ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೀಠಿಕೆ

ಪೀಠಿಕೆ

‘ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು ಬಾಧ್ಯತೆಯಾಗಿ ಹೊಂದುವವರನ್ನು ಅನುಕರಿಸುವವರಾಗಿರಿ.’​—ಇಬ್ರಿಯ 6:12.

1, 2. (1) ಸಂಚರಣ ಮೇಲ್ವಿಚಾರಕರೊಬ್ಬರಿಗೆ ಬೈಬಲಿನಲ್ಲಿರುವ ನಂಬಿಗಸ್ತ ವ್ಯಕ್ತಿಗಳ ಕುರಿತು ಹೇಗನಿಸುತ್ತಿತ್ತೆಂದು ತೋರುತ್ತದೆ? (2) ಅಂಥ ನಂಬಿಗಸ್ತರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಒಳ್ಳೇದೇಕೆ?

“ಬೈಬಲಿನಲ್ಲಿರುವ ವ್ಯಕ್ತಿಗಳ ಬಗ್ಗೆ ಅವರು ಮಾತಾಡುವಾಗ ತಮ್ಮ ಹಳೇ ಮಿತ್ರರ ಬಗ್ಗೆ ಹೇಳುತ್ತಿದ್ದಾರೇನೋ ಎಂದು ಅನಿಸುತ್ತದೆ.” ಇದು, ಸಂಚರಣ ಮೇಲ್ವಿಚಾರಕರಾಗಿದ್ದ ವೃದ್ಧ ಸಹೋದರರೊಬ್ಬರ ಭಾಷಣ ಕೇಳಿದ ನಂತರ ಒಬ್ಬಾಕೆ ಸಹೋದರಿ ಹೇಳಿದ ಮಾತು. ಆಕೆ ಹೇಳಿದ್ದು ನಿಜ. ದಶಕಗಳಿಂದ ದೇವರ ವಾಕ್ಯವನ್ನು ಅಧ್ಯಯನ ಮಾಡಿದ್ದ ಆ ಸಹೋದರರು ಬೈಬಲಿನ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಕಲಿಸುತ್ತಿದ್ದಾಗೆಲ್ಲ ಅವರೆಲ್ಲರೂ ಎಷ್ಟೋ ವರ್ಷಗಳಿಂದ ಅವರ ಸ್ನೇಹಿತರಾಗಿದ್ದಾರೆಂದು ಅನಿಸುತ್ತಿತ್ತು.

2 ನಿಮಗೂ ಆ ನಂಬಿಗಸ್ತ ಸ್ತ್ರೀಪುರುಷರು ಸ್ನೇಹಿತರಂತೆ ನೈಜ ವ್ಯಕ್ತಿಗಳಾಗಿದ್ದಾರಾ? ಅಂಥವರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಎಷ್ಟು ಚೆನ್ನ! ನೋಹ, ಅಬ್ರಹಾಮ, ರೂತ್‌, ಎಲೀಯ, ಎಸ್ತೇರ್‌ ಮತ್ತಿತರರ ಜೊತೆ ನಡೆಯುತ್ತಾ, ಮಾತಾಡುತ್ತಾ, ಸಮಯ ಕಳೆಯುತ್ತಾ ಅವರನ್ನು ಚೆನ್ನಾಗಿ ತಿಳಿದುಕೊಳ್ಳುವುದು ಹೇಗಿರುವುದೆಂದು ಚಿತ್ರಿಸಿಕೊಳ್ಳಿ. ಅವರು ನಿಮಗೆ ಮುತ್ತುಗಳಂಥ ಬುದ್ಧಿಮಾತುಗಳನ್ನು ಹೇಳುತ್ತಾ ಪ್ರೋತ್ಸಾಹ ತುಂಬುತ್ತಾ ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸಬಹುದೆಂದು ತುಸು ಯೋಚಿಸಿ.—ಜ್ಞಾನೋಕ್ತಿ 13:20 ಓದಿ.

3. (1) ಬೈಬಲಿನಲ್ಲಿ ತಿಳಿಸಲಾಗಿರುವ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಕಲಿಯುವುದರಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು? (2) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

