ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಐದು

“ಗುಣವಂತೆ”

“ಗುಣವಂತೆ”

1, 2. (1) ರೂತಳು ಮಾಡುತ್ತಿದ್ದ ಕೆಲಸ ಎಂಥದ್ದಾಗಿತ್ತು? (2) ಧರ್ಮಶಾಸ್ತ್ರದಲ್ಲಿದ್ದ ಏರ್ಪಾಡು ಮತ್ತು ದೇವಜನರ ಬಗ್ಗೆ ಅವಳು ಏನು ತಿಳಿದುಕೊಂಡಳು?

ರೂತ್‌ ಬೆಳಗ್ಗೆಯಿಂದ ಕೂಡಿಸಿದ ಜವೆಗೋದಿಯ ತೆನೆಗಳನ್ನು ಒಂದು ಕಡೆ ಗುಡ್ಡೆ ಹಾಕಿ ಪಕ್ಕದಲ್ಲಿ ಮೊಣಕಾಲೂರಿ ತೆನೆ ಬಡಿಯುತ್ತಿದ್ದಳು. ಬಾನಲ್ಲಿ ಸೂರ್ಯ ಇಳಿಯುತ್ತಿದ್ದ. ಕೂಲಿಯಾಳುಗಳು ಕೆಲಸ ಮುಗಿಸಿ ಅಲ್ಲೇ ಹತ್ತಿರ ಗುಡ್ಡದ ಮೇಲಿನ ಚಿಕ್ಕ ಊರಾದ ಬೇತ್ಲೆಹೇಮ್‌ಗೆ ಹಿಂತೆರಳುತ್ತಿದ್ದರು. ಬೆಳಗ್ಗೆಯಿಂದ ಒಂದೇ ಸಮನೆ ಕೆಲಸ ಮಾಡುತ್ತಿದ್ದ ರೂತಳಿಗೆ ರಟ್ಟೆಗಳು ಸೋತಿದ್ದವು. ಆದರೂ ಅವಳು ತೆನೆಗಳನ್ನು ಕೋಲಿನಿಂದ ಬಡಿಯುತ್ತಾ ಕಾಳುಗಳನ್ನು ಕೂಡಿಸಿಕೊಳ್ಳುತ್ತಿದ್ದಳು. ದಿನವಿಡೀ ಬೆವರು ಸುರಿಸಿ ಶ್ರಮಪಟ್ಟಿದ್ದರೂ ಈ ದಿನ ಅವಳು ನೆನಸಿದ್ದಕ್ಕಿಂತ ಚೆನ್ನಾಗಿತ್ತು.

2 ಯುವ ಪ್ರಾಯದಲ್ಲೇ ವಿಧವೆಯಾಗಿದ್ದ ರೂತಳ ಜೀವನ ಈಗ ನೆಲೆಕಾಣುವಂತೆ ತೋರುತ್ತಿತ್ತು. ಹಿಂದಿನ ಅಧ್ಯಾಯದಲ್ಲಿ ಕಲಿತಂತೆ ರೂತಳು ಅತ್ತೆ ನೊವೊಮಿಗೆ ತಾನು ಆಕೆಯ ಜೊತೆಯಲ್ಲೇ ಇರುತ್ತೇನೆಂದು ಮತ್ತು ಆಕೆಯ ದೇವರಾದ ಯೆಹೋವನನ್ನೇ ತನ್ನ ದೇವರೆಂದು ಅಂಗೀಕರಿಸುತ್ತೇನೆಂದು ಮಾತುಕೊಟ್ಟಿದ್ದಳು. ಅದರಂತೆ ನಡೆದುಕೊಂಡಳು. ವಿಯೋಗ ದುಃಖದಲ್ಲಿದ್ದ ಈ ಇಬ್ಬರೂ ಸ್ತ್ರೀಯರು ಮೋವಾಬನ್ನು ಬಿಟ್ಟು ಬೇತ್ಲೆಹೇಮ್‌ಗೆ ಬಂದಿದ್ದರು. ಮೋವಾಬ್‌ ಸ್ತ್ರೀಯಾದ ರೂತಳಿಗೆ ಧರ್ಮಶಾಸ್ತ್ರದಲ್ಲಿದ್ದ ಒಂದು ಏರ್ಪಾಡಿನ ಬಗ್ಗೆ ತಿಳಿದುಬಂತು. ಈ ಪ್ರಾಯೋಗಿಕ ಏರ್ಪಾಡಿನಿಂದಾಗಿ ಇಸ್ರಾಯೇಲಿನಲ್ಲಿದ್ದ ಬಡವರನ್ನೂ ಸೇರಿಸಿ ಅನ್ಯಜನರು ತಮ್ಮ ಕಷ್ಟದ ಮಧ್ಯೆಯೂ ಗೌರವದಿಂದ ಬದುಕನ್ನು ಸಾಗಿಸಬಹುದಿತ್ತು. ಧರ್ಮಶಾಸ್ತ್ರವನ್ನು ಪ್ರೀತಿಸಿ ಪಾಲಿಸುತ್ತಿದ್ದ ದೇವಜನರಲ್ಲಿ ಕೆಲವರು ಈ ಏರ್ಪಾಡಿಗನುಸಾರ ತನಗೆ ಕನಿಕರದಯೆ ತೋರಿಸಿದ್ದನ್ನು ರೂತ್‌ ಕಣ್ಣಾರೆ ಕಂಡಳು. ಇದು ಅವಳ ನೊಂದ ಹೃದಯಕ್ಕೆ ತಂಪೆರಚಿದಂತಿತ್ತು.

3, 4. (1) ಬೋವಜನು ರೂತಳನ್ನು ಹೇಗೆ ಪ್ರೋತ್ಸಾಹಿಸಿದ್ದನು? (2) ಆರ್ಥಿಕ ಬಿಕ್ಕಟ್ಟಿನ ಈ ಕಾಲದಲ್ಲಿ ರೂತಳ ಮಾದರಿ ನಮಗೆ ಹೇಗೆ ನೆರವಾಗುತ್ತದೆ?

3 ಅವಳಿಗೆ ಕನಿಕರದಯೆ ತೋರಿಸಿದವರಲ್ಲಿ ವೃದ್ಧ ಬೋವಜನು ಒಬ್ಬನು. ಅವಳು ಹಕ್ಕಲಾಯ್ದದ್ದು ಆ ಶ್ರೀಮಂತನ ಹೊಲದಲ್ಲಿ. ಅಂದು ಅವನು ತಂದೆಯಂತೆ ರೂತಳಿಗೆ ಕಾಳಜಿ ತೋರಿಸಿದ್ದನು. ರೂತಳು ಅತ್ತೆಯನ್ನು ನೋಡಿಕೊಳ್ಳುತ್ತಿರುವುದಕ್ಕಾಗಿ ಮತ್ತು ಸತ್ಯ ದೇವರಾದ ಯೆಹೋವನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಂಡದ್ದಕ್ಕಾಗಿ ಬೋವಜನು ಅವಳನ್ನು ಪ್ರಶಂಸಿಸಿದ್ದನು. ಅವನ ಆ ಸೌಜನ್ಯದ ಮಾತುಗಳನ್ನು ನೆನಸಿ ರೂತಳ ಮೊಗದಲ್ಲಿ ಕಿರುನಗೆ ಇಣುಕಿತು.ರೂತಳು 2:11-14 ಓದಿ.

