ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನೆಯಲ್ಲಿ ಕಿರುಕುಳ—ಮೆಟ್ಟಿನಿಲ್ಲಲು ಸಹಾಯ

ಮನೆಯಲ್ಲಿ ಕಿರುಕುಳ—ಮೆಟ್ಟಿನಿಲ್ಲಲು ಸಹಾಯ

 “ಲೋಕದಲ್ಲಿ ಎಲ್ಲ ಕಡೆ ಸ್ತ್ರೀಯರ ಮೇಲೆ ದೌರ್ಜನ್ಯ ಆಗ್ತಾ ಇದೆ. ಇದು ಸೊಂಕುರೋಗದ ತರ ಹರಡುತ್ತಿದೆ. ಇದನ್ನು ನಿಲ್ಲಿಸಲಿಕ್ಕೆ ಏನಾದ್ರೂ ಮಾಡಲೇಬೇಕು” ಅಂತ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್‌ ಒ) ಹೇಳುತ್ತೆ. 100 ರಲ್ಲಿ 30 ಮಹಿಳೆಯರು ಗಂಡನಿಂದ ಅಥವಾ ಹಳೇ ಬಾಯ್‌ ಫ್ರೆಂಡಿಂದ “ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ಮಹಿಳೆಯರನ್ನು ಹೊಡಿತಾರೆ, ಲೈಂಗಿಕ ಕಿರುಕುಳ ಕೊಡ್ತಾರೆ” ಅಂತಾನೂ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತೆ. ವಿಶ್ವಸಂಸ್ಥೆ ವರದಿ ಪ್ರಕಾರ ಇತ್ತೀಚಿಗೆ ಒಂದು ವರ್ಷದಲ್ಲಿ ದಿನಕ್ಕೆ ಲೋಕದ ಸುತ್ತ ಸುಮಾರು 137 ಸ್ತ್ರೀಯರು ಸ್ವಂತ ಗಂಡ ಅಥವಾ ಕುಟುಂಬದಲ್ಲಿ ಇರೋ ಒಬ್ಬರ a ಕೈಯಿಂದ ಕೊಲೆ ಆಗಿದ್ದಾರೆ.

 ಕೌಟುಂಬಿಕ ದೌರ್ಜನ್ಯ ಅನ್ನೋದು ಎಷ್ಟು ದೊಡ್ಡ ಸಮಸ್ಯೆ ಅಂತ ಅಂಕಿಅಂಶಗಳು ತೋರಿಸುತ್ತವೆ. ಹಾಗಿದ್ರೂ ಅದು ದೌರ್ಜನ್ಯಕ್ಕೆ ಒಳಗಾದವರು ಅನುಭವಿಸೋ ನೋವು, ನರಳಾಟ, ವೇದನೆ ಏನಂತ ಹೇಳಲಿಕ್ಕೆ ಆಗಲ್ಲ.

 ಮನೆಯಲ್ಲಿ ನಿಮಗೆ ಕಿರುಕುಳ ಇದ್ಯಾ? ಮನೆಯಲ್ಲಿ ಕಿರುಕುಳ ಅನುಭವಿಸ್ತಿರೋ ಬೇರೆ ಯಾರಾದ್ರೂ ನಿಮಗೆ ಗೊತ್ತಾ? ಹಾಗಿದ್ರೆ ನಿಮಗೆ ಸಹಾಯ ಆಗೋ ಕೆಲವು ವಿಷ್ಯ ಬೈಬಲಲ್ಲಿದೆ. ಅದು ಯಾವುದು ಅಂತ ನೋಡಿ.

  ತಪ್ಪು ನಿಮ್ಮದಲ್ಲ

  ಸಹಾಯ ಸಿಗುತ್ತೆ

  ದೇವರು ನಿಮ್ಮ ಜೊತೆ ಇದ್ದಾನೆ

  ಕಿರುಕುಳಕ್ಕೆ ಕೊನೆ ಇದೆ

  ಕಿರುಕುಳಕ್ಕೆ ಒಳಗಾದವರಿಗೆ ಹೇಗೆ ಸಹಾಯ ಮಾಡಬಹುದು?

 ತಪ್ಪು ನಿಮ್ಮದಲ್ಲ

 ಬೈಬಲ್‌ ಏನು ಹೇಳುತ್ತದೆ? “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕ ಒಪ್ಪಿಸುವನು.”—ರೋಮನ್ನರಿಗೆ 14:12.

 ನೆನಪಡಿ: ನಿಮಗೆ ಕಿರುಕುಳ ಕೊಡುವವನದ್ದೇ ತಪ್ಪು.