3 ನಾವು ಅಂಥ ಸ್ನೇಹಸಾಂಗತ್ಯವನ್ನು ‘ನೀತಿವಂತರ ಪುನರುತ್ಥಾನ’ ಆಗುವಾಗ ಪೂರ್ಣವಾಗಿ ಆನಂದಿಸಲು ಸಾಧ್ಯವೆಂಬುದು ನಿಜ. (ಅ. ಕಾ. 24:15) ಆದರೆ ಆ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಕಲಿಯುವುದರಿಂದ ನಾವು ಈಗಲೂ ಪ್ರಯೋಜನ ಪಡೆಯಸಾಧ್ಯ. ಹೇಗೆ? ಉತ್ತರ ಅಪೊಸ್ತಲ ಪೌಲನ ಈ ಮಾತುಗಳಲ್ಲಿದೆ: ‘ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು ಬಾಧ್ಯತೆಯಾಗಿ ಹೊಂದುವವರನ್ನು ಅನುಕರಿಸಿ.’ (ಇಬ್ರಿ. 6:12) ಅವರ ಕುರಿತ ಅಧ್ಯಯನವನ್ನು ಶುರುಮಾಡುವ ಮುನ್ನ ಪೌಲನ ಮಾತುಗಳಿಂದ ಏಳುವ ಈ ಪ್ರಶ್ನೆಗಳನ್ನು ಚರ್ಚಿಸೋಣ: ನಂಬಿಕೆ ಅಂದರೇನು? ನಂಬಿಕೆ ನಮಗೇಕೆ ಬೇಕು? ಬೈಬಲಿನಲ್ಲಿ ತಿಳಿಸಲಾಗಿರುವ ನಂಬಿಗಸ್ತ ವ್ಯಕ್ತಿಗಳನ್ನು ನಾವು ಹೇಗೆ ಅನುಕರಿಸಬಲ್ಲೆವು?

ನಂಬಿಕೆ ಅಂದರೇನು? ಅದು ನಮಗೇಕೆ ಬೇಕು?

4. (1) ನಂಬಿಕೆಯ ಬಗ್ಗೆ ಜನರ ಎಣಿಕೆಯೇನು? (2) ಆ ಎಣಿಕೆ ತಪ್ಪೇಕೆ?

4 ನಂಬಿಕೆ ಒಂದು ಆಕರ್ಷಕ ಗುಣ. ಈ ಪ್ರಕಾಶನದಲ್ಲಿ ನಾವು ಅಧ್ಯಯನ ಮಾಡಲಿರುವ ಸ್ತ್ರೀಪುರುಷರೆಲ್ಲರಿಗೆ ಆ ಗುಣ ಅತ್ಯಮೂಲ್ಯವಾಗಿತ್ತು. ಇಂದು ಬಹುತೇಕ ಮಂದಿಗೆ ನಿಜ ನಂಬಿಕೆ ಅಂದರೇನೆಂದು ಗೊತ್ತಿಲ್ಲ. ಯಾವುದೇ ವಿಷಯವನ್ನು ಪುರಾವೆ, ಆಧಾರಗಳು ಇಲ್ಲದಿದ್ದರೂ ಕಣ್ಮುಚ್ಚಿ ಅಂಗೀಕರಿಸುವುದೇ ನಂಬಿಕೆ ಎಂಬುದು ಅವರೆಣಿಕೆ. ಆದರೆ ಇದು ತಪ್ಪು ಅಭಿಪ್ರಾಯ. ನಿಜ ನಂಬಿಕೆ ಅನ್ನೋದು ಕಂಡುಕೇಳಿದ್ದನ್ನೆಲ್ಲ ಸುಲಭವಾಗಿ ನಂಬಿ ಮೋಸಹೋಗುವ ದೌರ್ಬಲ್ಯವಲ್ಲ. ಆ ರೀತಿ ನಂಬುವುದು ಅಪಾಯಕಾರಿ. ನಂಬಿಕೆ ಬರೀ ಒಂದು ಅನಿಸಿಕೆಯೂ ಅಲ್ಲ. ಅನಿಸಿಕೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತವೆ. ನಂಬಿಕೆಯು ಬರೀ ದೇವರಿದ್ದಾನೆಂದು ನಂಬುವುದೂ ಅಲ್ಲ. ಏಕೆಂದರೆ ದೇವರಿದ್ದಾನೆಂದು ‘ದೆವ್ವಗಳು ಸಹ ನಂಬಿ ಭಯದಿಂದ ನಡುಗುತ್ತವೆ.’—ಯಾಕೋ. 2:19.

5, 6. (1) ನಮ್ಮ ನಂಬಿಕೆ ಯಾವ ಎರಡು ವಿಷಯಗಳ ಮೇಲೆ ಕೇಂದ್ರಿತವಾಗಿದೆ? (2) ನಮ್ಮ ನಂಬಿಕೆ ಎಷ್ಟು ದೃಢವಾಗಿರಬೇಕು? ಉದಾಹರಣೆ ಕೊಡಿ.

