ ಹಾಗೆ ನಟಿಸಬೇಡಿ. ಸಾಧ್ಯವಾದರೆ ನೀವು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ ಸಂಗಾತಿ ಹೇಳುವ ಮಾತಿಗೆ ಸಂಪೂರ್ಣ ಗಮನಕೊಡಿ. ಇಲ್ಲವೇ, ‘ಈ ವಿಷಯದ ಕುರಿತು ಆಮೇಲೆ ಮಾತಾಡೋಣ್ವಾ’ ಅಂತ ಕೇಳಿ. ನಿಮ್ಮ ಸಂಗಾತಿಯನ್ನು ವೈರಿಯಂತೆ ನೋಡದೆ ನಿಮ್ಮ ಜೊತೆಗಾರ/ರ್ತಿ ಎಂದು ಭಾವಿಸುವುದಾದರೆ ನೀವು ‘ಕೋಪಕ್ಕೆ ಆತುರಪಡುವುದಿಲ್ಲ.’—ಪ್ರಸಂಗಿ 7:9.

ಹೀಗೆ ಮಾಡಿ:

  • ನಿಮ್ಮ ಸಂಗಾತಿ ಹೇಳುವ ವಿಷಯ ನಿಮಗೆ ಇಷ್ಟವಾಗದಿದ್ದಾಗಲೂ ಬಿಚ್ಚು ಮನಸ್ಸಿನಿಂದ ಅದಕ್ಕೆ ಕಿವಿಗೊಡಿ

  • ನಿಮ್ಮ ಸಂಗಾತಿ ಮಾತಾಡುವಾಗ ಅವರ ಹಾವಭಾವ ಮತ್ತು ಸ್ವರದ ಏರಿಳಿತವನ್ನು ಗಮನಿಸಿ. ಹೀಗೆ ಅವರು ಏನು ಹೇಳಲು ಬಯಸುತ್ತಿದ್ದಾರೆಂದು ಗ್ರಹಿಸಿ

3 ನಿರ್ಣಯಕ್ಕೆ ಅಂಟಿಕೊಳ್ಳಿ

ಬೈಬಲಿನ ಹಿತವಚನ: “ಶ್ರಮೆಯಿಂದ ಸಮೃದ್ಧಿ; ಹರಟೆಯಿಂದ ಕೊರತೆ.” (ಜ್ಞಾನೋಕ್ತಿ 14:23) ಒಮ್ಮತದಿಂದ ಒಂದು ಒಳ್ಳೇ ಪರಿಹಾರವನ್ನು ಕಂಡುಕೊಳ್ಳುವುದಷ್ಟೇ ಸಾಲದು. ಅದನ್ನು ಕಾರ್ಯರೂಪಕ್ಕೆ ಹಾಕುವುದು ಸಹ ಪ್ರಾಮುಖ್ಯ. ಇದಕ್ಕೆ ಬಹಳ ಪ್ರಯಾಸ ಮತ್ತು ಪ್ರಯತ್ನದ ಅಗತ್ಯವಿದೆ. ಆದರೆ ಇದರಿಂದ ಸಿಗುವ ಪ್ರಯೋಜನಕ್ಕೆ ಹೋಲಿಸುವಾಗ ನಾವು ಪಡುವ ಪರಿಶ್ರಮ ಏನೇನೂ ಅಲ್ಲ. (ಜ್ಞಾನೋಕ್ತಿ 10:4) ನೀವು ಜೊತೆಯಾಗಿ ಕೆಲಸ ಮಾಡುವಾಗ ನಿಮ್ಮ ಪ್ರಯಾಸಕ್ಕೆ “ಒಳ್ಳೆಯ ಲಾಭ” ಪಡೆಯುತ್ತೀರಿ.—ಪ್ರಸಂಗಿ 4:9.

ಹೀಗೆ ಮಾಡಿ:

  • ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ನೀವಿಬ್ಬರೂ ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕೆಂದು ನಿರ್ಣಯಿಸಿ

  • ನಿಮ್ಮ ನಿರ್ಣಯಗಳನ್ನು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಹಾಕಿದ್ದೀರೆಂದು ಆಗಾಗ ಪರೀಕ್ಷಿಸಿ