 ನಿಮಗೆ ಕಿರುಕುಳ ಕೊಟ್ಟು ತಪ್ಪು ನಿಮ್ಮದೇ ಅಂತ ಗಂಡ ಹೇಳೋದು ಸರಿಯಲ್ಲ. ಹೆಂಡತಿಯನ್ನು ಗಂಡ ಪ್ರೀತಿಸಬೇಕು, ಅವಳಿಗೆ ಕಿರುಕುಳ ಕೊಡಬಾರದು. ಪ್ರೀತಿ ಪಡಿಯೋ ಯೋಗ್ಯತೆ ಅವಳಿಗಿದೆ.—ಕೊಲೊಸ್ಸೆ 3:19.

 ಗಂಡ ಹೆಂಡತಿಯ ಮೇಲೆ ದೌರ್ಜನ್ಯ ನಡೆಸಲಿಕ್ಕೆ ಕಾರಣ ಬೇರೆ ಬೇರೆ ಇರಬಹುದು. ಅವನು ಕುಡುಕ ಆಗಿರಬಹುದು ಅಥವಾ ಅವನಿಗೆ ಮಾನಸಿಕ ರೋಗ ಇರಬಹುದು. ಮನೆಯಲ್ಲಿ ಯಾರಾದ್ರೂ ಜಗಳ ಮಾಡೋದನ್ನ, ಹೊಡೆದಾಡೋದನ್ನ ಚಿಕ್ಕ ವಯಸ್ಸಿಂದ ಅವನು ನೋಡಿರಬಹುದು. ಕಾರಣ ಏನೇ ಇರಲಿ, ಗಂಡ ನಿಮಗೆ ಕೊಡುವ ಕಿರುಕುಳಕ್ಕೆ ಅವನು ದೇವರಿಗೆ ಲೆಕ್ಕ ಕೊಡಲೇಬೇಕು. ತಪ್ಪು ನಿಮ್ಮದಲ್ಲ, ಬದಲಾಗಬೇಕಾಗಿರೋದು ಅವನು.

 ಸಹಾಯ ಸಿಗುತ್ತೆ

 ಬೈಬಲ್‌ ಏನು ಹೇಳುತ್ತದೆ? ಆಲೋಚನೆ ಹೇಳುವವರು ತುಂಬ ಜನ ಇದ್ದರೆ ಉದ್ದೇಶಗಳು ಈಡೇರುತ್ತವೆ.—ಜ್ಞಾನೋಕ್ತಿ 15:22.

 ನೆನಪಡಿ: ನಿಮಗೆ ಭಯ ಆಗ್ತಿದ್ರೆ, ಏನು ಮಾಡಬೇಕು ಅಂತ ಗೊತ್ತಾಗದಿದ್ರೆ ಚಿಂತೆ ಮಾಡಬೇಡಿ, ನಿಮಗೆ ಸಹಾಯ ಮಾಡಲಿಕ್ಕೆ ಬೇರೆಯವರು ಇದ್ದಾರೆ.

 ಬೇರೆಯವರ ಸಹಾಯ ನಿಮಗೆ ಯಾಕೆ ಬೇಕು? ಯಾಕೆಂದ್ರೆ ಕಿರುಕುಳ ಅನುಭವಿಸ್ತಿರೋದ್ರಿಂದ ತುಂಬ ವಿಷ್ಯ ನಿಮ್ಮ ತಲೆಯಲ್ಲಿ ಓಡುತ್ತಿರುತ್ತೆ. ಒಂದು ವಿಷ್ಯದ ಬಗ್ಗೆ ನಿರ್ಧಾರ ತಕ್ಕೊಳ್ಳೋದು ನಿಮಗೆ ಕಷ್ಟ ಆಗಬಹುದು. ಉದಾಹರಣೆಗೆ,

  •   ಜೀವಕ್ಕೆ ಅಪಾಯ ಆಗದೇ ಇರೋದಕ್ಕೆ ಏನ್‌ ಮಾಡಲಿ?

  •   ಮಕ್ಕಳ ಭವಿಷ್ಯ ಬಗ್ಗೆ ಏನು?

  •   ಜೀವನ ನಡೆಸಲಿಕ್ಕೆ ದುಡ್ಡಿಗೆ ಏನ್‌ ಮಾಡಲಿ?

  •   ಇಷ್ಟಾದ್ರೂ ಗಂಡನ ಮೇಲೆ ಪ್ರೀತಿ ಇದೆ, ಏನು ಮಾಡೋದು?