5 ನಿಜ ನಂಬಿಕೆ ಎಷ್ಟೋ ಮಿಗಿಲಾದದ್ದು. ನಂಬಿಕೆಯ ಬಗ್ಗೆ ಬೈಬಲ್‌ ಕೊಡುವ ಅರ್ಥನಿರೂಪಣೆಯನ್ನು ನೆನಪಿಸಿಕೊಳ್ಳಿ. (ಇಬ್ರಿಯ 11:1 ಓದಿ.) ನಂಬಿಕೆಯು ನಾವು ನೋಡಲು ಸಾಧ್ಯವಿಲ್ಲದ ಎರಡು ವಿಷಯಗಳ ಮೇಲೆ ಕೇಂದ್ರಿತವಾಗಿದೆ ಎಂದು ಪೌಲ ಹೇಳಿದನು. ಒಂದು ವಿಷಯ: “ಕಣ್ಣಿಗೆ ಕಾಣದಿರುವ” ಪ್ರಸ್ತುತ ನಿಜತ್ವಗಳು. ಉದಾಹರಣೆಗೆ, ಸ್ವರ್ಗದಲ್ಲಿನ ನಿಜತ್ವಗಳು ಅಂದರೆ ಯೆಹೋವ ದೇವರು, ಆತನ ಪುತ್ರ, ಸ್ವರ್ಗದಲ್ಲಿ ಆಳ್ವಿಕೆ ನಡೆಸುತ್ತಿರುವ ದೇವರ ರಾಜ್ಯ. ಇನ್ನೊಂದು ವಿಷಯ: ‘ನಿರೀಕ್ಷಿಸುವ ವಿಷಯಗಳು’ ಅಂದರೆ ಇನ್ನೂ ಸಂಭವಿಸಿರದ ಸಂಗತಿಗಳು. ಉದಾಹರಣೆಗೆ, ದೇವರ ರಾಜ್ಯ ಶೀಘ್ರದಲ್ಲೇ ತರಲಿರುವ ಹೊಸ ಲೋಕ. ಇದರರ್ಥ ಅಂಥ ನಿಜತ್ವಗಳಲ್ಲಿ ಮತ್ತು ನಾವು ನಿರೀಕ್ಷಿಸುತ್ತಿರುವ ವಿಷಯಗಳಲ್ಲಿ ನಮಗಿರುವ ನಂಬಿಕೆಗೆ ಆಧಾರವಿಲ್ಲವೆಂದಾ?

6 ಖಂಡಿತ ಹಾಗಲ್ಲ. ನಿಜ ನಂಬಿಕೆಗೆ ಸ್ಥಿರವಾದ ಬುನಾದಿ, ಆಧಾರ ಇದೆಯೆಂದು ಪೌಲ ವಿವರಿಸಿದನು. ನಂಬಿಕೆಯು “ನಿಶ್ಚಿತ ಭರವಸೆ” ಆಗಿದೆ ಎಂದು ಅವನು ಹೇಳಿದನು. “ನಿಶ್ಚಿತ ಭರವಸೆ” ಎಂಬ ಅಭಿವ್ಯಕ್ತಿಯನ್ನು “ಹಕ್ಕುಪತ್ರ” ಎಂದು ಕೂಡ ಭಾಷಾಂತರಿಸಬಹುದು. ಯಾರೋ ಒಬ್ಬರು ನಿಮಗೊಂದು ಮನೆ ಕೊಡಲು ನಿರ್ಣಯಿಸಿದ್ದಾರೆಂದು ನೆನಸಿ. ಅವರು ನಿಮಗೆ ಆ ಮನೆಯ ಹಕ್ಕುಪತ್ರವನ್ನು ಕೊಟ್ಟು “ತಗೊಳ್ಳಿ ನಿಮ್ಮ ಹೊಸ ಮನೆ” ಎಂದು ಹೇಳುತ್ತಾರೆ. ಆ ಕಾಗದವೇ ನಿಮ್ಮ ಮನೆ ಎಂದವರು ಹೇಳುತ್ತಿಲ್ಲ. ಬದಲಿಗೆ ಹಕ್ಕುಪತ್ರ ನಿಮ್ಮ ಹತ್ತಿರ ಇರುವುದು ತಾನೇ ಆ ಮನೆ ನಿಮ್ಮದು ಎಂಬುದಕ್ಕೆ ಕಾನೂನುಬದ್ಧ ಆಧಾರ. ಅದೇ ರೀತಿ ನಮ್ಮ ನಂಬಿಕೆಗಿರುವ ಆಧಾರಗಳು ಎಷ್ಟು ನೈಜ ಮತ್ತು ದೃಢವಾಗಿವೆಯೆಂದರೆ ಅವುಗಳು ನಂಬಿಕೆಗೆ ಸಮ.

7. ನಿಜ ನಂಬಿಕೆ ಯಾವುದರ ಮೇಲೆ ಹೊಂದಿಕೊಂಡಿದೆ?