4 ಆದರೆ ಮುಂದಿನ ಜೀವನದ ಬಗ್ಗೆಯೂ ರೂತಳು ಯೋಚಿಸುತ್ತಿದ್ದಿರಬಹುದು. ಒಂದು ಕಡೆ ಬಡತನ. ಇನ್ನೊಂದು ಕಡೆ ಗಂಡ ಇಲ್ಲ ಮಕ್ಕಳೂ ಇಲ್ಲ. ಪರದೇಶಿಯಳು ಬೇರೆ. ಹೀಗಿರುವಾಗ ತನ್ನ ಮತ್ತು ಅತ್ತೆಯ ಜೀವನಾಧಾರಕ್ಕಾಗಿ ಮುಂದಿನ ವರ್ಷಗಳಲ್ಲಿ ಏನು ಮಾಡೋದು? ಹಕ್ಕಲಾಯುವುದು ಸಾಕಾಗುತ್ತದಾ? ವಯಸ್ಸಾದ ಮೇಲೆ ತನ್ನನ್ನು ನೋಡಿಕೊಳ್ಳಲಿಕ್ಕೆ ಯಾರಿದ್ದಾರೆ? ಅವಳ ಮನದಲ್ಲಿ ಇಂಥ ಚಿಂತೆಯ ಅಲೆಗಳು ಎದ್ದಿರುವುದು ಸಹಜ. ಈ ರೀತಿಯ ಚಿಂತೆಗಳು ಆರ್ಥಿಕ ಬಿಕ್ಕಟ್ಟಿನ ಈ ಕಾಲದಲ್ಲೂ ಅನೇಕರನ್ನು ಕಾಡುತ್ತಿವೆ. ಹಾಗಾಗಿ ರೂತಳು ತನ್ನ ಮುಂದಿದ್ದ ಸವಾಲುಗಳನ್ನು ನಂಬಿಕೆಯಿಂದ ಹೇಗೆ ಜಯಿಸಿದಳು ಎಂಬುದನ್ನು ಕಲಿಯುತ್ತಾ ಹೋದಂತೆ ಅವಳ ನಂಬಿಕೆಯನ್ನು ಅನುಕರಿಸಲು ನಮಗೆ ನೆರವಾಗುವುದು.

ಕುಟುಂಬ ಅಂದರೆ. . . ?

5, 6. (1) ರೂತಳು ಬೋವಜನ ಹೊಲದಲ್ಲಿ ಮೊದಲ ದಿನ ಮಾಡಿದ ಕೆಲಸಕ್ಕೆ ಯಾವ ಫಲ ಸಿಕ್ಕಿತು? (2) ರೂತಳನ್ನು ನೋಡಿದಾಗ ನೊವೊಮಿಯ ಪ್ರತಿಕ್ರಿಯೆ ಏನಾಗಿತ್ತು?

5 ಹೊಲದಲ್ಲಿದ್ದ ರೂತಳು ತೆನೆಗಳನ್ನೆಲ್ಲ ಬಡಿದು ಕಾಳುಗಳನ್ನು ಕೂಡಿಸಿಕೊಂಡಾಗ ಅದೆಲ್ಲ ಸುಮಾರು 30 ಸೇರು ಇತ್ತು. ಅಂದರೆ ಸುಮಾರು 14 ಕೆ.ಜಿ.! ಬಹುಶಃ ಅದನ್ನು ಬಟ್ಟೆಯಲ್ಲಿ ಕಟ್ಟಿ ತಲೆಯ ಮೇಲೆ ಹೊತ್ತುಕೊಂಡು ಬೇತ್ಲೆಹೇಮಿನ ತನ್ನ ಮನೆ ಕಡೆ ಹೆಜ್ಜೆ ಹಾಕಿದಳು. ಅಷ್ಟರಲ್ಲಿ ಸೂರ್ಯ ಮುಳುಗಿದ್ದ.—ರೂತ. 2:17.

6 ನೆಚ್ಚಿನ ಸೊಸೆಯನ್ನು ನೋಡಿ ಅತ್ತೆಗೆ ತುಂಬ ಖುಷಿಯಾಯಿತು. ಅವಳು ಹೊತ್ತು ತಂದ ಜವೆಗೋಧಿಯ ಮೂಟೆ ನೋಡಿ ‘ಅಬ್ಬಾ!’ ಎಂದು ಉದ್ಗರಿಸಿರಲೂಬಹುದು. ಬೋವಜನು ಮಧ್ಯಾಹ್ನ ಕೊಟ್ಟ ಊಟದಲ್ಲಿ ರೂತಳು ಸ್ವಲ್ಪವನ್ನು ತೆಗೆದಿಟ್ಟು ಅದನ್ನೂ ಮನೆಗೆ ತಂದಿದ್ದಳು. ಇಬ್ಬರು ಸೇರಿ ಆ ಸಾದಾ ಊಟ ಮಾಡಿದರು. ನೊವೊಮಿ ರೂತಳಿಗೆ, “ನೀನು ಈ ಹೊತ್ತು ಯಾರ ಹೊಲದಲ್ಲಿ ಹಕ್ಕಲಾಯ್ದಿ? ಎಲ್ಲಿ ಕೆಲಸಮಾಡಿದಿ?” ಎಂದು ಕೇಳಿ “ನಿನ್ನನ್ನು ಕಟಾಕ್ಷಿಸಿದವನಿಗೆ ಶುಭವಾಗಲಿ” ಎಂದಳು. (ರೂತ. 2:19) ನೊವೊಮಿ ಗಮನಿಸುವವಳಾಗಿದ್ದಳು. ರೂತಳು ಹೊತ್ತು ತಂದಿದ್ದ ಮೂಟೆಯನ್ನು ನೋಡಿಯೇ ಯಾರೋ ತನ್ನ ಸೊಸೆಯನ್ನು ಕಟಾಕ್ಷಿಸಿ ದಯೆತೋರಿಸಿರಬೇಕೆಂದು ಅವಳು ತಿಳಿದುಕೊಂಡಿದ್ದಳು.

7, 8. (1) ಬೋವಜನು ತೋರಿಸಿದ ದಯೆಯು ವಾಸ್ತವದಲ್ಲಿ ಯಾರು ತೋರಿಸುತ್ತಿರುವುದಾಗಿ ನೊವೊಮಿ ಪರಿಗಣಿಸಿದಳು? ಏಕೆ? (2) ರೂತಳು ಹೇಗೆ ಇನ್ನೊಂದು ರೀತಿಯಲ್ಲೂ ಅತ್ತೆಗೆ ನಿಷ್ಠಾವಂತ ಪ್ರೀತಿ ತೋರಿಸಿದಳು?

7 ಅತ್ತೆಸೊಸೆ ಇಬ್ಬರೂ ಮಾತಿಗೆ ಇಳಿದರು. ಬೋವಜನು ತನಗೆ ತೋರಿಸಿದ ದಯೆಯ ಕುರಿತು ರೂತಳು ವಿವರಿಸಿದಳು. ಅದಕ್ಕೆ ನೊವೊಮಿ ಸಂತೋಷದಿಂದ, “ಯೆಹೋವನು ಅವನಿಗೆ ಕೃಪೆ ತೋರಲಿ. ಯೆಹೋವನು ಸತ್ತುಹೋದವರಿಗೂ ಬದುಕಿರುವವರಿಗೂ ದಯೆ ತೋರಿಸುತ್ತಾನೆ” ಎಂದು ಹೇಳಿದಳು. (ರೂತ. 2:20, ಪರಿಶುದ್ಧ ಬೈಬಲ್‌ ಭಾಷಾಂತರ *) ಹೌದು, ಬೋವಜನು ತೋರಿಸಿದ ದಯೆಯನ್ನು ಯೆಹೋವನು ತೋರಿಸಿದ್ದಾಗಿ ನೊವೊಮಿ ಪರಿಗಣಿಸಿದಳು. ಏಕೆಂದರೆ ಉದಾರತೆ ತೋರಿಸಲು ತನ್ನ ಸೇವಕರನ್ನು ಪ್ರೇರಿಸುವಾತ, ಪ್ರತಿಫಲ ಕೊಡುವಾತ ಆತನೇ ಆಗಿದ್ದಾನೆ. *ಜ್ಞಾನೋಕ್ತಿ 19:17 ಓದಿ.