  •   ಅವನು ಬದಲಾದರೆ ಹೇಗೋ ಅವನ ಜೊತೆನೇ ಸಂಸಾರ ಮಾಡ್ತೀನಿ

 ಈ ತರ ನೂರೆಂಟು ವಿಷ್ಯದ ಬಗ್ಗೆ ನೀವು ಯೋಚಿಸಿ ಯೋಚಿಸಿ ಏನು ಮಾಡೋದು ಅಂತ ಗೊತ್ತಾಗದೆ ತಲೆ ಕೆಟ್ಟುಹೋಗೋದು ಸಹಜ. ಯಾರು ನಿಮಗೆ ಸಹಾಯ ಮಾಡಬಹುದು?

 ನೀವು ಪೂರ್ತಿ ನಂಬಿಕೆ ಇಡುವ ಫ್ರೆಂಡ್‌ ಅಥವಾ ಕುಟುಂಬದಲ್ಲಿ ಒಬ್ಬರು. ಇವರು ನಿಮಗೆ ಬೇಕಾದ ಸಹಾಯ ಕೊಡಬಹುದು, ಸಮಾಧಾನ ಹೇಳಬಹುದು. ನಿಮ್ಮ ಬಗ್ಗೆ ಅಕ್ಕರೆ ಇರುವವರ ಹತ್ರ ಮನಸ್ಸಲ್ಲಿ ಇರೋದನ್ನೆಲ್ಲ ಹೇಳಿಕೊಂಡರೆ ನಿಮ್ಮ ಮನಸ್ಸಿನ ಭಾರ ಕಡಿಮೆ ಆಗುತ್ತೆ.

 ದೌರ್ಜನ್ಯಕ್ಕೆ ಒಳಗಾದವರಿಗೆ ಹೆಲ್ಪ್‌ ಲೈನ್‌. ಅಲ್ಲಿಗೆ ನೀವು ಕರೆ ಮಾಡಿದರೆ ಅವರು ತಕ್ಷಣ ನಿಮ್ಮ ನೆರವಿಗೆ ಬರಬಹುದು. ನಿಮ್ಮನ್ನ ಕಾಪಾಡಿಕೊಳ್ಳೋಕೆ ನೀವು ಏನು ಮಾಡಬಹುದು ಅಂತ ತಿಳಿಸಬಹುದು. ’ನಾನು ಮಾಡ್ತಿರೋದು ತಪ್ಪು, ನಾನು ಬದಲಾಗಬೇಕು‘ ಅಂತ ನಿಮ್ಮ ಗಂಡ ನಿಜವಾಗ್ಲೂ ಅರ್ಥಮಾಡ್ಕೊಂಡ್ರೆ ಮೊದಲು ಅವನು ಏನೇನು ಮಾಡಬೇಕು ಅಂತ ಹೆಲ್ಪ್‌ ಲೈನ್‌ ಹೇಳಿಕೊಡುತ್ತೆ.

 ತುರ್ತು ವೈದ್ಯಕೀಯ ಸಹಾಯ. ದೌರ್ಜನ್ಯದಿಂದ ನೀವೇನಾದ್ರೂ ಅಪಾಯದಲ್ಲಿ ಇದ್ರೆ ಡಾಕ್ಟರ್‌, ನರ್ಸ್‌ ಅಥವಾ ಪರಿಣಿತರು ತಕ್ಷಣ ನಿಮಗೆ ಸಹಾಯ ಮಾಡ್ತಾರೆ.

 ದೇವರು ನಿಮ್ಮ ಜೊತೆ ಇದ್ದಾನೆ

 ಬೈಬಲ್‌ ಏನು ಹೇಳುತ್ತದೆ? “ಮುರಿದ ಮನಸ್ಸುಳ್ಳವರಿಗೆ ಯೆಹೋವನು b ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತನೆ 34:18.

 ನೆನಪಡಿ: ನಿಮಗೆ ಸಹಾಯ ಮಾಡ್ತೀನಿ ಅಂತ ದೇವರೇ ಮಾತು ಕೊಟ್ಟಿದ್ದಾನೆ.