7 ಹೀಗೆ ನಿಜ ನಂಬಿಕೆಯು ಯೆಹೋವ ದೇವರ, ಆತನ ಗುಣಗಳ ಮತ್ತು ವ್ಯವಹರಿಸುವ ರೀತಿಯ ಮೇಲಿನ ದೃಢವಿಶ್ವಾಸ ಹಾಗೂ ನಿಶ್ಚಿತಾಭಿಪ್ರಾಯದ ಮೇಲೆ ಹೊಂದಿಕೊಂಡಿದೆ. ಆ ನಂಬಿಕೆಯು ಯೆಹೋವನನ್ನು ನಮ್ಮ ಪ್ರೀತಿಯ ತಂದೆಯಾಗಿ ಕಾಣುವಂತೆ ಮತ್ತು ಆತನ ಎಲ್ಲ ವಾಗ್ದಾನಗಳು ಖಂಡಿತ ನೆರವೇರುವವು ಎಂದು ಭರವಸವಿಡುವಂತೆ ಮಾಡುತ್ತದೆ. ಆದರೆ ನಿಜ ನಂಬಿಕೆಯನ್ನು ಜೀವಂತವಾಗಿಡಬೇಕಾದರೆ ಅದಕ್ಕೆ ಪೋಷಣೆ ಅತ್ಯಗತ್ಯ. ಜೀವವಿರುವ ಯಾವುದಕ್ಕೂ ಪೋಷಣೆ ಅಗತ್ಯವಲ್ಲವೇ? ಹಾಗಾಗಿ ನಂಬಿಕೆಯನ್ನು ನಾವು ಕ್ರಿಯೆಗಳಲ್ಲಿ ತೋರಿಸುತ್ತಿರಬೇಕು. ಇಲ್ಲದಿದ್ದರೆ ಅದು ಸತ್ತುಹೋಗುವುದು.—ಯಾಕೋ. 2:26.

8. ನಂಬಿಕೆ ಬಹು ಅಗತ್ಯವೇಕೆ?

8 ನಂಬಿಕೆ ನಮಗೇಕೆ ಬಹು ಅಗತ್ಯ? ಪೌಲ ಕೊಟ್ಟ ಉತ್ತರ ನಂಬಿಕೆಯ ಮಹತ್ವವನ್ನು ನಮಗೆ ಮನಗಾಣಿಸುತ್ತದೆ. (ಇಬ್ರಿಯ 11:6 ಓದಿ.) ನಂಬಿಕೆ ಇಲ್ಲದಿದ್ದರೆ ನಾವು ಯೆಹೋವನನ್ನು ಸಮೀಪಿಸಲಿಕ್ಕಾಗಲಿ ಮೆಚ್ಚಿಸಲಿಕ್ಕಾಗಲಿ ಸಾಧ್ಯವಿಲ್ಲ. ಬುದ್ಧಿಶಕ್ತಿಯುಳ್ಳ ಜೀವಿಗಳು ಸೃಷ್ಟಿಸಲ್ಪಟ್ಟದ್ದರ ಉದ್ದೇಶವೇ ಯೆಹೋವನಿಗೆ ಆಪ್ತರಾಗಿದ್ದು ಆತನನ್ನು ಮಹಿಮೆಪಡಿಸುವುದಾಗಿದೆ. ಹಾಗಾಗಿ ಈ ಉದ್ದೇಶ ಪೂರೈಸಲು ನಮ್ಮಲ್ಲಿ ನಂಬಿಕೆ ಇರಲೇಬೇಕು.

9. ನಂಬಿಕೆಯ ಅಗತ್ಯ ನಮಗಿರುವುದು ಯೆಹೋವನಿಗೆ ತಿಳಿದಿದೆಯೆಂದು ಹೇಗೆ ಗೊತ್ತಾಗುತ್ತದೆ?

9 ನಂಬಿಕೆ ನಮಗೆಷ್ಟು ಅಗತ್ಯವೆಂದು ಯೆಹೋವನಿಗೆ ಗೊತ್ತಿದೆ. ಆದ್ದರಿಂದಲೇ ನಂಬಿಕೆಯನ್ನು ಹೇಗೆ ಬೆಳೆಸಿಕೊಳ್ಳುವುದು ಮತ್ತು ಹೇಗೆ ತೋರಿಸುವುದೆಂದು ನಮಗೆ ಕಲಿಸಲು ಅನೇಕಾನೇಕ ಮಾದರಿಗಳನ್ನು ಒದಗಿಸಿದ್ದಾನೆ. ಮುಂದಾಳತ್ವ ವಹಿಸುವ ನಂಬಿಗಸ್ತ ಪುರುಷರ ಮಾದರಿಗಳನ್ನು ಕ್ರೈಸ್ತ ಸಭೆಗೆ ಕೊಟ್ಟಿದ್ದಾನೆ. “ಅವರ ನಂಬಿಕೆಯನ್ನು ಅನುಕರಿಸಿರಿ” ಎನ್ನುತ್ತದೆ ಆತನ ವಾಕ್ಯ. (ಇಬ್ರಿ. 13:7) ಅಷ್ಟೇ ಅಲ್ಲದೆ ಪ್ರಾಚೀನಕಾಲದ ಸ್ತ್ರೀಪುರುಷರ ನಂಬಿಕೆಯ ಅತ್ಯುತ್ತಮ ಮಾದರಿಗಳನ್ನೂ ನಮಗೆ ಕೊಟ್ಟಿದ್ದಾನೆ. ‘ಸಾಕ್ಷಿಗಳ ಆ ದೊಡ್ಡ ಮೇಘದ’ ಬಗ್ಗೆ ಪೌಲನು ಇಬ್ರಿಯ 11ನೇ ಅಧ್ಯಾಯದಲ್ಲಿ ಬರೆದನು. (ಇಬ್ರಿ. 12:1) ಅವನು ಅಲ್ಲಿ ಪಟ್ಟಿಮಾಡಿರುವ ಆ ನಂಬಿಗಸ್ತರಲ್ಲದೆ ಇನ್ನೂ ಅನೇಕ ನಂಬಿಗಸ್ತರ ಮಾದರಿಗಳು ಬೈಬಲಿನಲ್ಲಿ ಸಮೃದ್ಧವಾಗಿವೆ. ಇವು ವಿಭಿನ್ನ ಪರಿಸ್ಥಿತಿಗಳಲ್ಲಿ ನಂಬಿಕೆಯ ಜೀವನ ನಡೆಸಿದ ಅನೇಕ ಸ್ತ್ರೀಪುರುಷರ, ಹಿರಿಕಿರಿಯರ ನೈಜ ಕಥೆಗಳಾಗಿವೆ. ನಿಜ ನಂಬಿಕೆ ಕಾಣೆಯಾಗಿರುವ ಈ ಪ್ರಪಂಚದಲ್ಲಿ ಇವರೆಲ್ಲರ ಮಾದರಿಗಳಿಂದ ನಾವು ಬಹಳಷ್ಟನ್ನು ಕಲಿಯಬಲ್ಲೆವು.