8 ಬೋವಜನು ಹೇಳಿದಂತೆ ಅವನ ಹೊಲದಲ್ಲೇ ಕೆಲಸಮಾಡಿ, ಹೆಣ್ಣಾಳುಗಳ ಜೊತೆಯಲ್ಲೇ ಹಕ್ಕಲಾಯುವಂತೆ ನೊವೊಮಿ ರೂತಳಿಗೆ ಸಲಹೆ ನೀಡಿದಳು. ರೂತಳು ಹಾಗೇ ಮಾಡಿದಳು. ಅಲ್ಲದೆ ‘ಅತ್ತೆಯ ಮನೆಯಲ್ಲಿದ್ದುಕೊಂಡೇ’ ಕೆಲಸಕ್ಕೆ ಹೋಗಿಬಂದಳು. (ರೂತ. 2:22, 23) ಇಲ್ಲಿ ಸಹ ರೂತಳ ವಿಶೇಷ ಗುಣ ಅಂದರೆ ನಿಷ್ಠಾವಂತ ಪ್ರೀತಿಯನ್ನು ಕಾಣಬಹುದು. ರೂತಳ ಈ ಮಾದರಿಯು ನಮ್ಮನ್ನು ಹೀಗೆ ಕೇಳಿಕೊಳ್ಳುವಂತೆ ಪ್ರೇರಿಸುತ್ತದೆ: ನಮಗೆ ಕೂಡ ಕುಟುಂಬ ಬಂಧವು ಅಮೂಲ್ಯವಾಗಿದೆಯೇ? ಮನೆಮಂದಿಯನ್ನು ಅಕ್ಕರೆಯಿಂದ ನೋಡಿಕೊಂಡು ಬೇಕಾದ ಸಹಾಯ ನೀಡುವ ಮೂಲಕ ಇದನ್ನು ತೋರಿಸುತ್ತೇವೆಯೇ? ನಾವು ಹೀಗೆ ತೋರಿಸುವ ನಿಷ್ಠಾವಂತ ಪ್ರೀತಿಯನ್ನು ಯೆಹೋವನು ಖಂಡಿತ ಗಮನಿಸುತ್ತಾನೆ.

ರೂತ್‌ ಮತ್ತು ನೊವೊಮಿಯ ಮಾದರಿಯು ನಾವು ನಮ್ಮ ಕುಟುಂಬವನ್ನು ಮಾನ್ಯಮಾಡಬೇಕೆಂದು ತೋರಿಸುತ್ತದೆ

9. ಕುಟುಂಬದ ವಿಷಯದಲ್ಲಿ ರೂತಳು ಮತ್ತು ನೊವೊಮಿಯಿಂದ ನಾವೇನು ಕಲಿಯಬಲ್ಲೆವು?

9 ಅತ್ತೆಸೊಸೆ ಇಬ್ಬರು ಇದ್ದ ಮಾತ್ರಕ್ಕೆ ಅದನ್ನು ಒಂದು ಕುಟುಂಬ ಎಂದು ಹೇಳಸಾಧ್ಯವೇ? ಕುಟುಂಬ ಅಂದರೆ ಗಂಡ-ಹೆಂಡತಿ, ಮಗ-ಮಗಳು, ಅಜ್ಜ-ಅಜ್ಜಿ ಮತ್ತಿತರರು ಹೀಗೆ ಎಲ್ಲರು ಇರಲೇಬೇಕೆಂಬುದು ಕೆಲವರ ಅಭಿಪ್ರಾಯ. ಆದರೆ ಮನೆಯಲ್ಲಿ ಬರೀ ಇಬ್ಬರು ಸದಸ್ಯರು ಇದ್ದರೂ ಪರಸ್ಪರ ಆತ್ಮೀಯತೆ, ಪ್ರೀತಿ, ದಯೆ ತೋರಿಸುವಾಗ ಅದು ಕೂಡ ಒಂದು ಕುಟುಂಬವೇ ಎಂದು ರೂತ್‌ ಮತ್ತು ನೊವೊಮಿಯ ಉದಾಹರಣೆ ತೋರಿಸುತ್ತದೆ. ನಿಮಗಿರುವ ಕುಟುಂಬವನ್ನು ನೀವು ಮಾನ್ಯಮಾಡುತ್ತೀರೊ? ತನ್ನವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲದ ಕ್ರೈಸ್ತರ ಕುರಿತೇನು? ಅಂಥವರಿಗೆ ಕ್ರೈಸ್ತ ಸಭೆಯೇ ಒಂದು ಕುಟುಂಬ ಎಂದು ಯೇಸು ಹೇಳಿದ್ದಾನೆ.—ಮಾರ್ಕ 10:29, 30.

ರೂತ್‌ ಮತ್ತು ನೊವೊಮಿ ಪರಸ್ಪರರಿಗೆ ನೆರವು, ಪ್ರೋತ್ಸಾಹ ನೀಡಿದರು

‘ನಮ್ಮನ್ನು ವಿಮೋಚಿಸತಕ್ಕ ಬಾಧ್ಯರಲ್ಲಿ ಒಬ್ಬನು’

10. ರೂತಳಿಗೆ ಯಾವ ರೀತಿಯಲ್ಲಿ ಸಹಾಯಮಾಡಲು ನೊವೊಮಿ ಬಯಸಿದಳು?

10 ಏಪ್ರಿಲ್‌ ತಿಂಗಳ ಜವೆಗೋಧಿಯ ಕೊಯ್ಲಿನಿಂದ ಹಿಡಿದು ಜೂನ್‌ ತಿಂಗಳ ಗೋಧಿ ಕೊಯ್ಲಿನ ವರೆಗೆ ರೂತಳು ಬೋವಜನ ಹೊಲದಲ್ಲಿ ಹಕ್ಕಲಾಯ್ದಳು. ವಾರಗಳು ಉರುಳಿದಂತೆ ನೊವೊಮಿಗೆ ತನ್ನ ಮುದ್ದಿನ ಸೊಸೆಯ ಬಾಳನೌಕೆಯನ್ನು ದಡ ಸೇರಿಸುವುದು ಹೇಗೆಂಬ ಚಿಂತೆ ಹತ್ತಿತು. ರೂತಳಿಗೆ ಇನ್ನೊಬ್ಬ ಗಂಡನನ್ನು ಕೊಡಲು ತಾನು ಅಶಕ್ತಳೆಂದು ನೊವೊಮಿ ಮೋವಾಬಿನಲ್ಲಿದ್ದಾಗ ನೆನಸಿದ್ದಳು. (ರೂತ. 1:11-13) ಆದರೀಗ ಅವಳಿಗೆ ಬೇರೊಂದು ಯೋಚನೆ ಬರುತ್ತದೆ. ರೂತಳ ಬಳಿ ಹೋಗಿ “ನನ್ನ ಮಗಳೇ, ನೀನು ಗೃಹಿಣಿಯಾಗಿ ಸುಖದಿಂದಿರುವದಕ್ಕೋಸ್ಕರ ನಾನು ಪ್ರಯತ್ನಿಸಬೇಕಲ್ಲವೇ” ಎಂದು ಹೇಳುತ್ತಾಳೆ. (ರೂತ. 3:1) ತಂದೆತಾಯಿಗಳೇ ತಮ್ಮ ಮಕ್ಕಳಿಗೆ ಜೋಡಿ ಹುಡುಕಿ ಮದುವೆ ಮಾಡಿಸುವ ರೂಢಿ ಆ ಕಾಲದಲ್ಲೂ ಇತ್ತು. ನೊವೊಮಿಗೆ ರೂತಳೆಂದರೆ ಮಗಳಿಗಿಂತ ಹೆಚ್ಚು. ಆದ್ದರಿಂದ ರೂತಳು ಇನ್ನೊಂದು ಮದುವೆ ಮಾಡಿಕೊಂಡು ಗಂಡನ ಆಸರೆಯಲ್ಲಿ ನೆಮ್ಮದಿಯಿಂದ ಬಾಳಬೇಕೆಂದು ನೊವೊಮಿ ಆಶಿಸಿದಳು. ಅದಕ್ಕಾಗಿ ಅವಳೇನು ಮಾಡಿದಳು?

11, 12. (1) ಬೋವಜ ‘ನಮ್ಮನ್ನು ವಿಮೋಚಿಸತಕ್ಕ ಬಾಧ್ಯನು’ ಎಂದು ನೊವೊಮಿ ಹೇಳಿದಾಗ ಧರ್ಮಶಾಸ್ತ್ರದಲ್ಲಿದ್ದ ಯಾವ ಏರ್ಪಾಡಿಗೆ ಸೂಚಿಸುತ್ತಿದ್ದಳು? (2) ಅತ್ತೆ ಕೊಟ್ಟ ಸಲಹೆಗೆ ರೂತಳು ಹೇಗೆ ಪ್ರತಿಕ್ರಿಯಿಸಿದಳು?