 ನಿಮ್ಮ ಬಗ್ಗೆ ಯೆಹೋವ ದೇವರಿಗೆ ತುಂಬ ಅಕ್ಕರೆ ಇದೆ. (1 ಪೇತ್ರ 5:7) ನಿಮ್ಮ ಮನದಾಳದಲ್ಲಿರೋ ಯೋಚನೆ, ವೇದನೆ, ಅನಿಸಿಕೆ ಎಲ್ಲ ಆತನಿಗೆ ಅರ್ಥ ಆಗ್ತದೆ. ಆತನು ತನ್ನ ವಾಕ್ಯವಾದ ಬೈಬಲಿನ ಮೂಲಕ ನಿಮಗೆ ಸಾಂತ್ವನ ಕೊಡುತ್ತಾನೆ. ನೀವು ಕೂಡ ಮನಸ್ಸು ಬಿಚ್ಚಿ ಆತನ ಹತ್ರ ಮಾತಾಡಬೇಕು ಅಂದ್ರೆ ಪ್ರಾರ್ಥನೆ ಮಾಡಬೇಕು ಅನ್ನೋದೇ ಆತನ ಇಷ್ಟ. ಹಾಗೆ ದೇವರ ಹತ್ರ ಮಾತಾಡುವಾಗ ’ನೋವನ್ನ ತಾಳಿಕೊಳ್ಳೋಕೆ ಶಕ್ತಿ ಕೊಡಪ್ಪ, ವಿವೇಚನೆಯಿಂದ ನಡೆದುಕೊಳ್ಳೋಕೆ ಹೇಳಿಕೊಡಪ್ಪ‘ ಅಂತ ಕೇಳಿ.—ಯೆಶಾಯ 41:10.

 ಕಿರುಕುಳಕ್ಕೆ ಕೊನೆ ಇದೆ

 ಬೈಬಲ್‌ ಏನು ಹೇಳುತ್ತದೆ? ‘ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಿಬಳ್ಳಿ, ಅಂಜೂರಗಿಡ, ಇವುಗಳ ನೆರಳಿನಲ್ಲಿ ವಾಸಿಸುವನು. ಅವರನ್ನು ಯಾರೂ ಹೆದರಿಸುವುದಿಲ್ಲ.’—ಮೀಕ 4:4.

 ನೆನಪಡಿ: ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ತುಂಬಿತುಳುಕುವ ಸಮಯ ಬೇಗ ಬರುತ್ತೆ ಅಂತ ಬೈಬಲ್‌ ಹೇಳ್ತದೆ. ಆಗ ನಿಮ್ಮ ಮನೆ ಜೇನಿನ ಸವಿಗೂಡಿನಂತೆ ಇರುತ್ತೆ.

 ನಮ್ಮ ಎಲ್ಲ ಸಮಸ್ಯೆಗಳು ಇನ್ನು ಯಾವತ್ತೂ ಬರದೇ ಇರೋ ಹಾಗೆ ಪೂರ್ತಿಯಾಗಿ ತೆಗೆದು ಹಾಕಲಿಕ್ಕೆ ಯೆಹೋವ ದೇವರಿಗೆ ಮಾತ್ರ ಆಗುತ್ತೆ. ಬೈಬಲಲ್ಲಿ ದೇವರು ಕೊಟ್ಟಿರೋ ಮಾತು ನೋಡಿ: “ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.” (ಪ್ರಕಟನೆ 21:4) ಆಗ ಕಹಿ ನೆನಪುಗಳು ಕೂಡ ಮರೆಯಾಗಿ ಸಿಹಿ ನೆನಪುಗಳು ಚಿರಕಾಲ ನಿಮ್ಮ ಮನದಲ್ಲಿ ಉಳಿಯುತ್ತವೆ. (ಯೆಶಾಯ 65:17) ನೀವು ಶಾಂತಿ ನೆಮ್ಮದಿಯಿಂದ ಜೀವಿಸುವ ಕಾಲ ಮುಂದೆ ಬರುತ್ತೆ ಅಂತ ಬೈಬಲ್‌ ಹೇಳ್ತದೆ.

a ಈ ಲೇಖನದಲ್ಲಿ ಮನೆಯಲ್ಲಿ ಕಿರುಕುಳಕ್ಕೆ ಗುರಿಯಾಗಿರೋ ಸ್ತ್ರೀಯರ ಬಗ್ಗೆ ಹೇಳಲಾಗಿದೆ. ಹಾಗಿದ್ದರೂ ಇದರಲ್ಲಿರೋ ಹೆಚ್ಚಿನ ವಿಷ್ಯ ಇಂಥ ಕಿರುಕುಳಕ್ಕೆ ಗುರಿಯಾಗಿರೋ ಗಂಡಸರಿಗೂ ಅನ್ವಯಿಸುತ್ತೆ.

b ದೇವರ ಹೆಸರು ಯೆಹೋವ ಎಂದು ಬೈಬಲ್‌ ಹೇಳುತ್ತದೆ.