ಇತರರ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಲ್ಲೆವು?

10. ಬೈಬಲಿನಲ್ಲಿರುವ ನಂಬಿಗಸ್ತ ಸ್ತ್ರೀಪುರುಷರನ್ನು ಅನುಕರಿಸಲು ನಮ್ಮ ವೈಯಕ್ತಿಕ ಅಧ್ಯಯನ ಹೇಗೆ ನೆರವಾಗಬಹುದು?

10 ಒಬ್ಬರನ್ನು ಅನುಕರಿಸಬೇಕಾದರೆ ಮೊದಲು ಅವರನ್ನು ನಿಕಟವಾಗಿ ಗಮನಿಸಬೇಕು. ನಂಬಿಕೆ ತೋರಿಸಿದ ಸ್ತ್ರೀಪುರುಷರನ್ನು ನೀವು ಹಾಗೆ ಗಮನಿಸಬೇಕೆಂಬ ಉದ್ದೇಶದಿಂದ ಬಹಳಷ್ಟು ಸಂಶೋಧನೆಮಾಡಿ ಈ ಪುಸ್ತಕ ತಯಾರಿಸಲಾಗಿದೆ. ಅವರ ಬಗ್ಗೆ ನೀವು ಕೂಡ ಹೆಚ್ಚಿನ ಸಂಶೋಧನೆ ಮಾಡಿ. ನಿಮಗೆ ಲಭ್ಯವಿರುವ ಸಂಶೋಧನಾ ಸಾಧನಗಳನ್ನು ಬಳಸುತ್ತಾ ವೈಯಕ್ತಿಕ ಅಧ್ಯಯನ ಮಾಡುವಾಗ ಬೈಬಲನ್ನು ಇನ್ನಷ್ಟೂ ಆಳವಾಗಿ ಪರಿಶೀಲಿಸಿ. ನೀವು ಅಧ್ಯಯನ ಮಾಡಿದ ಬೈಬಲ್‌ ವೃತ್ತಾಂತಗಳನ್ನು ಧ್ಯಾನಿಸುತ್ತಿರುವಾಗ ಅಲ್ಲಿನ ಸನ್ನಿವೇಶವನ್ನು, ಹಿನ್ನೆಲೆಯನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಅಲ್ಲಿನ ದೃಶ್ಯಗಳನ್ನು ಕಣ್ಮುಂದೆ ತಂದುಕೊಳ್ಳಲು, ಶಬ್ದಗಳನ್ನು ಕೇಳಿಸಿಕೊಳ್ಳಲು, ಸುವಾಸನೆಗಳನ್ನು ಆಘ್ರಾಣಿಸಲು ಪ್ರಯತ್ನಿಸಿ. ಎಲ್ಲದಕ್ಕಿಂತ ಮುಖ್ಯವಾಗಿ ವೃತ್ತಾಂತದಲ್ಲಿನ ವ್ಯಕ್ತಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರ ಸ್ಥಾನದಲ್ಲಿ ನಿಂತು ಅವರ ಭಾವನೆ, ಅನಿಸಿಕೆ, ತೊಳಲಾಟ ಇವೆಲ್ಲವನ್ನು ಮನಸ್ಸಿಗೆ ತಂದುಕೊಂಡಾಗ ಅವರು ನಿಮಗೆ ಹೆಚ್ಚು ನೈಜವಾಗುವರು, ಹೆಚ್ಚು ಪರಿಚಿತರು ಎಂದನಿಸುವರು. ಕೆಲವರು ನಿಮ್ಮ ನೆಚ್ಚಿನ ಹಳೇ ಸ್ನೇಹಿತರಂತೆ ಕೂಡ ಆಗಬಹುದು.