11 ಬೋವಜನ ಬಗ್ಗೆ ರೂತಳು ಮೊದಲ ಬಾರಿ ಹೇಳಿದಾಗ ನೊವೊಮಿ ಹೀಗಂದಿದ್ದಳು: “ಆ ಮನುಷ್ಯನು ನಮ್ಮ ಬಂಧುವೂ ವಿಮೋಚಿಸತಕ್ಕ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ.” (ರೂತ. 2:20, ಪವಿತ್ರ ಗ್ರಂಥ ಭಾಷಾಂತರ) ಈ ಮಾತಿನ ಅರ್ಥ ಏನೆಂದು ತಿಳಿಯಲು ಧರ್ಮಶಾಸ್ತ್ರದಲ್ಲಿದ್ದ ಒಂದು ಏರ್ಪಾಡನ್ನು ಪರಿಗಣಿಸೋಣ. ಬಡತನ ಇಲ್ಲವೆ ಗಂಡನ ಸಾವಿನ ಕಾರಣ ಕಷ್ಟದಲ್ಲಿ ಬಿದ್ದಿರುವ ಕುಟುಂಬಗಳಿಗಾಗಿ ಆ ಕಾಲದಲ್ಲಿ ದೇವರು ಪ್ರೀತಿಯ ಏರ್ಪಾಡನ್ನು ಮಾಡಿದ್ದನು. ಉದಾಹರಣೆಗೆ, ಮಕ್ಕಳನ್ನು ಪಡೆಯುವ ಮುಂಚೆಯೇ ವಿಧವೆಯರಾದ ಸ್ತ್ರೀಯರಿಗಿದ್ದ ಏರ್ಪಾಡನ್ನು ಗಮನಿಸಿ. ಅಂಥ ವಿಧವೆಯೊಬ್ಬಳಿಗೆ ಗಂಡನ ಹೆಸರನ್ನು ಉಳಿಸಲು ಅಥವಾ ವಂಶ ಬೆಳೆಸಲು ಸಾಧ್ಯವಿಲ್ಲದ ಕಾರಣ ಅವಳ ಮೈದುನ ಅವಳನ್ನು ಮದುವೆಯಾಗಬೇಕಿತ್ತು. ಈ ಮೂಲಕ ಆ ವಿಧವೆಯು ತನ್ನ ಸತ್ತುಹೋದ ಗಂಡನ ಹೆಸರಿಗಾಗಿ ಮತ್ತು ಕುಟುಂಬದ ಸ್ವಾಸ್ತ್ಯವನ್ನು ನೋಡಿಕೊಳ್ಳಲಿಕ್ಕಾಗಿ ಮಗನನ್ನು ಪಡೆಯಲು ಸಾಧ್ಯವಾಗುತ್ತಿತ್ತು. *ಧರ್ಮೋ. 25:5-7.

12 ರೂತಳು ಮುಂದೆ ಏನೇನು ಮಾಡಬೇಕೆಂದು ನೊವೊಮಿ ಬಿಡಿಸಿ ಹೇಳುತ್ತಾಳೆ. ಅತ್ತೆಯ ಮಾತನ್ನು ಆ ಯುವ ಸ್ತ್ರೀ ಬೆರಗಿನಿಂದ ಕಣ್ಣರಳಿಸಿ ಕೇಳಿರಬಹುದು. ಧರ್ಮಶಾಸ್ತ್ರದಲ್ಲಿದ್ದ ಹೆಚ್ಚಿನ ವಿಷಯಗಳು ಅವಳಿಗೆ ತಿಳಿದಿರಲಿಲ್ಲ. ಇಸ್ರಾಯೇಲ್ಯರ ಅನೇಕ ರೀತಿರಿವಾಜುಗಳು ಅವಳಿಗಿನ್ನೂ ಹೊಸತು. ಆದರೂ ರೂತಳಿಗೆ ನೊವೊಮಿಯ ಮೇಲೆ ಎಷ್ಟು ಆಳವಾದ ಗೌರವವಿತ್ತೆಂದರೆ ಆಕೆ ಹೇಳುತ್ತಿದ್ದ ಒಂದೊಂದು ಮಾತನ್ನು ಮೈಯೆಲ್ಲ ಕಿವಿಯಾಗಿಸಿ ಕೇಳಿಸಿಕೊಳ್ಳುತ್ತಿದ್ದಳು. ನೊವೊಮಿ ಮಾಡಲು ಹೇಳಿದ ವಿಷಯದಿಂದ ಅವಳಿಗೆ ಮುಜುಗರವಾಗಿದ್ದಿರಬೇಕು. ಅದನ್ನು ಮಾಡುವಾಗ ಅವಮಾನಕ್ಕೊಳಗಾಗುವ ಸಾಧ್ಯತೆಯೂ ಇತ್ತು. ಹಾಗಿದ್ದರೂ ರೂತಳು ದೈನ್ಯದಿಂದ “ನೀನು ಹೇಳಿದ್ದನ್ನೆಲ್ಲಾ ಮಾಡುವೆ” ಎಂದು ಹೇಳಿದಳು.—ರೂತ. 3:5.

13. ಹಿರಿಯವರ ಸಲಹೆಯನ್ನು ಸ್ವೀಕರಿಸುವ ವಿಷಯದಲ್ಲಿ ರೂತಳಿಂದ ಏನು ಕಲಿಯುತ್ತೇವೆ? (ಯೋಬ 12:12 ಸಹ ನೋಡಿ.)

13 ಹಿರಿಯವರು, ಅನುಭವಸ್ಥರು ಬುದ್ಧಿವಾದ ಸಲಹೆ ಕೊಡುವಾಗ ಕಿರಿಯರಿಗೆ ಕೆಲವೊಮ್ಮೆ ಕಿರಿಕಿರಿಯಾಗುತ್ತದೆ. ತಾವು ಎದುರಿಸುವ ಸಮಸ್ಯೆ, ಸವಾಲುಗಳು ದೊಡ್ಡವರಿಗೆ ಅರ್ಥವಾಗಲ್ಲ ಎಂದು ಅವರು ನೆನಸಬಹುದು. ಆದರೆ ರೂತಳ ದೀನತೆಯ ಮಾದರಿ ಕಲಿಸುವಂತೆ ನಮ್ಮನ್ನು ಪ್ರೀತಿಸುವ ಮತ್ತು ನಮ್ಮ ಹಿತ ಬಯಸುವ ದೊಡ್ಡವರ ಬುದ್ಧಿಮಾತನ್ನು ಪಾಲಿಸುವುದರಿಂದ ಒಳ್ಳೇ ಪ್ರತಿಫಲ ಸಿಗುತ್ತದೆ. (ಕೀರ್ತನೆ 71:17, 18 ಓದಿ.) ನೊವೊಮಿ ರೂತಳಿಗೆ ಯಾವ ಸಲಹೆ ಕೊಟ್ಟಿದ್ದಳು? ಅದರಂತೆ ಮಾಡಿದಾಗ ರೂತಳಿಗೆ ನಿಜಕ್ಕೂ ಪ್ರತಿಫಲ ಸಿಕ್ಕಿತೆ?

ತೆನೆ ಬಡಿಯುವ ಕಣದಲ್ಲಿ ರೂತಳು

14. ಸಂಜೆ ಹೊತ್ತಲ್ಲಿ ರೂತಳು ಎಲ್ಲಿಗೆ ಹೋದಳು?

14 ಒಂದು ಸಂಜೆ ರೂತಳು ತೆನೆ ಬಡಿಯುವ ಕಣಕ್ಕೆ ಹೋದಳು. ಅಲ್ಲಿ ಅನೇಕ ರೈತರು ಇನ್ನೂ ಕೆಲಸ ಮಾಡುತ್ತಾ ಇದ್ದರು. ಆಗೆಲ್ಲ ರೈತರು ಗುಡ್ಡಗಳ ಕಡೆ ಅಥವಾ ಗುಡ್ಡದ ಮೇಲೆ ತೆನೆಗಳನ್ನು ಬಡಿಯುತ್ತಿದ್ದರು. ಮುಸ್ಸಂಜೆಯಲ್ಲಿ ಬಿರುಸಾದ ಗಾಳಿ ಬೀಸುತ್ತಿದ್ದದ್ದರಿಂದ ಕಾಳು ಮತ್ತು ಹೊಟ್ಟನ್ನು ಬೇರ್ಪಡಿಸಲು ಸುಲಭವಾಗುತ್ತಿತ್ತು. ಈ ಮಿಶ್ರಣವನ್ನು ಕವಲುಗೋಲು ಇಲ್ಲವೆ ಸಲಿಕೆಯಿಂದ ಮೇಲಕ್ಕೆತ್ತಿ ಗಾಳಿಗೆ ತೂರುವಾಗ ಹೊಟ್ಟೆಲ್ಲ ಹಾರಿಹೋಗಿ ಕಾಳುಗಳು ನೆಲಕ್ಕೆ ಬೀಳುತ್ತಿದ್ದವು. ಕಾಳುಗಳನ್ನೆಲ್ಲ ಒಂದೆಡೆ ರಾಶಿ ಹಾಕುತ್ತಿದ್ದರು.