11, 12. (1) ಅಬ್ರಾಮ ಮತ್ತು ಸಾರಯ ನಿಮಗೆ ಹೇಗೆ ಆಪ್ತರೆಂದನಿಸಬಹುದು? (2) ಹನ್ನ, ಎಲೀಯ, ಸಮುವೇಲನ ಮಾದರಿಗಳಿಂದ ನೀವು ಹೇಗೆ ಪ್ರಯೋಜನ ಪಡೆಯಬಹುದು?

11 ನೀವು ಆ ನಂಬಿಗಸ್ತ ಜನರನ್ನು ನಿಜಕ್ಕೂ ತಿಳಿದುಕೊಂಡಾಗ ಅವರನ್ನು ಅನುಕರಿಸಲು ನೀವೇ ಬಯಸುವಿರಿ. ಉದಾಹರಣೆಗೆ ನಿಮಗೊಂದು ಹೊಸ ನೇಮಕ ಸಿಕ್ಕಿದೆ ಎಂದಿಟ್ಟುಕೊಳ್ಳಿ. ಯಾವುದಾದರೊಂದು ವಿಧದಲ್ಲಿ ನಿಮ್ಮ ಸೇವೆಯನ್ನು ವಿಸ್ತರಿಸುವಂತೆ ಯೆಹೋವನ ಸಂಘಟನೆಯಿಂದ ನಿಮಗೆ ಆಮಂತ್ರಣ ಬಂದಿದೆ. ಹೆಚ್ಚು ಸೌವಾರ್ತಿಕರು ತುರ್ತಾಗಿ ಬೇಕಾಗಿರುವ ಕ್ಷೇತ್ರಕ್ಕೆ ವಾಸಬದಲಾಯಿಸುವಂತೆ ನಿಮ್ಮನ್ನು ಕೇಳಿಕೊಂಡಿದ್ದಾರೆ. ಅಥವಾ ನೀವು ಈ ಹಿಂದೆ ಮಾಡಿರದ ಇಲ್ಲವೆ ಕಷ್ಟಕರವೆಂದು ನಿಮಗನಿಸುವ ವಿಧಾನದಲ್ಲಿ ಸಾರುವಂತೆ ಕೇಳಿಕೊಂಡಿದ್ದಾರೆ. ಆ ನೇಮಕದ ಬಗ್ಗೆ ನೀವು ಯೋಚಿಸುವಾಗ ಮತ್ತು ಅದರ ಕುರಿತು ಪ್ರಾರ್ಥಿಸುವಾಗ ಅಬ್ರಾಮನ ಮಾದರಿಯನ್ನು ಧ್ಯಾನಿಸುವುದರಿಂದ ನಿಮಗೆ ಹೆಚ್ಚು ಸಹಾಯವಾಗುವುದು. ಅಬ್ರಾಮ ಮತ್ತು ಸಾರಯ ಸಿದ್ಧಮನಸ್ಸಿನಿಂದ ಊರ್‌ ಪಟ್ಟಣದ ಸುಖಸೌಕರ್ಯಗಳನ್ನು ಬಿಟ್ಟು ಹೊರಟರು. ಫಲಿತಾಂಶವಾಗಿ ಹೇರಳ ಆಶೀರ್ವಾದಗಳನ್ನು ಪಡೆದುಕೊಂಡರು. ನೀವು ಅವರ ಹೆಜ್ಜೆಜಾಡನ್ನು ಹಿಂಬಾಲಿಸಿದರೆ ಹಿಂದೆಂದಿಗಿಂತಲೂ ಚೆನ್ನಾಗಿ ಅವರಿಬ್ಬರನ್ನು ತಿಳಿದುಕೊಂಡಿದ್ದೀರೆಂದು ನಿಮಗನಿಸುವುದು.

12 ನೆನಸಿ, ಆಪ್ತರೊಬ್ಬರು ನಿಮ್ಮ ಮೇಲಿನ ಕೋಪದಿಂದ ನಿಮ್ಮೊಟ್ಟಿಗೆ ಸರಿಯಾಗಿ ಮಾತಾಡುವುದಿಲ್ಲ, ವರ್ತಿಸುವುದಿಲ್ಲ. ಅದರಿಂದ ನಿಮಗೆ ತುಂಬ ನೋವಾಗಿದೆ. ಆಗ ಕೂಟಗಳಿಗೆ ಹೋಗದೆ ಮನೆಯಲ್ಲೇ ಇದ್ದುಬಿಡಲು ನಿಮಗೆ ಮನಸ್ಸಾಗುತ್ತದೊ? ಸರಿಯಾದ ನಿರ್ಣಯ ತೆಗೆದುಕೊಳ್ಳಲಿಕ್ಕಾಗಿ ಹನ್ನಳ ಮಾದರಿ ನಿಮಗೆ ಸಹಾಯಕರ. ಪೆನಿನ್ನಳು ಅವಳೊಟ್ಟಿಗೆ ಸರಿಯಾಗಿ ನಡೆದುಕೊಳ್ಳದಿದ್ದರೂ ಯೆಹೋವನ ಆರಾಧನೆಗೆ ಅದು ಯಾವುದೂ ಅಡ್ಡಬರದಂತೆ ಹನ್ನಳು ನೋಡಿಕೊಂಡಳು. ಅದೇ ರೀತಿ ನೀವು ಮಾಡುವಾಗ ಹನ್ನಳು ನಿಮ್ಮ ನೆಚ್ಚಿನ ಗೆಳತಿಯೆಂದು ನಿಮಗನಿಸುವುದು. ‘ನಾನು ನಿಷ್ಪ್ರಯೋಜಕ’ ಎಂಬ ಭಾವನೆಯಿಂದ ನೀವು ಕುಗ್ಗಿಹೋಗಿದ್ದೀರಾ? ಹಾಗಾದರೆ ಎಲೀಯನಿಗಾದ ನಿರಾಶೆ ಮತ್ತು ಯೆಹೋವನು ಅವನನ್ನು ಸಂತೈಸಿದ ವಿಧದ ಬಗ್ಗೆ ಧ್ಯಾನಿಸುವುದರಿಂದ ಎಲೀಯನಿಗೆ ನೀವು ತುಂಬ ಹತ್ತಿರವಾದಂತೆ ಅನಿಸಬಹುದು. ಯುವಕ ಯುವತಿಯರೇ, ಅನೈತಿಕತೆಯಲ್ಲಿ ಒಳಗೂಡುವ ಸಹಪಾಠಿಗಳ ಒತ್ತಡವನ್ನು ಎದುರಿಸುತ್ತಿದ್ದೀರಾ? ಸಮುವೇಲನು ಏಲಿಯ ಪುತ್ರರ ಭ್ರಷ್ಟ ಪ್ರಭಾವವನ್ನು ಎದುರಿಸಿದ ವಿಧವನ್ನು ಅಧ್ಯಯನ ಮಾಡಿ. ಆಗ ಸಮುವೇಲನಿಗೆ ಹೆಚ್ಚು ಆಪ್ತರಾಗಿದ್ದೀರೆಂದು ನಿಮಗನಿಸುವುದು.

13. ಬೈಬಲಿನಲ್ಲಿರುವ ವ್ಯಕ್ತಿಗಳ ನಂಬಿಕೆಯನ್ನು ಅನುಕರಿಸಿದರೆ ವೈಯಕ್ತಿಕವಾಗಿ ನೀವು ಬೆಳೆಸಿಕೊಂಡ ನಂಬಿಕೆಯ ಮೌಲ್ಯ ಕಡಿಮೆಯಾಗುತ್ತದೆಯೇ? ವಿವರಿಸಿ.

13 ಬೈಬಲಿನಲ್ಲಿರುವ ಅಂಥ ಸ್ತ್ರೀಪುರುಷರ ನಂಬಿಕೆಯನ್ನು ನೀವು ಅನುಕರಿಸುವುದರಿಂದ ಬೇರೆಯವರನ್ನು ನೀವು ನಕಲು ಮಾಡಿದಂತಾಗುತ್ತದೆಯೇ? ಅಥವಾ ವೈಯಕ್ತಿಕವಾಗಿ ನೀವು ಬೆಳೆಸಿಕೊಂಡ ನಂಬಿಕೆಯ ಮೌಲ್ಯ ಕಡಿಮೆ ಆಗುತ್ತದೆಯೇ? ಹಾಗೆ ನೆನಸದಿರಿ. ನಂಬಿಗಸ್ತರ ಮಾದರಿಗಳನ್ನು ಅನುಕರಿಸುವಂತೆ ದೇವರ ವಾಕ್ಯವೇ ನಮ್ಮನ್ನು ಪ್ರೋತ್ಸಾಹಿಸುತ್ತದೆ. (1 ಕೊರಿಂ. 4:16; 11:1; 2 ಥೆಸ. 3:7, 9) ಅಲ್ಲದೆ, ಮುಂದೆ ನಾವು ಯಾರ ಬಗ್ಗೆ ಕಲಿಯಲಿಕ್ಕಿದ್ದೇವೋ ಅವರಲ್ಲಿ ಕೆಲವರು ತಮಗಿಂತ ಮುಂಚೆ ಜೀವಿಸಿದ್ದ ನಂಬಿಗಸ್ತ ವ್ಯಕ್ತಿಗಳ ಮಾದರಿಗಳನ್ನು ಅನುಕರಿಸಿದ್ದರು. ಉದಾಹರಣೆಗೆ, ಮರಿಯಳು ತನ್ನ ಮಾತುಗಳಲ್ಲಿ ಹನ್ನಳ ಪ್ರಾರ್ಥನೆಯಲ್ಲಿದ್ದ ಪದಗಳನ್ನು ಬಳಸಿದ್ದರ ಬಗ್ಗೆ ಅಧ್ಯಾಯ 17ರಲ್ಲಿ ನೋಡುತ್ತೇವೆ. ಏಕೆಂದರೆ ಮರಿಯಳು ಹನ್ನಳನ್ನು ತನ್ನ ಮಾದರಿಯಾಗಿ ಕಂಡಳು. ಇದರಿಂದ ಮರಿಯಳ ನಂಬಿಕೆಯ ಮೌಲ್ಯ ಏನಾದರೂ ಕಡಿಮೆಯಾಯಿತೇ? ಇಲ್ಲವಲ್ಲ! ಅದಕ್ಕೆ ಬದಲಾಗಿ ಹನ್ನಳ ಮಾದರಿಯಿಂದ ಮರಿಯಳಿಗೆ ತನ್ನ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಆಯಿತು. ಇದರಿಂದ ವೈಯಕ್ತಿಕವಾಗಿ ಯೆಹೋವ ದೇವರೊಂದಿಗೆ ಒಳ್ಳೇ ಹೆಸರನ್ನು ಮಾಡಿಕೊಳ್ಳಲು ಅವಳಿಗೆ ಸಾಧ್ಯವಾಯಿತು.