15, 16. (1) ಬೋವಜನು ಕಣದಲ್ಲಿ ಸಂಜೆ ಕೆಲಸ ಮುಗಿಸಿದಾಗ ಏನಾಯಿತೆಂದು ವರ್ಣಿಸಿ. (2) ತನ್ನ ಕಾಲುಗಳ ಬಳಿ ರೂತಳು ಮಲಗಿದ್ದಾಳೆಂದು ಬೋವಜನಿಗೆ ಹೇಗೆ ಗೊತ್ತಾಯಿತು?

15 ರೂತಳು ದೂರದಲ್ಲಿ ನಿಂತು ಆಳುಗಳು ಕೆಲಸ ಮುಗಿಸುವುದನ್ನು ಗಮನಿಸುತ್ತಾ ಇದ್ದಳು. ಬೋವಜನು ತೆನೆ ಬಡಿಯುವ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಧಾನ್ಯಗಳನ್ನು ರಾಶಿ ಹಾಕಲಾಗಿತ್ತು. ಬಳಿಕ ಬೋವಜನು ರಾತ್ರಿಯೂಟ ಮುಗಿಸಿ ಧಾನ್ಯದ ರಾಶಿಯ ಬಳಿ ಮಲಗಲು ಹೋಗುತ್ತಾನೆ. ತಿಂಗಳುಗಟ್ಟಲೆ ಶ್ರಮಪಟ್ಟು ಬೆಳೆಸಿದ್ದ ಫಸಲನ್ನು ದರೋಡೆಕೋರರು, ಕಳ್ಳಕಾಕರು ಕದಿಯದಂತೆ ನೋಡಿಕೊಳ್ಳಲು ಜನರು ಕಣದಲ್ಲೇ ಮಲಗುತ್ತಿದ್ದರೆಂದು ತೋರುತ್ತದೆ. ಬೋವಜನು ಮಲಗಿದ್ದನ್ನು ರೂತಳು ನೋಡಿದಳು. ಅತ್ತೆ ಹೇಳಿದ್ದನ್ನು ಕಾರ್ಯರೂಪಕ್ಕೆ ಹಾಕುವ ಸಮಯ ಈಗ ಬಂದಿತ್ತು.

16 ಬೋವಜನು ಮಲಗಿದ್ದ ಕಡೆಗೆ ರೂತಳು ಹೆಜ್ಜೆ ಹಾಕುತ್ತಿದ್ದಂತೆ ಅವಳ ಎದೆ ಡವಡವ ಎಂದು ಜೋರಾಗಿ ಬಡಿಯಲು ಶುರುವಾಯಿತು. ಅವಳು ಹತ್ತಿರ ಬರುತ್ತಿದ್ದಂತೆ ಅವನು ಗಾಢ ನಿದ್ರೆಯಲ್ಲಿರುವುದು ಗೊತ್ತಾಗುತ್ತದೆ. ಈಗ ಅವಳು ನೊವೊಮಿ ಹೇಳಿದಂತೆ ಅವನ ಕಾಲ ಹತ್ತಿರ ಹೋಗಿ ಕಾಲಮೇಲಿದ್ದ ಹೊದಿಕೆಯನ್ನು ಮೆಲ್ಲನೆ ತೆಗೆಯುತ್ತಾಳೆ. ಅಲ್ಲೇ ಮಲಗಿ ಅವನು ಎಚ್ಚರಗೊಳ್ಳುವುದನ್ನೇ ಕಾಯುತ್ತಾ ಇರುತ್ತಾಳೆ. ಸಮಯ ದಾಟುತ್ತದೆ. ಒಂದೊಂದು ಕ್ಷಣವೂ ಅವಳಿಗೆ ಒಂದೊಂದು ಯುಗದಂತೆ ಕಂಡಿರಬೇಕು. ಮಧ್ಯರಾತ್ರಿಯಾದಾಗ ಅವನು ಸ್ವಲ್ಪ ಮಿಸುಕಾಡಿದನು. ಚಳಿಯಿಂದ ನಡುಗಿದ ಬೋವಜನು ಕಾಲಮೇಲೆ ಪುನಃ ಹೊದಿಕೆ ಹಾಕಲು ಬೊಗ್ಗಿದಾಗ ಯಾರೋ ಅಲ್ಲಿರುವುದು ಅವನಿಗೆ ಗೊತ್ತಾಗುತ್ತದೆ. ಅವನು “ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವ ಹೆಂಗಸನ್ನು ಕಂಡನು” ಎನ್ನುತ್ತದೆ ಬೈಬಲ್‌.—ರೂತ. 3:8.

17. ರೂತಳು ಮಾಡಿದ್ದು ತಪ್ಪಾಗಿತ್ತೆಂದು ಹೇಳುವವರು ಯಾವ ಎರಡು ಮುಖ್ಯ ಅಂಶಗಳನ್ನು ಕಡೆಗಣಿಸಿದ್ದಾರೆ?

17 “ನೀನು ಯಾರು?” ಎಂದು ಕೇಳಿದ ಬೋವಜ. “ನಾನು ನಿನ್ನ ದಾಸಿಯಾದ ರೂತಳು. ನೀನು ಸಮೀಪಬಂಧುವಾಗಿರುವದರಿಂದ [ಅಂದರೆ ವಿಮೋಚಿಸತಕ್ಕ ಬಾಧ್ಯನಾಗಿರುವುದರಿಂದ] ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು” ಎಂದು ರೂತಳು ಹೇಳಿದಳು. ಇದನ್ನು ಹೇಳುವಾಗ ಅವಳ ಸ್ವರ ಕಂಪಿಸಿರಬಹುದು. (ರೂತ. 3:9) ರೂತಳು ಹೇಳಿದ, ಮಾಡಿದ ವಿಷಯವು ಅವಳು ಬೋವಜನಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಪರೋಕ್ಷವಾಗಿ ಸೂಚಿಸುತ್ತಿರುವಂತಿದೆ ಎಂದು ಆಧುನಿಕ ದಿನದ ಕೆಲವು ವ್ಯಾಖ್ಯಾನಕಾರರು ಹೇಳುತ್ತಾರೆ. ಆದರೆ ಅವರು ಎರಡು ಮುಖ್ಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಒಂದನೇದಾಗಿ, ರೂತಳು ಆ ಕಾಲದಲ್ಲಿದ್ದ ಪದ್ಧತಿಗೆ ಅನುಸಾರವಾಗಿ ನಡೆದುಕೊಳ್ಳುತ್ತಿದ್ದಳು. ಅಂಥ ಎಷ್ಟೋ ಪದ್ಧತಿಗಳು ಇಂದಿನವರಿಗೆ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಅವಳು ಮಾಡಿದ್ದನ್ನು ಅಧಃಪತನಕ್ಕೆ ಇಳಿದಿರುವ ಇಂದಿನ ನೈತಿಕ ಮಟ್ಟಗಳೊಂದಿಗೆ ಹೋಲಿಸುವುದು ಸರಿಯಲ್ಲ. ಎರಡನೇದಾಗಿ ರೂತಳ ಮಾತಿಗೆ ಬೋವಜನು ಕೊಟ್ಟ ಪ್ರತ್ಯುತ್ತರವು ಅವನು ಅವಳ ನಡತೆಯನ್ನು ನೈತಿಕವಾಗಿ ಕಳಂಕವಿಲ್ಲದ್ದಾಗಿಯೂ ಮೆಚ್ಚತಕ್ಕದ್ದಾಗಿಯೂ ಕಂಡನೆಂದು ತೋರಿಸುತ್ತದೆ.

ಬೋವಜನ ಹತ್ತಿರ ಹೋದಾಗ ರೂತಳ ಮನಸ್ಸಿನಲ್ಲಿ ಯಾವುದೇ ಸ್ವಾರ್ಥ, ಕೆಟ್ಟ ಉದ್ದೇಶಗಳಿರಲಿಲ್ಲ

18. (1) ಬೋವಜನು ರೂತಳಿಗೆ ಯಾವ ನೆಮ್ಮದಿದಾಯಕ ಮಾತನ್ನು ಹೇಳಿದನು? (2) ಅವಳು ನಿಷ್ಠಾವಂತ ಪ್ರೀತಿ ತೋರಿಸಿದ ಯಾವ ಎರಡು ಸಂದರ್ಭಗಳಿಗೆ ಬೋವಜ ಸೂಚಿಸಿದನು?

18 ಬೋವಜನು ಗದರಿಸದೆ ಮೃದುವಾಗಿ ಮಾತಾಡಿದಾಗ ಖಂಡಿತ ರೂತಳಿಗೆ ನೆಮ್ಮದಿ ಅನಿಸಿರಬೇಕು. ಅವನು ಹೇಳಿದ್ದು: “ನನ್ನ ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರನ್ನು ನೋಡಿ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು [ನಿಷ್ಠಾವಂತ ಪ್ರೀತಿಯು, NW] ಮುಂಚಿಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು.” (ರೂತ. 3:10) “ಮುಂಚಿಗಿಂತ” ಎಂದು ಬೋವಜನು ಹೇಳಿದಾಗ ರೂತಳು ತನ್ನ ಅತ್ತೆಗೆ ನಿಷ್ಠಾವಂತ ಪ್ರೀತಿ ತೋರಿಸುತ್ತಾ ಇಸ್ರಾಯೇಲಿಗೆ ಬಂದು ಅವಳನ್ನು ನೋಡಿಕೊಳ್ಳುತ್ತಿರುವುದಕ್ಕೆ ಸೂಚಿಸುತ್ತಿದ್ದನು. “ಈಗ” ಎಂದು ಹೇಳಿದಾಗ ಅವಳು ಅವನ ಮುಂದಿಟ್ಟ ಪ್ರಸ್ತಾಪಕ್ಕೆ ಸೂಚಿಸುತ್ತಿದ್ದನು. ಬೇಕಿದ್ದರೆ ರೂತಳು ಬಡವರಲ್ಲಿ ಅಥವಾ ಐಶ್ವರ್ಯವಂತರಲ್ಲಿ ಒಬ್ಬ ಯುವ ಪುರುಷನನ್ನು ಮದುವೆಯಾಗಬಹುದಿತ್ತು. ಆದರೆ ಅವಳು ಹಾಗೆ ಮಾಡಲಿಲ್ಲ. ಏಕೆಂದರೆ ಅವಳು ನೊವೊಮಿಗೆ ಮಾತ್ರವಲ್ಲ ನೊವೊಮಿಯ ತೀರಿಹೋಗಿದ್ದ ಗಂಡನಿಗೂ ಒಳ್ಳೇದನ್ನು ಮಾಡಲು ಇಚ್ಛಿಸಿದಳು. ಅವನ ಹೆಸರು ಇಸ್ರಾಯೇಲಿನಲ್ಲಿ ಉಳಿಯುವಂತೆ ಬಯಸಿದಳು. ರೂತಳು ಇಷ್ಟು ನಿಸ್ವಾರ್ಥಿಯಾಗಿದ್ದ ಕಾರಣವೇ ಬೋವಜನು ಮೆಚ್ಚಿಕೆ ವ್ಯಕ್ತಪಡಿಸಿದನು.

19, 20. (1) ಬೋವಜನು ರೂತಳನ್ನು ಕೂಡಲೆ ಮದುವೆಯಾಗಲು ಮುಂದಾಗಲಿಲ್ಲ ಏಕೆ? (2) ರೂತಳಿಗಿದ್ದ ಒಳ್ಳೇ ಹೆಸರಿಗೆ ಕಳಂಕ ಬರದಂತೆ ಬೋವಜನು ಹೇಗೆ ನೋಡಿಕೊಂಡನು? (3) ಅವಳಿಗೆ ಹೇಗೆ ದಯೆತೋರಿಸಿದನು?

19 ಬೋವಜ ಮತ್ತೂ ಹೇಳಿದ್ದು: “ನನ್ನ ಮಗಳೇ, ಈಗ ಭಯಪಡಬೇಡ. ನೀನು ಗುಣವಂತೆಯೆಂಬದು ಊರಿನವರಿಗೆಲ್ಲಾ ಗೊತ್ತದೆ; ಆದದರಿಂದ ನೀನು ಹೇಳಿದ್ದನ್ನೆಲ್ಲಾ ಮಾಡುವೆನು.” (ರೂತ. 3:11) ಸಮೀಪ ಬಂಧುವಾದ ಅವನು ತನ್ನ ಕರ್ತವ್ಯ ಪೂರೈಸುವಂತೆ ರೂತಳು ಕೇಳಿಕೊಂಡಾಗ ಅವನಿಗೆ ಆಶ್ಚರ್ಯವಾಗಿದ್ದಿರಲಿಕ್ಕಿಲ್ಲ. ರೂತಳನ್ನು ಮದುವೆಯಾಗಲು ಅವನಿಗೆ ಅಭ್ಯಂತರ ಇರಲಿಲ್ಲ. ಆದರೆ ನೀತಿವಂತ ಮನುಷ್ಯನಾಗಿದ್ದ ಅವನು ತನ್ನಿಚ್ಛೆಯಂತೆ ಮುಂದುವರಿಯಲು ಇಷ್ಟಪಡಲಿಲ್ಲ. ನೊವೊಮಿಯ ಮೃತ ಗಂಡನಿಗೆ ಬೋವಜನಿಗಿಂತಲೂ ಸಮೀಪ ಬಂಧು ಒಬ್ಬನು ಇದ್ದನು. ಹಾಗಾಗಿ ಅವನನ್ನು ಭೇಟಿಯಾಗಿ ಮೊದಲು ಈ ಅವಕಾಶ ಅವನಿಗೆ ಕೊಡುತ್ತೇನೆಂದೂ ಬೋವಜ ಹೇಳಿದನು.

ಇತರರೊಂದಿಗೆ ದಯೆ, ಗೌರವದಿಂದ ನಡೆದುಕೊಂಡದ್ದರಿಂದ ರೂತಳಿಗೆ ಒಳ್ಳೇ ಹೆಸರಿತ್ತು

20 ಇಷ್ಟಾದ ಮೇಲೆ ಅಲ್ಲೇ ಮಲಗಿ ಯಾರಿಗೂ ತಿಳಿಯದಂತೆ ಬೆಳಗ್ಗೆ ಎದ್ದು ಹೋಗಲು ಹೇಳಿದನು. ತಮ್ಮಿಬ್ಬರ ಮಧ್ಯೆ ಏನೋ ಅನೈತಿಕ ವಿಷಯ ನಡೆದಿರಬೇಕೆಂದು ಜನರು ನೆನಸಬಾರದು, ಊರಲ್ಲಿ ತನಗೆ ಮಾತ್ರವಲ್ಲ ಅವಳಿಗೂ ಇರುವ ಒಳ್ಳೇ ಹೆಸರು ಹಾಳಾಗಬಾರದು ಎಂಬುದು ಅವನ ಉದ್ದೇಶವಾಗಿತ್ತು. ರೂತಳು ಪುನಃ ಅವನ ಕಾಲುಗಳ ಬಳಿ ಮಲಗಿಕೊಂಡಳು. ಈಗ ಅವಳ ಮನಸ್ಸು ಹೆಚ್ಚು ನಿರಾಳವಾಗಿದ್ದಿರಬೇಕು. ಮುಂಜಾನೆ ಇನ್ನೂ ಕತ್ತಲಿರುವಾಗಲೇ ಎದ್ದಳು. ಬೋವಜನು ಅವಳ ಕಂಬಳಿಯಲ್ಲಿ ಜವೆಗೋಧಿಯನ್ನು ಉದಾರವಾಗಿ ಹಾಕಿ ಕಳುಹಿಸಿದನು. ಅವಳದನ್ನು ಹೊತ್ತುಕೊಂಡು ಬೇತ್ಲೆಹೇಮಿನ ದಾರಿಹಿಡಿದಳು.ರೂತಳು 3:13-15 ಓದಿ.