14, 15. (1) ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು ಯಾವುವು? (2) ನಾವು ಈ ಪುಸ್ತಕದಿಂದ ಹೇಗೆ ಪ್ರಯೋಜನ ಪಡೆಯಬಹುದು?

14 ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ನೆರವಾಗಲೆಂದೇ ಈ ಪುಸ್ತಕವನ್ನು ರಚಿಸಲಾಗಿದೆ. ಈ ಪುಸ್ತಕದ ಕೆಲವು ಅಧ್ಯಾಯಗಳು 2008ರಿಂದ 2013ರ ವರೆಗೆ ಕಾವಲಿನಬುರುಜು ಪತ್ರಿಕೆಯಲ್ಲಿ ಮೂಡಿಬಂದ “ಅವರ ನಂಬಿಕೆಯನ್ನು ಅನುಕರಿಸಿ” ಲೇಖನಗಳಾಗಿವೆ. ಆದರೆ ಆ ಲೇಖನಗಳನ್ನು ಪರಿಷ್ಕರಿಸಲಾಗಿದೆ. ಈ ಪುಸ್ತಕದಲ್ಲಿ ಹೊಸ ವೈಶಿಷ್ಟ್ಯಗಳೂ ಇವೆ. ಚರ್ಚಿಸಲು, ಅನ್ವಯ ಮಾಡಲು ಸುಲಭವಾಗಲೆಂದು ಪ್ರಶ್ನೆಗಳನ್ನು ಕೊಡಲಾಗಿದೆ. ಈ ಪುಸ್ತಕಕ್ಕೆಂದೇ ವಿವರವಾದ ಹಲವಾರು ವರ್ಣರಂಜಿತ ಚಿತ್ರಗಳನ್ನು ಬಿಡಿಸಲಾಗಿದೆ. ಈಗಾಗಲೇ ಪತ್ರಿಕೆಗಳಲ್ಲಿ ಕಂಡುಬಂದ ಚಿತ್ರಗಳನ್ನು ದೊಡ್ಡದಾಗಿ ಮಾಡಲಾಗಿದೆ ಮತ್ತು ಇನ್ನಷ್ಟು ಮೆರುಗು ಕೊಡಲಾಗಿದೆ. ಮಾತ್ರವಲ್ಲ ಕಾಲಗಣನಾ ರೇಖೆ, ಭೂಪಟಗಳನ್ನು ಸಹ ಕೊಡಲಾಗಿದೆ. ಅವರ ನಂಬಿಕೆಯನ್ನು ಅನುಕರಿಸಿ ಪುಸ್ತಕವನ್ನು ವೈಯಕ್ತಿಕ, ಕೌಟುಂಬಿಕ ಮತ್ತು ಸಭಾ ಅಧ್ಯಯನಕ್ಕಾಗಿ ಹೊರತರಲಾಗಿದೆ. ಕುಟುಂಬವಾಗಿ ಕೂತು ಅಧ್ಯಾಯಗಳನ್ನು ಬರೀ ಓದುತ್ತಾ ಹೋಗುವುದರಿಂದಲೂ ಪ್ರಯೋಜನ ಪಡೆಯಬಹುದು.

15 ಪ್ರಾಚೀನ ಸಮಯದಲ್ಲಿದ್ದ ಯೆಹೋವನ ನಿಷ್ಠಾವಂತ ಸೇವಕರ ನಂಬಿಕೆಯನ್ನು ಅನುಕರಿಸಲು ಈ ಪುಸ್ತಕ ನಿಮಗೆ ನೆರವಾಗಲಿ. ನಂಬಿಕೆಯನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳುತ್ತಾ ನಿಮ್ಮ ತಂದೆಯಾದ ಯೆಹೋವನಿಗೆ ಇನ್ನಷ್ಟು ಆಪ್ತರಾಗಲು ಈ ಪುಸ್ತಕ ಸಹಾಯಮಾಡಲಿ.