21. (1) ರೂತಳಿಗೆ “ಗುಣವಂತೆ” ಎಂಬ ಖ್ಯಾತಿ ಬಂದದ್ದು ಹೇಗೆ? (2) ನಾವು ಅವಳ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?

21 ಊರಲ್ಲೆಲ್ಲಾ ಅವಳಿಗೆ “ಗುಣವಂತೆ” ಎಂಬ ಹೆಸರಿದೆಯೆಂದು ಬೋವಜನು ಹೇಳಿದ ಮಾತು ಮತ್ತೆ ಮತ್ತೆ ಅವಳ ನೆನಪಿಗೆ ಬಂದಂತೆ ಅವಳಿಗೆ ಎಷ್ಟೊಂದು ಖುಷಿಯಾಗಿರಬೇಕು. ಯೆಹೋವನ ಕುರಿತು ತಿಳಿದುಕೊಳ್ಳಲು ಮತ್ತು ಆತನನ್ನು ಆರಾಧಿಸಲು ಅವಳಿಗಿದ್ದ ಅತ್ಯಾಸಕ್ತಿ ಇಷ್ಟು ಒಳ್ಳೇ ಹೆಸರನ್ನು ತಂದುಕೊಟ್ಟಿತ್ತು. ಮಾತ್ರವಲ್ಲ, ತನಗೆ ಹೊಸದಾಗಿದ್ದ ರೀತಿನೀತಿಗಳಿಗೆ ಸ್ವಇಷ್ಟದಿಂದ ಹೊಂದಿಕೊಳ್ಳುವ ಮೂಲಕ ನೊವೊಮಿಗೂ ಅವಳ ಜನರಿಗೂ ರೂತಳು ಅಪಾರ ದಯೆ ತೋರಿಸಿದಳು. ಹಾಗಾಗಿ ಅಲ್ಲಿನ ಜನರ ಮೆಚ್ಚಿಕೆಗೆ ಪಾತ್ರಳಾಗಿದ್ದಳು. ನಾವು ರೂತಳ ನಂಬಿಕೆಯನ್ನು ಅನುಸರಿಸುವಾಗ ಇತರರನ್ನು ಗೌರವದಿಂದ ಕಾಣುವೆವು. ಅವರ ಆಚಾರವಿಚಾರಗಳನ್ನು ಅವಹೇಳನ ಮಾಡದಿರುವೆವು. ಹೀಗೆ ರೂತಳಂತೆ ನಾವು ಕೂಡ ಒಳ್ಳೇ ಹೆಸರನ್ನು ಸಂಪಾದಿಸುವೆವು.

ಗಂಡನ ಆಸರೆಯಲ್ಲಿ ರೂತಳು

22, 23. (1) ಬೋವಜನು ರೂತಳಿಗೆ ಕೊಟ್ಟ ಜವೆಗೋಧಿಯ ಪ್ರಮಾಣ ಏನನ್ನು ಸೂಚಿಸುತ್ತದೆ? (ಪಾದಟಿಪ್ಪಣಿ ನೋಡಿ.) (2) ರೂತಳು ಏನು ಮಾಡುವಂತೆ ನೊವೊಮಿ ಹೇಳಿದಳು?

22 ರೂತಳು ಮನೆ ತಲಪುತ್ತಾಳೆ. ಅವಳನ್ನು ಕಂಡೊಡನೆ “ನನ್ನ ಮಗಳೇ, ನಿನ್ನ ಕಾರ್ಯವೇನಾಯಿತು”? ಎಂದು ನೊವೊಮಿ ಕೇಳುತ್ತಾಳೆ. ವಿಧವೆಯಾಗಿದ್ದ ತನ್ನ ಸೊಸೆಗೆ ಪುನಃ ಮದುವೆಯಾಗುವ ಸೌಭಾಗ್ಯ ಸಿಕ್ಕಿತೇ ಇಲ್ಲವೇ ಎಂದು ತಿಳಿಯುವ ತವಕ ಅವಳಿಗಿದ್ದಿರಬಹುದು. ನಡೆದದ್ದೆಲ್ಲವನ್ನು ರೂತಳು ವಿವರಿಸುತ್ತಾಳೆ. ಬೋವಜನು ನೊವೊಮಿಗಾಗಿ ಕೊಟ್ಟು ಕಳುಹಿಸಿದ ಜವೆಗೋಧಿಯನ್ನೂ ಕೊಡುತ್ತಾಳೆ. *ರೂತ. 3:16, 17.

23 ಅಂದು ಹಕ್ಕಲಾಯಲು ಹೋಗದೆ ಮನೆಯಲ್ಲೇ ಇರುವಂತೆ ನೊವೊಮಿ ವಿವೇಚನೆಯಿಂದ ರೂತಳಿಗೆ ಹೇಳುತ್ತಾಳೆ. “ಈ ಹೊತ್ತು ಅದನ್ನು ಇತ್ಯರ್ಥಪಡಿಸುವ ವರೆಗೆ ಅವನಿಗೆ ಸಮಾಧಾನವಿರಲಾರದು” ಎನ್ನುತ್ತಾ ಭರವಸೆ ತುಂಬುತ್ತಾಳೆ.—ರೂತ. 3:18.

24, 25. (1) ಬೋವಜ ನೀತಿವಂತ, ನಿಸ್ವಾರ್ಥಿ ಆಗಿದ್ದನೆಂದು ಹೇಗೆ ಗೊತ್ತಾಗುತ್ತದೆ? (2) ರೂತಳಿಗೆ ಯಾವೆಲ್ಲ ಆಶೀರ್ವಾದ ಸಿಕ್ಕಿತು?

24 ಬೋವಜನ ಬಗ್ಗೆ ನೊವೊಮಿ ಹೇಳಿದ್ದು ಸರಿಯಾಗಿತ್ತು. ಸಾಮಾನ್ಯವಾಗಿ ಊರ ಹಿರಿಯರು ಕೂಡಿಬರುತ್ತಿದ್ದ ಊರಬಾಗಿಲ ಬಳಿಗೆ ಬೋವಜ ಹೋಗುತ್ತಾನೆ. ತನಗಿಂತಲೂ ಸಮೀಪ ಬಂಧುವಾಗಿದ್ದ ಆ ವ್ಯಕ್ತಿ ಆ ಮಾರ್ಗವಾಗಿ ಬರುವ ವರೆಗೆ ಕಾಯುತ್ತಾನೆ. ಅವನು ಅಲ್ಲಿಗೆ ಬಂದಾಗ ರೂತಳನ್ನು ಮದುವೆಯಾಗುವ ಹಾಗೂ ಅವಳ ಆಸ್ತಿಯನ್ನು ಕೊಂಡುಕೊಳ್ಳುವ ಅವಕಾಶದ ಬಗ್ಗೆ ಅಲ್ಲಿದ್ದವರನ್ನು ಸಾಕ್ಷಿಯಾಗಿಟ್ಟುಕೊಂಡು ಬೋವಜ ತಿಳಿಸುತ್ತಾನೆ. ಆದರೆ ಆ ವ್ಯಕ್ತಿ ಇದಕ್ಕೆ ಒಪ್ಪದೆ, ತನ್ನ ಆಸ್ತಿ ನಷ್ಟಪಡಿಸಿಕೊಳ್ಳಲಾರೆ ಎಂದು ಹೇಳುತ್ತಾನೆ. ಆಗ ಬೋವಜನು ಅಲ್ಲೇ ಸಾಕ್ಷಿಗಳ ಮುಂದೆ ತಾನು ನೊವೊಮಿಯ ಗಂಡ ಎಲೀಮೆಲೆಕನ ಹೊಲವನ್ನು ಕೊಳ್ಳುತ್ತೇನೆ, ಅವನ ತೀರಿಹೋದ ಮಗನಾದ ಮಹ್ಲೋನನ ಹೆಂಡತಿ ರೂತಳನ್ನು ಮದುವೆಯಾಗುತ್ತೇನೆಂದು ಹೇಳುತ್ತಾನೆ. ಇದರ ಉದ್ದೇಶ? ಬೋವಜನೇ ಹೇಳಿದಂತೆ “ಹೊಲದ ಖಾತೆಯು ಸತ್ತುಹೋದ ಮಹ್ಲೋನನ ಹೆಸರಿನಲ್ಲೇ” ಇರಲಿಕ್ಕಾಗಿ. (ರೂತ. 4:1-10) ಬೋವಜ ನಿಜಕ್ಕೂ ನೀತಿವಂತನೂ ನಿಸ್ವಾರ್ಥಿಯೂ ಆಗಿದ್ದನು.

25 ರೂತಳನ್ನು ಬೋವಜ ಮದುವೆಯಾದ. ಬಳಿಕ “ಆಕೆಯು ಯೆಹೋವನ ಅನುಗ್ರಹದಿಂದ ಗರ್ಭಿಣಿಯಾಗಿ ಮಗನನ್ನು ಹೆತ್ತಳು.” ಬೇತ್ಲೆಹೇಮಿನಲ್ಲಿದ್ದ ಹೆಂಗಸರು ನೊವೊಮಿಯ ಜೊತೆಸೇರಿ ಹರ್ಷಿಸಿದರು. ನೊವೊಮಿಗೆ ರೂತಳು ಏಳು ಗಂಡು ಮಕ್ಕಳಿಗಿಂತ ಉತ್ತಮಳೆಂದು ಹೊಗಳಿದರು. ರೂತಳ ಮಗ ಮುಂದಕ್ಕೆ ರಾಜ ದಾವೀದನ ಪೂರ್ವಜನಾದನು. (ರೂತ. 4:11-22) ದಾವೀದನು ಯೇಸು ಕ್ರಿಸ್ತನ ಪೂರ್ವಜನಾದನು.—ಮತ್ತಾ. 1:1. *

ಯೆಹೋವನು ರೂತಳಿಗೆ ಮೆಸ್ಸೀಯನ ಪೂರ್ವಜೆಯಾಗುವ ಸುಯೋಗ ಕೊಟ್ಟು ಆಶೀರ್ವದಿಸಿದನು

26. ರೂತ್‌ ಮತ್ತು ನೊವೊಮಿಯ ಉದಾಹರಣೆ ನಮಗೇನು ಕಲಿಸುತ್ತದೆ?

26 ರೂತಳಂತೆ ನೊವೊಮಿಯೂ ಆಶೀರ್ವಾದ ಪಡೆದಳು. ರೂತಳ ಮಗನನ್ನು ಸಾಕಿಸಲಹುವುದರಲ್ಲಿ ನೆರವಾದಳು. ತನ್ನ ಸ್ವಂತ ಮಗನಂತೆ ಕಂಡಳು. ಈ ಇಬ್ಬರು ಸ್ತ್ರೀಯರ ಜೀವನಕಥೆ ನಮಗೆ ಈ ವಿಷಯಗಳನ್ನು ಸ್ಪಷ್ಟವಾಗಿ ಕಲಿಸುತ್ತದೆ: ಕುಟುಂಬದ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಶ್ರಮಿಸುವವರನ್ನು ಯೆಹೋವನು ಗಮನಿಸುತ್ತಾನೆ. ತನ್ನ ಜನರೊಂದಿಗೆ ಸೇರಿ ನಿಷ್ಠೆಯಿಂದ ಆರಾಧಿಸುವವರನ್ನೂ ಗಮನಿಸುತ್ತಾನೆ. ಮಾತ್ರವಲ್ಲ ಬೋವಜ, ನೊವೊಮಿ ಮತ್ತು ರೂತಳಂತೆ ನಂಬಿಗಸ್ತರಾಗಿರುವವರಿಗೆ ಆತನು ಪ್ರತಿಫಲ ಕೊಟ್ಟೇ ಕೊಡುತ್ತಾನೆ.

^ ಪ್ಯಾರ. 7 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 7 ನೊವೊಮಿ ಹೇಳಿದಂತೆ ಯೆಹೋವನು ಕೇವಲ ಬದುಕಿರುವವರಿಗೆ ಮಾತ್ರವಲ್ಲ ಸತ್ತವರಿಗೂ ದಯೆ ತೋರಿಸುತ್ತಾನೆ. ನೊವೊಮಿ ತನ್ನ ಗಂಡ, ಇಬ್ಬರು ಗಂಡುಮಕ್ಕಳನ್ನು ಕಳಕೊಂಡಿದ್ದಳು. ರೂತಳು ಗಂಡನನ್ನು ಕಳಕೊಂಡಿದ್ದಳು. ಅತ್ತೆಸೊಸೆ ಇಬ್ಬರಿಗೂ ಆ ಮೂವರು ಪುರುಷರು ನೆಚ್ಚಿನವರಾಗಿದ್ದರು. ಆ ಮೂವರು ಜೀವದಿಂದಿದ್ದರೆ ತಮ್ಮ ಕುಟುಂಬ ಸುಖವಾಗಿ ಇರಬೇಕೆಂದು ಖಂಡಿತ ಬಯಸಿರುತ್ತಿದ್ದರು. ಆದ್ದರಿಂದ ನೊವೊಮಿ ಮತ್ತು ರೂತಳಿಗೆ ತೋರಿಸುವ ದಯೆ ಒಂದರ್ಥದಲ್ಲಿ ತೀರಿಹೋಗಿದ್ದ ಆ ಪುರುಷರಿಗೇ ತೋರಿಸುವಂತಿತ್ತು.

^ ಪ್ಯಾರ. 11 ವಿಧವೆಯನ್ನು ಮದುವೆಯಾಗುವ ಹಕ್ಕು ಮೊದಲು ಗಂಡನ ತಮ್ಮಂದಿರಿಗೆ ಇತ್ತು. ಒಂದುವೇಳೆ ಅವರು ಮದುವೆಯಾಗಲು ನಿರಾಕರಿಸಿದರೆ ಆ ಹಕ್ಕನ್ನು ಹತ್ತಿರದ ಸಂಬಂಧಿಕರಿಗೆ ದಾಟಿಸಲಾಗುತ್ತಿತ್ತು. ಸ್ವಾಸ್ತ್ಯವನ್ನು ಪಡೆಯುವ ವಿಷಯದಲ್ಲಿ ಹೇಗೋ ಹಾಗೆ.—ಅರ. 27:5-11.

^ ಪ್ಯಾರ. 22 ಬೋವಜ ಆರು ಪಡಿ ಅಂದರೆ ಅನಿರ್ದಿಷ್ಟ ತೂಕದ ಜವೆಗೋಧಿ ಕೊಟ್ಟಿದ್ದನು. ಇದು, ಆರು ಕೆಲಸದ ದಿನಗಳ ನಂತರ ಹೇಗೆ ಸಬ್ಬತ್‌ ವಿಶ್ರಾಂತಿ ಸಿಗುತ್ತದೊ ಹಾಗೆ ವಿಧವೆಯಾದ ರೂತಳ ಕಷ್ಟದ ದಿನಗಳು ಬೇಗನೆ ಮುಗಿದು ಗಂಡನ ಮನೆಯಲ್ಲಿ ನೆಮ್ಮದಿ ವಿಶ್ರಾಂತಿ ಸಿಗಲಿದೆ ಎಂದು ಸೂಚಿಸಲಿಕ್ಕಾಗಿ ಇರಬಹುದು. ಇಲ್ಲವೆ ರೂತಳು ಆರು ಪಡಿ, ಬಹುಶಃ ಆರು ಗುದ್ದಲಿ ಜವೆಗೋಧಿಯನ್ನಷ್ಟೇ ಹೊತ್ತುಕೊಂಡು ಹೋಗಲು ಸಾಧ್ಯವಿದ್ದ ಕಾರಣ ಅಷ್ಟನ್ನೇ ಕೊಟ್ಟಿರಬಹುದು.

^ ಪ್ಯಾರ. 25 ಬೈಬಲಿನಲ್ಲಿರುವ ಯೇಸುವಿನ ವಂಶಾವಳಿ ಪಟ್ಟಿಯಲ್ಲಿ ಐದು ಮಂದಿ ಸ್ತ್ರೀಯರ ಹೆಸರುಗಳಿವೆ. ಅವರಲ್ಲಿ ರೂತಳೂ ಒಬ್ಬಳು. ಇನ್ನೊಬ್ಬಳು ಬೋವಜನ ತಾಯಿಯಾದ ರಾಹಾಬಳು. (ಮತ್ತಾ. 1:3, 5, 6, 16) ರೂತಳಂತೆ ಆಕೆ ಕೂಡ ಇಸ್ರಾಯೇಲ್ಯಳಲ್ಲ.